ಭಲೇ ಚಂದ್ರಯಾನ: ಸೌರಜ್ವಾಲೆ ಗುರುತಿಸಿದ ಭಾರತದ ಮಾನ!
ಚಂದ್ರಯಾನ-2 ನೌಕೆಯಿಂದ ಅಪರೂಪದ ಆವಿಷ್ಕಾರ| ಸೌರಜ್ವಾಲೆ ಗುರುತಿಸಿದ ಚಂದ್ರಯಾನ-2 ನೌಕೆ| ಸೂರ್ಯನಿಂದ ಹೊರ ದೂಡಲ್ಪಟ್ಟ ಸೌರ ಜ್ವಾಲೆಗಳ ವಿಕಿರಣ ಸೆರೆ| ಚಂದ್ರಯಾನ-2 ನೌಕೆಯ ಎಕ್ಸ್ ರೇ ಮಾನಿಟರ್(XSM)ನಲ್ಲಿ ಸೆರೆಯಾದ ಸೌರಜ್ವಾಲೆ| ಸೌರ ಜ್ಚಾಲೆಗಳಿಂದ ಉತ್ಪತ್ತಿಯಾಗುವ ಎಕ್ಸ್ ರೇ ಕಿರಣಗಳ ಅಧ್ಯಯನ|
ಬೆಂಗಳೂರು(ಅ.11): ಅಂತರೀಕ್ಷ ಯೋಜನೆಗಳೇ ಹಾಗೆ. ಅದರಲ್ಲಿ ಸಫಲತೆ ಹಾಗೂ ವಿಫಲತೆ ನಡುವೆ ತೆಳುವಾದ ಗೆರೆ ಇರುತ್ತದೆ. ಹೀಗಾಗಿ ನಿರ್ದಿಷ್ಟ ಅಂತರೀಕ್ಷ ಯೋಜನೆ ಯಶಸ್ವಿಯಾಯಿತೋ ಅಥವಾ ಇಲ್ಲವೋ ಎಂಬುದನ್ನು ಹೇಳುವುದು ಕಷ್ಟ.
ಅದರಂತೆ ನಮ್ಮ ಇಸ್ರೋ ಉಡಾಯಿಸಿದ್ದ ಚಂದ್ರಯಾನ-2 ನೌಕೆಯ ವಿಕ್ರಮ್ ಲ್ಯಾಂಡರ್ ಚಂದ್ರನ ನೆಲ ಸ್ಪರ್ಶಿಸುವ ವೇಳೆ ಸಂಪರ್ಕ ಕಡಿದುಕೊಂಡಿದ್ದು, ಯೋಜನೆ ತಾಂತ್ರಿಕವಾಗಿ ವಿಫಲ ಎಂದೇ ಉಲ್ಲೇಖಿಸಲಾಗಿದೆ.
ಆದರೆ ಇನ್ನೂ ಚಂದ್ರನನ್ನು ಸುತ್ತುತ್ತಿರುವ ಚಂದ್ರಯಾನ-2 ನೌಕೆ ಮಾತ್ರ ತನ್ನ ಕರ್ತವ್ಯವನ್ನು ಮುಂದುವರೆಸಿದ್ದು, ಚಂದ್ರನ ಕುರಿತು ಅಗತ್ಯ ಮಾಹಿತಿಗಳನ್ನು ಇಸ್ರೋ ಕೇಂದ್ರಕ್ಕೆ ರವಾನಿಸುತ್ತಲೇ ಇದೆ.
ಈ ಮಧ್ಯೆ ಚಂದ್ರಯಾನ-2 ನೌಕೆ ಸೌರಜ್ವಾಲೆಗಳನ್ನು ಗುರುತಿಸಿದ್ದು, 24 ಗಂಟೆಗಳ ಅವಧಿಯಲ್ಲಿ ಸೂರ್ಯನಿಂದ ಹೊರ ದೂಡಲ್ಪಟ್ಟ ಸೌರಜ್ವಾಲೆಗಳನ್ನು ಚಂದ್ರಯಾನ-2 ನೌಕೆ ಸೆರೆ ಹಿಡಿದಿದೆ.
ಸೌರಜ್ವಾಲೆಗಳನ್ನು ಹೊರಸೂಸುವ ವೇಳೆ ಹರಡುವ ವಿಕಿರಣಗಳನ್ನು ಚಂದ್ರಯಾನ-2 ನೌಕೆಯ ಸೋಲಾರ್ ಎಕ್ಸ್ ರೇ ಮಾನಿಟರ್(XSM) ಸೆರೆ ಹಿಡಿದಿದ್ದು, ಇದರಿಂದ ಸೂರ್ಯ ವಿಕಿರಣಗಳ ಕುರಿತು ಅಧ್ಯಯನ ನಡೆಸಲು ಅನುಕೂಲವಾಗಲಿದೆ ಎನ್ನಲಾಗಿದೆ.
ಸೂರ್ಯನಿಂದ ಹೊರ ದೂಡಲ್ಪಟ್ಟ ಸೌರ ಜ್ವಾಲೆಗಳ ವಿಕಿರಣ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವ ಸಮಯದಲ್ಲಿ ಚಂದ್ರಯಾನ-2 ನೌಕೆಯ XSM ಅದನ್ನು ಸೆರೆ ಹಿಡಯುತ್ತದೆ ಎಂದು ಇಸ್ರೋ ತಿಳಿಸಿದೆ.
ಇದೇ ವೇಳೆ ಸೌರ ಜ್ಚಾಲೆಗಳಿಂದ ಉತ್ಪತ್ತಿಯಾಗುವ ಎಕ್ಸ್ ರೇ ಕಿರಣಗಳು ಚಂದ್ರನ ನೆಲ ಸ್ಪರ್ಶಿಸುವ ವೇಳೆ ಉಂಟಾಗುವ ರಾಸಾಯನಿಕ ಪ್ರಕ್ರಿಯೆ ಕುರಿತು ನೌಕೆ ಅಧ್ಯಯನ ನಡೆಸಲಿದೆ.
ಚಂದ್ರನ ಸುತ್ತುತ್ತಿರುವ ಇಸ್ರೋದ ಚಂದ್ರಯಾನ-2 ನೌಕೆ ಚಂದ್ರನಲ್ಲಿರುವ ಖನಿಜಗಳನ್ನು ಪತ್ತೆ ಮಾಡಿದ್ದು, ಚಂದರನ ಕುರಿತಾದ ಭವಿಸ್ಯದ ಅಧ್ಯಯನಕ್ಕಾಗಿ ಅಗತ್ಯ ಮಾಹಿತಿ ರವಾನಿಸುತ್ತಿದೆ ಎಂದು ಇಸ್ರೋ ಸ್ಪಷ್ಟಪಡಿಸಿದೆ.