ವಿದೇಶಿ ಯುವಕನೊಬ್ಬ ಭಾರತೀಯ ಅಂಗಡಿಯಲ್ಲಿ ಬೆಲೆ ಚೌಕಾಸಿ ಮಾಡುವ ವಿಡಿಯೋ ವೈರಲ್ ಆಗಿದೆ. ₹550 ಬೆಲೆಯ ವಸ್ತುವನ್ನು ಕೇವಲ ₹50 ಕ್ಕೆ ಪಡೆದು ವ್ಯಾಪಾರಿಗಳಿಗೆ ಪಾಠ ಕಲಿಸಿದ್ದಾನೆ. ಈ ಚೌಕಾಸಿ ಜಾಣ್ಮೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ನವದೆಹಲಿ (ಜೂ. 22): ಸಾಮಾಜಿಕ ಜಾಲತಾಣಗಳಲ್ಲಿ ವಿದೇಶಿ ಯುವಕನೊಬ್ಬ ಭಾರತದ ಸ್ಥಳೀಯ ಅಂಗಡಿಯೊಂದರಲ್ಲಿ ಹೇಗೆ ನಿಪುಣವಾಗಿ ಬೆಲೆ ಚೌಕಾಸಿ ಮಾಡಿಕೊಂಡರು ಎಂಬ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿ ಎಲ್ಲರೂ ನಗುತ್ತಿದ್ದರೂ, ಅದರ ಹಿಂದಿರುವ ವ್ಯವಹಾರ ಜಾಣ್ಮೆಗೂ ಶ್ಲಾಘನೆ ವ್ಯಕ್ತವಾಗಿದೆ.
ವಿದೇಶಿ ಯುವಕ ಭಾರತದ ಪೇಟೆಯೊಂದಕ್ಕೆ ಬಂದು ದೊಡ್ಡ ಮಟ್ಟದಲ್ಲಿ ಬೋಟಿ ಸೇರಿ ಕುರುಕಲು ತಿಂಡಿಗಳನ್ನು ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಬಳಿ ಎಷ್ಟು ಬೆಲೆ ಎಂದು ಕೇಳುತ್ತಾರೆ. ಆಗ ವ್ಯಾಪಾರಿ 20 ರೂ. ಎಂದು ಹೇಳಿದ್ದಕ್ಕೆ 100 ರೂ. ನೋಟು ಕೊಟ್ಟು ಒಂದು ಬೋಟಿ ಬ್ಯಾಕೆಟ್ ಪಡೆಯುತ್ತಾರೆ. ಇದಾದ ನಂತರ ಒಂದು ಅಂಗಡಿಯ ಮುಂದೆ ಎರಡೂ ಕೈಗಳಲ್ಲಿ ಬ್ಯಾಗ್ ಹಿಡಿದು ನಿಂತಿದ್ದ ವ್ಯಕ್ತಿಯನ್ನು ಮಾತನಾಡಿಸಿ ಎಷ್ಟು ಬೆಲೆ ಎಂದು ಕೇಳುತ್ತಾರೆ. ಆಗ ವ್ಯಾಪಾರಿ ₹550 ಎಂದು ಹೇಳುತ್ತಾನೆ. ಆದರೆ ವಿದೇಶಿಗ ನಗುನಗುತ್ತಾ ಚೌಕಾಸಿ ಮಾಡಲು ಮುಂದಾಗುತ್ತಾನೆ. ತಕ್ಷಣವೇ ವ್ಯಾಪಾರಿ ತನ್ನ ಬ್ಯಾಗ್‌ನ ಬೆಲೆಯನ್ನು ಕಡಿಮೆ ಮಾಡಲು ಮುಂದಾಗುತ್ತಾನೆ. 550 ರೂ. ಬೆಲೆಯಿಂದ ಸೀದಾ ₹400 ಎಂದು ಹೇಳುತ್ತಾನೆ. ಇದಕ್ಕೆ ಬೇಡ ಬೇಡ ಎಂದಿದ್ದಕ್ಕೆ ಪುನಃ ₹250 ಕಡಿಮೆ ಬೆಲೆಗೆ ಹೇಳುತ್ತಾನೆ. ಆಗೂ ಬೇಡ ಎಂದು ಹೇಳಿದ್ದಕ್ಕೆ 100 ರೂ.ಗೆ ಬಂದು ಕೊನೆಗೆ ₹50ಗೆ ಬ್ಯಾಗ್ ಕೊಡಲು ಸಿದ್ಧವಿರುವುದಾಗಿ ಹೇಳುತ್ತಾನೆ.
ನೇಟಿವಿಟಿ ಎಂಬ ವಿದೇಶಿ ಬ್ಲಾಗರ್ ನೇಟಿವಿಟಿ ಎಂಬ ಖಾತೆಯಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈತ ಶೇರ್ ಮಾಡಿಕೊಂಡಿರುವ ವಿಡಿಯೋ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಕೇವಲ 48 ಗಂಟೆಗಳಲ್ಲಿ 19 ಲಕ್ಷಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ, ಸಾವಿರಾರು ಜನರು ಕಾಮೆಂಟ್ ಮಾಡಿದ್ದಾರೆ. ಇಲ್ಲಿ ಕೆಲವರು ವಿದೇಶಿಗರು ಕಂಡಾಕ್ಷಣ ಅವರಿಗೆ ಭಾರತೀಯ ವಸ್ತುಗಳ ಬೆಲೆ ಗೊತ್ತಿರುವುದಿಲ್ಲ, ಜಾಸ್ತಿ ಬೆಲೆ ಹೇಳಿ ಹಣ ವಸೂಲಿ ಮಾಡಬಹುದು ಎಂಬ ಕುತಂತ್ರಿ ವ್ಯಾಪಾರಿಗಳ ಮನಸ್ಥಿತಿ ಇಲ್ಲಿ ಬಹಿರಂಗವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ನೆಟ್ಟಿಗರು ನೀವು ಕೂಡ ನಮ್ಮ ಅಮ್ಮನ ಹಾಗೆ ವ್ಯಾಪಾರದಲ್ಲಿ ತುಂಬಾ ಚೌಕಾಶಿ ಮಾಡಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ವಿದೇಶಿಯರನ್ನು ನೋಡಿದ ನಂತರ ಅವರು ಮೂರ್ಖರು ಎಂದು ಭಾವಿಸಿ ವ್ಯಾಪಾರ ಮಾಡಲು ಮುಂದಾಗುತ್ತಾರೆ. ಆದರೆ ಈ ವ್ಯಕ್ತಿ ವ್ಯಾಪಾರಿಗಳ ಮೇಲೆ ಒಂದು ತಂತ್ರವನ್ನು ಮಾಡಿದ್ದಾರೆ ಎಂದು ಬರೆದಿದ್ದಾರೆ. ಮತ್ತೊಬ್ಬರು, ವ್ಯಾಪಾರಿ ತನ್ನ ಶೈಲಿಯನ್ನು ತೋರಿಸಲು ಪ್ರಯತ್ನಿಸುತ್ತಿದ್ದರು ಮತ್ತು ಈಗ ಅವರೇ ಮೂರ್ಖರಾದರು ಎಂದು ಬರೆದಿದ್ದಾರೆ.
ಈ ಘಟನೆಯು ಭಾರತದಲ್ಲಿ ನಡೆಯುವ ದೈನಂದಿನ ಅಂಗಡಿ ವ್ಯವಹಾರಗಳ ಮೇಲೆ ಹೊಸ ಬೆಳಕು ಚೆಲ್ಲಿದೆ. ಚೌಕಾಸಿ ಮಾಡುವುದು ಖರೀದಿದಾರನ ಹಕ್ಕು ಮಾತ್ರವಲ್ಲ, ವ್ಯಾಪಾರದ ಸಾಂಸ್ಕೃತಿಕ ಭಾಗವೂ ಹೌದು ಎಂಬುದನ್ನು ಈ ವಿದೇಶಿ ವ್ಯಕ್ತಿ ದೃಢಪಡಿಸಿದ್ದಾರೆ. ಸ್ಥಳೀಯರು ಕೂಡ ಬೆಲೆ ಕೇಳಿದರೆ ಎಳೆಯಬಾರದು ಎಂಬ ಭಾವನೆ ಬಿಟ್ಟು ನಗು ಮುಖದಿಂದ ಮಾತಾಡಿದರೆ ಬೆಲೆ ಇನ್ನೂ ಇಳಿಯಬಹುದು ಎಂಬ ನಿರೀಕ್ಷೆ ಇದರಿಂದ ಹುಟ್ಟಿದೆ.