ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ಕಂಪನಿ, ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಇದೀಗ ಭಾರತಕ್ಕೆ ಅಧಿಕೃತವಾಗಿ ಕಾಲಿಡುತ್ತಿದೆ. ಜುಲೈ ಆರಂಭದದಲ್ಲಿ ಮುಂಬೈನಲ್ಲಿ ಮೊದಲ ಟೆಸ್ಲಾ ಶೋ ರೂಂ ಆರಂಭಗೊಳ್ಳುತ್ತಿದೆ. ಕಾರಿನ ಬೆಲೆ ಎಷ್ಟು?
ಮುಂಬೈ(ಜೂ.21) ಟೆಸ್ಲಾ ಭಾರತಕ್ಕೆ ಬರುತ್ತಿದೆ, ಬರುತ್ತಿದೆ ಎಂದು ಹಲವು ವರ್ಷಗಳೇ ಉರುಳಿ ಹೋಗಿದೆ. ಇದೀಗ ಅಧಿಕೃತವಾಗಿ ಟೆಸ್ಲಾ ಭಾರತಕ್ಕೆ ಕಾಲಿಡುತ್ತಿದೆ. ಜುಲೈ ತಿಂಗಳ ಆರಂಭದಲ್ಲೇ ಮುಂಬೈನಲ್ಲಿ ಟೆಸ್ಲಾ ಮೊದಲ ಶೋ ರೂಂ ತೆರೆಯುತ್ತಿದೆ. ಈ ಮೂಲಕ ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಎಲೆಕ್ಟ್ರಿಕ್ ಕಾರು ವಿಶ್ವದ 3ನೇ ಅತೀ ದೊಡ್ಡ ಕಾರು ಮಾರುಕಟ್ಟೆಯಾದ ಭಾರತವನ್ನು ಪ್ರವೇಶಿಸುತ್ತಿರುವುದು ಖಚಿತಗೊಂಡಿದೆ. ಮೊದಲ ಶೋ ರೂಂ ಮುಂಬೈನಲ್ಲಿ ಆರಂಭಗೊಂಡರೆ 2ನೇ ಶೋ ರೂಂ ದೆಹಲಿಯಲ್ಲಿ ಆರಂಭಿಸಲು ಟೆಸ್ಲಾ ಮುಂದಾಗಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಯೂರೋಪ್, ಚೀನಾ ಮಾರುಕಟ್ಟೆಯಲ್ಲಿ ಮಾರಾಟ ಕುಸಿತ, ಭಾರತದತ್ತ ಚಿತ್ತ
ಎಲಾನ್ ಮಸ್ಕ್ ಒಡೆತದನ ಟೆಸ್ಲಾ ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ಕಂಪನಿ. ಹಲವು ರಾಷ್ಟ್ರಗಳಲ್ಲಿ ಟೆಸ್ಲಾ ಕಾರು ಮಾರಾಟವಾಗುತ್ತಿದೆ. ಅಮೆರಿಕ, ಚೀನಾ, ನೆದರ್ಲೆಂಡ್ ಸೇರಿದಂತೆ ಹಲೆವೆಡೆ ಟೆಸ್ಲಾ ಕಾರು ಉತ್ಪಾದಕ ಘಟಕ ಹೊಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಟೆಸ್ಲಾ ಕಾರು ಯೂರೋಪ್ ಹಾಗೂ ಚೀನಾ ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ಕುಸಿತ ಕಂಡಿದೆ. ಇದರ ಬೆನ್ನಲ್ಲೇ ಭರಾತ ಪ್ರವೇಶ ಮಹತ್ವ ಪಡೆದಿದೆ.
ಕಾರು, ಬಿಡಿಭಾಗ, ಚಾರ್ಜರ್ ಆಮದು
ಬ್ಲೂಮ್‌ಬರ್ಗ್ ವರದಿ ಪ್ರಕಾರ ಟೆಸ್ಲಾ ಈಗಾಗಲೇ ಕಾರುಗಳನ್ನು, ಬಿಡಿ ಭಾಗಗಳನ್ನು, ಚಾರ್ಜರ್ ಸೇರಿದಂತೆ ಇತರ ವಸ್ತುಗಳನ್ನು ಅಮೆರಿಕ, ಚೀನಾ ಹಾಗೂ ನೆದರ್ಲೆಂಡ್‌ನಿಂದ ಆಮದು ಮಾಡಿಕೊಳ್ಳುತ್ತಿದೆ. ಸಿಬಿಯು ಅಡಿಯಲ್ಲಿ ಟೆಸ್ಲಾ ಭಾರತದಲ್ಲಿ ಕಾರು ಮಾರಾಟ ಮಾಡಲಿದೆ. ಕಾರು, ಎಂಜಿನ್ ಸೇರಿದಂತೆ ಬಹುತೇಕ ಕಾರನ್ನು ಆಮದು ಮಾಡಿಕೊಂಡು, ಕೆಲ ಬಿಡಿ ಭಾಗ ಮಾತ್ರ ಭಾರತದಲ್ಲಿ ಜೋಡಣೆ ಮಾಡಲಿದೆ.
ಆಮದು ಸುಂಕ ಸೇರಿದಂತೆ ಭಾರತದಲ್ಲಿ ಟೆಸ್ಲಾ ದುಬಾರಿ
ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಪೈಕಿ ವೈ ಮಾಡೆಲ್ ಕಾರು ಅತೀ ಹೆಚ್ಚು ಮಾರಾಟವಾಗುವ ಕಾರು. ಇದು ಟೆಸ್ಲಾ ಕಾರುಗಳ ಪೈಕಿ ಕೈಗೆಟುಕುವ ದರದ ಕಾರು. ಚೀನಾದ ಶಾಂಘೈ ಘಟಕದಲ್ಲಿ ತಯಾರಾಗುತ್ತಿರುವ ಈ ಕಾರನ್ನು ಭಾರತಕ್ಕೆ ಆಮದು ಮಾಡಿಕೊಳ್ಳಳಾಗುತ್ತಿದೆ. ಶಾಂಘೈ ಉತ್ಪಾದನಾ ಘಟಕದಲ್ಲಿ ಈ ಕಾರಿನ ಬೆಲೆ 27.7 ಲಕ್ಷ ರೂಪಾಯಿ. ಆದರೆ ಭಾರತದಲ್ಲಿ ಮೇಕ್ ಇನ್ ಇಂಡಿಯಾಗೆ ಒತ್ತು ನೀಡಿರುವ ಕಾರಣ ಕಾರು ಆಮದು, ಬಿಡಿ ಭಾಗ ಆಮದಿಗೆ ಗರಿಷ್ಠ ಶೇಕಡಾ 70 ರಷ್ಟು ಸುಂಕ ವಿಧಿಸಲಾಗುತ್ತದೆ. ಟೆಸ್ಲಾ ವೈ ಮಾಡೆಲ್ ಕಾರಿಗೆ ಸರಿಸುಮಾರು 21 ಲಕ್ಷ ರೂಪಾಯಿ ಸುಂಕ ವಿಧಿಸಲಾಗುತ್ತದೆ. ಇದರಿಂದ ಭಾರತದಲ್ಲಿ ಟೆಸ್ಲಾ ವೈ ಮಾಡೆಲ್ ಕಾರಿನ ಬೆಲೆ 48.7 ಲಕ್ಷ ರೂಪಾಯಿ ಆಗಲಿದೆ.
ಸದ್ಯ ಭಾರತದಲ್ಲಿ ಟೆಸ್ಲಾ ನೇಮಕಾತಿ ಸೇರಿದಂತೆ ಹಲವು ಅಧಿಕಾರಿಗಳ ನೇಮಕ ನಡೆಯುತ್ತಿದೆ. ಪ್ರಶಾಂತ್ ಮೆನೊನ್ ಭಾರತದ ಟೆಸ್ಲಾ ಮುಖ್ಯಸ್ಥನಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಆದರೆ ಪ್ರಶಾಂತ್ ಮೆನೊನ್ ಇತ್ತೀಚೆಗೆ ನಿರ್ಗಮಿಸಿದ್ದಾರೆ. ಈ ಸ್ಥಾನಕ್ಕೆ ಮತ್ತೊಬ್ಬರ ಕರೆ ತರುವ ಪ್ರಯತ್ನ ನಡೆಯುತ್ತಿದೆ. ಇದರ ಜೊತೆ ಟೆಕ್ನೀಶಿಯನ್ ಸೇರಿದಂತೆ ಹಲವು ನೇಮಕಾತಿಗಳು ನಡೆಯುತ್ತಿದೆ.
ಟಾಟಾ, ಮಹೀಂದ್ರ ಸೇರಿದಂತೆ ಭಾರತದ ಕಾರುಗಳಿಗೆ ಸೆಡ್ಡು ಹೊಡೆಯುತ್ತಾ ಟೆಸ್ಲಾ
ಟೆಸ್ಲಾ ಕಾರುಗಳ ಗುಣಮಟ್ಟ, ಮೈಲೇಜ್ ರೇಂಜ್,ವಿನ್ಯಾಸಕ್ಕೆ ಸರಿಸಾಟಿ ಇಲ್ಲ. ಆದರೆ ಭಾರತದಲ್ಲಿ ಆಮದು ಸುಂಕದ ಕಾರಣದಿಂದ ಟೆಸ್ಲಾ ಕಾರುಗಳು ದುಬಾರಿಯಾಗಲಿದೆ. ಸದ್ಯ ಭಾರತದ ಎಲೆಕ್ಟ್ರಿಕ್ ಕಾರುಕಟ್ಟೆಯಲ್ಲಿ ಟಾಟಾ, ಮಹೀಂದ್ರ ಸೇರಿದಂತ ಇತರ ಕಾರುಗಳಿಗೆ ಪೈಪೋಟಿ ನೀಡುವುದು ಕಷ್ಟ. ಆದರೆ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಟೆಸ್ಲಾ ಮುನ್ನುಗ್ಗಿದ್ದರೆ ಭಾರತದ ಎಲೆಕ್ಟ್ರಿಕ್ ಮಾರುಕಟ್ಟೆಯನ್ನು ಟೆಸ್ಲಾ ಆಕ್ರಮಿಸಿಕೊಳ್ಳಲಿದೆ.