ಕೊಲಂಬಿಯಾ ಮೂಲದ ಮಹಿಳಾ ಬಾಡಿಬಿಲ್ಡರ್, ಶಿ ಹಲ್ಕ್ ಎಂದೇ ಫೇಮಸ್ ಆಗಿದ್ದ, ಜುನಿಲ್ಡಾ ಹೊಯೊಸ್ ಮೆಂಡೆಜ್ ಶವವಾಗಿ ಪತ್ತೆಯಾಗಿದ್ದಾರೆ.

ಕೊಲಂಬಿಯಾ ಮೂಲದ ಶಿ ಹಲ್ಕ್ (She Hulk)ಎಂದೇ ಫೇಮಸ್ ಆಗಿದ್ದ ಮಹಿಳಾ ಬಾಡಿ ಬಿಲ್ಡರ್‌ ಶವವಾಗಿ ಪತ್ತೆಯಾಗಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯಿಂದಲೇ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಹ್ಯಾಮರ್‌ನಿಂದ ಹೊಡೆದು ಮಹಿಳಾ ಬಾಡಿಬಿಲ್ಡರ್ ಜುನಿಲ್ಡಾ ಹೊಯಯೊಸ್ ಮೆಂಡೆಜ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಪತಿಯ ಮೃತದೇಹವೂ ಕೂಡ ಅವರು ವಾಸವಿದ್ದ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದ್ದು, ಆತ ಸ್ವತಃ ತಾನೇ ಚೂರಿಯಿಂದ ಇರಿದುಕೊಂಡು ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಪತ್ನಿಯ ಕೊಂದು ಸಾವಿಗೆ ಶರಣಾದ ಪತಿ

ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದಂತೆ ಜುನಿಲ್ಡಾ ಹೊಯೊಸ್ ಮೆಂಡೆಜ್ ಮತ್ತು ಅವರ ಪತಿ 46 ವರ್ಷದ ಜ್ಯಾರೋಡ್ ಗೆಲ್ಲಿಂಗ್(Jarrod Gelling) ಅವರು ಗುರುವಾರ ಸ್ಪ್ಯಾನಿಷ್ ಪಟ್ಟಣವಾದ (Spanish town)ಫ್ಯೂಂಗಿರೋಲಾದಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯನ್ನು ಕಳೆದೈದು ದಿನಗಳಿಂದ ನೋಡಿಲ್ಲ ಎಂದು ಸ್ನೇಹಿತರೊಬ್ಬರು ನಾಪತ್ತೆ ದೂರು ದಾಖಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ದೂರಿನ ಬಳಿಕ ಸ್ಥಳಕ್ಕೆ ಬಂದ ಅಧಿಕಾರಿಗಳು ಜುನಿಲ್ಡಾ ಹೊಯಯೊಸ್ ಮೆಂಡೆಜ್ (Zunilda Hoyos Mendez)ಅವರನ್ನು ಸುತ್ತಿಗೆಯಿಂದ ಹೊಡೆದು ಕೊಂದಂತೆ ಕಾಣುತ್ತಿದೆ ಹಾಗೂ ಆಕೆಯ ಅಮೆರಿಕನ್ ಪತಿ ಸ್ವಯಂ ಇರಿದುಕೊಂಡು ಸಾವನ್ನಪ್ಪಿರುವುದು ಕಂಡು ಬಂದಿದೆ ಎಂದು ಹೇಳಿದ್ದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಆಕೆಯ ದೇಹವು ಹಿಂಸಾಚಾರಕ್ಕೆ ಒಳಗಾದ ಸ್ಪಷ್ಟ ಲಕ್ಷಣಗಳನ್ನು ತೋರಿಸಿದೆ ಮತ್ತು ಆಕೆಯ ಪತಿ ಸ್ವತಃ ಸಾವಿಗೆ ಶರಣಾದಂತೆ ಕಾಣುತ್ತಿತ್ತು. ಶವಪರೀಕ್ಷೆಯ ನಂತರ ಇದನ್ನು ದೃಢೀಕರಿಸಬೇಕಾಗಿದೆ ಎಂದು ಸ್ಪ್ಯಾನಿಷ್ ರಾಷ್ಟ್ರೀಯ ಪೊಲೀಸರು (Spanish National Police)ತಿಳಿಸಿದ್ದಾರೆ.

ಕುಟುಂಬಿಕ ಕಲಹದಿಂದ ಕಂಗೆಟ್ಟಿದ್ದ ಮೆಂಡೆಜ್

ಮಹಿಳಾ ಬಾಡಿಬಿಲ್ಡರ್ ಮೆಂಡೆಜ್ ಅವರ ಕುಟುಂಬದ ಪ್ರಕಾರ, ಈ ದಂಪತಿ ವೈವಾಹಿಕ ಸಮಸ್ಯೆಗಳನ್ನು(marriage problems) ಎದುರಿಸುತ್ತಿದ್ದರು. ಅವರು ತಮ್ಮ ಪತಿ ಕಳೆದ ವರ್ಷದಿಂದ ತಮ್ಮ ಮೇಲೆ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ಅವರು ಸಂಬಂಧಿಕರಿಗೆ ತಿಳಿಸಿದ್ದರು ಮತ್ತು ಅವರು ತಮ್ಮ ಪ್ರವಾಸದ ನಂತರ ಇಬ್ಬರೂ ವಿಚ್ಛೇದನ ಪಡೆಯಲು ಉದ್ದೇಶಿಸಿದ್ದರು. ಒಂದೆರಡು ವಾರಗಳಲ್ಲಿ ಪೋರ್ಚುಗಲ್‌ನಲ್ಲಿ ದೇಹದಾರ್ಢ್ಯ ಸ್ಪರ್ಧೆಯೊಂದಿಗೆ (bodybuilding competition) ಈ ಪ್ರವಾಸ ಕೊನೆಗೊಳ್ಳುತ್ತಿತ್ತು.ಆಕೆಯನ್ನು ಸದಾ ನಿಂದಿಸಲಾಗುತ್ತಿತ್ತು ಹೀಗಾಗಿ ಆಕೆ ವಿಚ್ಛೇದನವನ್ನು ಬಯಸಿದ್ದಳು ಎಂದು ಅವರ ಕುಟುಂಬ ತಿಳಿಸಿದೆ.

ವಿಚ್ಚೇದನ ಪಡೆಯಲು ನಿರ್ಧರಿಸಿದ್ದ ಮಹಿಳಾ ಬಾಡಿಬಿಲ್ಡರ್

ಈ ದಂಪತಿಗಳು ದುಬೈನಿಂದ ದಕ್ಷಿಣ ಸ್ಪೇನ್‌ಗೆ ಬಂದಿದ್ದರು ಮೆಂಡೆಜ್ ಅವರ ಸೋದರ ಸೊಸೆ ಯುಲೇಡಿಸ್ ಹೇಳುವಂತೆ, ಪೋರ್ಚುಗಲ್‌ಗೆ ಪ್ರಯಾಣಿಸುವ ಮೊದಲು ಆಕೆಯ ಪತಿ ಗೇಲಿಂಗ್‌ಗೆ ಮೊಣಕಾಲು ಶಸ್ತ್ರಚಿಕಿತ್ಸೆ ನಡೆದಿತ್ತು. ಈ ಸಂದರ್ಭದಲ್ಲಿ ಆಕೆ ಆತನ ಜೊತೆಗಿದ್ದಳು. ನನ್ನ ಅತ್ತೆಯ ಪಾಲಿಗೆ ಇದು ಅವರೊಂದಿಗಿನ ಕೊನೆಯ ಪ್ರವಾಸವಾಗಿತ್ತು. ಅವರ ಆಕ್ರಮಣಕಾರಿ ನಡವಳಿಕೆಯಿಂದಾಗಿ ಅವರು ವಿಚ್ಛೇದನ( divorce) ನೀಡುವ ನಿರ್ಧಾರವನ್ನು ತೆಗೆದುಕೊಂಡಿದ್ದರು ಎಂದು ಯುಲೇಡಿಸ್ ಹೇಳಿದ್ದಾರೆ. ಮನಸ್ತಾಪದ ಕಾರಣಕ್ಕೆ ಇಬ್ಬರು ಹಿಂದೊಮ್ಮೆ ಬೇರೆ ಬೇರೆಯಾಗಿದ್ದರು. ಆದರೆ ನಂತರ ಸಮಸ್ಯೆ ಪರಿಹರಿಸಲು ಮತ್ತೆ ಒಟ್ಟಿಗೆ ಸೇರಿದರು. ಆದರೂ ಕಿರುಕುಳ ಮುಂದುವರೆಯಿತು ಎಂದು ಅವರು ಹೇಳಿದ್ದರು.

ಮೆಂಡೆಂಜ್ ಸಾವಿಗೆ ಟ್ರೈನರ್ ತೀವ್ರ ಬೇಸರ

ಇತ್ತ ಮೆಂಡೆಂಜ್ ಸಾವಿನ ನಂತರ ಅವರ ದೇಹದಾರ್ಢ್ಯ ತರಬೇತುದಾರ ಬ್ರಾಂಡೆನ್ ರೇ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಗೌರವ ಸೂಚಕವಾಗಿ ಫೋಟೋ ಪೋಸ್ಟ್ ಮಾಡಿದ್ದಾರೆ. ನಾವು ವೇದಿಕೆಗೆ ಬಂದು ಜಗತ್ತಿಗೆ ಶಾಕ್ ನೀಡಲು 17 ದಿನಗಳು ಉಳಿದಿದ್ದವು, ನನ್ನ ಫ್ರೆಂಡ್, ಈ ವರ್ಷದ ಅಂತ್ಯದ ವೇಳೆಗೆ ನೀವು ವಿಶ್ವದ ಟಾಪ್ 10 ಆಗಬಹುದು ಎಂದು ನಾನು ನಿಮಗೆ ಹೇಳಿದ್ದೆ ಆದರೆ ಸ್ವರ್ಗದಲ್ಲಿ ವಿಶ್ರಾಂತಿ ಪಡೆಯಿರಿ, ಆಮಿ ಎಂದು ಅವರು ಬರೆದಿದ್ದಾರೆ. ನಾವು ಫಿನಿಶ್‌ಗೆ ತುಂಬಾ ಹತ್ತಿರದಲ್ಲಿದ್ದೆವು, ಆದರೆ ನಿಮ್ಮ ಹತ್ತಿರದ ವ್ಯಕ್ತಿ ಅದನ್ನು ಬೇಗನೆ ಕೊನೆಗೊಳಿಸಿದರು. ಕೌಟುಂಬಿಕ ಹಿಂಸಾಚಾರವನ್ನು (Domestic violence) ಎಂದಿಗೂ ಹಗುರವಾಗಿ ಪರಿಗಣಿಸಬಾರದು, ಏಕೆಂದರೆ ಅದು ಅನೇಕರಿಗೆ ಆಳವಾದ ನೋವನ್ನುಂಟು ಮಾಡುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.