Mythological snakes: ನಿಮ್ಮ ಜನ್ಮರಾಶಿಗೆ ಸಂಬಂಧಿಸಿದ ಪುರಾಣದ ಸರ್ಪ ಯಾರು?

Published : Nov 07, 2025, 09:52 PM IST
mythological snakes

ಸಾರಾಂಶ

ಹಿಂದೂ ಪುರಾಣಗಳಲ್ಲಿ 12 ಪ್ರಮುಖ ಮಹಾಸರ್ಪಗಳನ್ನು (Mythological snakes)  ಬಣ್ಣಿಸಲಾಗಿದೆ. ಶೇಷ, ವಾಸುಕಿ, ಹೀಗೆ. ಹಾಗೇ ಜನ್ಮರಾಶಿಗಳೂ ಹನ್ನೆರಡು. ನಿಮ್ಮ ಜನ್ಮರಾಶಿಗೂ ಈ ಮಹಾಸರ್ಪಗಳಿಗೂ ಸಂಬಂಧವಿದೆ ಅಂದ್ರೆ ನಂಬ್ತೀರಾ? ಅದು ಹೇಗೆ?  

ನಮ್ಮ ಪುರಾಣಗಳಿಗೂ ಮಹಾಸರ್ಪಗಳಿಗೂ ಬಹಳ ಹತ್ತಿರದ ನಂಟು. ಮಹಾವಿಷ್ಣುವಿಗೆ ಹಾಸಿಗೆಯಾಗಿರುವ, ಶಿವನಿಗೆ ಕಂಠಾಭರಣವಾಗಿರುವ, ಗಣೇಶನಿಗೆ ಸೊಂಟದ ಒಡ್ಯಾಣವಾಗಿರುವ, ಭೂಮಿಯನ್ನು ಹೊತ್ತಿರುವ- ಇವೆಲ್ಲಾ ಸರ್ಪಗಳೇ. ಭಾರತದಲ್ಲಿ ಹಾವುಗಳನ್ನು ದೈವಿಕ ವ್ಯಕ್ತಿಗಳಾಗಿ ಪೂಜಿಸಲಾಗುತ್ತದೆ. ನಿಜ ಜೀವನದಲ್ಲಿ ಹಾವುಗಳು ಭಯಾನಕ ಜೀವಿಗಳೆನಿಸಿದರೂ, ಅವು ಫಲವತ್ತತೆ, ಶಕ್ತಿ ಮತ್ತು ರಕ್ಷಣೆಯ ಸಂಕೇತಗಳಾಗಿವೆ. ಹಿಂದೂ ಧರ್ಮದಲ್ಲಿ ಹಾವನ್ನು ಕೊಲ್ಲುವುದು ಪಾಪ. ಹಾಗೆ ಮಾಡುವ ಜನ ದುರದೃಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಭಾರತದ ಪುರಾಣಗಳಲ್ಲಿ ಹಾವುಗಳು ದೇವತೆಗಳು. ಹನ್ನೆರಡು ಜನ್ಮರಾಶಿಗಳಿಗೂ ಒಂದೊಂದು ಸರ್ಪವಿದೆ. ಹಾಗಾದರೆ ನಿಮ್ಮ ರಾಶಿಗೆ ಪೂರಕವಾದ ಸರ್ಪ- ನಾಗ ಯಾವುದು? ಇಲ್ಲಿದೆ ನೋಡಿ.

ಅನಂತ (ಮೇಷ ರಾಶಿ)

ಎಲ್ಲಾ ನಾಗರ ಮೂಲರೂಪವೆಂದು ಪರಿಗಣಿಸಲಾದ ಆದಿ ಶೇಷ, ಭೂಮಿಯನ್ನು ಸ್ವತಃ ಹೊತ್ತು ನಿಂತಿರುವ ಆದಿ ಸರ್ಪ. ಇವನನ್ನು ಅನಂತನೆಂದೂ ಕರೆಯಲಾಗುತ್ತದೆ. ಶೇಷನೊಂದಿಗೆ ನಿಕಟ ಸಂಬಂಧ ಹೊಂದಿದ್ದರೂ, ಅವನನ್ನು ಹೆಚ್ಚಾಗಿ ಸರ್ಪ ವಂಶಾವಳಿಯ ಮೂಲ ಮೂಲವಾಗಿ ಚಿತ್ರಿಸಲಾಗುತ್ತದೆ. ಆದಿ ಶೇಷನಂತೆಯೇ ಮೇಷ ರಾಶಿಯವರೂ ಮಣಿಯದ ಶಕ್ತಿ. ಭೂಮಿಯನ್ನು ಹೊತ್ತವನಾಗಿ ಅವನು ನಾಗರ ನೈಸರ್ಗಿಕ ಪ್ರಪಂಚದ ಸಂಪರ್ಕ ಮತ್ತು ವಿಶ್ವ ಸಾಮರಸ್ಯವನ್ನು ಕಾಪಾಡಿಕೊಳ್ಳುವಲ್ಲಿ ಅವರ ಮೂಲಭೂತ ಪಾತ್ರವನ್ನು ಒತ್ತಿಹೇಳುತ್ತದೆ. ಪುರಾಣಗಳ ಪ್ರಕಾರ ಶೇಷನಾಗನು ವಿಶ್ವದ ಎಲ್ಲಾ ಗ್ರಹಗಳನ್ನು ತನ್ನ ವಿಶಾಲವಾದ ಹೆಡೆಗಳ ಮೇಲೆ ಹಿಡಿದಿಟ್ಟುಕೊಳ್ಳುತ್ತಾನೆ. ಆದಿಶೇಷನು ಸುರುಳಿಯನ್ನು ಬಿಚ್ಚಿದಾಗ ಸಮಯ ಮುಂದೆ ಸಾಗುತ್ತದೆ. ಅದು ಸುರುಳಿಯಾದಾಗ ಸಮಯ ನಿಲ್ಲುತ್ತದೆ.

ಶೇಷ (ವೃಷಭ ರಾಶಿ)

ನಾಗರ ರಾಜ ಶೇಷ ಅಥವಾ ಅನಂತ. ಇದರ ಅರ್ಥ "ಶಾಶ್ವತ". ಹಿಂದೂ ಪುರಾಣಗಳಲ್ಲಿ ನಾಗರಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾನೆ. ಈ ಬಹು ಹೆಡೆಗಳ ಸರ್ಪನೇ ಮಹಾವಿಷ್ಣುವಿನ ದೈವಿಕ ಮಂಚ. ಈತ ಕ್ಷೀರ ಸಾಗರದ ಮೇಲೆ ತೇಲುವವನು. ಶೇಷನಂತೆಯೇ ವೃಷಭ ರಾಶಿಯವರ ಮಹತ್ವವು ಅವರ ಭೌತಿಕ ಚಿತ್ರಣವನ್ನು ಮೀರಿ ವಿಸ್ತರಿಸುತ್ತದೆ. ಅವನು ಬ್ರಹ್ಮಾಂಡದ ಅನಂತತೆ, ಸಮತೋಲನ ಮತ್ತು ಸ್ಥಿರತೆಯನ್ನು ಸಂಕೇತಿಸುತ್ತಾನೆ. ಎಲ್ಲಾ ಅಸ್ತಿತ್ವ ಸೂಕ್ಷ್ಮ ಸಮತೋಲನದ ಮೇಲೆ ನಿಂತಿದೆ ಎಂಬ ತತ್ವವನ್ನು ಸಾಕಾರಗೊಳಿಸುತ್ತಾನೆ. ಐಹಿಕ ಅವತಾರಗಳಲ್ಲಿ ಶೇಷನು ರಾಮಾಯಣದಲ್ಲಿ ಲಕ್ಷ್ಮಣನಾಗಿ ಮತ್ತು ಮಹಾಭಾರತದಲ್ಲಿ ಬಲರಾಮನಾಗಿ ಕಾಣಿಸಿಕೊಳ್ಳುತ್ತಾನೆ. ವಿಷ್ಣುವಿನೊಂದಿಗಿನ ಅವನ ಬಂಧ ಶಾಶ್ವತ. ಧರ್ಮವನ್ನು ಎತ್ತಿಹಿಡಿಯುವುದು ಅವನ ಧ್ಯೇಯ.

ವಾಸುಕಿ (ಮಿಥುನ ರಾಶಿ)

ವಾಸುಕಿ ಶಿವನ ಕುತ್ತಿಗೆಗೆ ಸುತ್ತಿಕೊಂಡಿರುವ ದೈವಿಕ ಸರ್ಪ. ಮಂಥನಕ್ಕಾಗಿ ಹಗ್ಗವಾಗಿ ಮಂದಾರ ಪರ್ವತಕ್ಕೆ ಕಟ್ಟಲ್ಪಟ್ಟವನು. ಶಿವನು ಹಾಲಾಹಲವನ್ನು ಸೇವಿಸಿದ ನಂತರ ಅದನ್ನು ಪಡೆದ ಹಾವುಗಳಲ್ಲಿ ವಾಸುಕಿಯೂ ಒಂದು. ವಾಸುಕಿ ವಿಷ ಸೇವಿಸಿದರೂ ದೂರು ನೀಡಲಿಲ್ಲ. ವಾಸುಕಿಯ ಸಮರ್ಪಣೆಯನ್ನು ನೋಡಿ, ಶಿವನು ವಾಸುಕಿಯನ್ನು ತನ್ನ ಕುತ್ತಿಗೆಯಲ್ಲಿ ಧರಿಸಲು ನಿರ್ಧರಿಸಿದ. ಮಿಥುನ ರಾಶಿಯವರೂ ಹೀಗೆ ದೈವಪ್ರೀತರು ಮತ್ತು ಸಮರ್ಪಣ ಭಾವದವರು.

​ಕಾರ್ಕೋಟಕ (ಕಟಕ ರಾಶಿ)

ಕಾರ್ಕೋಟಕ ನಾಗನ ವಿಷ ಮಹಾ ಭಯಂಕರ ಎಂದು ಲೆಕ್ಕ. ನಳ ಮತ್ತು ದಮಯಂತಿಯರ ದಂತಕಥೆಯಲ್ಲಿನ ಪಾತ್ರಕ್ಕಾಗಿ ಈತ ಹೆಸರುವಾಸಿ. ಅಲ್ಲಿ ಆತ ನಳನನ್ನು ಕಚ್ಚಿ ಅವನನ್ನು ಪರಿವರ್ತಿಸಿದ. ವಿವಿಧ ಪುರಾಣಗಳಲ್ಲಿ ಅವನನ್ನು ಶಕ್ತಿಶಾಲಿ ಮತ್ತು ಭಯಾನಕ ಸರ್ಪ ಎಂದು ಉಲ್ಲೇಖಿಸಲಾಗಿದೆ. ಕಟಕ ರಾಶಿಯವರು ಮೇಲ್ನೋಟಕ್ಕೆ ಕೆಡುಕು ಎಂದು ಕಾಣಿಸಿದರೂ ಒಳ್ಳೆಯದನ್ನು ಮಾಡುವವರು. ಉತ್ತರಾಖಂಡದ ಭೀಮತಾಲ್‌ನಲ್ಲಿ ನಾಗ ಕಾರ್ಕೋಟಕ ಮಹಾರಾಜನ ದೇವಾಲಯವಿದೆ. ಭಕ್ತರಿಗೆ ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ದಯಪಾಲಿಸುತ್ತಾನೆ. ನಗರವನ್ನು ದುಷ್ಟ ಶಕ್ತಿಗಳಿಂದ ರಕ್ಷಿಸಲು ಕಾರ್ಕೋಟಕ ಇಲ್ಲಿ ನೆಲೆಸಿದ್ದಾನೆ.

​ತಕ್ಷಕ (ಸಿಂಹ ರಾಶಿ)

ತಕ್ಷಕನ ಉಲ್ಲೇಖವು ಮಹಾಭಾರತ ಮತ್ತು ಭಾಗವತ ಪುರಾಣಗಳಲ್ಲಿ ಕಂಡುಬರುತ್ತದೆ. ಶ್ರೀಮದ್ ಭಾಗವತದ ಪ್ರಕಾರ ತಕ್ಷಕನು ಇಕ್ಷ್ವಾಕು ವಂಶಕ್ಕೆ ಸೇರಿದವನು ಮತ್ತು ರಾಮನ ವಂಶಸ್ಥ. ತಕ್ಷಕನ ಮಗ ಬೃಹದ್ಬಲನನ್ನು ಅರ್ಜುನನ ಮಗ ಅಭಿಮನ್ಯು ಕೊಂದ. ಅವನನ್ನು ಇಂದ್ರನ ಸ್ನೇಹಿತನೆಂದು ಸಹ ಪರಿಗಣಿಸಲಾಗಿತ್ತು. ಇವನು ಪಾಂಡವರ ಮೊಮ್ಮಗ ಪರೀಕ್ಷಿತನನ್ನು ಮುನಿಶಾಪದಂತೆ ಕಚ್ಚಿ ಕೊಂದವನು. ಇವನಂತೆ ವಿಧಿಬದ್ಧವಾಗಿ ನಡೆಯುವುದು ಸಿಂಹ ರಾಶಿಯವರ ಹಣೆಬರಹ. ಮಧ್ಯಪ್ರದೇಶದ ಮಂದಸೌರ್‌ನಲ್ಲಿರುವ ತಾರಕೇಶ್ವರ ದೇವಸ್ಥಾನದಲ್ಲಿ ತಕ್ಷಕನ ವಿಗ್ರಹವಿದೆ.

ಕಾಳಿಂಗ (ಕನ್ಯಾ ರಾಶಿ)

ಪುರಾಣಗಳ ಪ್ರಕಾರ ಕಾಳಿಂಗ ಅಥವಾ ಕಾಲೀಯನು ವೃಂದಾವನದ ಯಮುನಾ ನದಿಯಲ್ಲಿ ವಾಸಿಸುವ ವಿಷಪೂರಿತ ನಾಗ. ಈತನ ವಿಷದಿಂದ ಸುತ್ತಲಿನ ನೀರು ಯಾವಾಗಲೂ ಕುದಿಯುತ್ತಿತ್ತು ಮತ್ತು ವಿಷದಿಂದ ಗುಳ್ಳೆಯೇಳುತ್ತಿತ್ತು. ಗೋಕುಲದ ಜನರಿಗೆ ಈತನಿಂದ ಕಿರುಕುಳ ಆಗುತ್ತಿತ್ತು. ಕೃಷ್ಣನು ಈತನ ಹೆಡೆಗಳ ಮೇಲೆ ಕುಣಿದು ಕಾಳಿಂಗನನ್ನು ನಿಗ್ರಹಿಸಿದ. ತನ್ನ ಸೋಲನ್ನು ಒಪ್ಪಿಕೊಂಡ ಕಾಳಿಂಗ ಕ್ಷಮೆ ಕೇಳಿದ. ಕನ್ಯಾ ರಾಶಿಯವರಲ್ಲಿ ಕಾಳಿಂಗಂತೆ ದುಷ್ಟತನ ಒಳಗೆ ಅಡಗಿರುತ್ತದೆ. ಆದರೆ ದೈವಕೃಪೆಯಿಂದ ಅದು ನಿಗ್ರಹಿಸಲ್ಪಡುತ್ತದೆ.

ಮಾನಸ (ತುಲಾ ರಾಶಿ)

ಮಾನಸ ಹಾವುಗಳ ಹಿಂದೂ ದೇವತೆ. ಅವಳನ್ನು ಮುಖ್ಯವಾಗಿ ಉತ್ತರ ಭಾರತದಲ್ಲಿ ಹಾವು ಕಡಿತದಿಂದ ತಡೆಗಟ್ಟುವಿಕೆಗಾಗಿ, ರಕ್ಷಣೆಗಾಗಿ, ಫಲವತ್ತತೆ ಮತ್ತು ಸಮೃದ್ಧಿಗಾಗಿ ಪೂಜಿಸಲಾಗುತ್ತದೆ. ಮಾನಸ ಶೇಷನಾಗ ಮತ್ತು ವಾಸುಕಿಯ ಸಹೋದರಿ ಮತ್ತು ಶಿವನ ಮಗಳು. ಈಕೆಯನ್ನು ಶಿವನು ಸುತ್ತಿಕೊಂಡಿದ್ದಾನೆ ಎಂದೂ ಹೇಳಲಾಗುತ್ತದೆ. ತುಲಾ ರಾಶಿಯವರೂ ಮಾನಸಳಂತೆ ದೈವಭಕ್ತರು.

ಗುಳಿಕ (ವೃಶ್ಚಿಕ ರಾಶಿ)

ಗರುಡನನ್ನು ಅಲಂಕರಿಸುವ 7 ದೈವಿಕ ಸರ್ಪಗಳಲ್ಲಿ ಗುಳಿಕ ಕೂಡ ಒಂದು. ಇದನ್ನು ಔಷಧೀಯ ಗಿಡಮೂಲಿಕೆಗಳು ಮತ್ತು ಸಸ್ಯಗಳ ರಕ್ಷಕ ಎಂದು ಪರಿಗಣಿಸಲಾಗುತ್ತದೆ. ಇದು ಗುಣಪಡಿಸುವಿಕೆ ಮತ್ತು ಪ್ರತಿವಿಷಗಳ ಜ್ಞಾನಕ್ಕೆ ಸಂಬಂಧಿಸಿದೆ. ವೃಶ್ಚಕ ರಾಶಿಯವರು ಗಿಡಮೂಲಿಕೆ, ಔಷಧ, ಆಯುರ್ವೇದ, ಆರೋಗ್ಯ ರಕ್ಷಣೆಯ ಬಗ್ಗೆ ಗುಳಿಕದಂತೆಯೇ ಜ್ಞಾನ ಹೊಂದಿರಬಹುದು.

ಪದ್ಮ (ಧನು ರಾಶಿ)

ಪದ್ಮ ಎಂಟು ಮಹಾ ನಾಗ ರಾಜರಲ್ಲಿ (ಅಷ್ಟನಾಗರು) ಒಬ್ಬ. ಅವರು ತಮ್ಮ ಬುದ್ಧಿವಂತಿಕೆಗೆ ಹೆಸರುವಾಸಿಯಾಗಿದ್ದಾರೆ ಮತ್ತು ಹೆಚ್ಚಾಗಿ ಧರ್ಮದ ಹರಡುವಿಕೆಗೆ ಸಂಬಂಧ ಹೊಂದಿದ್ದಾರೆ. ಅಧರ್ಮವನ್ನು ಸಹಿಸುವುದಿಲ್ಲ. ಅಧರ್ಮ ಕಂಡಲ್ಲಿ ಕಾಣಿಸಿಕೊಂಡು ಎಚ್ಚರಿಕೆ ಕೊಡುತ್ತಾರೆ. ಧನು ರಾಶಿಯವರೂ ಅಧರ್ಮವನ್ನು ಸಹಿಸುವವರಲ್ಲ.

ಶಂಖಪಾಲ (ಮಕರ ರಾಶಿ)

ಶಂಖಪಾಲ ಜಾತಕ ಕಥೆಗಳಲ್ಲಿ ಚಿತ್ರಿಸಲಾದ ಮತ್ತೊಂದು ಪ್ರಮುಖ ನಾಗ. ನಾಗಕುಮಾರ ಎಂದೂ ಹೇಳಲಾಗುತ್ತದೆ. ಅವರು ತಮ್ಮ ಕರುಣೆಗೆ ಹೆಸರುವಾಸಿಯಾಗಿದ್ದಾರೆ. ಸ್ವಭಾವತಃ ಮೃದು. ಹೆಚ್ಚಾಗಿ ಧರ್ಮದ ರಕ್ಷಣೆಗೆ ಪಣ ತೊಟ್ಟಿರುತ್ತಾರೆ. ಮಕರ ರಾಶಿಯವರೂ ಇವನಂತೆಯೇ ಮೃದು ಆದರೆ ಸಾತ್ವಿಕ ಸ್ವಭಾವದವರು.

ಆಸ್ತಿಕ (ಕುಂಭ ರಾಶಿ)

ಈತನನ್ನು ನಾಗರ ರಕ್ಷಕ ಎಂದೂ ಕರೆಯಲಾಗುತ್ತದೆ. ಆಸ್ತಿಕ ಬ್ರಾಹ್ಮಣ ಋಷಿ ಮತ್ತು ನಾಗ ಕುಲದ ತಾಯಿಗೆ ಜನಿಸಿದನು. ರಾಜ ಜನಮೇಜಯ ನಡೆಸಿದ ಸರ್ಪ ಯಾಗವನ್ನು ನಿಲ್ಲಿಸುವಲ್ಲಿ ಮತ್ತು ನಾಗ ಜನಾಂಗವನ್ನು ಉಳಿಸುವಲ್ಲಿ ಅವರ ಪಾತ್ರ ಬಹಳ. ಹೀಗೆ ಕುಂಭ ರಾಶಿಯವರು ತಮ್ಮ ಸಮುದಾಯಕ್ಕಾಗಿ ತಮ್ಮ ಜೀವನವನ್ನೇ ಪಣಕ್ಕಿಟ್ಟು ಹೋರಾಡಬಲ್ಲರು.

ಧೃತರಾಷ್ಟ್ರ (ಮೀನ ರಾಶಿ)

ಧೃತರಾಷ್ಟ್ರ ಎಂಬ ಹೆಸರಿನ ಜನಪ್ರಿಯತೆ ಇರುವುದು ಕೌರವರ ತಂದೆಯಲ್ಲಿ. ಆದರೆ ಇವನು ಅವನಲ್ಲ. ಧೃತರಾಷ್ಟ್ರ ಸರ್ಪಗಳ ಒಬ್ಬ ರಾಜನ ಹೆಸರು. ಇವನು ಪಾತಾಳದ ನಿವಾಸಿ. ಎಂದೂ ಭೂಮಿಗೆ ಬಂದವನಲ್ಲ. ತನ್ನ ಅಪಾರ ಶಕ್ತಿಗೆ ಹೆಸರುವಾಸಿಯಾದ ನಾಗ ರಾಜ ಮತ್ತು ನಾಗ ಪುರಾಣದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬ. ಮೀನ ರಾಶಿಯವರೂ ಯಾವಾಗಲೂ ಇವನಂತೆಯೇ ಮೇಲೆ ಕಾಣಿಸಿಕೊಳ್ಳದೆ ಒಳಗೊಳಗೇ ಇದ್ದು ಕೆಲಸ ಮಾಡುವವರು.

 

PREV
Read more Articles on
click me!

Recommended Stories

Vastu Tips: ಇವನ್ನೆಲ್ಲಾ ಫ್ರಿಡ್ಜ್ ಮೇಲಿಟ್ಟರೆ ನಿಮ್ಮ ಪರ್ಸ್ ಖಾಲಿಯಾಗೋದು ಗ್ಯಾರಂಟಿ, ಹುಷಾರು
ವೃಶ್ಚಿಕ ರಾಶಿಯಲ್ಲಿ ಬುಧನಿದ್ದರೆ ಬಂಪರ್ ಲಾಭ, ಈ ರಾಶಿಗೆ ಡಬಲ್ ಅದೃಷ್ಟ