
ತಿರುಮಲ ಶ್ರೀವಾರಿ ದರ್ಶನಕ್ಕಾಗಿ ಭಕ್ತರು ಹಲವು ರೀತಿಯಲ್ಲಿ ತಿರುಮಲಕ್ಕೆ ಆಗಮಿಸುತ್ತಾರೆ. ಕೆಲವರು ನಡೆದುಕೊಂಡು ಬೆಟ್ಟಕ್ಕೆ ಬಂದರೆ, ಮತ್ತೆ ಕೆಲವರು ಹರಕೆ ಮಾಡಿಕೊಂಡು ತಮ್ಮ ಭಕ್ತಿಯನ್ನು ದೇವರಿಗೆ ಅರ್ಪಿಸುತ್ತಾರೆ. ಇದೇ ರೀತಿ ಆಂಧ್ರ ಪ್ರದೇಶ ನೆಲ್ಲೂರಿನ ವೀರಬ್ರಹ್ಮೇಂದ್ರ ಕುಂಕು ಬಾಲಾಜಿ ಅವರು ವಿಶೇಷ ಸಂದೇಶವನ್ನು ಹೊತ್ತು ತಿರುಮಲ ಅಲಿಪಿರಿ ಮಾರ್ಗದಲ್ಲಿ ಉರುಳು ಸೇವೆ ಮಾಡುತ್ತಾ ತಿರುಮಲ ಬೆಟ್ಟಕ್ಕೆ ಆಗಮಿಸಿದ್ದಾರೆ. ಗೋ ಸಂರಕ್ಷಣೆಗೆ ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಗೋರಕ್ಷಣೆಗೆ ಸರ್ಕಾರಗಳು ಮತ್ತಷ್ಟು ಕಠಿಣ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಬೇಡಿಕೆ ಇಟ್ಟು ಯಾತ್ರೆಯನ್ನು ಕೈಗೊಂಡಿದ್ದಾರೆ.
ಭಕ್ತಿಯೊಂದಿಗೆ ಸಾಮಾಜಿಕ ಕಳಕಳಿಯ ಮೂಲಕ ಈ ಯಾತ್ರೆಯನ್ನು ಬಾಲಾಜಿ ಕೈಗೊಂಡಿದ್ದಾರೆ. ಗೋಮಾತೆಯನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ, ಸಮಾಜದಲ್ಲಿ ಪ್ರತಿಯೊಬ್ಬರು ಸಾಮಾಜಿಕ ಜವಾಬ್ದಾರಿಯಾಗಿ ತೆಗೆದುಕೊಳ್ಳಬೇಕು. ಗೋವುಗಳ ಸಂರಕ್ಷಣೆಗೆ, ಅವುಗಳ ಭದ್ರತೆ, ಅಕ್ರಮ ಸಾಗಾಣಿಕೆಯನ್ನು ತಡೆಯುವ ಅಂಶಗಲ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ. ಶ್ರೀವಾರಿ ದರ್ಶನ ಮೂಲಕ ಆರ್ಶೀವಾದ ಪಡೆದುಕೊಂಡು, ಗೋ ಸಂಕರ್ಷಣೆಯ ಸಂದೇಶವನ್ನು ಮತ್ತಷ್ಟು ಮಂದಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಸದ್ಯದ ಸ್ಥಿತಿಯಲ್ಲಿ ಗೋ ಜಾತಿಯ ಉಳಿವಿಗೆ ಸಾಕಷ್ಟು ಶ್ರದ್ಧೆ ಅಗತ್ಯ ಎಂದು ಬಾಲಾಜಿ ಹೇಳಿದ್ದಾರೆ. ಗೋವುಗಳನ್ನ ಇತರ ರಾಜ್ಯಗಳಿಗೆ ಅಕ್ರಮವಾಗಿ ಸಾಗಾಣೆ ಮಾಡುವ ಬಗ್ಗೆ ಕಠಿಣ ಕ್ರಮಕೈಗೊಳ್ಳಬೇಕು. ಗೋಹತ್ಯೆ ನಿಷೇಧಿಸುವ ಕಾಯ್ದೆಗಳು ಕಠಿಣವಾಗಬೇಕು. ಗೋವುಗಳನ್ನು ಕೇವಲ ಪೂಜೆ ದೃಷ್ಟಿಯಿಂದ ನೋಡದೆ, ಭಾರತೀಯ ಸಂಸ್ಕೃತಿ, ಸಂಪ್ರದಾಯಗಳಿಗೆ ಪ್ರಾಮುಖ್ಯತೆಯನ್ನು ಗುರುತಿಸಿ ಅವುಗಳ ಸಂರಕ್ಷಣೆಗೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಬಾಲಾಜಿ ಹೇಳಿದ್ದಾರೆ.
ಗೋವನ್ನು ರಾಷ್ಟ್ರ ತಾಯಿ ಎಂದು ಘೋಷಣೆ ಮಾಡಬೇಕು ಜೊತೆ ಗೋವಿನ ರಕ್ಷಣೆಗೆ ಪ್ರತ್ಯೇಕ ಕಾರ್ಯಕ್ರಮಗಳನ್ನು ರೂಪಿಸಬೇಕು. ಸರ್ಕಾರ ಕ್ರಮಗಳೊಂದಿಗೆ ಜನರು ಕೂಡ ಇದರ ಭಾಗವಾಗಬೇಕು. ಗೋ-ಸಂರಕ್ಷಣಾ ಚಳುವಳಿಯು ಮತ್ತಷ್ಟು ಬಲಗೊಳ್ಳುತ್ತದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.
ಗೋ ಸಂರಕ್ಷಣೆಯನ್ನು ಸಂದೇಶವನ್ನು ಜನರಿಗೆ ತಲುಪಿಸಲು ಉರುಳು ಸೇವೆ ಮಾಡುತ್ತಾ ತಿರುಮಲಕ್ಕೆ ಆಗಮಿಸುತ್ತಿರುವುದು ಇದು 13ನೇ ಬಾರಿ ಎಂದು ಬಾಲಾಜಿ ಹೇಳಿದ್ದಾರೆ. ಅಲಿಪಿರಿ ಮಾರ್ಗದಲ್ಲಿ ಪ್ರತಿಯೊಂದು ಹೆಜ್ಜೆಯೂ ಒಂದು ಸಂಕಲ್ಪ ಎಂದು ಭಾವಿಸುತ್ತೇವೆ. ತಮ್ಮ ವೈಯಕ್ತಿಕ ಆಧ್ಯಾತ್ಮಿಕ ಪಯಣವನ್ನು ಸಾಮಾಜಿಕ ಸಂದೇಶದೊಂದಿಗೆ ಬೆಸೆಯುವ ಬಾಲಾಜಿ ಅವರ ಈ ಯಾತ್ರೆಯೂ ಇದೀಗ ಸ್ಥಳೀಯವಾಗಿ ಚರ್ಚೆಯ ವಿಷಯವಾಗಿದೆ. ಪವಿತ್ರ ಗೋವಿನ ರಕ್ಷಣೆಯಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆಯನ್ನು ನೀಡುವಂತೆ ಅವರು ಮತ್ತೊಮ್ಮೆ ಕರೆ ನೀಡಿದ್ದಾರೆ.