ಉಪನಿಷತ್ ಜ್ಞಾನ ವೃದ್ಧಿಯಾಗಬೇಕೆ? ಉಪನ್ಯಾಸದಲ್ಲಿ ಪಾಲ್ಗೊಳ್ಳಿ

By Web DeskFirst Published Dec 10, 2018, 7:29 PM IST
Highlights

ದೇವರು ಎಲ್ಲಿದ್ದಾನೆ? ಪ್ರಪಂಚದ ಸೃಷ್ಟಿ ಹೇಗಾಯಿತು? ಜಗತ್ತು ಎಂದರೇನು? ಇಂದಿನ ವೈಜ್ಞಾನಿಕ ಯುಗದಲ್ಲಿ ಉಪನಿಷತ್‌ಗಳ ಮಹತ್ವವೇನು? ಇವೆಲ್ಲವನ್ನೂ ತಿಳಿಯಲು ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಡೆಯುವ ಉಪನಿಷತ್ ಉಪನ್ಯಾಸದಲ್ಲಿ ಪಾಲ್ಗೊಳ್ಳಿ.

ಬೆಂಗಳೂರು: 

ಉಪನಿಷತ್ತುಗಳೆಂದರೆ ಎಲ್ಲ ಭಾರತೀಯ ದರ್ಶನಗಳ ಆಕರಗ್ರಂಥ. ಜೀವ, ಜಗತ್ತು, ಈಶ್ವರ ಇವುಗಳ ಬಗ್ಗೆ ಬಹುಪ್ರಾಚೀನ ಕಾಲದಲ್ಲೇ ನಡೆದ ಗಂಭೀರ ಚಿಂತನೆಗೆ ಇವು ಸಾಕ್ಷಿಯಾಗಿವೆ. ಈ ಉಪನಿಷತ್ತುಗಳು ಸಂಖ್ಯೆಯಲ್ಲಿ ಅನೇಕವಿದ್ದರೂ ಶ್ರೀ ಶಂಕರಭಗವತ್ಪಾದರು ಅವುಗಳಲ್ಲಿ ಹತ್ತು ಉಪನಿಷತ್ತುಗಳನ್ನು ಮುಖ್ಯವೆಂದು ಪರಿಗಣಿಸಿ ತಮ್ಮ ಪ್ರೌಢಭಾಷ್ಯಗಳಿಂದ ಅವುಗಳನ್ನು ವಿವರಿಸಿದ್ದಾರೆ. 

ಉಪನಿಷತ್ತುಗಳಿಗಿರುವ ಭಾಷ್ಯಗಳಲ್ಲೆಲ್ಲ ಶಂಕರಾಚಾರ್ಯರ ಭಾಷ್ಯವೇ ಅತಿ ಪ್ರಾಚೀನವಾದುದು ಹಾಗೂ ಸಮಗ್ರವಾದುದು. ಶ್ರುತಿ, ಯುಕ್ತಿ, ಅನುಭವ ಈ ಮೂರನ್ನೂ ಆಧರಿಸಿ ಎಲ್ಲ ಹತ್ತು ಉಪನಿಷತ್ತುಗಳಿಗೂ ಏಕವಾಕ್ಯತೆಯನ್ನು ಸಾಧಿಸಿದ ಆಚಾರ್ಯರ ಮೇಧಾಶಕ್ತಿ ಈ ಭಾಷ್ಯಗಳಲ್ಲಿ ಸಾಕಾರಗೊಂಡಿದೆ. ಉಪನಿಷತ್ತುಗಳ ಆಳದಲ್ಲಿರುವ ತತ್ತ್ವಾರ್ಥವನ್ನು ಹೊರತೆಗೆದು ಅದು ಅತಿ ಸ್ಪಷ್ಟವಾಗಿ ತೆರೆದಿಟ್ಟಿರುವುದರಿಂದ ಮುಂದಿನ ವಿದ್ವಾಂಸರು ಈ ಭಾಷ್ಯವನ್ನು ‘ಪ್ರಸನ್ನ ಗಂಭೀರ’ ಎಂದು ಕರೆದರು. 

ಆಚಾರ್ಯರ ಸ್ತೋತ್ರಗ್ರಂಥಗಳು, ಪ್ರಕರಣಗ್ರಂಥಗಳು ಇವುಗಳನ್ನು ಉಪನ್ಯಾಸಗಳ ಮೂಲಕ ವೇದಾಂತ ಭಾರತಿಯು ಈಗಾಗಲೇ ಕನ್ನಡ ಲೋಕಕ್ಕೆ ಪರಿಚಯಿಸಿದೆ. ಈ ಬಾರಿ ಒಂದು ಹೆಜ್ಜೆ ಮುಂದೆ ಸಾಗಿ ಆಚಾರ್ಯರ ಉಪನಿಷದ್ಭಾಷ್ಯವನ್ನು ಪರಿಚಯಿಸುವ ಕೈಂಕರ್ಯಕ್ಕೆ ಕೈಹಾಕಿದೆ. ಪ್ರಾರಂಭದಲ್ಲಿ ತೈತ್ತಿರೀಯ ಭಾಷ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಇದು ಎಲ್ಲಾ ಉಪನಿಷತ್ತುಗಳಲ್ಲಿ ಬರುವ ಮುಖ್ಯ ಮುಖ್ಯ ವಿಷಯಗಳನ್ನು ಒಳಗೊಂಡಿರುವುದರಿಂದ ಜಿಜ್ಞಾಸುಗಳಿಗೆ ಹೆಚ್ಚು ಹೆಚ್ಚು ವೇದಾಂತಪ್ರಮೇಯಗಳ ಪರಿಚಯವಾಗಲಿದೆ. ಆದ್ದರಿಂದ ಭಾಷ್ಯ ವಾಙ್ಮಯದ ಪ್ರಥಮ ಪ್ರವೇಶಕ್ಕೆ ಇದು ಅರ್ಹವೆಂದು ಭಾವಿಸಿ ವೇದಾಂತ ಭಾರತಿಯು ತನ್ನ ಭಾಷ್ಯ ಪ್ರವಚನ ಮಾಲಿಕೆಯಲ್ಲಿ ಇದನ್ನು ಪ್ರಥಮವಾಗಿ ಪೋಣಿಸಿದೆ.

ಇದೇ ಬರುವ 2018 ಡಿಸೆಂಬರ್ 10ರಿಂದ ಡಿಸೆಂಬರ್ 16ರವರೆಗೆ ಬೆಂಗಳೂರು ಮಹಾನಗರದಲ್ಲಿ ಈ ಉಪನ್ಯಾಸ ಸಪ್ತಾಹ ನಡೆಯಲಿದೆ. ಗುರುಮುಖದಿಂದ ಸಾಂಪ್ರದಾಯಿಕವಾಗಿ ವೇದಾಂತಾಧ್ಯಯನವನ್ನು ಮಾಡಿದ ನಾಡಿನ ಹಲವಾರು ವಿದ್ವಾಂಸರು ಡಿಸೆಂಬರ್ 10ರಿಂದ 15ರವರೆಗೆ ನಗರದ ಬೇರೆ ಬೇರೆ ಕೇಂದ್ರಗಳಲ್ಲಿ ಶಂಕರಾಚಾರ್ಯರ ಭಾಷ್ಯವನ್ನು ಆಧರಿಸಿ ತೈತ್ತಿರೀಯೋಪನಿಷತ್ತನ್ನು ಕುರಿತು ಉಪನ್ಯಾಸ ನೀಡಲಿದ್ದಾರೆ. ಇದಲ್ಲದೆ ಪ್ರತಿದಿನ ಉಪನ್ಯಾಸದ ಪೂರ್ವದಲ್ಲಿ ವೈದಿಕರಿಂದ ಈ ಉಪನಿಷತ್ತಿನ ಸ್ವಲ್ಪಭಾಗ ಪಾರಾಯಣ ನಡೆಯಲಿದೆ. ಹಾಗೆಯೇ ಈ ಉಪನಿಷತ್ತಿನ ತತ್ತ್ವವನ್ನೊಳಗೊಂಡ ಶ್ರೀ ಶಂಕರಭಗವತ್ಪಾದ ವಿರಚಿತ ಹರಿಮೀಡೆ ಸ್ತೋತ್ರದ ಪಾರಾಯಣವೂ ನಡೆಯಲಿದೆ. 

ಇದರ ಸಮಾರೋಪ ಸಮಾರಂಭವು ಡಿಸೆಂಬರ್ 16ರಂದು ಬೆಳಿಗ್ಗೆ 10ಗಂಟೆಯಿಂದ 12.30ರವರೆಗೆ ಶ್ರೀ ವಿದ್ಯಾವಿಹಾರ, ಚಂದ್ರಶೇಖರಭಾರತೀ ಕಲ್ಯಾಣಮಂಟಪದ ಆವರಣ, ಪಂಪಮಹಾಕವಿರಸ್ತೆ, ಬೆಂಗಳೂರು ಇಲ್ಲಿ ನಡೆಯಲಿದೆ. ಆದ್ದರಿಂದ ಸಮಾಜದ ಸಮಸ್ತರೂ ಉಪನ್ಯಾಸ ಮಾಲಿಕೆಯಲ್ಲಿ ಭಾಗವಹಿಸಿ ಶಾಂಕ ರಭಾಷ್ಯಾಮೃತವನ್ನು ಸವಿಯುವುದರೊಂದಿಗೆ ಉಪನಿಷತ್ತಿನ ಮಹತ್ತ್ವವನ್ನು ಅರಿತುಕೊಂಡು ಧನ್ಯರಾಗಬೇಕಾಗಿ ವೇದಾಂತ ಭಾರತಿ ಆಗ್ರಹಿಸಿದೆ.


 

 

click me!