ಬೆಂಗಳೂರಿನ ರಸ್ತೆಯಲ್ಲಿ ಜೋಡಿಯೊಂದು ಸ್ಕೂಟರ್ ಮೂಲಕ ಸ್ಟಂಟ್ ಮಾಡಿದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಇತರ ವಾಹನಗಳ ನಡುವೆ ಈ ಜೋಡಿ ಮಾಡಿದ ಸ್ಟಂಟ್ ನಿಯಮ ಉಲ್ಲಂಘಿಸಿದೆ.

ಬೆಂಗಳೂರು(ಜೂ.22) ಬೆಂಗಳೂರಿನ ರಸ್ತೆಗಳಲ್ಲಿ ವ್ಹೀಲಿಂಗ್, ಸ್ಟಂಟ್ ಮಾಡುವ ಪುಂಡರಿಗೆ ಪೊಲೀಸರು ಸರಿಯಾಗೆ ಶಾಸ್ತಿ ಮಾಡುತ್ತಿದ್ದಾರೆ. ಆದರೂ ಪ್ರಕರಣಗಳು ನಡೆಯುತ್ತಲೇ ಇದೆ. ಇದೀಗ ಜೋಡಿ ಹಕ್ಕಿಯೊಂದು ಸ್ಕೂಟರ್ ಮೂಲಕ ಸ್ಟಂಟ್ ಮಾಡಿ ಸಾರ್ವಜನಿಕರನ್ನು ಭಯಭೀತಗೊಳಿಸಿದ್ದು ಮಾತ್ರವಲ್ಲ, ನಿಯಮ ಉಲ್ಲಂಘಿಸಿ ಪೊಲೀಸರ ಕೆಂಗಣ್ಣಿಗೂ ಗುರಿಯಾಗಿದೆ. ಜೋಡಿ ಹಕ್ಕಿ ಸ್ಕೂಟರ್ ಮೂಲಕ ಭಾರಿ ಸ್ಟಂಟ್ ಮಾಡಿದ್ದಾರೆ. ಪ್ರಮುಖ ರಸ್ತೆಯಲ್ಲೇ ಈ ಸ್ಟಂಟ್ ಮಾಡಲಾಗಿದೆ. ಈ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ. ಎಲ್ಲರೂ ಈ ಜೋಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಕೈಗಳ ಬಿಟ್ಟು ಸ್ಕೂಟರ್‌ನಲ್ಲಿ ಸ್ಟಂಟ್

ಜೆಪಿ ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ರಸ್ತೆಯಲ್ಲಿ ಈ ಜೋಡಿ ಸ್ಕೂಟರ್ ಮೂಲಕ ಸ್ಟಂಟ್ ಮಾಡಿದೆ. ರೋಮಿಯೋ ಜೂಲಿಯೆಟ್ ರೀತಿಯಲ್ಲಿ ಬೈಕ್‌‌ನಲ್ಲಿ ಕುಳಿತು ಸ್ಟಂಟ್ ಮಾಡುತ್ತಾ ಸಾಗಿದ್ದಾರೆ. ಯುವತಿ ಮುಂಭಾಗದಲ್ಲಿ ಕುಳಿತಿದ್ದರೆ, ಯುವಕ ಹಿಂಬದಿ ಸವಾರನಾಗಿ ಕುಳಿತಿದ್ದಾನೆ. ಯುವತಿ ತನ್ನ ಎರಡೂ ಕೈಗಳನ್ನು ಬಿಟ್ಟು ನಮಸ್ಕರಿಸುತ್ತಾ ಸಾಗಿದ್ದಾಳೆ. ಇಷ್ಟೇ ಅಲ್ಲ ಈ ವೇಳೆ ಕಣ್ಣು ಮುಚ್ಚಿ ಸ್ಕೂಟರ್ ರೈಡ್ ಮಾಡಿದ್ದಾರೆ.

ಜೋಡಿಯ ಅಪಾಯಕಾರಿ ಸ್ಟಂಟ್‌ಗೆ ಜನರು ಬೆಚ್ಚಿ ಬಿದ್ದಿದ್ದಾರೆ. ಇದೇ ದಾರಿಯಲ್ಲಿ ಸಾಗುತ್ತಿದ್ದ ಇತರ ಸವಾರರು ಆತಂಕಗೊಂಡಿದ್ದಾರೆ. ಈ ಜೋಡಿ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಕೇವಲ ದಂಡ ವಿಧಿಸಿದರೆ ಸಾಲದು. ಕಾರಣ ಈ ರೀತಿ ಹಲವು ದಂಡ ಪಾವತಿ ಇವರು ಮಾಡಿರುತ್ತಾರೆ. ಹೀಗಾಗಿ ಇವರ ಲೈಸೆನ್ಸ್ ಕ್ಯಾನ್ಸಲ್ ಸೇರಿದಂತೆ ಇತರ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಸಾಲು ಸಾಲು ನಿಯಮ ಉಲ್ಲಂಘನೆ

ಈ ಜೋಡಿ ಹಲವು ನಿಯಮ ಉಲ್ಲಂಘನೆ ಮಾಡಿದೆ. ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ಇದರ ಜೊತೆಗೆ ಇಬ್ಬರೂ ಹೆಲ್ಮೆಟ್ ಧರಿಸಿಲ್ಲ. ಸಿಟಿ ರಸ್ತೆಯ ನಿಗದಿತ ಮಿತಿಗಿಂತ ವೇಗವಾಗಿ ಸ್ಕೂಟರ್ ಚಲಾಯಿಸಿದ್ದಾರೆ. ಹೀಗಾ ಸಾಲು ಸಾಲು ನಿಯಮವನ್ನು ಈ ಜೋಡಿ ಉಲ್ಲಂಘಿಸಿದೆ.

ನಗರದಲ್ಲಿ ಸ್ಟಂಟ್, ವ್ಹೀಲಿಂಗ್ ಪ್ರಮಾಣ ಹೆಚ್ಚಾಗುತ್ತಿದೆ. ಪೊಲೀಸರು ಕ್ರಮ ಕೈಗೊಂಡರೂ ಪ್ರತಿ ದಿನ ಈ ರೀತಿ ಪ್ರಕರಣ ಬೆಳಕಿಗೆ ಬರುತ್ತಿದೆ. ಇದೀಗ ಈ ಸ್ಟಂಟ್ ಮಾಡಿದ ಜೋಡಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಂಕಷ್ಟ ಹೆಚ್ಚಾಗಿದೆ. ಈ ಜೋಡಿ ವಿರುದ್ದ ಪ್ರಕರಣ ದಾಖಲಾಗಲಿದೆ. ಇಷ್ಟೇ ಅಲ್ಲ ನಿಯಮ ಉಲ್ಲಂಘನೆ ಶಿಕ್ಷೆ ಎದುರಿಸಬೇಕಿದೆ.