ರಾಜ್ಯದಲ್ಲಿ ಈಗ ಇವೆ 2.11 ಕೋಟಿ| ವಾಹನಗಳು: ಬೆಂಗ್ಳೂರಲ್ಲಿ 80 ಲಕ್ಷ!| ರಾಜ್ಯದಲ್ಲಿ ಒಂದೇ ವರ್ಷದಲ್ಲಿ 17 ಲಕ್ಷ ಹೊಸ ವಾಹನ ನೋಂದಣಿ
ಬೆಂಗಳೂರು[ಏ.02]: ‘ಸಾರ್ವಜನಿಕ ಸಾರಿಗೆ ಹೆಚ್ಚು ಬಳಸಿ’ ಎಂಬ ಪ್ರಚಾರಾಂದೋಲನ ಆರಂಭವಾಗಿರುವ ಈ ದಿನಗಳಲ್ಲಿ ರಾಜ್ಯದ ಒಟ್ಟು ವಾಹನಗಳ ಸಂಖ್ಯೆ 2.10 ಕೋಟಿ ಮೀರಿದೆ! ಈ ಪೈಕಿ ರಾಜಧಾನಿ ಬೆಂಗಳೂರು ನಗರವೊಂದೆಲ್ಲೇ ನೋಂದಣಿಯಾಗಿರುವ ವಾಹನಗಳ ಸಂಖ್ಯೆ 80 ಲಕ್ಷ ದಾಟಿದೆ!!
ಹೌದು. 2018ರ ಮಾರ್ಚ್ ಅಂತ್ಯದ ವೇಳೆಗೆ ರಾಜ್ಯದಲ್ಲಿ 1.93 ಕೋಟಿ ವಾಹನಗಳಿದ್ದವು. ಈ ಪೈಕಿ ಬೆಂಗಳೂರು ನಗರದಲ್ಲೇ 74.06 ಲಕ್ಷ ವಾಹನಗಳು ಇದ್ದವು. 2019ರ ಮಾಚ್‌ರ್ ಅಂತ್ಯದ ವೇಳೆಗೆ ವಾಹನಗಳ ಸಂಖ್ಯೆ ಕ್ರಮವಾಗಿ 2.10 ಕೋಟಿ ಮತ್ತು 80.45 ಲಕ್ಷಕ್ಕೇರಿದೆ ಎಂದು ಖುದ್ದು ರಾಜ್ಯ ಸಾರಿಗೆ ಇಲಾಖೆ ಮಹತ್ವದ ಅಂಕಿ-ಅಂಶಗಳನ್ನು ಒದಗಿಸಿದೆ.
undefined
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಾರಿಗೆ ಇಲಾಖೆ ಆಯುಕ್ತ ವಿ.ಪಿ. ಇಕ್ಕೇರಿ, ಅಂದರೆ ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ 16,90,860 ವಾಹನಗಳು ನೋಂದಣಿಯಾಗಿವೆ. ಈ ಪೈಕಿ 6,39,777 ವಾಹನಗಳು ರಾಜಧಾನಿ ಬೆಂಗಳೂರಿನಲ್ಲೇ ನೋಂದಣಿಯಾಗಿವೆ. ಕಳೆದ ವರ್ಷ ನಗರದಲ್ಲಿ ಪ್ರತಿ ನಿತ್ಯ ಸುಮಾರು 1752 ವಾಹನಗಳು ನೋಂದಣಿಯಾಗಿವೆ. ಇದರಲ್ಲಿ ದ್ವಿಚಕ್ರವಾಹನ ಹಾಗೂ ಕಾರುಗಳ ಸಂಖ್ಯೆ ಹೆಚ್ಚಿದೆ ಎಂದು ವಿವರಿಸಿದರು.
ರಾಜಸ್ವ ಸಂಗ್ರಹ ಉತ್ತಮ:
ಕಳೆದ ಆರ್ಥಿಕ ವರ್ಷದಲ್ಲಿ ಸಾರಿಗೆ ಇಲಾಖೆಗೆ ಉತ್ತಮ ರಾಜಸ್ವ ಆದಾಯ ಸಂಗ್ರಹವಾಗಿದೆ. 2018-19ನೇ ಸಾಲಿನಲ್ಲಿ ಇಲಾಖೆಗೆ 6656.42 ಕೋಟಿ ರು. ಆದಾಯ ಗುರಿ ನಿಗದಿ ಮಾಡಲಾಗಿತ್ತು. ಮಾಚ್‌ರ್ ಅಂತ್ಯದ ವೇಳೆಗೆ 6528.42 ಕೋಟಿ ರು. ಸಂಗ್ರಹಿಸಲಾಗಿದೆ. ಈ ಮೂಲಕ ಶೇ.98.07ರಷ್ಟುರಾಜಸ್ವ ಸಂಗ್ರಹಿಸಲಾಗಿದೆ. ಒಟ್ಟು ರಾಜಸ್ವ ಆದಾಯದಲ್ಲಿ ಶೇ.80ರಷ್ಟುವಾಹನಗಳ ನೋಂದಣಿಯಿಂದಲೇ ಸಂಗ್ರಹವಾಗಿದೆ. ಇದರ ಜತೆಗೆ ನಿಯಮ ಉಲ್ಲಂಘಿಸಿದ ವಾಹನಗಳಿಂದ ದಂಡದ ರೂಪದಲ್ಲಿ 160 ಕೋಟಿ ರು. ಸಂಗ್ರಹಿಸಲಾಗಿದೆ. ಸಿಬ್ಬಂದಿ ಕೊರತೆ ನಡುವೆಯೂ ರಾಜಸ್ವ ಸಂಗ್ರಹದಲ್ಲಿ ಇಲಾಖೆ ಉತ್ತಮ ಸಾಧನೆ ಮಾಡಿದೆ ಎಂದರು.