ವಧು-ವರರ ಮುಂದೆ ಬೆಕ್ಕು ಸಾಗಿದ್ರೆ ದಾಂಪತ್ಯ ಸೂಪರ್!

Suvarna News   | Asianet News
Published : Jan 12, 2020, 02:38 PM ISTUpdated : Jan 12, 2020, 03:55 PM IST
ವಧು-ವರರ ಮುಂದೆ ಬೆಕ್ಕು ಸಾಗಿದ್ರೆ ದಾಂಪತ್ಯ ಸೂಪರ್!

ಸಾರಾಂಶ

ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ ಎಂದು ಹಾಡುತ್ತ ಬೆಕ್ಕನ್ನು ಮುದ್ದಿಸುವ ನಾವು, ಅದನ್ನು ಶುಭ ಸೂಚಕವೆಂದು ಭಾವಿಸುವುದು ತುಂಬಾ ಕಡಿಮೆ. ಬಹುತೇಕ ಸಂದರ್ಭಗಳಲ್ಲಿ ಅದನ್ನು ಅಪಶಕುನ ಎಂದೇ ಭಾವಿಸುತ್ತೇವೆ. ಆದರೆ, ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಬೆಕ್ಕನ್ನು ಅದೃಷ್ಟ, ಸಮೃದ್ಧಿ ಹಾಗೂ ಸಂಪತ್ತಿನ ಸಂಕೇತವೆಂದು ಭಾವಿಸುತ್ತಾರೆ. ಇದೇ ಕಾರಣಕ್ಕೆ ಬೆಕ್ಕಿಗೆ ರಾಜ ಮರ್ಯಾದೆಯನ್ನೂ ನೀಡುತ್ತಾರೆ.

ಬೆಕ್ಕು ನಮ್ಮೊಂದಿಗೆ ಸಹಜೀವನ ನಡೆಸುವ ಮುದ್ದಿನ ಪ್ರಾಣಿಯಾದರೂ ಭಾರತದಲ್ಲಿ ಇದನ್ನುಅಶುಭ ಸೂಚಕ ಎಂಬ ನಂಬಿಕೆಯಿದೆ. ಶುಭ ಕಾರ್ಯಕ್ಕೆ ಹೊರಡುವಾಗ ಬೆಕ್ಕು ಅದರಲ್ಲೂ ಕಪ್ಪು ಬೆಕ್ಕು ಅಡ್ಡ ಬಂದರೆ ಅದು ಅಪಶಕುನ ಎಂಬ ನಂಬಿಕೆ ಈಗಲೂ ಇದೆ. ಇದೇ ಕಾರಣಕ್ಕೆ ಕಾರು ಅಥವಾ ಯಾವುದೇ ವಾಹನಕ್ಕೆ ಅಡ್ಡಲಾಗಿ ಬೆಕ್ಕು ಹಾದು ಹೋದರೆ ಸ್ವಲ್ಪ ಹೊತ್ತು ಅಲ್ಲೇ ನಿಂತು ಬೇರೆ ವಾಹನದವರು ಸಾಗಿದ ಬಳಿಕ ಹೋಗುವ ಪರಿಪಾಠವಿದೆ. ಆದರೆ, ಕೆಲವು ದೇಶಗಳಲ್ಲಿ ಬೆಕ್ಕನ್ನು ಶುಭ ಸೂಚಕ ಎಂದು ಭಾವಿಸಲಾಗುತ್ತದೆ. ಬೆಕ್ಕಿನ ಕುರಿತು ಜಗತ್ತಿನ ವಿವಿಧ ಭಾಗಗಳಲ್ಲಿ ಎಂತಹ ನಂಬಿಕೆಗಳಿವೆ ಎಂಬುದನ್ನು ನೋಡೋಣ.

ಮನೆಗೆ ಸಮೃದ್ಧಿ ಹೊತ್ತು ತರುತ್ತದೆ: ಸ್ಕಾಟ್ಲೆಂಡ್‍ನಲ್ಲಿ ಅಪರಿಚಿತ ಕಪ್ಪು ಬೆಕ್ಕು ಮನೆಗೆ ಆಗಮಿಸಿದರೆ ಸಮೃದ್ಧಿಯ ಸಂಕೇತವೆಂದು ಭಾವಿಸುತ್ತಾರೆ. ಚೀನಾದಲ್ಲಿ ಅನೇಕ ವರ್ಷಗಳ ಹಿಂದೆ ಬೆಕ್ಕಿನ ಚಿತ್ರವನ್ನು ಸಮೃದ್ಧಿ ಹಾಗೂ ದೀರ್ಘಾಯುಷ್ಯದ ಸಂಕೇತ ಎಂದು ಪರಿಗಣಿಸುವ ಜೊತೆಗೆ ಗೋಡೆಗಳಿಗೆ ತೂಗು ಹಾಕಲಾಗುತ್ತಿತ್ತು. 

ಹಲ್ಲಿ ನೋಡಿ ಹಳ್ಳಕ್ಕೆ ಬೀಳುವ ಮುನ್ನ ಓದಿ ಬಿಡಿ ಗೌಲಿ ಶಾಸ್ತ್ರ

ಉತ್ತಮ ಫಸಲು: ಯುರೋಪಿನ ಅನೇಕ ರಾಷ್ಟ್ರಗಳಲ್ಲಿ ಉತ್ತಮ ಫಸಲಿಗೆ ಬೆಕ್ಕು ಮನೆಯಲ್ಲಿರುವುದು ಅಗತ್ಯ ಎಂಬ ಭಾವನೆ ರೈತರಲ್ಲಿದೆ. ಈ ನಂಬಿಕೆಯ ಹಿನ್ನೆಲೆಯಲ್ಲಿ ಐರೋಪ್ಯ ರಾಷ್ಟ್ರಗಳಲ್ಲಿ ಬೆಕ್ಕನ್ನು ಗೌರವದಿಂದ ನೋಡುವ ಜೊತೆಗೆ ಕಾಳಜಿಯಿಂದ ಸಾಕುತ್ತಾರೆ.

ದುಷ್ಟ ಶಕ್ತಿಗಳಿಂದ ರಕ್ಷಣೆ: ಮನೆಯಲ್ಲಿ ಬೆಕ್ಕು ಸಾಕುವುದರಿಂದ ದುಷ್ಟ ಶಕ್ತಿಗಳಿಂದ ರಕ್ಷಣೆ ದೊರೆಯುತ್ತದೆ ಎಂಬ ನಂಬಿಕೆ ಈಜಿಪ್ಟ್ ಜನರಲ್ಲಿದೆ. 

ಹವಾಮಾನ ಮುನ್ಸೂಚನೆ: ಕೆಲವು ರಾಷ್ಟ್ರಗಳಲ್ಲಿ ಬೆಕ್ಕಿನ ಮೂಲಕ ಹವಾಮಾನದಲ್ಲಿ ಉಂಟಾಗಬಹುದಾದ ಏರುಪೇರುಗಳನ್ನು ಅಂದಾಜಿಸುತ್ತಾರೆ. ಬೆಕ್ಕು ಒಲೆಗೆ ಬೆನ್ನು ಹಾಕಿ ಕುಳಿತಿದ್ದರೆ ಅದನ್ನು ಹಿಮಮಳೆಯ ಮುನ್ಸೂಚನೆಯೆಂದು
ಗ್ರಹಿಸಲಾಗುತ್ತದೆ. 

ಲಿವಿಂಗ್ ರೂಮ್ ಗೋಡೆಯೂ ಮಾತಾಡಬಲ್ಲದು ಗೊತ್ತಾ?

ಹಡಗಿನ ರಕ್ಷಕ: ಹಡಗಿನಲ್ಲಿ ಕಪ್ಪು ಬೆಕ್ಕಿದ್ದರೆ ಅದನ್ನು ಅದೃಷ್ಟದ ಸಂಕೇತವೆಂದು ನಾವಿಕರು ಭಾವಿಸುತ್ತಾರೆ. ಹಡಗಿನಲ್ಲಿ ಸಮುದ್ರಯಾನಕ್ಕೆ ತೆರಳಿರುವ ಪತಿ ಸುರಕ್ಷಿತವಾಗಿ ಮನೆಗೆ ಹಿಂತಿರುಗಲಿ ಎಂಬ ಉದ್ದೇಶದಿಂದ ನಾವಿಕರ ಪತ್ನಿಯರು ಕೂಡ ಮನೆಯಲ್ಲಿ ಕಪ್ಪು ಬೆಕ್ಕನ್ನು ಸಾಕುತ್ತಾರೆ. ಬೆಕ್ಕು ಅವರ ಪತಿಗೆ ರಕ್ಷಣೆ ನೀಡುತ್ತದೆ ಎಂಬುದು ಪತ್ನಿಯರ ನಂಬಿಕೆ.

ಅದೃಷ್ಟದ ಸಂಕೇತ: ಬ್ರಿಟನ್‍ನಲ್ಲಿ ಕಪ್ಪು ಬೆಕ್ಕನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮದುವೆ ದಿನ ವಧು ಮತ್ತು ವರರ ಮುಂದೆ ಬೆಕ್ಕು ಸಾಗಿದರೆ ಅದನ್ನು ಶುಭ ಸೂಚನೆ ಎಂದು ಭಾವಿಸಲಾಗುತ್ತದೆ. ಮದುವೆ ದಿನ ವಧುವಿನ ಬಳಿ ಬೆಕ್ಕು ಸೀನಿದರೆ ಅವರ ದಾಂಪತ್ಯ ಜೀವನ ಸುದೀರ್ಘ ಹಾಗೂ ಸುಖಮಯವಾಗಿರುತ್ತದೆ ಎಂಬ ನಂಬಿಕೆಯಿದೆ. ಬಿಳಿ ಬೆಕ್ಕು ತನ್ನ ಯಜಮಾನನಿಗೆ ಅದೃಷ್ಟ ಹಾಗೂ ಸಂಪತ್ತನ್ನು ಹೊತ್ತು ತರುತ್ತದೆ ಎಂಬ ನಂಬಿಕೆ ಬ್ರಿಟನ್ ಜನರಲ್ಲಿದೆ. ಜಪಾನ್‍ನಲ್ಲಿ ಹಿಂಬದಿಯ ಎರಡು ಕಾಲುಗಳ ಮೇಲೆ ನಿಂತು ಮುಂದಿನ ಒಂದು ಕಾಲನ್ನು ಮೇಲಕ್ಕೆತ್ತಿರುವ ಬೆಕ್ಕನ್ನು ಅದೃಷ್ಟದ ಸಂಕೇತವೆಂದು ಭಾವಿಸುತ್ತಾರೆ. ಅಲ್ಲಿನ ಮನೆಗಳಲ್ಲಿ ಎಡ ಕಾಲನ್ನು ಮೇಲಕ್ಕೆತ್ತಿರುವ ಬೆಕ್ಕಿನ ಚಿತ್ರವನ್ನು ತೂಗು ಹಾಕುವ ಸಂಪ್ರದಾಯವಿದೆ. ಮೂರು ಬಣ್ಣಗಳನ್ನು ಹೊಂದಿರುವ ಮಿ-ಕೇ ಎಂಬ ಬೆಕ್ಕನ್ನು ನಾವಿಕರು ಹಡಗಿನಲ್ಲಿ ತಮ್ಮೊಂದಿಗೆ ಕೊಂಡೊಯ್ಯುತ್ತಾರೆ. ಅದೃಷ್ಟ ಒಲಿಯಲಿ ಹಾಗೂ ಪ್ರಯಾಣ ಸುಖಕರವಾಗಿರಲಿ
ಎಂಬುದು ಇದರ ಉದ್ದೇಶ.

ಅಮಿತಾಭ್‌ ಬಚ್ಚನ್‌ ಮನೆ ವಾಸ್ತು ಹೇಗಿದೆ?

ಶುದ್ಧತೆಯ ಪ್ರತೀಕ: ಇಟಲಿಯನರು ಬೆಕ್ಕನ್ನು ಪರಿಶುದ್ಧತೆಯ ಪ್ರತೀಕವೆಂದು ಭಾವಿಸುತ್ತಾರೆ. ಬೆಕ್ಕನ್ನು ಯೇಸು ಕ್ರಿಸ್ತನ ಹುಟ್ಟಿನ ಕಥೆಯೊಂದಿಗೆ ಬೆಸೆಯುತ್ತಾರೆ ಕೂಡ.

ಮಗುವಿನ ರಕ್ಷಕ: ರಷ್ಯಾದಲ್ಲಿ ಮಗು ಮಲಗುವ ತೊಟ್ಟಿಲಲ್ಲಿ ಬೆಕ್ಕನ್ನು ಮಲಗಿಸುವ ಪರಿಪಾಠವಿದೆ. ಇದರಿಂದ ಮಗುವಿನ ಬಳಿ ದುಷ್ಟ ಶಕ್ತಿಗಳು ಸುಳಿಯುವುದಿಲ್ಲ ಎಂಬುದು ರಷ್ಯಾ ಜನರ ನಂಬಿಕೆ.

ಬೆಕ್ಕಿನ ಕಣ್ಣೇ ಗಡಿಯಾರ: ಪುರಾತನ ಕಾಲದಲ್ಲಿ ಚೀನಾದ ಜನರು ಬೆಕ್ಕಿನ ಕಣ್ಣುಗಳನ್ನು ನೋಡುವ ಮೂಲಕ ಸಮಯವನ್ನು ಅಂದಾಜಿಸುತ್ತಿದ್ದರಂತೆ. ಬೆಕ್ಕಿನ ಕಣ್ಣುಗಳ ಬಣ್ಣಗಳಲ್ಲಿ ಉಂಟಾಗುವ ಬದಲಾವಣೆಗೂ ಚಂದ್ರನಲ್ಲಾಗುವ ಪರಿವರ್ತನೆಗಳಿಗೂ ಸಂಬಂಧವಿದೆ ಎಂದು ಪುರಾತನ ರೋಮ್ ಜನರು ನಂಬುತ್ತಿದ್ದರು. ಪ್ರಾಚೀನ ಈಜಿಪ್ಟ್ನಲ್ಲಿ ಬೆಕ್ಕಿನ ಕಣ್ಣುಗಳು ಸೂರ್ಯನ ಕಿರಣಗಳ ಪ್ರತಿಬಿಂಬವಾಗಿದ್ದು, ಮಾನವರನ್ನು ಕತ್ತಲೆಯಿಂದ ಕಾಪಾಡುತ್ತವೆ ಎಂಬ
ನಂಬಿಕೆ ಹೊಂದಿದ್ದರು. 

PREV
click me!

Recommended Stories

Baba Vanga Prediction: 2026ರಿಂದ 5079 ರವರೆಗಿನ ಬಾಬಾ ವಂಗಾ ಭವಿಷ್ಯವಾಣಿ ಇಲ್ಲಿದೆ!
ಜನ್ಮ ದಿನದಲ್ಲಿ ಒಮ್ಮೆಯಾದ್ರೂ ಸಂಖ್ಯೆ 1 ಇದ್ಯಾ? ಹಾಗಿದ್ದರೆ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ- ಎಷ್ಟು ಬಾರಿ ಇದ್ದರೆ ಏನು ಫಲ?