ಕನ್ನಡಿಗ ಎಂಪಿ ಗಣೇಶ್ ಸೇರಿದಂತೆ 8 ಕ್ರೀಡಾ ಸಾಧಕರಿಗೆ ಪದ್ಮ ಪ್ರಶಸ್ತಿ!
ಭಾರತದ ಪ್ರತಿಷ್ಠಿತ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಪ್ರಕಟವಾಗಿದೆ. ಈ ಬಾರಿ ಕ್ರೀಡಾ ಕ್ಷೇತ್ರದ 8 ಸಾಧಕರಿಗೆ 2ನೇ ಅತ್ಯುನ್ನತ ಪ್ರಸಸ್ತಿಗೆ ಪಾತ್ರರಾಗಿದ್ದಾರೆ. ಕರ್ನಾಟಕದ ಎಂಪಿ ಗಣೇಶ್, ಬ್ಯಾಡ್ಮಿಂಟನ್ ತಾರೆ ಪಿವಿ ಸಿಂದು ಸೇರಿದಂತೆ ಪ್ರಶಸ್ತಿಗೆ ಭಾಜನರಾದ ಕ್ರೀಡಾ ಸಾಧಕರ ವಿವರ ಇಲ್ಲಿದೆ.
ನವದೆಹಲಿ(ಜ.25): ಪ್ರಸಕ್ತ ಸಾಲಿನ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಪ್ರಕಟಗೊಂಡಿದೆ. ಮಾಜಿ ಹಾಕಿ ಪಟು, ಕರ್ನಾಟಕದ ಎಂಪಿ ಗಣೇಶ್ ಸೇರಿದಂತೆ 8 ಕ್ರೀಡಾ ಸಾಧಕರಿಗೆ ಕೇಂದ್ರ ಸರ್ಕಾರ ಪ್ರತಿಷ್ಠಿತ ಪ್ರಶಸ್ತಿ ನೀಡಿದೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜಹೀರ್ ಖಾನ್, ಮಹಿಳಾ ಫುಟ್ಬಾಲ್ ಪಟು ಬೆಂಬೆಂ ದೇವಿ ಸೇರಿದಂತೆ ಒಟ್ಟು 8 ಸಾಧಕರಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ.
ಇದನ್ನೂ ಓದಿ: 2020ರ ಪದ್ಮ ಪ್ರಶಸ್ತಿ ಪ್ರಕಟ: ಇಲ್ಲಿದೆ ಸಾಧಕರ ಪಟ್ಟಿ!
ಪದ್ಮಶ್ರೀ ಪ್ರಶಸ್ತಿ
ಜಹೀರ್ ಖಾನ್
ಒಯಿನಂ ಬೆಂಬೆಂ ದೇವಿ
ಎಂ.ಪಿ ಗಣೇಶ್
ಜಿತು ರೈ
ತರುಣ್ ದೀಪ್ ರೈ
ರಾಣಿ ರಾಂಪಾಲ್
ಇದನ್ನೂ ಓದಿ: ಪೇಜಾವರ ಶ್ರೀಗೆ ಪದ್ಮವಿಭೂಣ, ಕರುನಾಡಿನ ಇತರೆ 7 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ
ಟೀಂ ಇಂಡಿಯಾದ ಮಾಜಿ ಹಾಕಿ ಪಟು ಹಾಗೂ ಕೋಚ್ ಎಂಪಿ ಗಣೇಶ್‌ಗೆ(73) ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ. ಮೂಲತಃ ಕೊಡಗಿನವರಾದ ಎಂಪಿ ಗಣೇಶ್ 1973ರಲ್ಲಿ ಅರ್ಜುನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಭಾರತ ಮಹಿಳಾ ಫುಟ್ಬಾಲ್ ಪಟು, ಮಣಿಪುರದ ಒಯಿನಂ ಬೆಂಬೆಂ ದೇವಿಗೆ(39) ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ. 2017ರಲ್ಲಿ ಅರ್ಜುನ ಪ್ರಶಸ್ತಿ ಪಡೆದಿರುವ ದೇವಿ ಭಾರತೀಯ ಫುಟ್ಬಾಲ್‌ನ ದುರ್ಗಾ ಎಂದೇ ಕರೆಯಲಾಗುತ್ತದೆ.
ಇದನ್ನೂ ಓದಿ:ಕನ್ನಡಪ್ರಭ-ಸುವರ್ಣ ನ್ಯೂಸ್ ವರ್ಷದ ವ್ಯಕ್ತಿಗೆ ಪದ್ಮಶ್ರೀ ಪ್ರಶಸ್ತಿ.
2011ರ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜಹೀರ್ ಖಾನ್(41)ಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ. 2011ರಲ್ಲಿ ಅರ್ಜುನ ಪ್ರಶಸ್ತಿ ಪಡೆದಿರುವ ಜಹೀರ್ ಖಾನ್, ಭಾರತ ಕಂಡ ಅತ್ಯಂತ ಶ್ರೇಷ್ಠ ವೇಗಿಯಾಗಿದ್ದಾರೆ.
ಭಾರತೀಯ ಶೂಟರ್ ಜಿತು ರೈ, 10 ಮೀಟರ್ ಏರ್ ಪಿಸ್ತೂಲ್ ಹಾಗೂ 50 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಕಾಮನ್ ವೆಲ್ತ್, ಏಷ್ಯನ್ ಗೇಮ್ಸ್, ಶೂಟಿಂಗ್ ವಿಶ್ವಕಪ್ ಕೂಟದಲ್ಲಿ ಚಿನ್ನದ ಪದಕ ಗೆದ್ದ ಜಿತು ರೈಗೆ ಪದ್ಮಶ್ರಿ ಪ್ರಶಸ್ತಿ ಪ್ರಕಟಿಸಲಾಗಿದೆ.
ಸಿಕ್ಕಿಂ ಮೂಲದ ಆರ್ಚರಿ ಪಟು ತರುಣ್‌ದೀಪ್ ರೈಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ. 2005ರಲ್ಲಿ ತರುಣ್‌ದೀಪ್ ರೈ ಅರ್ಜುನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
15ನೇ ವಯಸ್ಸಿಗೆ ಭಾರತ ಮಹಿಳಾ ಹಾಕಿ ತಂಡಕ್ಕೆ ಆಯ್ಕೆಯಾದ ಪ್ರತಿಭಾವಂತ ಹಾಕಿ ಪಟು ರಾಣಿ ರಾಂಪಾಲ್‌ಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ. 25 ವರ್ಷದ ರಾಣಿ ರಾಂಪಾಲ್ 212 ಅಂತಾರಾಷ್ಟ್ರೀಯ ಹಾಕಿ ಪಂದ್ಯದಲ್ಲಿ 134 ಗೋಲು ಸಿಡಿಸಿದ್ದಾರೆ.
ಪದ್ಮವಿಭೂಷಣ
ಭಾರತದ ಮಹಿಳಾ ಬಾಕ್ಸರ್ ಮೇರಿ ಕೋಮ್(36ಗೆ ಪದ್ಮ ವಿಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ. 5 ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಪಟ್ಟ ಗೆದ್ದಿರುವ ಮೇರಿ ಕೋಮ್, 2016ರಲ್ಲಿ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. 2006ರಲ್ಲಿ ಪದ್ಮಶ್ರೀ ಹಾಗೂ 2013ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಪಡೆದಿದ್ದಾರೆ.
ಪದ್ಮ ಭೂಷಣ
2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗೆ ಪದ್ಮಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ. 2019ರಲ್ಲಿ ವಿಶ್ವ ಚಾಂಪಿಯನ್ ಪಟ್ಟ ಗೆಲ್ಲೋ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಡ್ಮಿಂಟನ್ ತಾರೆ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.