ಕಿಯಾ ಕಾರು ತುಮಕೂರಿನಿಂದ ಅನಂತಪುರಕ್ಕೆ ಹೋದದ್ದು ಏಕೆ?

By Web DeskFirst Published Aug 9, 2019, 3:59 PM IST
Highlights

ಕಿಯಾ ಮೋಟಾರ್ಸ್ ನೂತನ ಸೆಲ್ಟೊಸ್ ಕಾರು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಆಂಧ್ರಪ್ರದೇಶದ ಅನಂತಪುರದಲ್ಲಿರುವ ಕಿಯಾ ಮೋಟಾರ್ಸ್ ಘಟಕದಲ್ಲಿ ಸೆಲ್ಟೊಸ್ ಕಾರುಗಳು ಉತ್ಪಾದನೆಯಾಗುತ್ತಿವೆ. ದೇಶದಲ್ಲೇ ಇತರ ಎಲ್ಲಾ ಕಾರು ಘಟಕಗಳಿಗಿಂತ ಕಿಯಾ ಮೋಟಾರ್ಸ್ ಅತ್ಯಾಧುನಿಕ ಸೌಲಭ್ಯ ಹೊಂದಿದೆ.  ಕರ್ನಾಟಕದಲ್ಲಿ ತಲೆ ಎತ್ತಬೇಕಿದ್ದ ಕಿಯಾ ಘಟಕ ಆಂಧ್ರಪ್ರದೇಶದಲ್ಲಿ ದಾಖಲೆ ಬರೆದಿದ್ದು ಹೇಗೆ? ಇಲ್ಲಿದೆ ವಿವರ. 
 

ಅನಂತಪುರ(ಆ.09): ದಕ್ಷಿಣ ಕೊರಿಯಾದ ಕಿಯಾ ಮೋಟಾರ್ಸ್ ಭರ್ಜರಿಯಾಗಿ ಭಾರತಕ್ಕೆ ಎಂಟ್ರಿ ಕೊಟ್ಟಿದೆ. ಕಿಯಾ ಸೆಲ್ಟೊಸ್ SUV ಕಾರು ಮಾರುಕಟ್ಟೆಗೆ ಪರಿಚಯಿಸೋ ಮೂಲಕ ಭಾರತೀಯರ ಗಮನಸೆಳೆದಿದ್ದರೆ, ಇತರ ಆಟೋಮೊಬೈಲ್ ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ. ಕಿಯಾ ಸೆಲ್ಟೊಸ್ ಕಾರು ಆಗಸ್ಟ್ 22 ರಂದು ಬಿಡುಗಡೆಯಾಗಲಿದೆ. ಅದೇ ದಿನ ಸೆಲ್ಟೊಸ್ ಕಾರು ಗ್ರಾಹಕರ ಕೈಸೇರಲಿದೆ.

ಇದನ್ನೂ ಓದಿ: ಕಿಯಾ ಸೆಲ್ಟೊಸ್ ಅನಾವರಣ; SUV ಕಾರುಗಳಿಗೆ ಶುರುವಾಯ್ತು ನಡುಕ!

ಭಾರತದಲ್ಲಿ ಕಿಯಾ ಮೋಟಾರ್ಸ್ ಅತ್ಯಾಧುನಿಕ ಉತ್ಪದನಾ ಘಟಕ ಹೊಂದಿದೆ. ಕಿಯಾ ಮೋಟಾರ್ಸ್ ಘಟಕವಿರುವುದು ಬೆಂಗಳೂರಿನಿಂದ 150 ಕಿಲೋಮೀಟರ್ ದೂರದಲ್ಲಿ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪೆನುಕೊಂಡ ಬಳಿ ಕಿಯಾ ಮೋಟಾರ್ಸ್ ತಲೆ ಎತ್ತಿ ನಿಂತಿದೆ. ಬರೊಬ್ಬರಿ 536 ಏಕರೆ ಪ್ರದೇಶದಲ್ಲಿ ಕಿಯಾ ಮೋಟಾರ್ಸ್ ಘಟಕವಿದೆ. ಇದೇ ಘಟಕದಲ್ಲಿ ಕಿಯಾ ಕಾರುಗಳು ನಿರ್ಮಾಣವಾಗುತ್ತಿದೆ. ಇಲ್ಲಿಂದಲೇ ಭಾರತದ ಇತರ ರಾಜ್ಯಗಳಿಗೆ ರವಾನೆಯಾಗಲಿದೆ. 

ಇದನ್ನೂ ಓದಿ: 25 ಸಾವಿರಕ್ಕೆ ಬುಕ್ ಮಾಡಿ ಕಿಯಾ ಸೆಲ್ಟೊಸ್ SUV ಕಾರು!

ಕಿಯಾ ಅನಂತಪುರ ಘಟಕದ ಸಾಮರ್ಥ್ಯ:
ಕಿಯಾ ಮೋಟಾರ್ಸ್ ಉತ್ಪಾದನ ಘಟಕ ದೇಶದಲ್ಲಿರುವ ಅತ್ಯಾಧುನಿಕ ಘಟಕ ಎಂದೇ ಗುರುತಿಸಿಕೊಂಡಿದೆ. ಕಿಯಾ ತನ್ನ ಮೊದಲ ಕಾರು ಸೆಲ್ಟೊಸ್ ನಿರ್ಮಾಣದಲ್ಲಿ ಬ್ಯುಸಿಯಾಗಿದೆ. ಸದ್ಯ ಪ್ರತಿ ದಿನ 250 ಕಾರುಗಳು ಈ ಘಟಕದಲ್ಲಿ ಉತ್ಪಾದನೆಯಾಗುತ್ತಿದೆ. ಪ್ರತಿ ದಿನ 600ಕ್ಕೂ ಹೆಚ್ಚು ಕಾರು ಉತ್ಪಾದಿಸಬಲ್ಲ ಸಾಮರ್ಥ್ಯ ಈ ಘಟಕಕ್ಕಿದೆ. ಪ್ರತಿ ವರ್ಷ 3 ಲಕ್ಷ ಕಾರುಗಳ ಉತ್ಪಾದನೆ ಗುರಿಯನ್ನು ಕಿಯಾ ಮೋಟಾರ್ಸ್ ಇಂಡಿಯಾ ಇಟ್ಟುಕೊಂಡಿದೆ. ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರು ತಯಾರಿಸಬಹುದಾದ ಸುಸಜ್ಜಿತ ಘಟಕ ಇದಾಗಿದ್ದು, ಶೀಘ್ರದಲ್ಲೇ ಎಲೆಕ್ಟ್ರಿಕ್ ಕಾರು ಕೂಡ ಬಿಡುಗಡೆ ಮಾಡಲಿದೆ.

ಉದ್ಯೋಗ:
ಕಿಯಾ ಅನಂತಪುರ ಘಟಕದಲ್ಲಿ ಸದ್ಯ 6,500 ಉದ್ಯೋಗಿಗಳಿದ್ದಾರೆ( ಶಾಶ್ವತ ಹಾಗೂ ತಾತ್ಕಾಲಿಕ ಉದ್ಯೋಗಿಗಳು ಸೇರಿ). ಕಿಯಾ ಮೊದಲ ಕಾರು ನಿರ್ಮಾಣ ಮಾಡುತ್ತಿದೆ. ಶೀಘ್ರದಲ್ಲೇ ಇತರ ಮಾಡೆಲ್ ಕಾರು, ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ವೇಳೆ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ. ಮುಂದಿನ ದಿನಗಳಲ್ಲಿ 20,000ಕ್ಕೂ ಹೆಚ್ಚು ಉದ್ಯೋಗ ಕಿಯಾ ಅನಂತಪುರ ಘಟಕದಲ್ಲಿ ಸೃಷ್ಟಿಯಾಗಲಿದೆ.

ಕರ್ನಾಟಕ ಬದಲು ಆಂಧ್ರಪ್ರದೇಶದಲ್ಲಿ ಕಿಯಾ ಘಟಕ:
ಸೌತ್ ಕೊರಿಯಾ ಕಂಪನಿ ಕಿಯಾ ಮೋಟಾರ್ಸ್ ಭಾರತದಲ್ಲಿ ಕಾರು ಬಿಡುಗಡೆ ಮಾಡಲು 2007ರಲ್ಲೇ ಯೋಜನೆ ಹಾಕಿಕೊಂಡಿತ್ತು. ಕಿಯಾ ಮೋಟಾರ್ಸ್ ಮೊದಲ ಆಯ್ಕೆ ಕರ್ನಾಟಕದ ಬೆಂಗಳೂರು ಆಗಿತ್ತು. ಕಿಯಾ ಮೋಟಾರ್ಸ್ 2016ರಲ್ಲಿ ಕರ್ನಾಟಕ ಸರಕಾರವನ್ನು ಸಂಪರ್ಕಿಸಿ ಒಪ್ಪಂದ ಮಾಡಿಕೊಳ್ಳಲು ಸಜ್ಜಾಗಿತ್ತು. ತುಮಕೂರಿನ ದಾಬಸ್‌ಪೇಟೆ ಸಮೀಪದಲ್ಲಿ ಕಿಯಾ ಘಟಕ ಆರಂಭಿಸಲು ಕಿಯಾ ನಿರ್ಧರಿಸಿತ್ತು. ಆದರೆ ಅಂದಿನ ಸರ್ಕಾರ ಆಸಕ್ತಿ ತೋರಲಿಲ್ಲ.  ಹೀಗಾಗಿ ಕಿಯಾ ಮೋಟಾರ್ಸ್ ಆಂಧ್ರಪ್ರದೇಶ ಬಾಗಿಲು ತಟ್ಟಿತು. ತಕ್ಷಣವೇ ಸ್ಪಂದಿಸಿದ ಆಂಧ್ರ ಸರ್ಕಾರ ಸ್ಥಳ ಗುರುತಿಸಲು ಮುಂದಾಯಿತು. ಕಿಯಾ ಬೇಡಿಕೆಯಂತೆ ಬೆಂಗಳೂರಿನ ಸಮೀಪದ ಅನಂತಪುರ ಬಳಿ ಕಿಯಾ ಮೋಟಾರ್ಸ್‌ಗೆ ಬರೋಬ್ಬರಿ 536 ಏಕರೆ ನೀಡಲಾಯಿತು. 

2017ರಲ್ಲಿ ಕಿಯಾ ಮೋಟಾರ್ಸ್ ಉತ್ಪಾದನ ಘಟಕದ ಕಾರ್ಯ ಆರಂಬಿಸಿತು. ಒಂದೂವರೆ ವರ್ಷದಲ್ಲಿ ಕಿಯಾ ಮೋಟಾರ್ಸ್ ಉತ್ಪಾದನ ಘಟಕ ನಿರ್ಮಿಸಿ, ಕಾರು ಕೂಡ ಮಾರುಕಟ್ಟೆಗೆ ಪರಿಚಯಿಸಿತು. ಕಿಯಾ ಮೋಟಾರ್ಸ್ ಘಟಕದಿಂದ ಸ್ಥಳೀಯರಿಗೆ ಉದ್ಯೋಗ ಸಿಕ್ಕಿದೆ. ಅನಂತಪುರ ಅಭಿವೃದ್ದಿಯಾಗುತ್ತಿದೆ. ಕಿಯಾ ಮೋಟಾರ್ಸ್ ಘಟಕದಿಂದ ಹೊಟೆಲ್ ಉದ್ಯಮ, ವ್ಯಾಪರ ವಹಿವಾಟು ಹೆಚ್ಚಾಗಿದೆ. ವಿಶೇಷ ಅಂದರೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಅತೀ ಹೆಚ್ಚು ಕನ್ನಡಿಗರು ನೆಲೆಸಿದ್ದಾರೆ. ಹೀಗಾಗಿ ಕಿಯಾ ಮೋಟಾರ್ಸ್ ಕಂಪನಿಯಲ್ಲೂ ಹಲವು ಕನ್ನಡಿಗರು ಕೆಲಸ ನಿರ್ವಹಿಸುತ್ತಿದ್ದಾರೆ.

click me!