ನಿಮ್ಮ ಕಾರನ್ನ ಎಲೆಕ್ಟ್ರಿಕ್ ಕಾರಾಗಿ ಬದಲಾಯಿಸಬಹುದು - ಇಲ್ಲಿದೆ ಸುಲಭ ವಿಧಾನ

By Web DeskFirst Published Oct 20, 2018, 7:24 PM IST
Highlights

ಪೆಟ್ರೋಲ್, ಡೀಸೆಲ್ ಕಾರು ಖರೀದಿಸಿದವರು ಇದೀಗ ಸಹವಾಸ ಸಾಕು ಅನ್ನುವಂತಾಗಿದೆ. ಇಂಧನ ಬೆಲೆ ಏರಿಕೆ ಇದಕ್ಕೆ ಮುಖ್ಯ ಕಾರಣ. ಇದೀಗ ಈ ಮಾಲೀಕರೆಲ್ಲಾ ಅತ್ತ ಎಲೆಕ್ಟ್ರಿಕಲ್ ಕಾರು ಖರೀದಿಸಲು ಸಾಧ್ಯವಾಗದೇ ಇತ್ತ ಇರೋ ಕಾರನ್ನ ಬಳಸಲಾಗದ ಪರಿಸ್ಥಿತಿಯಲ್ಲಿದ್ದಾರೆ. ಆದರೆ ಇದಕ್ಕೆಲ್ಲಾ ಇದೀಗ ಬೆಂಗಳೂರಿನ ಬಾಷ್ ಕಂಪನಿ ಪರಿಹಾರ ಹುಡುಕಿದೆ.
 

ಬೆಂಗಳೂರು(ಅ.20): ತೈಲ ಬೆಲೆ ಏರಿಕೆ, ಪರಿಸರ ಮಾಲಿನ್ಯ ಸೇರಿದಂತೆ ಹಲವು ಸಮಸ್ಯೆಗಳಿಗೆ ಎಲೆಕ್ಟ್ರಿಕ್ ವಾಹನಗಳೇ ಪರಿಹಾರ. ಇದಕ್ಕಾಗಿ ಇಡೀ ವಿಶ್ವವೇ ಇದೀಗ ಎಲೆಕ್ಟ್ರಿಕ್ ವಾಹನದತ್ತ ಚಿತ್ತ ಹರಿಸಿದೆ. ಇದಕ್ಕೆ ಭಾರತ ಕೂಡ ಹೊರತಲ್ಲ. ಸದ್ಯ ನಿರ್ಮಾಣವಾಗುತ್ತಿರುವ ಹೊಸ ಎಲೆಕ್ಟ್ರಿಕ್ ವಾಹನಗಳು ದುಬಾರಿಯಾಗಿವೆ. ಇದಕ್ಕೆ ಬೆಂಗಳೂರಿನ ಬಾಷ್ ಕಂಪನಿ ಹೊಸ ಆವಿಷ್ಕಾರ ಮಾಡಿದೆ.

ನಿಮ್ಮ ಯಾವುದೇ ಪೆಟ್ರೋಲ್ ಅಥವಾ ಡೀಸೆಲ್ ಕಾರನ್ನ ಎಲೆಕ್ಟ್ರಿಕಲ್ ಕಾರಾಗಿ ಪರಿವರ್ತಿಸುವ ತಂತ್ರಜ್ಞಾನವನ್ನ ಬೆಂಗಳೂರಿನ ಬಾಷ್ ಕಂಪೆನಿ ಸಿದ್ಧಪಡಿಸಿದೆ. ಮಾರುತಿ ಸುಜುಕಿ ಬಲೆನೋ ಕಾರನ್ನ ಇದೀಗ ಬಾಷ್ ಕಂಪೆನಿ ಎಲೆಕ್ಟ್ರಿಕ್ ಕಾರಾಗಿ ಪರಿವರ್ತಿಸಿದೆ.

ಬಲೆನೋ ಕಾರಿನ ಪೆಟ್ರೋಲ್ ಇಂಜಿನ್ ತೆಗೆದು ಎಲೆಕ್ಟ್ರಿಕಲ್ ಮೋಟಾರ್ ಅಳವಡಿಸಿ ಅತ್ಯಂತ ಸುಲಭವಾಗಿ ಎಲೆಕ್ಟ್ರಿಕಲ್ ವಾಹನವಾಗಿ ಬದಲಾಯಿಸಲಾಗಿದೆ. ಇದನ್ನ ಬಾಷ್ ಕಂಪನೆ ಇಆಕ್ಸೆಲ್ ಸೆಟ್ಆಪ್ ಎಂದು ಕರೆದಿದೆ. ಪ್ರಯೋಗಿಕವಾಗಿ ಈ ಕಾರಿಗೆ 10kWh ಬ್ಯಾಟರಿ ಅಳವಡಿಸಲಾಗಿದೆ. ಇದು ಅತ್ಯಂತ ಕಡಿಮೆ ಶಕ್ತಿಯ ಬ್ಯಾಟರಿ. 

ಈ ಎಲೆಕ್ಟ್ರಿಕಲ್ ಕಾರು 115 ಬಿಹೆಚ್‌ಪಿ ಹಾಗೂ 200nm ಟಾರ್ಕ್ ಉತ್ಪಾದಿಸಲಿದೆ. ಇದು ಪೆಟ್ರೋಲ್ ಇಂಜಿನ್ ಕಾರಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. 5 ಸ್ಪೀಡ್ ಗೇರ್ ಬಾಕ್ಸ್ ಬದಲು ಎಲೆಕ್ಟ್ರಾನಿಕ್ ಕಂಟ್ರೋಲ್ ಬಾಕ್ಸ್ ಅಳವಡಿಸಲಾಗಿದೆ. ಇದರಲ್ಲಿ ಪಾರ್ಕ್, ಡ್ರೈವ್ ಹಾಗೂ ರಿವರ್ಸ್ ಆಯ್ಕೆಗಳಿವೆ.

ಪವರ್ ಸ್ಟೆರಿಂಗ್, ಬ್ರೇಕ್‌ಗಳಲ್ಲಿ ಇನ್ನು ಕೆಲ ಬದಲಾವಣೆ ಮಾಡಲು ಬಾಷ್ ಮುಂದಾಗಿದೆ. ಇಷ್ಟೇ ಅಲ್ಲ ಎಲೆಕ್ಟ್ರಿಕಲ್ ಇಂಜಿನ್‌ನ್ನ ಪರಿಣಾಮಕಾರಿಯಾಗಿ ಅಭಿವೃದ್ಧಿ ಪಡಿಸಲು ಬಾಷ್ ನಿರ್ಧರಿಸಿದೆ. 

ಬಾಷ್ ನೂತನ ಪ್ರಯೋಗ ಇದೀಗ ಪೆಟ್ರೋಲ್ ಹಾಗೂ ಡೀಸೆಲ್ ಕಾರು ಮಾಲೀಕರಲ್ಲಿ ಸಂತಸ ಮೂಡಿಸಿದೆ. ಅತ್ಯಂತ  ಸುಲಭವಾಗಿ ತೈಲ ಕಾರನ್ನ ಎಲೆಕ್ಟ್ರಿಕಲ್ ಕಾರಾಗಿ ಪರಿವರ್ತಿಸೋ ಬಾಷ್ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಶೀಘ್ರದಲ್ಲೇ ಅಭಿವೃದ್ದಿ ಪಡಿಸಿದ ಎಲೆಕ್ಟ್ರಿಕಲ್ ಇಂಜಿನ್ ಬಿಡುಗಡೆಗೆ ಬಾಷ್ ಮುಂದಾಗಿದೆ.
 

click me!