ಗರ್ಭಿಣಿಯರಿಗೆ ಹಾವು ಕಚ್ಚೋದೇ ಇಲ್ಲ? ಗರ್ಭಸ್ಥ ಮಹಿಳೆಯನ್ನು ನೋಡಿದ್ರೆ ಸಾಕು, ಹಾವು ಕುರುಡಾಗತ್ತೆ?

Published : Aug 26, 2026, 07:47 PM IST
Snake Bite

ಸಾರಾಂಶ

ಗರ್ಭಿಣಿಯರಿಗೆ ಹಾವುಗಳು ಕಚ್ಚುವುದಿಲ್ಲ ಮತ್ತು ಅವರನ್ನು ಕಂಡರೆ ದೂರ ಸರಿಯುತ್ತವೆ ಎಂಬ ನಂಬಿಕೆಯಿದೆ. ಈ ನಂಬಿಕೆಯ ಹಿಂದೆ ಪೌರಾಣಿಕ ಕಥೆಯೊಂದಿದ್ದು, ಗರ್ಭಿಣಿಯ ಪೂಜೆಗೆ ಅಡ್ಡಿಪಡಿಸಿದ ಸರ್ಪ ಕುಲಕ್ಕೆ ಭ್ರೂಣವೊಂದು ಶಾಪ ನೀಡಿದ್ದೇ ಕಾರಣ ಎನ್ನಲಾಗುತ್ತದೆ. ಆದರೂ, ಇದು ನಂಬಿಕೆಯೋ ಅಥವಾ ಮೂಢನಂಬಿಕೆಯೋ ಎಂಬ ಚರ್ಚೆ ಇಂದಿಗೂ ಇದೆ.

ಹಿಂದೂ ಸಂಪ್ರದಾಯದಲ್ಲಿ ಹಲವಾರು ರೀತಿಯ ಮಾತುಗಳು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿವೆ. ಕೆಲವೊಂದು ವಿಷಯಗಳು ಜನರಿಂದ ಜನರಿಗೆ ಹರಡುತ್ತ ಹೋಗುತ್ತಿದೆ. ಕೆಲವು ಮಾತುಗಳಿಗೆ ವೈಜ್ಞಾನಿಕ ಪುರಾವೆಗಳು ಇರುವುದಿಲ್ಲ. ಹಾಗೆಂದು ಹಿರಿಯರಿಂದ ಬಂದಿರುವ ಎಲ್ಲಾ ಮಾತುಗಳೂ ಸುಳ್ಳು, ತಪ್ಪು ಎಂದೇನಲ್ಲ. ಅದರಲ್ಲಿಯೂ ಔಷಧಗಳ ವಿಷಯದಲ್ಲಂತೂ, ವಿದೇಶಗಳಲ್ಲಿ ತಜ್ಞರ ಮಟ್ಟದ ಉನ್ನತ ಸಮಿತಿ ವರ್ಷಗಟ್ಟಲೆ ಸಂಶೋಧನೆ ಮಾಡಿ ಅದನ್ನು ಇಡೀ ವಿಶ್ವಕ್ಕೆ ತಿಳಿಸಿದರೆ, ಶತಮಾನಗಳ ಹಿಂದೆಯೇ ಆ ವಿಷಯವನ್ನು ನಮ್ಮ ಹಿರಿಯರು ಹೇಳಿರುತ್ತಾರೆ. ಇದೇ ಕಾರಣಕ್ಕೆ ಶಂಖದಿಂದ ಬಂದರೆ ಮಾತ್ರ ತೀರ್ಥ ಎನ್ನುವುದು ಇಲ್ಲಿ ಸರಿಯಲ್ಲ.

ಇದರ ಹೊರತಾಗಿಯೂ ಕೆಲವೊಂದು ಮಾತುಗಳು ನಿಜವೋ ಸುಳ್ಳೋ ಎನ್ನುವುದು ಕೊನೆಗೂ ಸ್ಪಷ್ಟವಾಗುವುದೇ ಇಲ್ಲ. ಇಂದಿನವರು ಅದನ್ನು ಸುಳ್ಳು ಎಂದರೆ, ಹಿಂದಿನವರು ಅದನ್ನು ಸತ್ಯ ಎನ್ನುತ್ತಾರೆ. ಅಂಥದ್ದರಲ್ಲಿ ಒಂದು ಗರ್ಭಿಣಿಯರಿಗೆ ಹಾವು ಕಚ್ಚುವುದಿಲ್ಲ ಎನ್ನುವ ಮಾತು. ಅಷ್ಟಕ್ಕೂ ಹಾವು ವಿಷಕಾರಿ ಆಗಿದ್ದರೂ ಹಿಂದೂಗಳಲ್ಲಿ ಅದಕ್ಕೆ ದೈವಿಕ ಸ್ಥಾನವಿದೆ. ದೇವರೆಂದೇ ಪೂಜೆ ಮಾಡುತ್ತೇವೆ. ಸರ್ಪವನ್ನು ದೇವರ ರೂಪವೆಂದು ಪೂಜಿಸುತ್ತೇವೆ. ಹಾಗೆಂದು ಹಾವುಗಳು ತಂತಾನೇ ಬಂದೇನೂ ಕಚ್ಚುವುದಿಲ್ಲ. ಅವುಗಳಿಗೆ ತೊಂದರೆ ಮಾಡಿದಾಗ, ಅರಿಯದೇ ಮೆಟ್ಟಿ ಬಿಟ್ಟರೆ ತನ್ನ ಪ್ರಾಣ ರಕ್ಷಣೆಗೆ ಕಚ್ಚುತ್ತದೆ.

ಗರ್ಭಿಣಿಯರಿಂದ ಸಾಹಸ ಬೇಡ!

ಆದರೆ, ಅನಾದಿ ಕಾಲದಿಂದ ಒಂದು ನಂಬಿಕೆ ಇದೆ. ಅದೇನೆಂದರೆ, ಹಾವುಗಳು ಗರ್ಭಿಣಿಯನ್ನು ಕಚ್ಚುವುದು ದೂರದ ಮಾತು, ಗರ್ಭಿಣಿ ಬರುತ್ತಿದ್ದಾಳೆ ಎಂದು ಗೊತ್ತಾದ ತಕ್ಷಣ ಅದು ತನ್ನ ಪಥವನ್ನು ಬದಲಿಸುತ್ತದೆ ಎನ್ನಲಾಗುತ್ತದೆ. ಗರ್ಭಿಣಿಯನ್ನು ನೋಡಿದರೆ ಹಾವು 9 ತಿಂಗಳು ಕುರುಡಾಗುತ್ತದೆ ಎನ್ನುವ ನಂಬಿಕೆ ಇದೆ. ಇದೇ ಕಾರಣಕ್ಕೆ ಸರ್ಪ ಎಂದಿಗೂ ಗರ್ಭಿಣಿಯನ್ನು ಅಪ್ಪಿ-ತಪ್ಪಿಯೂ ಕಚ್ಚುವುದಿಲ್ಲ ಎನ್ನಲಾಗುತ್ತದೆ. ಇದನ್ನು ಒಪ್ಪದ ವರ್ಗವೂ ಇದೆ. ಆದರೆ ಇದು ನಿಜ ಎನ್ನುವವರೂ ಇದ್ದಾರೆ. ಎಲ್ಲಿಯಾದರೂ ಗರ್ಭಿಣಿಗೆ ನಾಗರಹಾವು ಕಚ್ಚಿದ್ದರೆ ತಿಳಿಸಿ ಎಂದು ಸವಾಲು ಹಾಕುವವರು ಇದ್ದರೆ, ಇವೆಲ್ಲಾ ಮೂಢ ನಂಬಿಕೆ ಅಷ್ಟೇ, ಎಲ್ಲವೂ ಸುಳ್ಳು ಎನ್ನುವವರೂ ಇದ್ದಾರೆ. ಅದೇನೇ ಇದ್ದರೂ ಗರ್ಭಿಣಿಯರು ಮಾತ್ರ ಈ ಬಗ್ಗೆ ಪರೀಕ್ಷೆ ಮಾಡುವ ಸಾಹಸ ಮಾಡದೇ ಇರುವುದೇ ಒಳ್ಳೆಯದು.

ಏನಿದು ಪೌರಾಣಿಕ ಕಥೆ?

ಹಿಂದೂ ಧರ್ಮ, ಪುರಾಣ ಎಂದ ಮೇಲೆ ಅಲ್ಲೊಂದು ಕಥೆ ಇರಲೇಬೇಕಲ್ಲವೆ? ಅದೇರೀತಿ, ಹಾವು ಗರ್ಭಿಣಿಯರಿಗೆ ಕಚ್ಚುವುದಿಲ್ಲ ಎನ್ನುವ ಹಿಂದೆಯೂ ಒಂದು ಸ್ಟೋರಿ ಇದೆ. ಬ್ರಹ್ಮವೈವರ್ತ ಪುರಾಣದ ಪ್ರಕಾರ, ಒಮ್ಮೆ ಗರ್ಭಿಣಿ ಮಹಿಳೆ ಶಿವನನ್ನು ಪೂಜಿಸುತ್ತಿದ್ದಳು. ಆಕೆ ಶಿವ ಪೂಜೆಯನ್ನು ಮಾಡುವ ಸ್ಥಳಕ್ಕೆ ಎರಡು ಹಾವುಗಳು ಬಂದವು, ಹಾಗೂ ಅವುಗಳು ಆಕೆಯ ಪೂಜೆಗೆ ತೊಂದರೆಯನ್ನುಂಟು ಮಾಡಲು ಮುಂದಾದವು. ಇದರಿಂದ ವಿಚಲಿತಳಾದ ಆಕೆಯ ಗರ್ಭದಲ್ಲಿರುವ ಭ್ರೂಣವು, ಯಾವುದೇ ಹಾವು ಅಥವಾ ಹೆಣ್ಣು ಹಾವು ಗರ್ಭಿಣಿ ಮಹಿಳೆಯ ಬಳಿಗೆ ಹೋದರೆ ಕುರುಡಾಗುತ್ತದೆ ಎಂದು ಇಡೀ ಹಾವಿನ ಕುಲವನ್ನೇ ಶಪಿಸಿತು. ಅಂದಿನಿಂದ, ಹಾವುಗಳು ಗರ್ಭಿಣಿ ಮಹಿಳೆಯರಿಗೆ ಹೆದರುತ್ತವೆ ಮತ್ತು ಅವರಿಂದ ದೂರವಿರುತ್ತವೆ ಎನ್ನುವ ಪೌರಾಣಿಕ ನಂಬಿಕೆಯಿದೆ.

PREV
Read more Articles on
click me!

Recommended Stories

Main Door Vastu: ಹಣದ ಸಮಸ್ಯೆ ಕಾಡುತ್ತಿದೆಯಾ? ಮನೆಯ ಮುಖ್ಯದ್ವಾರದಲ್ಲಿ ಈ ತಪ್ಪು ಮಾಡುತ್ತಿದ್ದೀರಾ ನೋಡಿ
Saturn Retrograde: ಚಂದ್ರಗ್ರಹಣದ ವೇಳೆ ಶನಿ ವಕ್ರ! 50 ವರ್ಷಗಳ ಬಳಿಕ ಈ 3 ರಾಶಿಯವರಿಗೆ ಹಣ, ಉದ್ಯೋಗದಲ್ಲಿ ಭರ್ಜರಿ ರಾಜಯೋಗ!