Asianet Suvarna News Asianet Suvarna News

Ticket Fight: ಮಂಡ್ಯ ಜಿಲ್ಲೆ ಹಳೆ ಹುಲಿಗಳಿಗೆ ಹೊಸ ಕಲಿಗಳ ಟಕ್ಕರ್‌

ಮಂಡ್ಯ ಜಿಲ್ಲೆ ರಾಜಕೀಯವಾಗಿ ಸಿರಿವಂತಿಕೆ, ಹೋರಾಟದ ಗಟ್ಟಿತನವನ್ನು ಹೊಂದಿದೆ. ಎಸ್‌.ಎಂ.ಕೃಷ್ಣ, ಎಚ್‌.ಕೆ.ವೀರಣ್ಣಗೌಡ, ಕೆ.ವಿ.ಶಂಕರಗೌಡ, ಜಿ.ಮಾದೇಗೌಡ, ಎಚ್‌.ಡಿ.ಚೌಡಯ್ಯ, ಎಸ್‌.ಡಿ.ಜಯರಾಂ ಸೇರಿದಂತೆ ಅನೇಕ ರಾಜಕೀಯ ನಾಯಕರ ಜನ್ಮಭೂಮಿ. 

Ticket Fight At Mandya District gvd
Author
First Published Nov 21, 2022, 5:03 AM IST

ಮಂಡ್ಯ ಮಂಜುನಾಥ

ಮಂಡ್ಯ (ನ.21): ಮಂಡ್ಯ ಜಿಲ್ಲೆ ರಾಜಕೀಯವಾಗಿ ಸಿರಿವಂತಿಕೆ, ಹೋರಾಟದ ಗಟ್ಟಿತನವನ್ನು ಹೊಂದಿದೆ. ಎಸ್‌.ಎಂ.ಕೃಷ್ಣ, ಎಚ್‌.ಕೆ.ವೀರಣ್ಣಗೌಡ, ಕೆ.ವಿ.ಶಂಕರಗೌಡ, ಜಿ.ಮಾದೇಗೌಡ, ಎಚ್‌.ಡಿ.ಚೌಡಯ್ಯ, ಎಸ್‌.ಡಿ.ಜಯರಾಂ ಸೇರಿದಂತೆ ಅನೇಕ ರಾಜಕೀಯ ನಾಯಕರ ಜನ್ಮಭೂಮಿ. ಹಲವಾರು ದಶಕಗಳಿಂದ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಾಂಪ್ರದಾಯಿಕ ಎದುರಾಳಿಗಳಾಗಿ ಹೋರಾಟ ನಡೆಸಿಕೊಂಡು ಬಂದಿವೆ. ಜಿಲ್ಲೆಯ ಚುನಾವಣಾ ಇತಿಹಾಸದಲ್ಲಿ ಒಮ್ಮೆಯೂ ಗೆಲುವಿನ ಸವಿ ಅನುಭವಿಸದಿದ್ದ ಬಿಜೆಪಿ 2019ರಲ್ಲಿ ನಡೆದ ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಖಾತೆ ತೆರೆಯುವ ಮೂಲಕ ಅಚ್ಚರಿ ಮೂಡಿಸಿದೆ. 

ಹಾಗಾಗಿ 2023ರ ಚುನಾವಣೆಯಲ್ಲಿ ಜಿಲ್ಲೆಯ ಕೆಲ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಸದ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಆರು ಜೆಡಿಎಸ್‌ ವಶದಲ್ಲಿದ್ದರೆ, ಒಂದು ಮಾತ್ರ ಬಿಜೆಪಿ ತೆಕ್ಕೆಯಲ್ಲಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಯಾರ ಮತಗಳನ್ನು ಕಸಿಯಲಿದೆ ಎನ್ನುವ ಕುತೂಹಲ ಕೆರಳಿಸಿದೆ. ಜತೆಗೆ ಪಕ್ಷೇತರರಾಗಿರುವ ಹಾಲಿ ಸಂಸದೆ ಸುಮಲತಾ ಅಂಬರೀಷ್‌ ಅವರ ನಡೆ ಏನಾಗಬಹುದು ಎಂಬುದೂ ವಿಧಾನಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

1.ಮಂಡ್ಯ: ಟಿಕೆಟ್‌ಗೆ ಭಾರಿ ಪೈಪೋಟಿ
ಒಂದು ಕಾಲದಲ್ಲಿ ಕಾಂಗ್ರೆಸ್‌ ಅಧಿಪತ್ಯವಿದ್ದ ಈ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಮೇಲುಗೈ ಸಾಧಿಸಿದೆ. ಎಂ.ಶ್ರೀನಿವಾಸ್‌ ಶಾಸಕರು. 2004, 2008 ಮತ್ತು 2018ರಲ್ಲಿ ಗೆಲುವು ಸಾಧಿಸಿದ್ದಾರೆ. 1989 ಹಾಗೂ 1999ರಲ್ಲಿ ಶಾಸಕರಾಗಿದ್ದ ಎಂ.ಎಸ್‌.ಆತ್ಮಾನಂದ ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ. 2023ರ ಚುನಾವಣೆಗೆ ಕಾಂಗ್ರೆಸ್‌ ಪಕ್ಷದಿಂದ ಹೆಚ್ಚಿನ ಆಕಾಂಕ್ಷಿಗಳಿದ್ದಾರೆ. ಆದರೆ, ರವಿಕುಮಾರ್‌ ಗಣಿಗ, ಡಾ.ಎಚ್‌.ಕೃಷ್ಣ, ಕೆ.ಕೆ.ರಾಧಾಕೃಷ್ಣ ರೇಸ್‌ನಲ್ಲಿರುವ ಪ್ರಮುಖರು. ಕೆ.ಕೆ.ರಾಧಾಕೃಷ್ಣ ಅವರು ಈ ಮೊದಲು ಜೆಡಿಎಸ್‌ನಲ್ಲಿದ್ದರು. ಕಳೆದ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ ವಂಚಿತರಾಗಿದ್ದರು. ಈಗ ಕಾಂಗ್ರೆಸ್‌ ಪಕ್ಷವನ್ನು ಸೇರದಿದ್ದರೂ ಪಕ್ಷದ ಕಾರ್ಯಕ್ರಮಗಳಲ್ಲಿ ಅಧಿಕೃತವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರ ಕಾಂಗ್ರೆಸ್‌ ಸೇರ್ಪಡೆ ಖಚಿತವಾಗಿದೆ. ಜೆಡಿಎಸ್‌ನಲ್ಲಿ ಹಾಲಿ ಶಾಸಕ ಶ್ರೀನಿವಾಸ್‌, ಅವರ ಅಳಿಯ ಎಚ್‌.ಎನ್‌.ಯೋಗೇಶ್‌, ಪಿಇಟಿ ಅಧ್ಯಕ್ಷ ಕೆ.ಎಸ್‌.ವಿಜಯಾನಂದ, ಜೆಡಿಎಸ್‌ ವಕ್ತಾರ ಮಹಾಲಿಂಗೇಗೌಡ, ಬಿಜೆಪಿಯಿಂದ ಎಸ್‌.ಡಿ.ಜಯರಾಂ ಪುತ್ರ ಅಶೋಕ್‌ ಜಯರಾಂ, ಡಾ.ಲಕ್ಷ್ಮೇ ಅಶ್ವಿನ್‌ಗೌಡ, ಎಚ್‌.ಆರ್‌.ಅರವಿಂದ್‌ ಟಿಕೆಟ್‌ ಆಕಾಂಕ್ಷಿತರಾಗಿದ್ದಾರೆ. ಮಂಡ್ಯ ಕ್ಷೇತ್ರ ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರವಾಗಿದ್ದು, ಅವರೇ ನಿರ್ಣಾಯಕ. ಕಾಂಗ್ರೆಸ್‌, ಜೆಡಿಎಸ್‌ ನೇರ ಪೈಪೋಟಿ ಇದೆ.

ತಾಕತ್ತಿದ್ದರೆ ಬನ್ನಿ ನೋಡೋಣ, ನಾವೇನ್‌ ಬಳೆ ತೊಡ್ಕೊಂಡಿದ್ದೀವಾ: ಸಚಿವ ಶ್ರೀರಾಮುಲು

2.ಶ್ರೀರಂಗಪಟ್ಟಣ: ಬಿಜೆಪಿಯಿಂದ ‘ಕೈ’ಗೆ ನಡುಕ
ಎರಡು ಕುಟುಂಬಗಳ ನಡುವಿನ ಪ್ರತಿಷ್ಠೆಯ ಕಣ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ. ಜೆಡಿಎಸ್‌ನ ರವೀಂದ್ರ ಶ್ರೀಕಂಠಯ್ಯ ಶಾಸಕರಾಗಿದ್ದಾರೆ. ಇಲ್ಲೂ ಜೆಡಿಎಸ್‌-ಕಾಂಗ್ರೆಸ್‌ ನಡುವೆ ನೇರ ಕದನವಿದೆ. 2018ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಮೊದಲ ಬಾರಿಗೆ ರವೀಂದ್ರ ಶ್ರೀಕಂಠಯ್ಯ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಿಂದೆ ಜೆಡಿಎಸ್‌ನಿಂದ ಎರಡು ಅವಧಿಗೆ ಶಾಸಕರಾಗಿದ್ದ ರಮೇಶ್‌ ಬಂಡಿಸಿದ್ದೇಗೌಡ 2018ರಲ್ಲಿ ಕಾಂಗ್ರೆಸ್‌ನಿಂದ ಅಖಾಡ ಪ್ರವೇಶಿಸಿ ಸೋತರು. ಈಗ ಇಬ್ಬರೂ ಮತ್ತೆ ಸ್ಪರ್ಧೆಗಿಳಿಯುವುದು ನಿಶ್ಚಿತವಾಗಿದೆ. ಈ ಮಧ್ಯೆ ಜೆಡಿಎಸ್‌ನಿಂದ ತಗ್ಗಹಳ್ಳಿ ವೆಂಕಟೇಶ್‌, ಕಾಂಗ್ರೆಸ್‌ನಿಂದ ಪಾಲಹಳ್ಳಿ ಚಂದ್ರಶೇಖರ್‌, ಬಿಜೆಪಿಯಿಂದ ಎಸ್‌.ಸಚ್ಚಿದಾನಂದ ಟಿಕೆಟ್‌ ಆಕಾಂಕ್ಷಿತರಾಗಿದ್ದಾರೆ. ಕಾಂಗ್ರೆಸ್‌ನಿಂದ ರಮೇಶ್‌ ಬಂಡಿಸಿದ್ದೇಗೌಡ, ಜೆಡಿಎಸ್‌ನಿಂದ ರವೀಂದ್ರ ಶ್ರೀಕಂಠಯ್ಯ ಕಣಕ್ಕಿಳಿಯುವುದು ಖಚಿತವಾಗಿದೆ. ಇಬ್ಬರ ನಡುವೆ ಇಂಡುವಾಳು ಸಚ್ಚಿದಾನಂದ ಅಖಾಡ ಪ್ರವೇಶಿಸಿದರೆ ಅದು ನೇರವಾಗಿ ಕಾಂಗ್ರೆಸ್‌ಗೆ ಹೊಡೆತ ನೀಡಲಿದೆ. ಏಕೆಂದರೆ, ಹಿಂದೆ ಎಸ್‌.ಸಚ್ಚಿದಾನಂದ ಕಾಂಗ್ರೆಸ್‌ ಪಕ್ಷದಲ್ಲಿದ್ದ ಕಾರಣ ಆ ಪಕ್ಷದ ಮತಗಳಿಗೆ ಲಗ್ಗೆ ಇಡುವುದರಿಂದ ಕಾಂಗ್ರೆಸ್‌ಗೆ ಹಿನ್ನಡೆ ಉಂಟಾಗುವ ಸಂಭವವಿದೆ.

3.ಮದ್ದೂರು: ಹಿರಿಯ ನಾಯಕಗೆ ಹೊಸ ಎದುರಾಳಿಗಳು
ಜೆಡಿಎಸ್‌-ಕಾಂಗ್ರೆಸ್‌ ಹಣಾಹಣಿ ಇರುವ ಕ್ಷೇತ್ರ. ಹಾಲಿ ಶಾಸಕ ಜೆಡಿಎಸ್‌ನ ಡಿ.ಸಿ.ತಮ್ಮಣ್ಣ ಅವರು ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದಾರೆ. 2023ರಲ್ಲಿ ಮತ್ತೊಮ್ಮೆ ಶಾಸಕರಾಗುವ ಹಂಬಲ ಹೊತ್ತಿದ್ದಾರೆ. ಕಾಂಗ್ರೆಸ್‌ನಿಂದ ಪ್ರಬಲ ಅಭ್ಯರ್ಥಿಯ ಕೊರತೆ ಕಾಡುತ್ತಿದೆ. ಎಸ್‌.ಎಂ.ಕೃಷ್ಣ ಬಳಿಕ ಕಾಂಗ್ರೆಸ್‌ ಪಕ್ಷದಿಂದ ಗೆಲ್ಲುವ ಸಮರ್ಥ ನಾಯಕನನ್ನು ಕ್ಷೇತ್ರ ಕಾಣಲೇ ಇಲ್ಲ. 2023ರ ಚುನಾವಣೆಗೆ ಕಾಂಗ್ರೆಸ್‌ನಿಂದ ಎಸ್‌.ಎಂ.ಕೃಷ್ಣ ಸಹೋದರ ಎಸ್‌.ಎಂ.ಶಂಕರ್‌ ಪುತ್ರ ಗುರುಚರಣ್‌ರನ್ನು ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿದೆ. ಇನ್ನು ಬಿಜೆಪಿಯಿಂದ ಎಸ್‌.ಪಿ.ಸ್ವಾಮಿ ಟಿಕೆಟ್‌ ಆಕಾಂಕ್ಷಿತರಾಗಿದ್ದಾರೆ. ಸಮಾಜಸೇವಕ ಕದಲೂರು ಉದಯ್‌ ಕ್ಷೇತ್ರದೊಳಗೆ ಮಿಂಚಿನ ಸಂಚಲನ ಸೃಷ್ಟಿಸಿದ್ದಾರೆ.

4.ಮಳವಳ್ಳಿ: ಮತ್ತೆ ಹಳೆ ಎದುರಾಳಿಗಳ ಕದನ?
ಮಳವಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲೂ ಜೆಡಿಎಸ್‌-ಕಾಂಗ್ರೆಸ್‌ ನೇರ ಎದುರಾಳಿಗಳು. ಜೆಡಿಎಸ್‌ನ ಡಾ.ಕೆ.ಅನ್ನದಾನಿ ಶಾಸಕರಾಗಿದ್ದಾರೆ. ಕ್ಷೇತ್ರದಿಂದ 1983, 1985, 1994 ಹಾಗೂ 1999ರಲ್ಲಿ$ನಾಲ್ಕು ಅವಧಿಗೆ ಜನತಾದಳದಿಂದ ಶಾಸಕರಾಗಿದ್ದ ಬಿ.ಸೋಮಶೇಖರ್‌ ಈಗ ಬಿಜೆಪಿಯಲ್ಲಿದ್ದಾರೆ. 2004ರಲ್ಲಿ ಡಾ.ಕೆ.ಅನ್ನದಾನಿ ಮೊದಲ ಬಾರಿಗೆ ಶಾಸಕರಾಗಿದ್ದರು. 2008 ಪಕ್ಷೇತರರಾಗಿ ಮತ್ತು 2013ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಪಿ.ಎಂ.ನರೇಂದ್ರಸ್ವಾಮಿ ವಿಧಾನಸಭೆ ಪ್ರವೇಶಿಸಿದ್ದರು. ಮುಂಬರುವ 2023ರಲ್ಲಿ ಇಬ್ಬರ ನಡುವೆ ನೇರ ಕದನ ಏರ್ಪಡುವ ಸಾಧ್ಯತೆಯಿದೆ. ಆದರೂ, ಕಾಂಗ್ರೆಸ್‌ನಿಂದ ಒಮ್ಮೆ ಶಾಸಕರಾಗಿದ್ದ ಮಲ್ಲಾಜಮ್ಮ ಹಾಗೂ ಪಕ್ಷದ ಮುಖಂಡ ಡಾ.ಮೂರ್ತಿ ಟಿಕೆಟ್‌ ಆಕಾಂಕ್ಷಿತರಾಗಿದ್ದಾರೆ. ಕಾಂಗ್ರೆಸ್‌ನಿಂದ ಪಿ.ಎಂ.ನರೇಂದ್ರಸ್ವಾಮಿ, ಜೆಡಿಎಸ್‌ನಿಂದ ಡಾ.ಕೆ.ಅನ್ನದಾನಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.

5.ಮೇಲುಕೋಟೆ: ಕಾಂಗ್ರೆಸ್‌ ಸ್ಪರ್ಧಿಸುತ್ತಾ?
ಮೇಲುಕೋಟೆ ಜೆಡಿಎಸ್‌ ಪಾರುಪತ್ಯವಿರುವ ಕ್ಷೇತ್ರ. ಜೆಡಿಎಸ್‌ನ ಸಿ.ಎಸ್‌.ಪುಟ್ಟರಾಜು ಅಧಿಪತ್ಯವಿದೆ. 2004, 2008, 2018ರಲ್ಲಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಇತಿಹಾಸವಿದೆ. ಕಾಂಗ್ರೆಸ್‌ ಸಂಪೂರ್ಣ ಅಸ್ತಿತ್ವವನ್ನು ಕಳೆದುಕೊಂಡಿದೆ. ಮೇಲುಕೋಟೆ ಕ್ಷೇತ್ರದಲ್ಲಿ ಪುಟ್ಟಣ್ಣಯ್ಯ ಇರುವವರೆಗೂ ರೈತಸಂಘ ಪ್ರಾಬಲ್ಯವನ್ನು ಹೊಂದಿತ್ತು. ಅವರ ಅಕಾಲಿಕ ಮರಣದಿಂದ ರೈತಸಂಘ ದುರ್ಬಲವಾಗಿದೆ. ಕಾಂಗ್ರೆಸ್‌ನಿಂದ ಡಾ.ಎಚ್‌.ಎನ್‌.ರವೀಂದ್ರ ಮತ್ತು ಹೆಚ್‌.ತ್ಯಾಗರಾಜು ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಡಾ.ಇಂದ್ರೇಶ್‌ ಅಭ್ಯರ್ಥಿಯಾಗುವ ಸಂಭವವಿದೆ. ರೈತಸಂಘದಿಂದ ಕೆ.ಎಸ್‌.ಪುಟ್ಟಣ್ಣಯ್ಯನವರ ಪುತ್ರ ದರ್ಶನ್‌ ಪುಟ್ಟಣ್ಣಯ್ಯ ಕಣಕ್ಕಿಳಿಯುವ ಸಾಧ್ಯತೆಗಳಿವೆ.

6.ನಾಗಮಂಗಲ: ಕಾಂಗ್ರೆಸ್‌, ಜೆಡಿಎಸ್‌, ಎಲ್‌ಆರ್‌ಎಸ್‌
ವರ್ಣರಂಜಿತ ರಾಜಕೀಯ ಕುರುಕ್ಷೇತ್ರವೆಂದರೆ ಅದು ನಾಗಮಂಗಲ ವಿಧಾನಸಭಾ ಕ್ಷೇತ್ರ. ಜೆಡಿಎಸ್‌ನ ಕೆ.ಸುರೇಶ್‌ಗೌಡ ಶಾಸಕರಾಗಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇರುವ ಕ್ಷೇತ್ರ. 1989, 1994ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಎಲ್‌.ಆರ್‌.ಶಿವರಾಮೇಗೌಡ ನಂತರದಲ್ಲಿ ಗೆಲುವನ್ನು ಕಾಣಲಾಗಲೇ ಇಲ್ಲ. 1999ರಲ್ಲಿ ಜನತಾದಳದಿಂದ ಜಿಲ್ಲೆಯ ಏಕೈಕ ಅಭ್ಯರ್ಥಿಯಾಗಿ ಆಯ್ಕೆಯಾದ ಎನ್‌.ಚಲುವರಾಯಸ್ವಾಮಿ 2004 ಮತ್ತು 2013ರ ಚುನಾವಣೆಯಲ್ಲಿ ಮತ್ತೆ ವಿಧಾನಸಭೆ ಪ್ರವೇಶಿಸಿದರು. 2008ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಕೆ.ಸುರೇಶ್‌ಗೌಡ 2018ರ ಚುನಾವಣೆಯಲ್ಲಿ ಜೆಡಿಎಸ್‌ ಸೇರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಎನ್‌.ಚಲುವರಾಯಸ್ವಾಮಿ ಅವರನ್ನು ಸೋಲಿಸಿದರು. 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಚಲುವರಾಯಸ್ವಾಮಿ, ಜೆಡಿಎಸ್‌ನಿಂದ ಕೆ.ಸುರೇಶ್‌ಗೌಡ, ಪಕ್ಷೇತರ ಅಭ್ಯರ್ಥಿಯಾಗಿ ಎಲ್‌.ಆರ್‌.ಶಿವರಾಮೇಗೌಡ, ಹೊಸಮುಖಗಳಾಗಿ ಫೈಟರ್‌ ರವಿ, ಅನಿಕೇತನ್‌ಗೌಡ ಅವರು ಕಣ ಪ್ರವೇಶಿಸಲು ಪೂರ್ವಸಿದ್ಧತೆ ನಡೆಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ 2023: ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಘೋಷಿಸಿದ ಸಿದ್ದರಾಮಯ್ಯ

7.ಕೆ.ಆರ್‌.ಪೇಟೆ: ವದಂತಿಗಳ ಕಾರುಬಾರು
ಸರಳ, ಸಜ್ಜನಿಕೆಯ ರಾಜಕೀಯ ಕ್ಷೇತ್ರವಾಗಿದ್ದ ಕೆ.ಆರ್‌.ಪೇಟೆ ಕಳೆದ ಮೂರು ಚುನಾವಣೆಗಳಿಂದ ಪ್ರತಿಷ್ಠೆಯ ಕ್ಷೇತ್ರವಾಗಿ ಪರಿವರ್ತನೆಗೊಂಡಿದೆ. ಬಿಜೆಪಿಯ ಕೆ.ಸಿ.ನಾರಾಯಣಗೌಡ ಶಾಸಕರಾಗಿ ಸಚಿವ ಸ್ಥಾನ ಅಲಂಕರಿಸಿದ್ದಾರೆ. ಸಜ್ಜನ ರಾಜಕಾರಣಿಯಾಗಿದ್ದ ಕೆ.ಆರ್‌.ಪೇಟೆ ಕೃಷ್ಣ ಬಳಿಕ ಜೆಡಿಎಸ್‌ಗೆ ಸಮರ್ಥ ಅಭ್ಯರ್ಥಿಯ ಕೊರತೆ ಎದುರಾಗಿದೆ. ಜೆಡಿಎಸ್‌ನಿಂದ 2013, 2018ರಲ್ಲಿ ಸತತವಾಗಿ ಆಯ್ಕೆಯಾದ ನಾರಾಯಣಗೌಡ ಅವರು 2019ರಲ್ಲಿ ಜೆಡಿಎಸ್‌ ತೊರೆದು ಬಿಜೆಪಿ ಸೇರಿ ನಂತರ ನಡೆದ ಉಪಚುನಾವಣೆಯಲ್ಲಿ ಆಯ್ಕೆಯಾಗಿ ಹೊಸ ಇತಿಹಾಸ ನಿರ್ಮಿಸಿದರು. 2023ರ ಚುನಾವಣೆಯಲ್ಲಿ ಮತ್ತೊಮ್ಮೆ ಅದೃಷ್ಟಪರೀಕ್ಷೆಗಿಳಿಯಲು ನಾರಾಯಣಗೌಡರು ಸಿದ್ಧತೆ ನಡೆಸಿದ್ದಾರೆ. ಆದರೆ, ಬಿಜೆಪಿಯಿಂದಲೇ ಕ್ಷೇತ್ರವನ್ನು ಪ್ರತಿನಿಧಿಸುವರೋ ಅಥವಾ ಬೇರೊಂದು ಪಕ್ಷದಿಂದ ಕಣಕ್ಕಿಳಿಯುವರೋ ಎನ್ನುವುದು ಸ್ಪಷ್ಟವಾಗಿಲ್ಲ. ಚುನಾವಣೆ ವೇಳೆಗೆ ಅವರು ಕಾಂಗ್ರೆಸ್‌ ಸೇರಬಹುದೆಂಬ ಬಗ್ಗೆ ವದಂತಿಗಳು ಹರಡಿವೆ. ಕಾಂಗ್ರೆಸ್‌ನಿಂದ 2 ಬಾರಿ ಗೆದ್ದಿದ್ದ ಕೆ.ಬಿ.ಚಂದ್ರಶೇಖರ್‌, ಒಮ್ಮೆ ಶಾಸಕರಾಗಿದ್ದ ಬಿ.ಪ್ರಕಾಶ್‌ ಬಿ-ಫಾರಂಗೆ ಅರ್ಜಿ ಸಲ್ಲಿಸಿದ್ದಾರೆ. ವಿಜಯ್‌ರಾಮೇಗೌಡ, ಎಂ.ಡಿ.ಕೃಷ್ಣಮೂರ್ತಿ, ಕಿಕ್ಕೇರಿ ಸುರೇಶ್‌ ಹೊಸಮುಖವಾಗಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಜೆಡಿಎಸ್‌ನಿಂದ ಬಿ.ಎಲ್‌.ದೇವರಾಜು, ಎಚ್‌.ಟಿ.ಮಂಜು, ಬಸ್‌ ಸಂತೋಷ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ನಾರಾಯಣಗೌಡರು ಪಕ್ಷ ತ್ಯಜಿಸಿದರೆ ಕುರುಬ ಸಮುದಾಯದ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವ ಆಲೋಚನೆ ಬಿಜೆಪಿಗೆ ಇದೆ.

Follow Us:
Download App:
  • android
  • ios