ಆಸೀಸ್ ಬೆಂಕಿಯ ಕರಾಳ ದರ್ಶನ: ಮತ್ತೆ ಬದಲಾಗಲಿದೆಯೇ ಭೂಮಿಯ ಚಹರೆ?
ಕಾಂಗರೂ ನಾಡು ಆಸ್ಪ್ರೇಲಿಯಾದಲ್ಲಿ ಉಂಟಾಗಿರುವ ಕಾಳ್ಗಿಚ್ಚಿಗೆ ಇಡೀ ಜಗತ್ತೇ ಆತಂಕ ವ್ಯಕ್ತಪಡಿಸುತ್ತಿದೆ. ಇದರಿಂದ ಲಕ್ಷಾಂತರ ಎಕರೆ ಕಾಡು ನಾಶವಾಗಿರುವುದರ ಜೊತೆಗೆ ಜೀವವೈವಿಧ್ಯವನ್ನೇ ಈ ಅಗ್ನಿಯು ಆಹುತಿ ಪಡೆದಿದೆ. ಈ ಹಿನ್ನೆಲೆಯಲ್ಲಿ, ಹಿಂದೊಮ್ಮೆ ಭೂಮಂಡಲದ ಜೀವ ಲಕ್ಷಣವನ್ನೇ ಬದಲಿಸಿದ್ದ ಕಾಳ್ಗಿಚ್ಚು ಈಗ ಮತ್ತೊಮ್ಮೆ ಅಂಥದ್ದೇ ವಿದ್ಯಮಾನ ಮರುಕಳಿಸುವಂತೆ ಮಾಡುತ್ತದೆಯೇ ಎಂಬ ಅನುಮಾನವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಈ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ.
50 ಡಿಗ್ರಿಯತ್ತ ಸಾಗುತ್ತಿದೆ ಆಸ್ಪ್ರೇಲಿಯಾ ತಾಪಮಾನ
ಕಳೆದ ಕೆಲವು ತಿಂಗಳಿನಿಂದ ಆಸ್ಪ್ರೇಲಿಯಾದ ದಕ್ಷಿಣ ಕರಾವಳಿಯ ನ್ಯೂಸೌತ್‌ವೇಲ್ಸ್ ಹಾಗೂ ಕ್ವೀನ್ಸ್‌ಲ್ಯಾಂಡ್ ಸಮೀಪದ ಕಾಡು ಹೊತ್ತಿ ಉರಿಯುತ್ತಿದೆ. ಈವರೆಗೆ 27 ಲಕ್ಷ ಹೆಕ್ಟೇರ್ ಕಾಡು ನಾಶವಾಗಿದ್ದು, 24 ಮಂದಿಯನ್ನು ಬೆಂಕಿ ಬಲಿ ತೆಗೆದುಕೊಂಡಿದೆ. ಸಾವಿರಾರು ಮಂದಿ ತಮ್ಮ ಮನೆಗಳನ್ನು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ಧಾವಿಸಿದ್ದಾರೆ. 1588 ಮನೆಗಳು ಬೆಂಕಿಗೆ ಸಿಲುಕಿ ಭಸ್ಮವಾಗಿದ್ದರೆ, 653 ಮನೆಗಳು ಹಾನಿಯಾಗಿವೆ.
ಒಟ್ಟಾರೆ ಈವರೆಗೆ 70 ಕೋಟಿ ಆಸ್ಪ್ರೇಲಿಯನ್ ಡಾಲರ್‌ನಷ್ಟುನಷ್ಟಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. ನ್ಯೂಸೌತ್‌ವೇಲ್ಸ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಜನರು ಅನ್ನ, ಆಹಾರಕ್ಕೂ ಪರದಾಡುವ ಪರಿಸ್ಥಿತಿ ಉಂಟಾಗಿದೆ. ವಿಶ್ವದ ದೊಡ್ಡ ರಾಷ್ಟ್ರಗಳಲ್ಲಿ ಒಂದೆನಿಸಿಕೊಂಡಿರುವ ಆಸ್ಪ್ರೇಲಿಯಾದಲ್ಲಿ ಕುಡಿಯುವ ನೀರಿಗೂ ತೀವ್ರ ಅಭಾವ ಉಂಟಾಗಿದೆ. ಭೀಕರವಾದ ಬಿಸಿಗಾಳಿಯ ಅಪಾಯಕ್ಕೆ ದೇಶ ಸಿಲುಕಿದೆ. ದೇಶದ ಗರಿಷ್ಠ ತಾಪಮಾನವು 50 ಡಿಗ್ರಿ ಸೆಲ್ಸಿಯಸ್ ತಲುಪುವ ದಿನಗಳು ದೂರವಿಲ್ಲ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
ಶೇನ್ ವಾರ್ನ್ ‘ಬ್ಯಾಗಿ ಗ್ರೀನ್’ ಕ್ಯಾಪ್‌ಗೆ ಸಿಕ್ಕಾಪಟ್ಟೆ ಬೇಡಿಕೆ!
ಕಾಳ್ಗಿಚ್ಚಿಗೆ 100 ಕೋಟಿಗೂ ಹೆಚ್ಚು ಪ್ರಾಣಿಗಳ ಬಲಿ!
ಆಸ್ಪ್ರೇಲಿಯಾ ಕಾಳ್ಗಿಚ್ಚಿನ ಫೋಟೋಗಳು ಎಲ್ಲೆಡೆ ಹರಿಡಾಡುತ್ತಿವೆ. ಪ್ರಾಣಿಪಕ್ಷಿಗಳು ಪ್ರಾಣ ಉಳಿಸಿಕೊಳ್ಳಲು ಹರಸಾಹಸಪಡುತ್ತಿರುವ ಮತ್ತು ಸುಟ್ಟು ಕರಕಲಾಗಿರುವ ಫೋಟೋಗಳು ಎಲ್ಲರ ಮನಕಲಕುವಂತಿವೆ. ಅಂದಾಜಿನ ಪ್ರಕಾರ ಈಗಾಗಲೇ ಸುಮಾರು 100 ಕೋಟಿಗೂ ಹೆಚ್ಚು ಪ್ರಾಣಿಗಳು ಬೆಂಕಿಯಲ್ಲಿ ಸಿಲುಕಿ ಮೃತಪಟ್ಟಿರಬಹುದೆಂದು ಎನ್ನಲಾಗುತ್ತಿದೆ. ಅಸಂಖ್ಯಾತ ಜೀವವೈವಿಧ್ಯಗಳಿರುವ ಕಾಂಗರೂ ನಾಡು ಆಸ್ಪ್ರೇಲಿಯಾದಲ್ಲಿ ಲೆಕ್ಕಾಚಾರವೊಂದರ ಪ್ರಕಾರ ಪ್ರತಿ 10,000 ಚದರ ಮೀಟರ್ ಪ್ರದೇಶದಲ್ಲಿ ಸರಾಸರಿ 17.5 ಸಸ್ತನಿಗಳು, 20.7 ಪಕ್ಷಿಗಳು ಮತ್ತು 129.5 ಸರೀಸೃಪಗಳು ಜೀವಿಸುತ್ತಿವೆ. ಈ ಲೆಕ್ಕಾಚಾರದ ಪ್ರಕಾರ 100 ಕೋಟಿಗೂ ಹೆಚ್ಚು ಪ್ರಾಣಿಗಳು ಅಗ್ನಿಗೆ ಆಹುತಿಯಾಗಿರಬಹುದೆಂದು ಅಂದಾಜಿಸಲಾಗಿದೆ.
25 ಕೋಟಿ ಟನ್ ಇಂಗಾಲದ ಡೈ ಆಕ್ಸೈಡ್ ವಾತಾವರಣಕ್ಕೆ
ಕಾಳ್ಗಿಚ್ಚು ಹರಡಿದಾಗ ಆ ಬೆಂಕಿಯಿಂದ ಅಪಾರ ಪ್ರಮಾಣದ ಹೊಗೆ ಉತ್ಪತ್ತಿಯಾಗುತ್ತದೆ. ಆಗ ವಿಪರೀತ ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ವಾತಾವರಣವನ್ನು ಸೇರುತ್ತದೆ. ಅಂದಾಜೊಂದರ ಪ್ರಕಾರ ಆಸ್ಪ್ರೇಲಿಯಾ ಕಾಳ್ಗಿಚ್ಚಿನಿಂದ ಈಗಾಗಲೇ 25 ಕೋಟಿ ಟನ್ ಇಂಗಾಲದ ಡೈ ಆಕ್ಸೈಡ್ ವಾತಾವರಣವನ್ನು ಸೇರಿದೆ. ಇದು 2018ರಲ್ಲಿ ಆಸ್ಪ್ರೇಲಿಯಾದಲ್ಲಿ ಉತ್ಪಾದನೆಯಾದ ಒಟ್ಟು ಇಂಗಾಲದ ಡೈ ಆಕ್ಸೈಡ್‌ನ ಅರ್ಧದಷ್ಟಾಗುತ್ತದೆ. ವಾತಾವರಣಕ್ಕೆ ಬಿಡುಗಡೆಯಾಗುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣವನ್ನು ಹೀರಿ ವಾತಾವರಣವನ್ನು ಶುದ್ಧಗೊಳಿಸಬೇಕಾದ ಮರಗಳೇ ಹೀಗೆ ಅಗ್ನಿಗೆ ಆಹುತಿಯಾಗುತ್ತಿರುವುದು ಮಹಾ ದುರಂತವೊಂದರ ಮುನ್ನಡಿ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಆಸ್ಪ್ರೇಲಿಯಾದಲ್ಲಿ ಕಾಳ್ಗಿಚ್ಚು ಹೆಚ್ಚು, ಏಕೆ?
ಆಸ್ಪ್ರೇಲಿಯಾದಲ್ಲಿ ಕಾಡಿಗೆ ಬೆಂಕಿ ಬೀಳುವುದು ಹೊಸತಲ್ಲ. ಚಳಿಗಾಲ ಮತ್ತು ಬೇಸಿಗೆಯಲ್ಲಿ ಕಾಳ್ಗಿಚ್ಚು ಅಲ್ಲಿ ಮಾಮೂಲು. ಕೆಲವೊಮ್ಮೆ ನೈಸರ್ಗಿಕ ಕಾರಣಗಳಿಂದ (ಸಿಡಿಲು ಇತರೆ ಕಾರಣ) ಬೆಂಕಿ ಹೊತ್ತಿಕೊಂಡರೆ, ಕೆಲವೊಮ್ಮೆ ಮಾನವನ ಹಸ್ತಕ್ಷೇಪದಿಂದಲೂ ಕಾಡಿಗೆ ಬೆಂಕಿ ಹೊತ್ತಿಕೊಂಡ ಉದಾಹರಣೆ ಇದೆ. ಆದರೆ ಈ ಬಾರಿಯ ಬೆಂಕಿಯ ತೀವ್ರತೆ ಇಡೀ ಜಗತ್ತನ್ನು ಆತಂಕಕ್ಕೆ ತಳ್ಳಿದೆ. ಅದಕ್ಕೆ ಹವಾಮಾನ ವೈಪರೀತ್ಯವೇ ಕಾರಣ ಎನ್ನಲಾಗುತ್ತಿದೆ. ಏಕೆಂದರೆ ಈ ಬಾರಿ ಆಸ್ಪ್ರೇಲಿಯಾದಲ್ಲಿ ದಾಖಲೆ ಪ್ರಮಾಣದ ಉಷ್ಣಾಂಶ ದಾಖಲಾಗಿತ್ತು. 120 ವರ್ಷದ ನಂತರ ಇಷ್ಟೊಂದು ಉಷ್ಣಾಂಶ ದಾಖಲಾಗಿದ್ದು ಇದೇ ಮೊದಲ ಬಾರಿಗೆ. ಅಲ್ಲದೆ 1920ರಿಂದೀಚೆಗೆ ಆಸ್ಪ್ರೇಲಿಯಾದ ತಾಪಮಾನ ಸುಮಾರು 1 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ. ಹಾಗಾಗಿ ಜಾಗತಿಕ ತಾಪಮಾನ ಏರಿಕೆಯೇ ಆಸ್ಪ್ರೇಲಿಯಾದ ಈ ಮಹಾ ದುರಂತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಹೀಗಿದ್ದ ಆಸಿಸ್ ಹೀಗಾಯ್ತು: ಕಾಡ್ಗಿಚ್ಚಿಗೆ ಬದುಕೇ ಸರ್ವನಾಶವಾಯ್ತು!
ಜೀವ ವೈವಿಧ್ಯತೆಯನ್ನೇ ನುಂಗಿಹಾಕಿದ ಬೆಂಕಿ
ಆಸ್ಪ್ರೇಲಿಯಾದ ಮಹಾ ದುರಂತ ಎಂದೇ ಪರಿಗಣಿಸಲಾಗುತ್ತಿರುವ ಈ ಕಾಳ್ಗಿಚ್ಚು ದೇಶಕ್ಕೆ ಬರೀ ಆರ್ಥಿಕ ನಷ್ಟಮಾತ್ರವಲ್ಲ, ಅಲ್ಲಿನ ಜೀವವೈವಿಧ್ಯತೆಯನ್ನೇ ನುಂಗಿಹಾಕಿದೆ. ವಿಜ್ಞಾನಿಗಳು ಇದನ್ನು ಪ್ರಾಣಿಗಳು ಮತ್ತು ಸಸ್ಯ ಪ್ರಭೇದದ ದುರಂತ ಅವನತಿ ಎಂದೇ ಕರೆದಿದ್ದಾರೆ. ಎಕೆಂದರೆ ಅತಿಹೆಚ್ಚು ಜೀವವೈವಿಧ್ಯಗಳಿರುವ ವಿಶ್ವದ 17 ರಾಷ್ಟ್ರಗಳ ಪೈಕಿ ಆಸ್ಪ್ರೇಲಿಯಾ ಮೊದಲ ಸ್ಥಾನ ಪಡೆದಿದೆ. ಈಗಿನ ಕಾಳ್ಗಿಚ್ಚಿಗೆ ಜೀವವೈವಿಧ್ಯದ ಹೆಚ್ಚು ಭಾಗ ಆಹುತಿಯಾಗಿದೆ.
ಗೋಂಡ್ವಾನಾ ಮಳೆಕಾಡು ಹಾಗೂ ನ್ಯೂಸೌತ್‌ವೇಲ್ಸ್ ಮತ್ತು ಕ್ವೀನ್ಸ್ ಲ್ಯಾಂಡ್‌ಗಳ ಕಾಡು ಅತಿ ಹೆಚ್ಚು ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಅಪರೂಪದ ಜೀವಿಗಳು ಮತ್ತು ಕೀಟಗಳನ್ನು ಹೊಂದಿರುವ ಈ ಕಾಡುಗಳು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕಾಳ್ಗಿಚ್ಚಿನಲ್ಲಿ ಸಾವಿರಾರು ವರ್ಷಗಳಿಂದ ಇದ್ದ ಕಾಡು ಭಸ್ಮವಾಗಿವೆ. ವರದಿಯೊಂದರ ಪ್ರಕಾರ ಡೈನೋಸಾರ್‌ಗಳ ಯುಗದಿಂದಲೂ ಇರುವ ಗೊಂಡ್ವಾನ ಮೀಸಲು ಅರಣ್ಯಗಳಲ್ಲಿ 48% ಕಾಡು ನಾಶವಾಗಿದೆ. ಸಿಡ್ನಿಯ ರಾಯಲ್ ಬೊಟಾನಿಕಾಲ್ ಗಾರ್ಡನ್‌ನಲ್ಲಿ ಇದ್ದ ಸುಮಾರು 30 ಅತಿ ಅಪರೂಪದ ಪ್ರಾಣಿಗಳು, 30 ಅಪರೂಪದ ಸಸ್ಯ ಪ್ರಭೇದಗಳೂ ನಾಶವಾಗಿವೆ.
ಡೈನೋಸಾರ್‌ಗಳು ನಶಿಸಿದ್ದು ಇಂಥದ್ದೇ ಕಾಳ್ಗಿಚ್ಚಿನಿಂದ
ಕಾಳ್ಗಿಚ್ಚು ಹಿಂದೊಮ್ಮೆ ಭೂಮಂಡಲದ ಜೀವಲಕ್ಷಣವನ್ನೇ ಬದಲಿಸಿತ್ತು ಎನ್ನುವುದಕ್ಕೆ ಹಲವು ಸಾಕ್ಷ್ಯಗಳಿವೆ. ಸುಮಾರು 6.6 ಕೋಟಿ ವರ್ಷಗಳ ಹಿಂದೆ ಡೈನೋಸಾರೋಸ್‌ಗಳ ಸಾಮೂಹಿಕ ಅಳಿವು ಅದಕ್ಕೆ ಉತ್ತಮ ನಿದರ್ಶನ. ಕ್ರಿಟೇಷಿಯಸ್-ಪ್ಯಾಲಿಯೋಜೀನ್ ಘಟನೆ ಭೂಮಂಡಲದ 75% ಜಾತಿಯ ಜೀವವೈವಿಧ್ಯವನ್ನೇ ನಾಶಪಡಿಸಿತ್ತು. ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ಉಂಟಾಗುತ್ತಿರುವ ಕಾಳ್ಗಿಚ್ಚು ಭೂಮಂಡಲದ ಜೀವವೈವಿಧ್ಯದ ಅವನತಿಯ ಮತ್ತೊಂದು ವಿಧಾನ ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಿದ್ದಾರೆ.
ಫೈರ್ ಫೈಟರ್ ಅಪ್ಪನ ಫೋಟೋ ಶೇರ್ ಮಾಡಿದ ಮಗಳು: ನೆಟ್ಟಿಗರು ಭಾವುಕ!
ಸರೀಸೃಪಗಳು, ಸಸ್ತನಿಗಳು ಬಹುಬೇಗ ಅಗ್ನಿಗೆ ಸಿಲುಕುತ್ತವೆ
ಭೂಮಿಯ ಮೇಲೆ ವಾಸಿಸುವ ಜೀವಿಗಳು, ಅದರಲ್ಲೂ ಸರೀಸೃಪಗಳು, ಪಕ್ಷಿಗಳು ಮತ್ತು ಸಸ್ತನಿಗಳು ಕಾಳ್ಗಿಚ್ಚಿನ ವೇಳೆ ಬಹುಬೇಗ ಆಹುತಿಯಾಗುತ್ತವೆ. ಆದರೆ ನೀರಿನಲ್ಲಿ ವಾಸಿಸುವ ಅಥವಾ ಭಾಗಶಃ ನೀರಿನಲ್ಲಿ ವಾಸಿಸುವ ಜೀವಿಗಳು ನೀರಿನಾಳದಲ್ಲಿ ಅಡಗಿಕೊಳ್ಳುವ ಮೂಲಕ ಅಲ್ಪಮಟ್ಟಿಗೆ ಪಾರಾಗುತ್ತವೆ. ಸರೀಸೃಪಗಳಲ್ಲಿ ಮೊಸಳೆಗಳು ಮತ್ತು ಸಿಹಿ ನೀರಿನಲ್ಲಿ ವಾಸಿಸುವ ಆಮೆಗಳು ಹೇಗೋ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ. ಹಾಗೆಯೇ ಹಲ್ಲಿ-ಹುಳುಗಳು, ಬಿಲಗಳಲ್ಲಿ ವಾಸಿಸುವ ಹಾವುಗಳು ಬದುಕುಳಿಯುತ್ತವೆ. ಆದರೆ ಮೇಲ್ಮೈನಲ್ಲಿ ವಾಸಿಸುವ ಜೀವಿಗಳು ಅಗ್ನಿಯ ಕೆನ್ನಾಲಿಗೆಗೆ ಬಹುಬೇಗ ಸಿಲುಕುತ್ತವೆ.
ಇನ್ನು ಪಕ್ಷಿಗಳು ಇಂಥ ಪರಿಸ್ಥಿತಿಯಲ್ಲಿ ಬದುಕುಳಿದೇ ಉಳಿಯುತ್ತವೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಈಗಾಗಲೇ ಅನೇಕ ಪಕ್ಷಿಗಳು ಅಳಿವಿನಂಚಿಗೆ ಸರಿದಿವೆ. ಮಾನವನಿಂದಾಗಿ ಭೂಮಂಡಲದ ಅರ್ಧಕ್ಕರ್ಧ ಕಾಡು ಈಗಾಗಲೇ ನಾಶವಾಗಿದೆ. ಈಗ ಈ ಕಾಳ್ಗಿಚ್ಚು ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಮತ್ತೆ ಮತ್ತೆ ಬಲಿತೆಗೆದುಕೊಳ್ಳುತ್ತಿದೆ. ಅದರ ಜೊತೆಗೆ ಮಾಲಿನ್ಯ, ಹವಾಮಾನ ಬದಲಾವಣೆ, ಮಾನವನ ಹಸ್ತಕ್ಷೇಪ ಏಕಕಾಲದಲ್ಲಿ ವಿಶೇಷ ಪ್ರಭೇದಗಳಿಗೆ ಕಂಟಕವಾಗಿ ಮಾರ್ಪಡುತ್ತಿದೆ.
ಆಸ್ಟ್ರೇಲಿಯಾ ಕಾಡ್ಗಿಚ್ಚು ನಿಯಂತ್ರಣಕ್ಕೆ 1 ಮಿಲಿಯನ್ ನೀಡಿದ ನಟ!
ಜಾಗತಿಕ ಇತಿಹಾಸದ ಅತಿ ಭೀಕರ ಕಾಳ್ಗಿಚ್ಚುಗಳು
ಚೀನಾ
1987ರಲ್ಲಿ ಚೀನಾದ ಬ್ಲಾಕ್ ಡ್ರಾಗನ್ ಕಾಳ್ಗಿಚ್ಚಿನಲ್ಲಿ ಅಮುರ್ ನದಿ ತೀರದ ಸುಮಾರು 72,884 ಚದರ ಕಿಲೋಮೀಟರ್ ಕಾಡು ಅಗ್ನಿಗೆ ಆಹುತಿಯಾಗಿತ್ತು.
ಇಂಡೋನೇಷ್ಯಾ
1997ರಲ್ಲಿ ಇಂಡೋನೇಷ್ಯಾ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡು 37,000 ಚದರ ಕಿಲೋಮೀಟರ್ ಅರಣ್ಯ ಪ್ರದೇಶ ನಾಶವಾಗಿತ್ತು. ಆಗ 2.6 ಗಿಗಾ ಟನ್‌ಗಳಷ್ಟುಇಂಗಾಲದ ಡೈ ಆಕ್ಸೈಡ್ ವಾತಾವರಣ ಸೇರಿತ್ತು.
ಜಪಾನ್
1971ರ ಏಪ್ರಿಲ್‌ನಲ್ಲಿ ಜಪಾನ್‌ನ ಕುರೆ ಮತು ಪಶ್ಚಿಮ ಹೊನ್ಷೂ ಪ್ರದೇಶದಲ್ಲಿ ಬೆಂಕಿ ಬಿದ್ದು 840 ಎಕರೆ ಕಾಡು ಭಸ್ಮವಾಗಿತ್ತು.
ಭಾರತ
2016ರಲ್ಲಿ ಉತ್ತರಾಖಂಡದಲ್ಲಿ ಕಾಳ್ಗಿಚ್ಚು ಆವರಿಸಿ 3,500 ಹೆಕ್ಟೇರ್ ಅರಣ್ಯ ಪ್ರದೇಶ ನಾಶವಾಗಿತ್ತು. ಅಲ್ಲದೆ 2019ರಲ್ಲಿ ಕರ್ನಾಟಕದ ಬಂಡೀಪುರ ರಕ್ಷಿತಾರಣ್ಯದಲ್ಲಿ ಕಾಳ್ಗಿಚ್ಚು ಆವರಿಸಿ ಅಂದಾಜು 10,920 ಎಕರೆ ಅರಣ್ಯ ಪ್ರದೇಶವನ್ನು ಆಹುತಿ ತೆಗೆದುಕೊಂಡಿತ್ತು.
ಅಮೆರಿಕ
ಕ್ಯಾಲಿಫೋರ್ನಿಯಾ ರಾಜ್ಯ ಸರಣಿ ಕಾಳ್ಗಿಚ್ಚು ಪ್ರಕರಣಗಳಿಗೆ ಸಾಕ್ಷಿಯಾಗಿದೆ. 2003ರಲ್ಲಿ ಕಾಳ್ಗಿಚ್ಚು ಉಂಟಾಗಿ ಇಲ್ಲಿ 91,281 ಎಕರೆ ಅರಣ್ಯ ಪ್ರದೇಶ ನಾಶವಾಗಿತ್ತು. ಅದೇ ವರ್ಷ ಮತ್ತೊಮ್ಮೆ ಬೆಂಕಿ ಬಿದ್ದು 2,73,246 ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ಹೀಗೆ 2007 ಮತ್ತು 2013ರಲ್ಲಿಯೂ ಕಾಳ್ಗಿಚ್ಚು ಉಂಟಾಗಿತ್ತು. ಅಲ್ಲದೆ ಇತ್ತೀಚೆಗೆ 2018ರಲ್ಲಿ ಮತ್ತೊಮ್ಮೆ ಕಾಳ್ಗಿಚ್ಚು ಉಂಟಾಗಿ ಲಕ್ಷಾಂತರ ಎಕರೆ ಅರಣ್ಯ ಭೂಮಿ ನಾಶವಾಗಿತ್ತು.
ಬ್ರೆಜಿಲ್
2019ರಲ್ಲಿ ಅಮೆಜಾನ್ ಮಳೆ ಕಾಡುಗಳಿಗೆ ಬೆಂಕಿ ಬಿದ್ದು ಜಗತ್ತಿಗೆ ಆಮ್ಲಜನಕವನ್ನು ಒದಗಿಸುವ ಲಕ್ಷಾಂತರ ಎಕರೆ ಕಾಡು ನಾಶವಾಗಿತ್ತು. 1970ರ ದಶಕದಿಂದಲೂ ಅಮೆಜಾನ್ ಕಾಡುಗಳಲ್ಲಿ ಕಾಳ್ಗಿಚ್ಚು ಕಂಡುಬರುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾನವನ ಹಸ್ತಕ್ಷೇತ್ರ, ಹವಾಮಾನ ಬದಲಾವಣೆಯ ಕಾರಣ ಕಾಳ್ಗಿಚ್ಚು ಪ್ರಮಾಣ ಏರಿಕೆಯಾಗುತ್ತಿದೆ.
ಸಿಡ್ನಿಯ ತಾಪಮಾನ ವಿಶ್ವದಲ್ಲೇ ಅಧಿಕ!
ಅತಿಹೆಚ್ಚು ಜೀವವೈವಿಧ್ಯತೆ ಹೊಂದಿರುವ 17ರಾಷ್ಟ್ರಗಳು
* ಆಸ್ಪ್ರೇಲಿಯಾ
* ಕಾಂಗೋ ಗಣರಾಜ್ಯ
* ಮಡಗಾಸ್ಕರ್
* ದಕ್ಷಿಣ ಆಫ್ರಿಕಾ
* ಚೀನಾ
* ಭಾರತ
* ಇಂಡೋನೇಷ್ಯಾ
* ಮಲೇಷ್ಯಾ
* ಪಪುವಾ ನ್ಯೂ ಗಿನಿಯಾ
* ಫಿಲಿಪ್ಪೀನ್ಸ್
* ಬ್ರೆಜಿಲ್
* ಕೊಲಂಬಿಯಾ
* ಈಕ್ವೆಡಾರ್
* ಮೆಕ್ಸಿಕೊ
* ಪೆರು
* ಅಮೆರಿಕ
* ವೆನಿಜುವೆಲಾ
ಭಾರತ ಪ್ರವಾಸ ರದ್ದುಗೊಳಿಸಿದ ಆಸಿಸ್ ಪ್ರಧಾನಿ?: ಕಾರಣ ಏನು?