ಬೆಂಗಳೂರು ಪ್ಯಾಲೇಸ್ ಆವರಣದಲ್ಲಿ ವಾಸಿಸುವ ಶ್ರೀನಿವಾಸ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದ್ದು, ಮೂವರು ಹೆಣ್ಣುಮಕ್ಕಳ ಕಾಲೇಜು ಶುಲ್ಕಕ್ಕೆ ಸಾಲ ಮಾಡಿ ಇಟ್ಟಿದ್ದ 65 ಸಾವಿರ ರೂಪಾಯಿ ಹಾಗೂ 5 ಗ್ರಾಂ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ. ಸದಾಶಿವನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು (ಜೂನ್ 22): ಬೆಂಗಳೂರು ಪ್ಯಾಲೇಸ್ ಆವರಣದಲ್ಲಿ ವಾಸಿಸುವ ಗಾರ್ಡನರ್ ಶ್ರೀನಿವಾಸ್ ಮನೆಯಲ್ಲಿ ಕಳ್ಳತನ ನಡೆದಿದೆ. ಕಾರ್ಮಿಕ ಶ್ರೀನಿವಾಸ್ ತನ್ನ ಮೂವರು ಹೆಣ್ಣುಮಕ್ಕಳ ಕಾಲೇಜು ಶುಲ್ಕಕ್ಕೆ ಸಾಲಮಾಡಿ ಇಟ್ಟಿದ್ದ 65 ಸಾವಿರ ರೂಪಾಯಿ ನಗದು ಹಾಗೂ 5 ಗ್ರಾಂ ಚಿನ್ನಾಭರಣವನ್ನು ಕಳ್ಳರು ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಘಟನೆ ವಿವರ:

ನಿನ್ನೆ ಮಧ್ಯಾಹ್ನದ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಶ್ರೀನಿವಾಸ್ ಹಾಗೂ ಅವರ ಪತ್ನಿ ಕೆಲಸಕ್ಕೆ ತೆರಳಿದ್ದರು. ಅವರ ಮಕ್ಕಳು ಮೂವರು ಕಾಲೇಜುಗಳಿಗೆ ಹೋಗಿದ್ದರು. ಈ ವೇಳೆಯಲ್ಲಿ, ಅಪರಿಚಿತ ವ್ಯಕ್ತಿಗಳು ಮನೆಯ ಬಾಗಿಲು ಮುರಿದು ಒಳನುಗ್ಗಿ ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಕಳೆದ ವಾರ ಸಾಲ ಮಾಡಿಕೊಂಡು ಹೆಣ್ಣು ಮಕ್ಕಳ ಕಾಲೇಜು ಫೀಸ್‌ಗಾಗಿ 65 ಸಾವಿರ ಸಂಗ್ರಹಿಸಿ ಮನೆಯಲ್ಲಿ ಇಡಲಾಗಿತ್ತು. ಆದರೆ, ಕಳ್ಳರು ಈ ಹಣವನ್ನು ಕಳ್ಳತನ ಮಾಡಿದ್ದಾರೆ. ಈಗ ಮಕ್ಕಳ ಫೀಸ್ ಕಟ್ಟಲಾಗದೆ ಕುಟುಂಬ ಸಂಕಷ್ಟಕ್ಕೊಳಗಾಗಿದೆ. 'ಈ ಹಣ ಮಕ್ಕಳ ಭವಿಷ್ಯಕ್ಕಾಗಿ ಸಂಗ್ರಹಿಸಿದ್ದ ಹಣ ಕಳ್ಳತನವಾಗಿದೆ... ಈಗ ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ' ಎಂದು ಶ್ರೀನಿವಾಸ್ ಕಣ್ಣೀರಿಡುತ್ತಾ ಗೋಳಾಡಿದ್ದಾರೆ.

ಪೊಲೀಸ್ ತನಿಖೆ:

ಘಟನೆಯ ನಂತರ ಶ್ರೀನಿವಾಸ್ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಕೂಡ ಪ್ರಾರಂಭವಾಗಿದೆ. ಶಂಕಿತರನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಘಟನೆ ಮಾನವೀಯ ದಿಕ್ಕಿನಲ್ಲಿ ಆಲೋಚಿಸಬೇಕಾದ ಅಗತ್ಯವಿದೆ. ಶ್ರೀನಿವಾಸ್ ಅವರಂತಹ ಬಡತನದ ಹಾಗೂ ಕಾರ್ಮಿಕ ವರ್ಗದ ಜನರು ಮಕ್ಕಳ ಶಿಕ್ಷಣಕ್ಕಾಗಿ ಸಾಲ ಮಾಡಿ ಹಣ ಹೊಂದಿಸುವ ಈ ಪರಿಸ್ಥಿತಿಯಲ್ಲಿ ಅವರ ಮನೆಯಲ್ಲಿ ಕಳ್ಳತನ ನಡೆದಿರುವುದು ಮಕ್ಕಳ ಭವಿಷ್ಯದ ಬೀಳುವ ಭಾರೀ ದೊಡ್ಡ ಹೊಡೆತವಾಗಿದೆ. ಸ್ಥಳೀಯರು ಹಾಗೂ ಸಮಾಜಸೇವೆ ಸಂಸ್ಥೆಗಳು ಮುಂದೆ ಬಂದು ಸಹಾಯ ಮಾಡಬೇಕಾದ ಅಗತ್ಯವಿದೆ.