Kerala SDPI Workers Arrested: ಕೇರಳದಲ್ಲಿ ಎಸ್‌ಡಿಪಿಐ ಕಾರ್ಯಕರ್ತರಿಂದ ನೈತಿಕ ಪೊಲೀಸ್‌ಗಿರಿಗೆ ಒಳಗಾದ ಯುವತಿ ಸಾವಿಗೆ ಶರಣಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
Kerala SDPI Workers Arrested: ಕೇರಳದಲ್ಲಿ ಎಸ್‌ಡಿಪಿಐ ಕಾರ್ಯಕರ್ತರು(Kerala SDPI Workers) ತನ್ನ ಸ್ನೇಹಿತನ ಜೊತೆ ಕಾರಿನಲ್ಲಿ ಕುಳಿತಿದ್ದ ಕಾರಣಕ್ಕೆ ಯುವತಿಗೆ ಕಿರುಕುಳ ನೀಡಿ ನೈತಿಕ ಪೊಲೀಸ್‌ಗಿರಿ ಮಾಡಿದ್ದು, ಇದಾದ ನಂತರ ಯುವತಿ ಸಾವಿಗೆ ಶರಣಾದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಮೂವರು ಎಸ್‌ಡಿಪಿಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ, ರಸೀನಾ ಸಾವಿಗೆ ಶರಣಾದ ಯುವತಿ.
ಮೂವರು ಎಸ್‌ಡಿಪಿಐ ಕಾರ್ಯಕರ್ತರ ಬಂಧನ
ಈಕೆಗೆ ಈ ಮೂವರು ಎಸ್‌ಡಿಪಿಐ ಕಾರ್ಯಕರ್ತರು ಸಾರ್ವಜನಿಕ ಸ್ಥಳದಲ್ಲಿ ಕಿರುಕುಳ ನೀಡಿ ನೈತಿಕ ಪೊಲೀಸ್‌ಗಿರಿ (Kerala moral policing)ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧ ಬಂಧಿಸಲ್ಪಟ್ಟ ಎಸ್‌ಡಿಪಿಐ(SDPI) ಕಾರ್ಯಕರ್ತರನ್ನು ಎಂಸಿ ಮುಬ್ಶೀರ್, ಕೆಎ ಫೈಸಲ್, ವಿಕೆ ರಫ್ನಾಸ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಪರಂಬಾಯಿ ಪ್ರದೇಶದವರಾಗಿದ್ದು, ಅವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಜೊತೆ ಗುರುತಿಸಿಕೊಂಡಿದ್ದರು. ಈ ಎಸ್‌ಡಿಪಿಐಯೂ ಈಗಾಗಲೇ ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ಪಿಎಫ್‌ಐ( Popular Front of India) ಜೊತೆ ನಿಕಟ ಸಂಪರ್ಕವನ್ನು ಹೊಂದಿದೆ.
ಡೆತ್‌ನೋಟ್‌ನಲ್ಲಿರುವ ಮಾಹಿತಿ ಆಧರಿಸಿ ಮೃತ ಯುವತಿ ರಸೀನಾ ಮನೆಯವರು ದೂರು ನೀಡಿದ ಹಿನ್ನೆಲೆಯಲ್ಲಿ ಈ ಯುವಕರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಕಣ್ಣೂರು ಜಿಲ್ಲೆಯ ಪಿಣರಾಯಿ ಪೊಲೀಸರು ಹೇಳಿದ್ದಾರೆ.
ಯುವತಿಯ ಗೆಳೆಯನನ್ನು ಕಾರಿನಿಂದ ಎಳೆದು ಹಾಕಿ ಹಲ್ಲೆ
ಅಚ್ಚನ್‌ಕರ ಮಸೀದಿ ಸಮೀಪ ಜೂನ್ 15ರಂದು ಈ ಘಟನೆ ನಡೆದಿದೆ. ಅಲ್ಲಿ ರಸೀನಾ ತಮ್ಮ ಸ್ನೇಹಿತನೋರ್ವನ ಜೊತೆ ಪಾರ್ಕ್ ಮಾಡಿದ್ದ ಕಾರಿನಲ್ಲಿ ಕುಳಿತಿದ್ದರು. ಈ ವೇಳೆ ಆರೋಪಿಗಳು ಕಾರಿನಿಂದ ಆಕೆಯ ಗೆಳೆಯನನ್ನು ಹೊರಗೆಳೆದು ಬಳಿಕ ಸಮೀಪದ ಮೈದಾನದಲ್ಲಿ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಆತನ ಬಳಿ ಇದ್ದ ಟ್ಯಾಬ್ ಹಾಗೂ ಮೊಬೈಲ್ ಫೋನನ್ನು ಕಿತ್ತುಕೊಂಡಿದ್ದಾರೆ.
ಘಟನೆಯ ಬಳಿಕ ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾದ ರಸೀನಾ
ಇದಾದ ಮರುದಿನ ರಸೀನಾ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಆಕೆ ತನ್ನ ಬೆಡ್ ರೂಮ್‌ನಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದು, ಸಾವಿಗೂ ಮೊದಲು ಆಕೆ ಡೆತ್‌ನೋಟ್ ಬರೆದಿದ್ದು, ಅದರಲ್ಲಿ ಮೂವರು ಆರೋಪಿಗಳ ಹೆಸರು ಬರೆದಿದ್ದು, ಅವರಲ್ಲೊಬ್ಬ ಆಕೆಯ ಸಂಬಂಧಿ ಎಂದು ತಿಳಿದು ಬಂದಿದೆ.ಹಾಗೆಯೇ ರಸೀನಾಳ ಗೆಳೆಯ ಸ್ಥಳೀಯ ಎಸ್‌ಡಿಪಿಐ ಕಚೇರಿಯಲ್ಲಿ ಇರುವ ವೀಡಿಯೋ ಕೂಡ ಬಳಿಕ ಪೊಲೀಸರಿಗೆ ಸಿಕ್ಕಿದ್ದು, ಈ ದೃಶ್ಯಾವಳಿಯ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಎಸ್‌ಡಿಪಿಐ ಇದನ್ನು ಖಚಿತಪಡಿಸಿದ್ದು, ಎರಡೂ ಕುಟುಂಬಗಳು ಖಾಸಗಿ ಚರ್ಚೆಗೆ ಅವಕಾಶ ನೀಡಲು ಸ್ಥಳವನ್ನು ವಿನಂತಿಸಿದ್ದವು ಎಂದು ಹೇಳಿದೆ.
ಇದು ನೈತಿಕ ಪೊಲೀಸ್‌ಗಿರಿ ಅಲ್ಲ ಎಂದ ಎಸ್‌ಡಿಪಿಐ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಡಿಪಿಐ ಕಣ್ಣೂರು ಜಿಲ್ಲಾಧ್ಯಕ್ಷ ಬಶೀರ್(SDPI Kannur district president Basheer), ಬಂಧಿತ ಮೂವರು ವ್ಯಕ್ತಿಗಳು ನಿಜಕ್ಕೂ ಪಕ್ಷದ ಕಾರ್ಯಕರ್ತರು ಎಂದು ಹೇಳಿದ್ದಾರೆ. ಆದರೆ ಈ ಘಟನೆಯು ನೈತಿಕ ಪೊಲೀಸ್‌ಗಿರಿಯದ್ದಾಗಿರಲಿಲ್ಲ ಎಂದು ಹೇಳಿದ್ದಾರೆ. ಇದು ನೈತಿಕ ಪೊಲೀಸ್‌ಗಿರಿ ಪ್ರಕರಣವಲ್ಲ. ಆಕೆಯ ಜೊತೆ ಕಾರಿನಲ್ಲಿ ಕುಳಿತಿದ್ದ ವ್ಯಕ್ತಿ ರಸೀನಾಳನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದನೆಂದು ಆರೋಪಿಸಲಾಗಿದೆ, ಮತ್ತು ಆಕೆಯ ಸೋದರಸಂಬಂಧಿ ಅದನ್ನು ಪ್ರಶ್ನಿಸುತ್ತಿದ್ದ ಎಂದು ಅವರು ಹೇಳಿದ್ದಾರೆ. ರಸೀನಾ(Raseena) ಮತ್ತು ಆಕೆಯ ಸ್ನೇಹಿತ ಇಬ್ಬರೂ ವಿವಾಹಿತರಾಗಿದ್ದ ಕಾರಣ, ಅವರ ಕುಟುಂಬಗಳು ಸಮಸ್ಯೆ ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದ್ದವು ಎಂದು ಬಶೀರ್ ಹೇಳಿದ್ದಾರೆ. ಅಲ್ಲದೇ ಮೂವರು ಆರೋಪಿಗಳೂ ರಸೀನಾ ಅವರಿಗೆ ಸಂಬಂಧಿಕರಾಗಿದ್ದಾರೆ ಎಂದು ಅವರು ಹೇಳಿದ್ದಾರೆ..
ಬೆಂಗಳೂರಿನಲ್ಲೂ ಹಿಂದೆ ಇದೇ ರೀತಿಯ ಘಟನೆ
ಕಳೆದ ಏಪ್ರಿಲ್ 11 ರಂದು ಬೆಂಗಳೂರಿನಲ್ಲಿಯೂ ಇಂತಹದ್ದೇ ಘಟನೆಯೊಂದು ನಡೆದಿತ್ತು. ಸಾರ್ವಜನಿಕ ಸ್ಥಳದಲ್ಲಿ ಜೊತೆಯಾಗಿದ್ದ ಸಿಕ್ಕಿದ್ದ ಹಿಂದೂ ಹುಡುಗನ ಹಾಗೂ ಆತನ ಮುಸ್ಲಿಂ ಸಹಪಾಠಿಗೆ ಕೆಲ ಮುಸ್ಲಿಂ ಯುವಕರು ಕಿರುಕುಳ ನೀಡಿ ಎಚ್ಚರಿಕೆ ನೀಡಿದ್ದರು. ಬುರ್ಕಾ ಧರಿಸಿದ್ದ ಯುವತಿ ತನ್ನ ಸ್ನೇಹಿತನ ಬೈಕ್ ಮೇಲೆ ಕುಳಿತಿದ್ದು ಹಿಂದೂ ಯುವಕನ ಜೊತೆ ಇರುವುದಕ್ಕೆ ಯುವತಿಯನ್ನು ಅವರು ಪ್ರಶ್ನೆ ಮಾಡಿ ಸಾರ್ವಜನಿಕವಾಗಿ ನಿಂದಿಸಿದ್ದರು. ಅಲ್ಲದೇ ಆಕೆಯ ಪೋಷಕರ ನಂಬರ್ ಕೇಳಿದರು. ಆಕೆ ಕೊಡಲು ಒಪ್ಪದೇ ಇದ್ದಾಗ ಯುವಕನ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.