ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ₹936 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ, ಬುಡಕಟ್ಟು ಸಾಂಸ್ಕೃತಿಕ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ರಾಯಚೂರು (ಜೂ.23): ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ₹936 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ, ಬುಡಕಟ್ಟು ಸಾಂಸ್ಕೃತಿಕ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ನಾಮಕರಣ, ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಉದ್ಯಾನವನ ಮತ್ತು ಕಂಚಿನ ಪುತ್ಥಳಿ ಹಾಗೂ ಕಲ್ಯಾಣ ಕರ್ನಾಟಕ ಮಾನವ ಜಿನೋಮ್ ಅಧ್ಯಯನ ಸಂಸ್ಥೆಯ ಶಂಕುಸ್ಥಾಪನೆ ಸಮಾರಂಭದ ಉದ್ಘಾಟನೆಯನ್ನು ಸಿದ್ದರಾಮಯ್ಯ ಅವರು ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ವೇದಿಕೆಯನ್ನು ಸಕಲ ಸೌಕರ್ಯಗಳಿಂದ ಸಿದ್ಧಪಡಿಸಲಾಗಿದೆ. ವೇದಿಕೆಯ ಸುತ್ತಲು ಯಾವುದೇ ರೀತಿ ಗದ್ದಲವಾಗದಂತೆ ಸೂಕ್ತ ಬ್ಯಾರಿಕೇಡ್ ಅಳವಡಿಸಲಾಗಿದೆ. ವಾಹನಗಳ ಪಾರ್ಕಿಂಗ್, ವೇದಿಕೆಯ ಪಕ್ಕದಲ್ಲಿ ಪ್ರತ್ಯೇಕ ಸ್ಥಳದಲ್ಲಿ ಪೆಂಡಾಲ್ ಅಳವಡಿಸಿ ಊಟದ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಗ್ರಾಮೀಣ ಕ್ಷೇತ್ರದಲ್ಲಿಯೇ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿ ಇತಿಹಾಸದ ಪುಟ ಸೇರ್ಪಡೆಯಾಗುವ ಹಾಗೆ ಕಾರ್ಯಕ್ರಮವು ಸಿದ್ಧವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿವಿಧ ಇಲಾಖೆಗಳ ಸಚಿವರು, ವಿವಿಧ ಜಿಲ್ಲೆಗಳ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಅಧಿಕಾರಿಗಳು ಭಾಗವಹಿಸಲಿದ್ದಾರೆ.
ರಾಷ್ಟ್ರಪತಿ ಜತೆ ಸಿಎಂ ಭೇಟಿ: ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ನೀಡುವ ಕುರಿತ ‘ಆರ್‌ಟಿಇ (ಕರ್ನಾಟಕ ತಿದ್ದುಪಡಿ)-2015’ ಸೇರಿ ರಾಜ್ಯಪಾಲರು ಅನುಮತಿ ನಿರಾಕರಿಸಿ ರಾಷ್ಟ್ರಪತಿಯವರಿಗೆ ಕಳುಹಿಸಿರುವ ರಾಜ್ಯದ ಐದು ಪ್ರಮುಖ ವಿಧೇಯಕಗಳ ಕುರಿತು ಚರ್ಚೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಸಂಜೆ ದೆಹಲಿಗೆ ತೆರಳಲಿದ್ದಾರೆ. ಮಂಗಳವಾರ ರಾಷ್ಟ್ರಪತಿ ಅವರನ್ನು ಭೇಟಿಯಾಗಿ ಅವರ ಅಂಕಿತ ಬಾಕಿ ಇರುವ ರಾಜ್ಯದ ವಿಧೇಯಕಗಳ ಕುರಿತು ಚರ್ಚಿಸಲಿದ್ದಾರೆ. ರಾಷ್ಟ್ರಪತಿಗಳನ್ನು ಭೇಟಿಯಾಗುವ ಹಿನ್ನೆಲೆಯಲ್ಲಿ ಭಾನುವಾರ ಅಧಿಕೃತ ನಿವಾಸ ಕಾವೇರಿಯಿಂದ ರಾಜಭವನಕ್ಕೆ ತೆರಳಿದ ಮುಖ್ಯಮಂತ್ರಿ ಅವರು, ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ಕೆಲ ಕಾಲ ಚರ್ಚೆ ನಡೆಸಿದರು.
ಐದು ವಿಧೇಯಕಗಳಿಗೆ ಸಹಿ ಹಾಕಲು ನಿರಾಕರಿಸಿ ರಾಷ್ಟ್ರಪತಿಯವರಿಗೆ ಕಳುಹಿಸುವಾಗ ರಾಜ್ಯಪಾಲರು ನೀಡಿರುವ ಕಾರಣ, ನಮೂದಿಸಿರುವ ಅಂಶಗಳೇನು ಎಂಬ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ರಾಷ್ಟ್ರಪತಿಯವರ ಭೇಟಿ ವೇಳೆ ರಾಜ್ಯ ಸರ್ಕಾರ ರೂಪಿಸಿರುವ ವಿಧೇಯಕಗಳನ್ನು ಹೇಗೆ ಸಮರ್ಥಿಸಿಕೊಳ್ಳಬೇಕು, ಯಾವ ರೀತಿಯ ಸಮಜಾಯಿಷಿ ನೀಡಬೇಕು. ಅವುಗಳ ಜಾರಿಯ ಅವಶ್ಯಕತೆ ಕುರಿತು ರಾಷ್ಟ್ರಪತಿಗಳಿಗೆ ಮನವರಿಕೆ ಮಾಡಿಸಲು ರಾಜ್ಯಪಾಲರ ಆಕ್ಷೇಪಿತ ಅಂಶಗಳ ಮಾಹಿತಿ ಪಡೆಯುವುದು ಅವಶ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಮಾಹಿತಿ ಪಡೆದರು ಎಂದು ತಿಳಿದು ಬಂದಿದೆ.