ರಷ್ಯಾದ ಬ್ರಾಹ್ಮಣರಿಂದ ನರಸಿಂಹ ಯಜ್ಞ! ಏನಿದು ಅಚ್ಚರಿ?

Published : Mar 22, 2026, 07:52 PM ISTUpdated : Mar 22, 2026, 07:53 PM IST
russian brahmins

ಸಾರಾಂಶ

ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿ ರಷ್ಯನ್ನರು (Russian brahmins) ವೈದಿಕ ಯಜ್ಞವನ್ನು ಮಾಡುತ್ತಿರುವುದು ಕಂಡುಬಂದಿದೆ. ರಷಿಯನ್ನರಲ್ಲಿ ಹಲವರು ಭಾರತೀಯ ಪುರೋಹಿತರಿಂದ ಮಂತ್ರಗಳನ್ನು ಕಲಿತು, ಸಾಂಪ್ರದಾಯಿಕ ಉಡುಗೆಯಲ್ಲಿ ಯಜ್ಞಗಳನ್ನು ನೆರವೇರಿಸುತ್ತಿದ್ದಾರೆ. ಏನಿದು? 

ಇತ್ತೀಚೆಗೆ ಇನ್‌ಸ್ಟಗ್ರಾಂನಲ್ಲಿ ಒಂದು ದೃಶ್ಯ ಎಲ್ಲರನ್ನೂ ಆಕರ್ಷಿಸಿತು. ವೈರಲ್‌ ಆಯ್ತು. ಅದು ಮತ್ತೇನೂ ಅಲ್ಲ, ಕೆಲವು ರಷ್ಯನ್ನರು ಯಜ್ಞ ಮಾಡುವ ದೃಶ್ಯವದು. ಪಕ್ಕಾ ಬ್ರಾಹ್ಮಣ ಪುರೋಹಿತರಂತೆ, ಪದ್ಮಾಸನದಲ್ಲಿ ಕುಳಿತು, ಸರಿಯಾದ ಮಂತ್ರೋಚ್ಛಾರ ಮಾಡುತ್ತಾ, ಸ್ರುಕ್‌ ಸ್ರುವದ ಮೂಲಕ ತುಪ್ಪವನ್ನು ಅಗ್ನಿಗೆ ಆಹುತಿ ಕೊಡುತ್ತಿರುವುದು ಆ ದೃಶ್ಯದಲ್ಲಿ ಕಾಣಿಸುತ್ತದೆ. ಒಬ್ಬ ಹಿರಿಯ ವ್ಯಕ್ತಿ ಯಜ್ಞ ಮಾಡುತ್ತಿದ್ದರೆ, ಮತ್ತೂ ಹಲವು ಮಂದಿ ರಷ್ಯನ್ನರು ಸಾಲಾಗಿ ಕುಳಿತು ಮಂತ್ರಘೋಷ ಮಾಡುತ್ತಿರುವುದು ಕಂಡುಬರುತ್ತದೆ. ಎಲ್ಲರೂ ಸಾಂಪ್ರದಾಯಿಕ ಯಾಜ್ಞಿಕ ಉಡುಗೆಯಲ್ಲಿ ಇದ್ದಾರೆ. ಅಂದರೆ ಶ್ವೇತವರ್ಣದ ಪಂಚೆ ಧರಿಸಿ, ಯಜ್ಞೋಪವೀತ ಧರಿಸಿದ್ದಾರೆ. ಕೆಲವರು ಶಿಖೆಯನ್ನೂ ಬಿಟ್ಟಿದ್ದಾರೆ. ಇವರು ರಷ್ಯನ್ನರೋ ಅಥವಾ ಭಾರತೀಯ ಬ್ರಾಹ್ಮಣರೋ ಎಂಬ ಅನುಮಾನ ಬಂದೀತು. ಆದರೆ ಇವರು ಮೈಮೇಲೆ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾರೆ. ಅಂದರೆ ಇವರು ಸನಾತನ ಹಾಗೂ ಆಧುನಿಕ ಎರಡರ ಸಂಯೋಗವೂ ಆಗಿರುವಂತೆ ಕಾಣುತ್ತದೆ.

ಇದೇನಿದು ಎಂದು ತುಸು ಹುಡುಕಿದರೆ, ರಷ್ಯಾದಲ್ಲಿ ಭಾರತೀಯ ಸನಾತನ ವೈದಿಕ ಸಂಪ್ರದಾಯ ಆಳವಾಗಿ ಬೇರು ಬಿಟ್ಟಿರುವುದು ಗೊತ್ತಾಗುತ್ತದೆ. ಇದು ಹಲವು ಕಾರಣಗಳಿಂದಾಗಿ ಆಗಿದೆ. ಮುಖ್ಯವಾಗಿ ಭಾರತೀಯ ಭಕ್ತಿ ಪಂಥಗಳ ಪ್ರಭಾವ. 

ಇಸ್ಕಾನ್‌, ಮಾಧ್ವ ಪರಂಪರೆ ಪ್ರಭಾವ

ರಷ್ಯಾದಲ್ಲಿ ಇಸ್ಕಾನ್‌ನ ಪ್ರಭಾವ ಜೋರಾಗಿಯೇ ಇದೆ. ಭಾರತಕ್ಕೆ ಬಂದು ಇಸ್ಕಾನ್‌ ಸಂಪ್ರದಾಯ ಅಳವಡಿಸಿಕೊಂಡಿರುವ ನೂರಾರು ಮಂದಿ ಅದನ್ನು ರಷ್ಯಾಕ್ಕೂ ಕೊಂಡೊಯಿದ್ದಾರೆ. ಇಸ್ಕಾನ್‌ನ ಶ್ರೀಲ ಪ್ರಭುಪಾದರ ಚಿಂತನೆ, ಬೋಧನೆಗಳ ಪ್ರಭಾವ ಇವರ ಮೇಲೆ ತುಂಬಾ ಆಗಿದೆ. ಇವರು ಮಹಾವಿಷ್ಣುವಿನ ಅವತಾರಗಳನ್ನು ನಂಬುತ್ತಾರೆ, ಆರಾಧಿಸುತ್ತಾರೆ. ನೀವು ನೋಡಿದ ವಿಡಿಯೋದಲ್ಲಿ ನಡೆಯುತ್ತಿರುವುದು ನರಸಿಂಹ ಯಜ್ಞ. ನರಸಿಂಹ ಮಹಾವಿಷ್ಣುವಿನ ಅವತಾರ.

ಹಾಗೆಯೇ ಮಾಧ್ವ ಸಂಪ್ರದಾಯ ಮತ್ತು ವಿಶೇಷಾದ್ವೈತ ಕೂಡ ರಷ್ಯಾದಲ್ಲಿ ಇದೆ. ಹಲವು ರಷ್ಯನ್ನರು ದಕ್ಷಿಣ ಕನ್ನಡಕ್ಕೆ ಬಂದು ಮಾಧ್ವರಾಗಿದ್ದಾರೆ. ಮೇಲುಕೋಟೆಗೆ ಬಂದು ವಿಶೇಷಾದ್ವೈತಿಗಳಾಗಿದ್ದಾರೆ. ಅಲ್ಲಿನ ಹುಡುಗರು ಇಲ್ಲಿನ ಹುಡುಗಿಯರನ್ನು, ಇಲ್ಲಿಯ ಹುಡುಗರು ಅಲ್ಲಿಯ ಹುಡುಗಿಯರನ್ನು ಮದುವೆಯಾಗಿದ್ದಾರೆ. ಹೀಗೆ ಆದಾಗ ಎರಡೂ ಕುಟುಂಬಗಳ ಸಂಪ್ರದಾಯಗಳು ಹರಡಿವೆ.

ವಿಡಿಯೋ ಇಲ್ಲಿದೆ: 

 

 

ವಿಶೇಷವಾಗಿ ಯೋಗ, ಧ್ಯಾನ ಮತ್ತು ವೇದ ಸಂಸ್ಕೃತಿಗೆ ಆಸಕ್ತಿ ಇರುವ ರಷ್ಯನ್ನರ ಸಂಖ್ಯೆ ಹೆಚ್ಚಾಗುತ್ತಿದೆ. ವೇದ ಯಜ್ಞಗಳತ್ತ ಆಕರ್ಷಿತರಾದ ರಷ್ಯನ್ನರು ಇಲ್ಲಿನ ಹಿರಿಯ ಪುರೋಹಿತರು, ವೇದ ಪಾಠಿಗಳಿಂದ ಪಾಠಗಳನ್ನು ಕಲಿತು ಪೂಜೆ ಯಜ್ಞಗಳನ್ನು ನೆರವೇರಿಸುವಷ್ಟು ಪಾರಂಗತರಾಗಿದ್ದಾರೆ. ಮುಖ್ಯವಾಗಿ ಅವರ ಅಧ್ಯಾತ್ಮಿಕ ಆಸಕ್ತಿ. ಯಜ್ಞವನ್ನು ಅವರು ಮನಶಾಂತಿ ಪಡೆಯಲು, ಶುದ್ಧತೆಗಾಗಿ, ಪ್ರಾರ್ಥನೆ ರೂಪದಲ್ಲಿ ಮಾಡುತ್ತಾರೆ.

ಯೋಗ ಮತ್ತು ಆಶ್ರಮ ಸಂಸ್ಕೃತಿ ಅಲ್ಲಿದೆ. ರಷ್ಯಾದಲ್ಲಿ ಹಲವಾರು ಯೋಗ ಕೇಂದ್ರಗಳಿವೆ. ಹೋಮ, ಯಜ್ಞ, ಮಂತ್ರ ಪಠಣ, ಧ್ಯಾನ ಇವುಗಳನ್ನು ಕಲಿಸುತ್ತಾರೆ. ಇಸ್ಕಾನ್‌ನಂಥ ಸಂಘಟನೆಗಳ ಪ್ರಭಾವ ಸಾಕಷ್ಟಿದೆ. ಇವು ಹಿಂದೂ ಆಚರಣೆಗಳನ್ನು ಪರಿಚಯಿಸುತ್ತಿವೆ. ಹಾಗೆಯೇ ಭಾರತೀಯ ಗುರುಗಳ ಪ್ರಭಾವ. ಭಾರತೀಯ ಗುರುಗಳು, ಯೋಗ ಶಿಕ್ಷಕರು ರಷ್ಯಾದಲ್ಲಿ ಶಿಬಿರಗಳನ್ನು ನಡೆಸುತ್ತಿದ್ದಾರೆ. ಯಜ್ಞ, ಪೂಜಾ ವಿಧಾನಗಳನ್ನು ಕಲಿಸುತ್ತಾರೆ.

ಇದು ಭಾರತೀಯ ಸಂಸ್ಕೃತಿ ಸ್ವೀಕಾರ ಮತ್ತು ಆಧ್ಯಾತ್ಮಿಕ ಹುಡುಕಾಟ ಎರಡೂ ಕೂಡ. ಕೆಲವರಿಗೆ ಇದು ಆಧ್ಯಾತ್ಮಿಕ ಹುಡುಕಾಟ. ಕೆಲವರಿಗೆ ಭಾರತೀಯ ಸಂಸ್ಕೃತಿಯ ಕುರಿತ ಮೆಚ್ಚುಗೆ. ರಷ್ಯಾದವರು ಮಾಡುವ ಯಜ್ಞ ಎಲ್ಲ ಸಮಯದಲ್ಲೂ ಶಾಸ್ತ್ರಸಮ್ಮತವಾಗಿರದೇ ಇರಬಹುದು. ಆದರೆ ಅವರ ಉದ್ದೇಶ ಭಕ್ತಿ, ಶಾಂತಿ, ಆತ್ಮಿಕ ಬೆಳವಣಿಗೆ. ಸರಳವಾಗಿ ಹೇಳುವುದಾದರೆ, ಇದು ಭಾರತೀಯ ಸಂಸ್ಕೃತಿ ಜಗತ್ತಿಗೇ ಹರಡುತ್ತಿರುವ ಒಂದು ಉದಾಹರಣೆ. ʼಯಜ್ಞ ಸಂಸ್ಕೃತಿ ಭಾರತದಲ್ಲೇ ಕಡಿಮೆ ಆಗುತ್ತಿರುವ ಹೊತ್ತಿನಲ್ಲಿ, ರಷ್ಯನ್ನರು ಅದನ್ನು ಅಪ್ಪಿಕೊಳ್ಳುತ್ತಿರುವುದು ವಿಶಿಷ್ಟʼ ಎಂದು ಕೆಲವರು ಈ ವಿಡಿಯೋಕ್ಕೆ ಕಮೆಂಟ್‌ ಮಾಡಿದ್ದಾರೆ.

PREV
Read more Articles on
click me!

Recommended Stories

ನಿಮ್ಮ ಜಾತಕ ನೀವೇ ನೋಡಿ ತಿಳಿಯಿರಿ- ಯಾವ ರೀತಿಯ ಸಂಗಾತಿ ನಿಮ್ಮವರು? ಗುಣ, ಲಕ್ಷಣ ಹೀಗಿದೆ
ಯಾವಾಗಲೂ ಸಸ್ಪೆನ್ಸ್ .. ಈ 4 ರಾಶಿಯವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯೋಕೆ ಚಾನ್ಸೇ ಇಲ್ಲ!