Garuda Purana Secret: ಹೀಗೆ ಮಾಡಿದರೆ ಮುಂದಿನ ಜನ್ಮದಲ್ಲಿ ರಣಹದ್ದು ಆಗುವುದು ಖಚಿತ!

Published : Oct 27, 2025, 08:54 PM IST
garuda purana

ಸಾರಾಂಶ

ಗರುಡ ಪುರಾಣ (Garuda purana) ದ ಪ್ರಕಾರ, ಈ ಜನ್ಮದಲ್ಲಿ ನಾವು ಮಾಡುವ ಪಾಪ-ಪುಣ್ಯದ ಕಾರ್ಯಗಳು ನಮ್ಮ ಮುಂದಿನ ಜನ್ಮವನ್ನು ನಿರ್ಧರಿಸುತ್ತವೆ. ವಂಚನೆ, ಕೊಲೆ, ಅಕ್ರಮ ಸಂಬಂಧದಂತಹ ಪಾಪ ಕೃತ್ಯಗಳು ಮುಂದಿನ ಜನ್ಮದಲ್ಲಿ ಪ್ರಾಣಿ ಜನ್ಮಕ್ಕೆ ಕಾರಣವಾಗುತ್ತದೆ.

ಒಬ್ಬ ಮನುಷ್ಯ ಸತ್ತ ನಂತರ ಏನಾಗುತ್ತಾನೆ/ಳೆ ಎಂಬುದಕ್ಕೆ ವಿವಿಧ ಧರ್ಮಗಳಲ್ಲಿ ವಿವಿಧ ನಂಬಿಕೆಗಳಿವೆ. ಹಿಂದೂ ಧರ್ಮದಲ್ಲಿಯೇ ಕೆಲವರು ಗರುಡ ಪುರಾಣವನ್ನು ನಂಬಿದರೆ, ಕೆಲವರು ನಂಬುವುದಿಲ್ಲ. ಒಬ್ಬ ವ್ಯಕ್ತಿಯ ಮರಣದ ನಂತರ ಗರುಡ ಪುರಾಣವನ್ನು ಓದುವ ಸಂಪ್ರದಾಯ ಹಲವರಲ್ಲಿದೆ. ಸಾವಿನ ನಂತರ ಆತ್ಮನು ಯಾವ ರೂಪದಲ್ಲಿ ಮರಳಿ ಜನಿಸುತ್ತಾನೆ, ಮನುಷ್ಯನಾಗಿಯೋ ಪ್ರಾಣಿಯಾಗಿಯೋ, ಮನುಷ್ಯನಾದರೆ ಎಂಥ ಮನೆತನದಲ್ಲಿ, ಪ್ರಾಣಿಯಾದರೆ ಯಾವ ರೂಪದಲ್ಲಿ- ಎಂಬುದನ್ನೆಲ್ಲ ಗರುಡ ಪುರಾಣ (Garuda Purana) ಹೇಳುತ್ತದೆ. ಈ ಜನ್ಮದಲ್ಲಿನ ನಮ್ಮ ಕ್ರಿಯೆಗಳು ನಮ್ಮ ಮುಂದಿನ ಜನ್ಮವನ್ನು ಸೂಚಿಸುತ್ತವಂತೆ. ಅದೇನು ಅಂತ ತಿಳಿದುಕೊಳ್ಳೋಣ.

ಇವರಿಗೆ ರಣಹದ್ದು, ಕತ್ತೆ ಜನ್ಮ

ಮದುವೆಯ ನಂತರ ಇನ್ನೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಪುರುಷರು ತಮ್ಮ ಮುಂದಿನ ಜನ್ಮವನ್ನು ರಣಹದ್ದು ಅಥವಾ ನರಿಯ ರೂಪವನ್ನು ಪಡೆಯಬಹುದು. ಮತ್ತೊಂದೆಡೆ, ಮಹಿಳೆಯು ಮದುವೆಯ ನಂತರ ಇತರ ಪುರುಷರೊಂದಿಗೆ ಸಂಬಂಧವನ್ನು ಹೊಂದಿದ್ದರೆ, ನಂತರ ಅವಳು ತನ್ನ ಮುಂದಿನ ಜನ್ಮದಲ್ಲಿ ಬಾವಲಿಯಾಗಿ ಜನ್ಮ ಪಡೆಯುತ್ತಾಳೆ. ಇದರೊಂದಿಗೆ ಅಧರ್ಮಿಗಳು ಮುಂದಿನ ಜನ್ಮದಲ್ಲಿ ಕತ್ತೆ ಮತ್ತು ನಾಯಿಯ ಜನ್ಮವನ್ನೂ ಪಡೆಯುತ್ತಾರೆ.

ಕೀಟ, ಜಿಗಣೆಗಳಾಗಿ ಜನನ

ಮೋಸ ಮಾಡುವವರು ಮುಂದಿನ ಜನ್ಮವನ್ನು ರಣಹದ್ದುಗಳಾಗಿ ತೆಗೆದುಕೊಳ್ಳಬೇಕಾಗುತ್ತದೆ. ಮನೆಯಲ್ಲಿ ಅಶಾಂತಿಯನ್ನು ಸೃಷ್ಟಿಸುವ ಗಂಡಸರು ಮತ್ತು ಹೆಂಗಸರು ಮುಂದಿನ ಜನ್ಮವನ್ನು ಜಿಗಣೆಯಾಗಿ ಅಥವಾ ಜಲಚರವಾಗಿ ಜನ್ಮ ಪಡೆದುಕೊಳ್ಳುತ್ತಾರೆ.

ಸರೀಸೃಪವಾಗಿ ಜನನ

ಕೊಲೆ ಮಾಡಿದವರು, ಗುರುವಿಗೆ ಅವಮಾನ ಮಾಡುವವರು ಮುಂದಿನ ಜನ್ಮದಲ್ಲಿ ತಾವೂ ಒಬ್ಬರಲ್ಲ ಒಬ್ಬರಿಂದ ಕೊಲೆಯಾಗಬೇಕಾಗುತ್ತದೆ. ಅಂತಹ ಜನರು ತಮ್ಮ ಮುಂದಿನ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಥವಾ ಇವರು ಹರಿಯುವ ಸರೀಸೃಪವಾಗಿ ಹುಟ್ಟಿ ಜನರಿಂದ ಕಷ್ಟಕೋಟಲೆಗಳಿಗೆ ಒಳಗಾಗಬೇಕಾಗುತ್ತದೆ. ಪೆಟ್ಟು ತಿಂದು ನರಳಬೇಕಾಗಿ ಬರಬಹುದು.

ನಾಯಿ ಜನ್ಮ

ಇನ್ನೊಬ್ಬರಿಂದ ಪಡೆದ ಸಾಲವನ್ನು ತೀರಿಸದವರು, ಸಾಲಿಗನು ಬಂದು ಮರಳಿ ಕೇಳಿದಾಗ ಗೂಂಡಾಗಿರಿ ಮಾಡಿ ಆತನನ್ನು ಹೊಡೆದವರು, ಮಹಿಳೆಯರಿಗೆ ಹೊಡೆಯುವವರು, ಮಕ್ಕಳಿಗೆ ಥಳಿಸುವವರು, ರಸ್ತೆಯಲ್ಲಿ ದಾದಾಗಿರಿ ಮಾಡಿ ಎಲ್ಲರನ್ನೂ ಬೆದರಿಸುವವರು ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟಿ ಎಲ್ಲರಿಂದ ಕಲ್ಲೇಟು, ದೊಣ್ಣೆಯೇಟು ತಿನ್ನಬೇಕಾಗುತ್ತದೆ.

​ಇಂತಹವರಿಗೆ ಮೋಕ್ಷ

ಸತ್ಯದ ಮಾರ್ಗವನ್ನು ಅನುಸರಿಸುವವರು, ಇತರರಿಗೆ ಸಹಾಯ ಮಾಡುವವರು ಮತ್ತು ಧರ್ಮವನ್ನು ಅನುಸರಿಸುವವರು ಯೋಗ್ಯ ವ್ಯಕ್ತಿಗಳಾಗಿ ಹುಟ್ಟುತ್ತಾರೆ. ಕೊನೆಯ ಕ್ಷಣಗಳಲ್ಲಿ ದೇವರ ಧ್ಯಾನ ಮಾಡುವವರು ಮೋಕ್ಷವನ್ನು ಪಡೆಯುತ್ತಾರೆ. ಅಂತಹ ಜನರು ಮತ್ತೆ ಹುಟ್ಟು ಮತ್ತು ಸಾವಿನ ಚಕ್ರದಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ. ಅದೇ ಸಮಯದಲ್ಲಿ, ಧರ್ಮದ ವಿರುದ್ಧವಾಗಿ, ಅಸೂಯೆ ಮತ್ತು ದ್ವೇಷವನ್ನು ಹೊಂದಿರುವ ಜನರು ತಮ್ಮ ಮುಂದಿನ ಜನ್ಮದಲ್ಲಿ ರಣಹದ್ದುಗಳಾಗಿ ಜನ್ಮವನ್ನು ಪಡೆಯುತ್ತಾರೆ.

ಇಲಿ ಜನ್ಮ

ಯಾರ ವಿರುದ್ಧ ಸುಳ್ಳು ಸಾಕ್ಷಿ ಹೇಳುತ್ತಾರೋ ಅವರು ಮುಂದಿನ ಜನ್ಮದಲ್ಲಿ ಇಲಿಯಾಗಿ ಹುಟ್ಟಬೇಕಾಗುತ್ತದೆ. ಗರುಡ ಪುರಾಣದ ಪ್ರಕಾರ, ಅಸ್ವಾಭಾವಿಕ ಸಂಬಂಧ ಹೊಂದಿರುವ ಜನರು ಮುಂದಿನ ಜನ್ಮದಲ್ಲಿ ಹೆಗ್ಗಣವಾಗಿ, ಚಿಕ್ಕಿಲಿಯಾಗಿ ಹುಟ್ಟಬಹುದು. ಹೆಣ್ಣಿಗೆ ಕಿರುಕುಳ ನೀಡುವ ಅಥವಾ ಅವರ ಮೇಲೆ ಕೈ ಎತ್ತುವವರ ಮುಂದಿನ ಜನ್ಮ ಹಲವು ಸಮಸ್ಯೆಗಳಿಂದ ಕೂಡಿರುತ್ತದೆ. ಅಂತಹ ಜನರು ಕಟ್ಟಿಹಾಕಿ ದುಡಿಮೆಗೆ ಈಡಾಗುವ ಪ್ರಾಣಿಗಳಾಗುತ್ತಾರೆ.

ಈ ಜನ್ಮದಲ್ಲಿ ನೀವು ಕುಟುಂಬದಲ್ಲಿ ಭಿನ್ನಾಭಿಪ್ರಾಯವನ್ನು ಸೃಷ್ಟಿಸಿದರೆ, ನಿಮ್ಮ ಹೆತ್ತವರು ಮತ್ತು ಒಡಹುಟ್ಟಿದವರಿಗೆ ತೊಂದರೆ ನೀಡಿದರೆ, ಮುಂದಿನ ಜೀವನದಲ್ಲಿ ನಿಮ್ಮ ಭವಿಷ್ಯವು ತುಂಬಾ ಕೆಟ್ಟದಾಗಿರುತ್ತದೆ. ಅಂತಹ ಜನರು ಪದೇ ಪದೇ ಹುಟ್ಟಿ ಬೆಂಕಿ- ದೀಪಕ್ಕೆ ಬಿದ್ದು ಸಾಯುವ ರೆಕ್ಕೆ ಹುಳಗಳಾಗುತ್ತಾರೆ.

ಮೇಲೆ ಹೇಳಿದ್ದೆಲ್ಲವೂ ಗರುಡ ಪುರಾಣದಲ್ಲಿ ಉಲ್ಲೇಖಿತವಾದ ವಿಚಾರಗಳು. ಇದನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸಮರ್ಥಿಸುವುದಿಲ್ಲ. 

PREV
Read more Articles on
click me!

Recommended Stories

Traffic Mantra: ಟ್ರಾಫಿಕ್‌ನಲ್ಲಿ ಶಾಂತವಾಗಿರೋದು ಹೇಗೆ? ಈ ಮಂತ್ರ ಪಠಿಸಿ ಸಾಕು!
ನಾಳೆ ಡಿಸೆಂಬರ್ 6 ರಂದು ದ್ವಿಪುಷ್ಕರ ಯೋಗ, 5 ರಾಶಿ ಜನರು ಅದೃಷ್ಟವಂತರು, ಲಾಭ ಡಬಲ್