ದೀಪಾವಳಿಯ ಸಂಭ್ರಮ ಕೇವಲ ನರಕ ಚತುರ್ದಶಿ ಹಾಗೂ ಬಲಿ ಪಾಡ್ಯಮಿಗೆ ಸ್ತಿಮಿತವಲ್ಲ. ಕಾರ್ತಿಕ ಮಾಸ ಪೂರ್ತಿ ಹಬ್ಬದ ಸಂಭ್ರಮವಿದ್ದು, ತುಳಸಿ ಹಬ್ಬವೂ ಅದರಲ್ಲೊಂದು. ಏನೀ ಹಬ್ಬದ ಮಹತ್ವ?
ತುಳಸಿ ಹಬ್ಬ ದೀಪಾವಳಿಯಷ್ಟೇ ಸಂಭ್ರಮ ತರೋ ಕಾರ್ತಿಕ ಮಾಸದ ಮತ್ತೊಂದು ಹಬ್ಬ. ಸಾಮಾನ್ಯವಾಗಿ ಹಿಂದುಗಳ ಮನೆ ಮುಂದಿರುವ ತುಳಸಿ ಕಟ್ಟೆಯನ್ನು ಅಲಂಕರಿಸಿ, ರಂಗೋಲಿ ಹಾಕಿ, ನೂರಾರು ದೀಪ ಹಚ್ಚಿಡುವುದೇ ಈ ದಿನದ ವಿಶೇಷ. ಬಾಳೆದಿಂಡಿಟ್ಟು, ಹಸಿರು ಮಾವಿನ ಎಲೆ, ಚೆಂಡು ಹೂಗಳಿಂದ ಅಲಂಕೃತವಾದ ತುಳಸಿ ನೈಜ ವಧುವಿನಂತೆಯೇ ಕಂಗೊಳಿಸುತ್ತಾಳೆ.
ಚಾಂದ್ರಮಾನ ಕಾರ್ತಿಕಮಾಸ ಶುಕ್ಲ ಪಕ್ಷದ 12ನೇ ದಿನವೆಂದರೆ ದ್ವಾದಶಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದಕ್ಕೆ ಉತ್ಥಾನ ದ್ವಾದಶಿ ಎಂದೂ ಕರೆಯುತ್ತಾರೆ.
undefined
ಬೆಟ್ಟದ ನೆಲ್ಲಿಕಾಯಿ ಗಿಡವೂ ನೆಟ್ಟು ಪೂಜಿಸುವುದು ಸಂಪ್ರದಾಯ. ಉಪವಾಸವಿದ್ದು, ಪೂಜೆ ಮಾಡುವುದು ಮತ್ತೊಂದು ವಿಶೇಷ.
ಸಾಮಾನ್ಯವಾಗಿ ಮುತ್ತೖೈದೆಯರು ಅಥವಾ ಯುವತಿಯರು ತುಳಸಿಯನ್ನು ಪೂಜಿಸುತ್ತಾರೆ. ತುಳಸಿ ಪೂಜೆಗೆ ತುಳಸಿ ಮದುವೆ ಎಂದೂ ಹೇಳುತ್ತಾರೆ.
ಈ ಪೂಜೆಗೂ ಪೌರಾಣಿಕ ಹಿನ್ನೆಲೆ ಇದೆ. ವೃಂದಾ ಎನ್ನುವವಳು ಮಹಾ ವಿಷ್ಣುವಿನ ಪರಮ ಭಕ್ತೆಯಾಗಿರುತ್ತಾಳೆ. ಈಕೆಯ ತಪೋ ಶಕ್ತಿಯಿಂದ ಮಹಾನ್ ಶಕ್ತಿಶಾಲಿಯಾದ ಪತಿ ದುಷ್ಟ ರಾಜ ಜಲಂಧರ ಎಲ್ಲರಿಗೂ ಕಿರುಕುಳ ನೀಡುತ್ತಿರುತ್ತಾನೆ. ದಿನದಿಂದ ದಿನಕ್ಕೆ ಈತನ ಕಾಟ ಹೆಚ್ಚುತ್ತದೆ. ಇದನ್ನು ತಾಳಲಾರದ ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ. ಆಗ ಜಲಂಧರನ ವೇಷ ಧರಿಸಿದ ವಿಷ್ಣು, ವೃಂದಳ ಪಾತಿವ್ರತ್ಯಕ್ಕೆ ಭಂಗ ತರುತ್ತಾನೆ. ಅತ್ತ ಜಲಂಧರ ರಣರಂಗದಲ್ಲಿ ಮಡಿಯುತ್ತಾನೆ. ಕಪಟ ಅರಿತ ತುಳಿಸಿ, ವಿಷ್ಣುವನ್ನು ಶಪಿಸಿ ಪತಿಯೊಂದಿಗೆ ಬೂದಿಯಾಗುತ್ತಾಳೆ. ಆಮೇಲೆ ಪಾರ್ವತಿಯ ಬಂದಾವನದಲ್ಲಿ ತುಳಸೀಯಾಗಿ ಜನ್ಮ ತಾಳಿದಳಂತೆ.
ಇವಳು ರುಕ್ಮಿಣಿಯಾಗಿ ಜನ್ಮ ತಾಳಿ, ಕಾರ್ತಿಕ ಶುದ್ಧ ದ್ವಾದಶಿಯಂದು ಕೃಷ್ಣನನ್ನು ವರಿಸಿದಳೆಂಬ ಪ್ರತೀತಿಯೂ ಇದೆ. ಹಾಗಾಗಿ ತುಳಸಿಯೊಂದಿಗೆ ಕೃಷ್ಣನ ವಿಗ್ರಹವಿಟ್ಟು, ಮದುವೆಯಂದೇ ಪೂಜಿಸಲಾಗುತ್ತದೆ.
ಇನ್ನೊಂದು ಪುರಾಣದ ಪ್ರಕಾರ ದೇವತೆಗಳು, ದಾನವರೂ ಕ್ಷೀರಸಾಗರವನ್ನು ಕಡೆದಾಗ ಕೊನೆಯಲ್ಲಿ ಅಮೃತ ಕಲಶ ಬಂತಂತೆ. ಅದನ್ನು ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಆ ಕಲಶದಲ್ಲಿ ಬಿದ್ದು. ಹುಟ್ಟಿದ ಗಿಡ ತುಳಸಿಯಂತೆ. ಲಕ್ಷ್ಮೀಯೊಂದಿಗೆ ತುಳಸಿಯನ್ನೂ ವಿಷ್ಣು ಮದುವೆಯಾದನೆಂದು ಹೇಳಲಾಗುತ್ತದೆ.
ಇಷ್ಟೆಲ್ಲಾ ಪೌರಾಣಿಕ ಹಿನ್ನೆಲೆಯಿರುವ ತುಳಿಸಿಯಲ್ಲಿ ಸಾಕಷ್ಟು ಔಷಧೀಯ ಗುಣಗಳೂ ಇವೆ. ಕ್ರಿಮಿ, ಕೀಟಗಳೂ ಮನೆಯೊಳಗೆ ಹೋಗದಂತೆ ತಡೆಯುವ ಶಕ್ತಿ ಈ ಪುಟ್ಟ ಗಿಡಕ್ಕಿದೆ. ಆ ಕಾರಣಕ್ಕೆ ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲಿಯೂ ತುಳಸಿ ಕಟ್ಟೆ ಅಥವಾ ಗಿಡವಿದ್ದು, ಜನರು ಭಯ ಭಕ್ತಿಯಿಂದ ಪೂಜಿಸುತ್ತಾರೆ.
ತುಳಸಿ ಗಾಳಿಗೇ ಅನೇಕ ಆರೋಗ್ಯ ಸಮಸ್ಯೆಗಳನ್ನು ತೊಲಗಿಸುವ ಶಕ್ತಿ ಇದೆ ಎಂದರೆ, ಅದರಲ್ಲಿ ಎಷ್ಟು ಔಷಧೀಯ ಗುಣಗಳಿದೆ ಎಂಬುದನ್ನು ಅರಿತುಕೊಳ್ಳಬಹುದು. ಇಂಥ ಪೌರಾಣಿಕ, ಆಯುರ್ವೇದದಲ್ಲಿ ಮಹತ್ವ ಪಡೆದುಕೊಂಡಿರುವ ತುಳಸಿ ಪೂಜೆ, ದೇವಿ ಕೃಪೆಗೆ ಪಾತ್ರರಾಗೋಣ.