ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಮದುವೆ ಸಮಾರಂಭದ ವೇಳೆ ನಾಲ್ಕು ತಿಂಗಳ ಗರ್ಭಿಣಿಯ ಮೇಲೆ ಆರು ಜನರು ದಾಳಿ ನಡೆಸಿ, ಕಾಡಿಗೆ ಎಳೆದೊಯ್ದು ಬಲತ್ಕಾರಕ್ಕೆ ಯತ್ನಿಸಿದ್ದಾರೆ. ಆರೋಪಿಗಳು ಸಂತ್ರಸ್ತೆಯ ಪತಿ ಮತ್ತು ಸಹೋದರರ ಮೇಲೂ ಹಲ್ಲೆ ನಡೆಸಿದ್ದಾರೆ.

ರಾಜಸ್ಥಾನದ ಸಿರೋಹಿ ಜಿಲ್ಲೆಯ ಅಬುರೋಡ್ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಜೂನ್ 18, 2025 ರಂದು ರಾತ್ರಿ ನಡೆದ ಗಂಭೀರ ಘಟನೆಯೊಂದು ಬೆಳಕಿಗೆ ಬಂದಿದೆ. ಮದುವೆ ಸಮಾರಂಭದ ವೇಳೆ ನಾಲ್ಕು ತಿಂಗಳ ಗರ್ಭಿಣಿಯಾಗಿರುವ ಮಹಿಳೆಯನ್ನು ಬಲವಂತವಾಗಿ ಅಪಹರಿಸಿ, ಕಾಡಿಗೆ ಕರೆದೊಯ್ದು, ಆಕೆಯ ಮೇಲೆ ಆಕ್ಷೇಪಾರ್ಹ ಕೃತ್ಯಗಳನ್ನು ಎಸಗಿ ಬಲತ್ಕಾರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಆರು ಜನರ ವಿರುದ್ಧ ದೂರು ದಾಖಲಾಗಿದೆ.

ಘಟನೆ ಹಿನ್ನೆಲೆ:

ಸಂತ್ರಸ್ತೆ ಹೇಳುವ ಪ್ರಕಾರ, ಜೂನ್ 18 ರಂದು ರಾತ್ರಿ 10 ರಿಂದ 11 ಗಂಟೆಯ ಸುಮಾರಿಗೆ, ಮದುವೆ ಮನೆಯಿಂದ ಸ್ವಲ್ಪ ದೂರದಲ್ಲಿ ನಿಂತಿದ್ದಾಗ, ಆರೋಪಿಗಳಾದ ಸೋಮ, ಭರ್ಮಾ, ಲಿಯಾ, ನೋನಾ, ಲಿಬಾ, ಲಾಲಾ ಹಾಗೂ ಇತರ ಇಬ್ಬರು ಕೊಡಲಿ ಮತ್ತು ಕೋಲುಗಳಂತಹ ಆಯುಧಗಳೊಂದಿಗೆ ಬಂದು ದಾಳಿ ನಡೆಸಿದ್ದಾರೆ. ಆರೋಪಿ ಸೋಮ ಸಂತ್ರಸ್ತೆಯ ಕೂದಲನ್ನು ಹಿಡಿದು ಕಾಡಿಗೆ ಎಳೆದೊಯ್ದು, ನೆಲಕ್ಕೆ ಎಸೆದು ಬಲತ್ಕಾರಕ್ಕೆ ಯತ್ನಿಸಿದ್ದಾನೆ. ಸಂತ್ರಸ್ತೆಯ ಕೂಗಾಟಕ್ಕೆ ಆಕೆಯ ಪತಿ, ಸಹೋದರ ಮತ್ತು ಇನ್ನೊಬ್ಬ ವ್ಯಕ್ತಿ ರಕ್ಷಣೆಗೆ ಧಾವಿಸಿದಾಗ, ಆರೋಪಿಗಳು ಅವರ ಮೇಲೂ ಹಲ್ಲೆ ನಡೆಸಿದ್ದಾರೆ.

ಕಾಡಿನಲ್ಲಿ ತಪ್ಪಿಸಿಕೊಂಡ ದಂಪತಿ:

ಆರೋಪಿಗಳು ಸಂತ್ರಸ್ತೆಯ ಪತಿಯ ತಲೆಗೆ ಕೊಡಲಿಯಿಂದ, ಮುಖಕ್ಕೆ ಕಲ್ಲಿನಿಂದ ಹೊಡೆದಿದ್ದಾರೆ. ಆಕೆಯ ಸಹೋದರನ ಎಡಗೈ ಬೆರಳುಗಳು ಕತ್ತರಿಸಲ್ಪಟ್ಟು, ಮಧ್ಯದ ಬೆರಳು ಸಂಪೂರ್ಣವಾಗಿ ತುಂಡಾಗಿದೆ. ಗಂಭೀರವಾಗಿ ಗಾಯಗೊಂಡ ಕುಟುಂಬ ಸದಸ್ಯರು ರಾತ್ರಿಯಿಡೀ ಕಾಡಿನಲ್ಲಿ ಅಡಗಿಕೊಂಡು, ಆರೋಪಿಗಳ ಹಿಡಿತದಿಂದ ತಪ್ಪಿಸಿಕೊಂಡಿದ್ದಾರೆ. ಬಳಿಕ ಅಲ್ಲಿಂದ ನೇರ ಪೊಲೀಸ್‌ ಠಾಣೆಗೆ ದೂರು ನೀಡಿದ ಸಂತ್ರಸ್ತೆ.

ಆರೋಪಿಗಳು ತನ್ನನ್ನು ಕೊಲ್ಲುವ ಬೆದರಿಕೆ ಹಾಕುತ್ತಿರುವುದರಿಂದ ಭಯದಿಂದ ಬದುಕಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಸಂತ್ರಸ್ತೆ ಹೇಳಿದ್ದಾಳೆ. ಆರೋಪಿಗಳು ನಿರಂತರವಾಗಿ ಹಿಂಬಾಲಿಸುತ್ತಿರುವ ಕಾರಣ, ಆಕೆ ಮತ್ತು ಕುಟುಂಬ ಭಯಭೀತರಾಗಿ ಅಡಗಿಕೊಂಡಿದ್ದಾರೆ. ಈ ಬಗ್ಗೆ ಅಬುರೋಡ್ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಸಂತ್ರಸ್ತೆ, ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾಳೆ.

ಪೊಲೀಸರು ಹೇಳಿದ್ದೇನು?

ಠಾಣೆಯ ಉಸ್ತುವಾರಿ ದರ್ಶನ್ ಸಿಂಗ್, ಇದು ಕುಟುಂಬದ ವಿಷಯವಾಗಿದ್ದು, ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ ಎಂದಿದ್ದಾರೆ. ಸಂತ್ರಸ್ತೆಯ ಕಿರುಕುಳ ಮತ್ತು ಆಕೆಯ ಪತಿ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ಘಟನೆಯಿಂದ ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.