Asianet Suvarna News Asianet Suvarna News

ನಿರ್ಲಿಪ್ತ ಊರಿನ ಅಚ್ಚರಿಯ ಮನುಷ್ಯ, ನಾಗೇಶ ಹೆಗಡೆ ಕುರಿತು ಹೀಗೊಂದು ನುಡಿನಮನ

ನೀಲಿ ಪಟ್ಟೆಲುಂಗಿ ಉಟ್ಟು, ಟೀಶರ್ಟ್‌ ಹಾಕಿಕೊಂಡು ಆವತ್ತೊಬ್ಬರು ಶಾಲೆಗೆ ಬಂದಿದ್ದರು. ಇಪ್ಪತ್ತೆಂಟು ವರ್ಷದ ಹಿಂದಿನ ಕತೆಯಿದು. ಹಳ್ಳಿಯ ಸರ್ಕಾರಿ ಶಾಲೆ. 

Kannada journalist Nagesh hegde 75 years birth anniversary note by mahabala seethalabhavi vcs
Author
Bangalore, First Published Mar 20, 2022, 9:06 AM IST

ಮಹಾಬಲ ಸೀತಾಳಭಾವಿ

ನಾನಾಗ ಮೂರನೇ ಕ್ಲಾಸು. ಶಾಲೆಗೆ ಮಾಸ್ತರ್‌ ಬಿಟ್ಟು ಇನ್ನಾರೇ ದೊಡ್ಡವರು ಬಂದರೂ ಅದು ಇನ್‌ಸ್ಪೆಕ್ಟರೆಂದೇ ಲೆಕ್ಕ. ಆದರೆ, ಈ ಇನ್‌ಸ್ಪೆಕ್ಟರ್‌ ಲುಂಗಿ ಉಟ್ಟಿದ್ದಾರೆ! ಸೀದಾ ನಮ್ಮ ಕ್ಲಾಸಿಗೇ ಬಂದರು. ಯಾಕೆಂದರೆ ಆ ಕ್ಲಾಸಿನಲ್ಲಿ ಮಾಸ್ತರ್‌ ಇರಲಿಲ್ಲ. ಐವರು ಶಿಕ್ಷಕರ ಜಾಗದಲ್ಲಿ ಇಬ್ಬರು ಶಿಕ್ಷಕರಷ್ಟೇ ಇದ್ದ ಶಾಲೆಯದು. ‘ಲುಂಗಿ ಇನ್‌ಸ್ಪೆಕ್ಟರ್‌’ ತಮ್ಮನ್ನು ಪರಿಚಯ ಮಾಡಿಕೊಳ್ಳುವ ಗೊಡವೆಗೆಲ್ಲ ಹೋಗದೆ ನಮಗೆ ಕತೆ ಹೇಳಲು ಪ್ರಾರಂಭಿಸಿದರು. ಅವರ ಮಾತಿನ ಧಾಟಿ ನಮ್ಮೂರಿನದ್ದಾಗಿರಲಿಲ್ಲ.

ನಮಗೆ ಗೊತ್ತಿಲ್ಲದಿದ್ದ ಬಿದಿರಕ್ಕಿಯ ಬಗ್ಗೆ ಹೇಳಿದರು. ಹಕ್ಕಿಗಳು ಯಾಕೆ ಹಾರುವಾಗ ಕೆಳಕ್ಕೆ ಬೀಳೋದಿಲ್ಲ ಅಂತ ಹೇಳಿದರು. ವಿದ್ಯುತ್‌ ಎಲ್ಲಿಂದ ಬರುತ್ತದೆ ಅಂತ ಹೇಳಿದರು. ಎಲ್ಲಕ್ಕಿಂತ ಜಾಸ್ತಿ ಕಾಡಿನ ಕತೆಗಳನ್ನು ಹೇಳಿದರು. ಕಾಡಿನ ಮಧ್ಯೆಯೇ ಇರುವ ನಮಗೆ ಎಲ್ಲಿಂದಲೋ ಬಂದ ಈ ವ್ಯಕ್ತಿ ಕಾಡಿನ ಬಗ್ಗೆ ನಮಗೇ ಗೊತ್ತಿಲ್ಲದ ಏನೇನೋ ವಿಚಾರ ಹೇಳುತ್ತಿದ್ದಾರಲ್ಲ ಎಂದು ಆಶ್ಚರ್ಯ, ಜೊತೆಗೆ ಗುಮಾನಿ. ನಂತರ ಪರಿಚಯ ಮಾಡಿಕೊಳ್ಳಲು ಅವರೇ ಮರೆತರೋ ಅಥವಾ ಗದ್ದಲದಲ್ಲಿ ನಾವೇ ಕೇಳಿಸಿಕೊಳ್ಳಲಿಲ್ಲವೋ ಗೊತ್ತಿಲ್ಲ. ಹಾಗೇ ಹೊರಟುಹೋದರು. ನೀವ್ಯಾರ್ರೀ ಎಂದು ನಾವಾದರೂ ಹೇಗೆ ಕೇಳುವುದು! ಇನ್‌ಸ್ಪೆಕ್ಟರ್‌ ಅಲ್ಲ ಎಂಬುದು ಇನ್ನೂ ಖಾತ್ರಿಯಾಗಿರಲಿಲ್ಲ.

ನಂತರ ಶಾಲೆ ಮುಗಿಸಿ ಮನೆಗೆ ಬರುವಾಗ ಅದೇ ವ್ಯಕ್ತಿ ಬಕ್ಕೇಮನೆಯ ಕಾಂಪೋಸ್ಟ್‌ ಗುಂಡಿಯ ಪಕ್ಕ ಕನ್ನಡಕ ಹಾಕಿಕೊಂಡು ಗುಲಗಂಜಿ ಗಿಡ ನೋಡುತ್ತಿದ್ದರು. ಆಗ ಗೊತ್ತಾಗಿದ್ದು ಅವರು ನಮ್ಮೂರಿನದೇ ವ್ಯಕ್ತಿ ನಾಗೇಶ ಹೆಗಡೆ ಎಂದು. ರಜೆಯಲ್ಲಿ ಊರಿಗೆ ಬಂದಿದ್ದರು. ನಾನು ಹುಟ್ಟುವುದಕ್ಕಿಂತ ಮೊದಲೇ ಅವರು ಊರು ಬಿಟ್ಟಿದ್ದರಿಂದ ಮತ್ತು ಆವರೆಗೆ ಅವರು ಪದೇಪದೇ ಊರಿಗೆ ಬರುತ್ತಿರಲಿಲ್ಲವಾದ್ದರಿಂದ ಸಹಜವಾಗೇ ನನಗೆ ಪರಿಚಯ ಇರಲಿಲ್ಲ.

ಟಿ ಎಸ್‌ ಛಾಯಾಪತಿ ಎಂಬ ಸ್ನೇಹಶೀಲ ಪ್ರಕಾಶಕ!

ನಂತರ ಅವರು ವರ್ಷಕ್ಕೊಂದೆರಡು ಬಾರಿ ಊರಿಗೆ ಬರುವುದು, ಬಂದಾಗಲೆಲ್ಲ ಶಾಲೆಗೆ ಬಂದು ಪರಿಸರ, ವಿಜ್ಞಾನದ ಕತೆಗಳನ್ನು ಹೇಳುವುದು, ನಮ್ಮ ಮನೆಗೆ ಬಂದು ಕವಳ ಹಾಕಿ ಪಟ್ಟಾಂಗ ಹೊಡೆಯುವುದು ಸಾಮಾನ್ಯವಾಯಿತು. ನಂತರ ಈ ವ್ಯಕ್ತಿ ಯಾವ ಊರಿಗೆ ಹೋದರೂ ಹೀಗೆ ಶಾಲೆಗಳಿಗೆ ನುಗ್ಗಿ ಮಕ್ಕಳಿಗೆ ಕತೆ ಹೇಳುತ್ತಾರೆಂಬ ವಿಷಯ ತಿಳಿಯಿತು.

ಸಣ್ಣ ಊರು ಅದು. ಇಪ್ಪತ್ತೈದು ಮೂವತ್ತು ಮನೆಗಳು. ಅವೂ ಅಲ್ಲೊಂದು ಇಲ್ಲೊಂದು, ಕೂಗಳತೆ, ಕಣ್ಣಳತೆ, ಕಾಲಳತೆ ದೂರದಲ್ಲಿ. ಆ ಊರಿನ ಜಗತ್ತೂ ಅಷ್ಟೇ ಸಣ್ಣದು. ಒಂದು ದೇವಸ್ಥಾನ, ಒಂದು ಶಾಲೆ, ಅಡಿಕೆ ತೋಟ ಮಾಡಿಕೊಂಡು, ಅದೇ ಅಡಿಕೆಯ ಕವಳ ಜಗಿಯುತ್ತಾ ತಮ್ಮ ಪಾಡಿಗಿರುವ ಜನ, ರಸ್ತೆಯೆಂದು ಸಂಶಯಿಸಬಹುದಾದ ಬೇಸಿಗೆಯ ದಾರಿ, ಮಳೆಗಾಲದಲ್ಲಿ ಬಹುತೇಕ ಹೊರಜಗತ್ತಿನ ಸಂಪರ್ಕ ಕಡಿದುಕೊಳ್ಳುವ ಜನಜೀವನ, ಮೂರು ಕಿಲೋಮೀಟರ್‌ ದೂರದಲ್ಲಿ ಯಾವಾಗಲೋ ಒಮ್ಮೆ ಬರುವ ಬಸ್ಸು... ಆ ಬಸ್ಸು ಹತ್ತಿ ತೀರಾ ದೂರ ಹೋದವರು ಯಾರೂ ಇಲ್ಲ. ಬಹುಶಃ ನಾಗೇಶ ಹೆಗಡೆ ಮೊದಲಿಗರು. ಅವರು ತುಂಬಾ ದೂರ ಹೋಗಿಬಿಟ್ಟಿದ್ದರು.

ಕಾಡಿನ ದೇವರು ಈ ಕಾಲದ ಜನಾರ್ದನ ಹೇಗಾದ ಎಂಬುದೇ ಕಾನನ ಜನಾರ್ದನ

ನಮ್ಮೂರಿಗೆ ಆಗ ನ್ಯೂಸ್‌ ಪೇಪರ್‌ ಬರುತ್ತಿದ್ದುದೇ ಮೂರ್ನಾಲ್ಕು ದಿನಕ್ಕೊಮ್ಮೆ. ಎಲ್ಲಾ ದಿನಗಳ ಪೇಪರ್‌ಗಳೂ ಒಟ್ಟಿಗೇ ಬರುತ್ತಿದ್ದವು. ಟೀವಿ ಇನ್ನೂ ಬಂದಿರಲಿಲ್ಲ. ಆ ಪೇಪರ್‌ಗಳಲ್ಲಿ ಒಂದೊಂದನ್ನು ಒಂದೊಂದು ಮನೆಯವರು ಓದುತ್ತಿದ್ದರು. ಹೀಗಾಗಿ ಪೂರ್ಣ ಸುದ್ದಿ ಯಾರೊಬ್ಬರಿಗೂ ಗೊತ್ತಿರುತ್ತಿರಲಿಲ್ಲ. ಅದೂ ಇದೂ ನೆಪದಲ್ಲಿ ಜೊತೆಗೆ ಸೇರಿ ಮಾತನಾಡಿದಾಗಲೇ ಸುದ್ದಿಗಳ ಸರ್ಕಲ್‌ ಪೂರ್ಣವಾಗುತ್ತಿತ್ತು. ಅಂತಹ ಊರಿಗೆ ಬರುತ್ತಿದ್ದ ಏಕೈಕ ಪತ್ರಿಕೆಯಾದ ಪ್ರಜಾವಾಣಿಯಲ್ಲೇ ನಾಗೇಶ ಹೆಗಡೆ ಕೆಲಸ ಮಾಡುತ್ತಿದ್ದಾರೆಂಬುದು ಆಮೇಲೆ ಗೊತ್ತಾಯಿತು. ಅವರಿಗೆ ಪತ್ರಕರ್ತ ಎನ್ನುತ್ತಾರೆಂಬ ವಿಚಾರ ಕೂಡ ನನಗೆ ತಿಳಿಯಿತು.

ಸುತ್ತ ಕಾಡು, ಮಧ್ಯೆ ಅಡಿಕೆ ತೋಟಗಳು, ಹಳೆಯ ಕಾಲದ ಜಂತಿ ಮನೆಗಳು, ಯಾವುದೇ ಸಂಪರ್ಕ ಸಾಧನಗಳಿಲ್ಲ, ಆ ಕಾಲದಲ್ಲಿ ಹೊರಜಗತ್ತಿಗಿಂತ ಕಡಿಮೆಯೆಂದರೂ ಇಪ್ಪತ್ತು ವರ್ಷ ಹಿಂದುಳಿದಿದ್ದ ಊರು. ಪ್ರಧಾನ ಮಂತ್ರಿ ಸತ್ತಿದ್ದೂ ಒಂದು ದಿನ ತಡವಾಗಿ ತಿಳಿಯುತ್ತಿದ್ದ ಮತ್ತು ಅವರು ಬಾಂಬ್‌ ಸ್ಫೋಟದಲ್ಲಿ ಸತ್ತರಂತೆ ಎಂಬುದನ್ನು ಕೇಳಿಯೂ ಆಶ್ಚರ್ಯಗೊಳ್ಳದ ನಿರ್ಲಿಪ್ತ ಜನರ ಪರಿಸರದಲ್ಲಿ ಶಾಲೆ, ಹೈಸ್ಕೂಲು ಮುಗಿಸಿ, ಕೆಲ ವರ್ಷಗಳ ಕಾಲ ಎಲ್ಲಿಗೆ ಹೋದರೆಂಬುದು ಯಾರಿಗೂ ತಿಳಿಯದೆ, ಕೊನೆಗೆ ಪಿಎಚ್‌ಡಿಯೆಲ್ಲಾ ಮಾಡಿ, ವಿಜ್ಞಾನಿಯಾಗಿ, ಆ ಭಾಗದಲ್ಲಿ ಯಾರೂ ಓದಿರದಿದ್ದಷ್ಟುಓದಿ, ನಮ್ಮೂರಿನವರು ಕೇಳಿಯೇ ಇರದಿದ್ದ ದೇಶಗಳನ್ನೆಲ್ಲಾ ಸುತ್ತಿ, ಅಲ್ಲೇ ಎಲ್ಲೋ ಮದುವೆಯನ್ನೂ ಆಗಿ, ಅದರ ಬಗ್ಗೆ ಪುಸ್ತಕವನ್ನೇ ಬರೆದು, ಒಂದು ಶುಭ ಮುಹೂರ್ತದಲ್ಲಿ ಊರಿನ ಸಂಪರ್ಕಕ್ಕೆ ಮತ್ತೆ ಬಂದಿದ್ದರು ನಾಗೇಶ ಹೆಗಡೆ.

ನಂತರ ಅವರ ಜೊತೆಗೆ ಗಗನಸಖಿ ಪತ್ನಿ ಊರಿಗೆ ಬಂದರು. ಗ್ರಾಮೀಣ ಪರಿಸರದ ಬಗ್ಗೆ ಅಪಾರ ಕುತೂಹಲವಿದ್ದ ನಮ್ಮ ವಯಸ್ಸಿನ ಮಗ ಬರತೊಡಗಿದ. ಅವನಿಗೆ ಕಾಡು ನೋಡುವ ಹುಚ್ಚು. ಅಪ್ಪನೂ ಊರಿಗೆ ಬಂದಾಗ ಕಾಡು ಸುತ್ತುವವರೇ ಆದರೂ, ಅಪ್ಪನ ಜೊತೆ ಕಾಡಿಗೆ ಹೋದರೆ ಪಾಠವನ್ನೂ ಕೇಳಬೇಕು. ಹೀಗಾಗಿ ಅವನು ನಮ್ಮನ್ನೆಲ್ಲಾ ಕಟ್ಟಿಕೊಂಡು ಬೆಟ್ಟಗುಡ್ಡ ಹತ್ತುತ್ತಿದ್ದ. ನಿಮಗ್ಯಾರಿಗೂ ಗೊತ್ತಿಲ್ಲದ ಜಾತಿಯ ನೇರಳೆ ಹಣ್ಣು ತೋರಿಸುತ್ತೇನೆ ಬನ್ನಿ ಎಂದು ಪುಸಲಾಯಿಸುತ್ತಿದ್ದ. ನಾವು ಅವನ ಬೆಂಗಳೂರಿನ ಶೂ ಹಿಂದೆ ಹೆಜ್ಜೆ ಹಾಕುತ್ತಿದ್ದೆವು.

ಶ್‌! ಇದು ‘ಸೃಷ್ಟಿ’ಯ ಸಮಯ: ಡಾ ಕೆ.ಎಸ್‌ ಪವಿತ್ರ ಮಾತು

ಕ್ರಮೇಣ ನಾಗೇಶ ಹೆಗಡೆಯವರ ಊರಿನ ಒಡನಾಟ ಜಾಸ್ತಿಯಾಯಿತು. ಅವರ ಬಗ್ಗೆ ಊರಿಗೆ ಹೆಚ್ಚೆಚ್ಚು ತಿಳಿಯತೊಡಗಿತು. ಕೈಗಾ ಅಣುಸ್ಥಾವರದ ವಿರುದ್ಧ ಹೋರಾಟ ಸಂಘಟಿಸಲು ಆಗಾಗ ಬರತೊಡಗಿದರು. ಬೇಡ್ತಿ-ಅಘನಾಶಿನಿ ಅಣೆಕಟ್ಟೆವಿರುದ್ಧ ಹೋರಾಟ ರೂಪಿಸಲು ಬಂದರು. ಪಶ್ಚಿಮ ಘಟ್ಟದ ದಟ್ಟಕಾಡಿನ ನಡುವೆಯಿರುವ ಊರಿನಿಂದ ಬಂದ, ಪರಿಸರದ ಬಗ್ಗೆ ಆ ಕಾಲದಲ್ಲೇ ಅಪಾರ ಕಾಳಜಿ ಹೊಂದಿದ್ದ ಮನೆಯಲ್ಲಿ ಹುಟ್ಟಿದ ಅವರು ಪರಿಸರ ಹೋರಾಟಗಾರನಾಗಿದ್ದು ನಮಗೆ ಅಚ್ಚರಿಯಲ್ಲ. ಆದರೆ, ಉನ್ನತ ವಿದ್ಯಾಭ್ಯಾಸದ ಗಂಧವೇ ಇಲ್ಲದಿದ್ದ ಊರಿನಿಂದ ಬರಿಗೈಲಿ ಹೋಗಿ ಇನ್ನಾವುದೋ ರಾಜ್ಯದಲ್ಲಿರುವ ಐಐಟಿಯಂತಹ ಶಿಕ್ಷಣ ಸಂಸ್ಥೆಯಲ್ಲಿ ಓದಿ, ಮತ್ತೆಲ್ಲೋ ಸಂಶೋಧನೆ ಮಾಡಿ, ಇನ್ನೆಲ್ಲೋ ಪಾಠ ಮಾಡಿ, ಕೊನೆಗೆ ಕನ್ನಡದಲ್ಲಿ ಪತ್ರಕರ್ತನಾಗಿ ನೆಲೆಗೊಂಡ ರೀತಿ ಮತ್ತು ಅದರ ವ್ಯಾಪ್ತಿ ಮೀರಿ ಮಾಡಿದ ಸಾಧನೆ ಆ ಊರಿಗೆ ಇವತ್ತಿಗೂ ಅಚ್ಚರಿಯೇ. ಇಷ್ಟೆಲ್ಲ ಆಗಿಯೂ ಊರಿಗೆ ಬಂದಾಗ ಜೇನು ಹುಡುಕುವ, ಕಸಿ ಕಟ್ಟುವ, ಗುದ್ದಲಿ ಕಾವು ಕೆತ್ತಿಕೊಂಡು ಬೆಂಗಳೂರಿಗೆ ಒಯ್ಯುವ, ಅಪ್ಪ-ಅಮ್ಮನ ಶ್ರಾದ್ಧಕ್ಕೆ ಮರೆಯದೇ ಬರುವ, ಐವತ್ತು-ಅರವತ್ತು ವರ್ಷದ ಹಿಂದೆ ತನ್ನ ಜೊತೆ ಶಾಲೆಗೆ ಹೋಗಿದ್ದವರನ್ನೆಲ್ಲ ಹುಡುಕಿಕೊಂಡು ಹೋಗಿ ಮಾತನಾಡಿಸುವ, ಹೊಸ ಹುಡುಗರನ್ನು ತಾನೇ ಕರೆದು ಪರಿಚಯ ಮಾಡಿಕೊಳ್ಳುವ ಅವರು ಸುಲಭಕ್ಕೆ ಅರ್ಥವಾಗುವುದಿಲ್ಲ.

ನಾಗೇಶ ಹೆಗಡೆಯವರದು ಗಿಡ್ಡ ತಳಿ. ಅವರ ಅಣ್ಣ ತಮ್ಮಂದಿರು, ಅಕ್ಕ ತಂಗಿಯರೆಲ್ಲ ಅವರಷ್ಟೇ ಎತ್ತರದವರು. ಅವರಷ್ಟೇ ಮೆತ್ತಗೆ ಮಾತನಾಡುವವರು. ದಣಿವರಿಯದ ದುಡಿಮೆಗಾರರು. ಎಲ್ಲರೂ ಬದುಕಿನ ಬಗ್ಗೆ ಅಪಾರ ಪ್ರೀತಿ, ಉತ್ಸಾಹ ಹೊಂದಿರುವವರು. ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧಕರು. ವೈಜ್ಞಾನಿಕ ಮನೋಭಾವದವರು. ವೈಚಾರಿಕತೆಯಿಂದ ಹಿಡಿದು ಆಧುನಿಕತೆಯವರೆಗೆ ಎಲ್ಲರದರಲ್ಲೂ ತಮ್ಮೂರಿನವರಿಗಿಂತ ಇಪ್ಪತ್ತು ವರ್ಷ ಮುಂದಿರುವವರು. ನಾಗೇಶ ಹೆಗಡೆಯವರಿಂದ ಕನ್ನಡದ ಪತ್ರಿಕೋದ್ಯಮ ಎಷ್ಟುಉಪಕೃತವಾಗಿದೆಯೋ ಬೇರೆ ಬೇರೆ ವಿಚಾರಗಳಲ್ಲಿ ಅವರ ಪರಿವಾರದಿಂದ ಊರು ಉಪಕೃತವಾಗಿದೆ.

***

ನಾನು ಓದುತ್ತಿದ್ದ ಕಾಲದಲ್ಲಿ ನಮ್ಮೂರಿನ ಏಕೈಕ ದೊಡ್ಡ ವ್ಯಕ್ತಿ ನಾಗೇಶ ಹೆಗಡೆ. ಪತ್ರಿಕೋದ್ಯಮದ ಯಾವ ಪರಿಚಯವೂ ಇಲ್ಲದೆ, ಕೇವಲ ಅವರನ್ನು ನೋಡಿ ಪ್ರಭಾವಿತನಾಗಿ ನಾನು ಮೈಸೂರಿನ ಕಾಲೇಜಿನಲ್ಲಿ ಪತ್ರಿಕೋದ್ಯಮಕ್ಕೆ ಸೇರಿಕೊಂಡಿದ್ದೆ. ಓದುತ್ತಲೇ ಅವರ ಪತ್ರಿಕೆಗೆ ಬರೆದೆ. ತಮ್ಮೂರಿನ ಹುಡುಗ ಎಂಬ ಯಾವ ರಿಯಾಯ್ತಿಯನ್ನೂ ಕೊಡದೆ ಅವರೇ ಖುದ್ದಾಗಿ ಲೇಖನಗಳನ್ನು ರಿಜೆಕ್ಟ್ ಮಾಡಿದರು. ನಂತರ ತಿದ್ದಿ ಬರೆಸಿ ಪೋ›ತ್ಸಾಹಿಸಿದರು. ಹೀಗಾಗಿ ಕಾಲೇಜಿನಲ್ಲಿ ನಾನು ಹೀರೋ ಆಗಿದ್ದೆ. ನಮ್ಮ ಲೆಕ್ಚರರ್‌ದೇ ಆವರೆಗೆ ಒಂದೂ ಲೇಖನ ಪ್ರಕಟವಾಗಿರಲಿಲ್ಲ!

ಒಂದೂವರೆ ದಶಕದ ಹಿಂದೆ ನಮ್ಮ ತಲೆಮಾರಿನ ಒಂದಿಡೀ ಯುವ-ಕನ್ನಡ ಪತ್ರಕರ್ತರ ಸಮೂಹವನ್ನು ನಾಗೇಶ ಹೆಗಡೆ ಬೆಳೆಸಿದರು. ನುಡಿಚಿತ್ರ ಶಿಬಿರಗಳಲ್ಲಿ ನಮಗೆ ಪಾಠ ಮಾಡಿದರು. ಫೋಟೋಗಳನ್ನು ಹೇಗೆ ತೆಗೆಯಬೇಕೆಂದು ಹೇಳಿದರು. ಬೆಂಗಳೂರಿನಲ್ಲಿ ಕುಳಿತು ರಾಜ್ಯದ ಯಾವ್ಯಾವುದೋ ಮೂಲೆಯಲ್ಲಿರುವ ವಿಶೇಷಗಳ ಬಗ್ಗೆ ನಮಗೆ ಹೇಳಿ ಅಲ್ಲಿಗೆ ಅಟ್ಟಿದರು. ಅಲ್ಲಿಂದ ನಾವು ತಂದ ಲೇಖನಗಳನ್ನು ಸುಂದರವಾಗಿ ಪ್ರಕಟಿಸಿದರು. ತುಂಬಾ ಬರೆಯುವವರಿಗೆ ಬೇರೆ ಬೇರೆ ಬೈಲೈನ್‌ ಕೊಟ್ಟರು. ದಿನಪತ್ರಿಕೆಗಳ ಬರಹಗಳು ನಿರ್ದಿಷ್ಟಸೂತ್ರಕ್ಕೆ ಒಳಪಟ್ಟು ಸಿದ್ಧವಾಗುತ್ತಿದ್ದ ದಿನಗಳಲ್ಲಿ ಜನರು ಕುತೂಹಲದಿಂದ ಓದುವಂತೆ ವಿಭಿನ್ನವಾಗಿ ಬರೆಯುವ ರೀತಿಯನ್ನು ತೋರಿಸಿಕೊಟ್ಟರು.

ರೇವಣ್ಣ ಮಾಳಿಗೆ ಎಂಬ ‘ಭಾಗವತರು’

ನಾಗೇಶ ಹೆಗಡೆ ಹಿರಿಯ ಪತ್ರಕರ್ತರಾದ ಮೇಲೂ ವಯಸ್ಸಾದವರಂತೆ ಬರೆಯಲಿಲ್ಲ. ಏಕೆಂದರೆ ಅವರು ವಯಸ್ಸಾದ ಪತ್ರಕರ್ತರಂತೆ ಯೋಚಿಸಲಿಲ್ಲ. ಏಕೆಂದರೆ ಅವರೊಳಗಿನ ಪತ್ರಕರ್ತನಿಗೆ ವಯಸ್ಸೇ ಆಗಲಿಲ್ಲ. ಆದರೂ ವಿಸ್ತರಣೆ ಕೇಳದೆ, ಆಫೀಸಿನವರು ಕೇಳಿದರೂ ಒಪ್ಪದೆ ನಿವೃತ್ತಿಯಾದರು. ಬೆಂಗಳೂರಿನಲ್ಲಿ ತೋಟ ಮಾಡಿದರು. ಅಲ್ಲಿ ಅಡಿಕೆ ಹೆಕ್ಕುತ್ತಲೇ ಜಾಗತಿಕ ವಿಜ್ಞಾನದ ಕುತೂಹಲಗಳನ್ನೂ ಹೆಕ್ಕಿ ‘ವಿಜ್ಞಾನ ವಿಶೇಷ’ಗಳನ್ನು ಬರೆದರು. ಚಹರೆ ಬದಲಾದ ಪತ್ರಿಕೋದ್ಯಮವನ್ನು ನೋಡಿ ಕೇವಲ ನೊಂದುಕೊಳ್ಳುತ್ತಾ ಕುಳಿತುಕೊಳ್ಳಲಿಲ್ಲ. ತಮ್ಮ ಸಂಪರ್ಕಕ್ಕೆ ಬಂದ ತರುಣ ಪತ್ರಕರ್ತರಿಗೆ ಈಗಲೂ ಪತ್ರಿಕೋದ್ಯಮದಲ್ಲಿ ಇಂತಿಂಥದ್ದನ್ನು ಮಾಡಲು ಸಾಧ್ಯವಿದೆ ನೋಡ್ರಯ್ಯಾ ಎಂದು ಆಪ್ತವಾಗಿ ಹೇಳಿದರು. ಎಲ್ಲರನ್ನೂ ತಿದ್ದಲು ತನ್ನಿಂದ ಸಾಧ್ಯವಿಲ್ಲ ಎಂದು ಗೊತ್ತಿದ್ದೂ ಸೋಷಿಯಲ್‌ ಮೀಡಿಯಾಗಳಲ್ಲಿ ಟ್ರೋಲಿಗರ ಜೊತೆ ಗುದ್ದಾಡಿದರು. ಎಷ್ಟುಹೆಕ್ಕಿದರೂ ಖಾಲಿಯಾಗುವುದಿಲ್ಲವೆಂಬುದು ತಿಳಿದಿದ್ದರೂ ತಮ್ಮ ಏರಿಯಾದಲ್ಲಿ ಪ್ಲಾಸ್ಟಿಕ್‌ ಕವರ್‌ಗಳನ್ನೂ, ಬಾಟಲಿಗಳನ್ನೂ ಹೆಕ್ಕಿದರು. ಕಣ್ಣೆದುರು ಕಾಣುವ, ಆದರೆ ಜನಸಾಮಾನ್ಯರಿಂದ ಗುರುತಿಸಲು ಆಗದ ತಪ್ಪುಗಳ ಬಗ್ಗೆ ಯಾವ ಕೀಳರಿಮೆಯೂ ಇಲ್ಲದೆ ಪತ್ರಿಕೆಗಳ ‘ಲೆಟರ್ಸ್‌ ಟು ಎಡಿಟರ್‌’ ವಿಭಾಗಕ್ಕೆ ಪತ್ರಗಳನ್ನು ಬರೆದರು. ಅವುಗಳಿಗೆ ಫಲ ಸಿಗದಿದ್ದರೂ ಮತ್ತೆ ಮತ್ತೆ ಬರೆದರು.

ತಾವು ಕೆಲಸ ಮಾಡುತ್ತಿದ್ದ ಪತ್ರಿಕೆಗೆ ನಾನಾ ಕಾರಣಗಳಿಂದ ನಾಗೇಶ ಹೆಗಡೆ ಸಂಪಾದಕರಾಗಲಿಲ್ಲ. ಬೇರೆ ಪತ್ರಿಕೆಗಳಿಗೆ ಸಂಪಾದಕರಾಗಲು ಕರೆದರೂ ಹೋಗಲಿಲ್ಲ. ರಾಷ್ಟ್ರಮಟ್ಟದ ಪತ್ರಿಕೆಗಳಿಗೆ ಸಂಪಾದಕರಾಗುವ ತಾಕತ್ತಿನ ಮನುಷ್ಯ ರಾಜ್ಯಮಟ್ಟದ ಪತ್ರಿಕೆಯ ಚುಕ್ಕಾಣಿಯನ್ನಾದರೂ ನಾಲ್ಕೈದು ವರ್ಷ ಹಿಡಿದು, ಒಂದು ಮಾದರಿ ಪತ್ರಿಕೆಯನ್ನು ರೂಪಿಸಿ ತೋರಿಸಬಹುದಿತ್ತು. ಕನ್ನಡ ಪತ್ರಿಕೋದ್ಯಮದ ದುರದೃಷ್ಟ.

ಅವರು ಓದಿದ ಭೂಗರ್ಭಶಾಸ್ತ್ರವನ್ನು ಬಿಡಿ, ಅವರಿಷ್ಟದ ಪತ್ರಿಕೋದ್ಯಮದಲ್ಲೇ ಜಾಗತಿಕ ಮಟ್ಟದಲ್ಲಿ ಹಲವು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದಿದ್ದವು. ಅವುಗಳನ್ನೆಲ್ಲ ಬಿಟ್ಟು ಅವರೇಕೆ ಕನ್ನಡದಲ್ಲೇ ನೆಲೆ ನಿಂತರು ಎಂಬುದು ಸೋಜಿಗ. ಕೆದಕುತ್ತಾ ಹೋದರೆ, ಕೋಡ್ಸರ ಮುಠ್ಠಳ್ಳಿ ರೀತಿಯ ಶಾಲೆಗಳ ಮಾಸ್ತರಿಲ್ಲದ ಕ್ಲಾಸುಗಳಿಗೆ ಬೇಸಿಗೆಯ ಮಳೆಯಂತೆ ಅನಿರೀಕ್ಷಿತವಾಗಿ ಹೋಗಿ ಪಾಠ ಮಾಡುವ ಶಿವರಾಮ ಕಾರಂತರಂತಹ ನಾಗೇಶ ಹೆಗಡೆಯಲ್ಲಿ ಉತ್ತರ ಸಿಗುತ್ತದೆ.

ಅವರು ಮುಖಸ್ತುತಿ ಮಾಡಿದವರೂ ಅಲ್ಲ, ಅದನ್ನು ಇಷ್ಟಪಡುವವರೂ ಅಲ್ಲ. ಹೀಗಾಗಿ ಅಭಿನಂದನಾ ಸಮಾರಂಭ ಅಥವಾ ಅಭಿನಂದನಾ ಗ್ರಂಥವೆಲ್ಲ ಅವರಿಗೆ ಆಗಿಬರುವಂಥದ್ದಲ್ಲ. ಆದರೆ ಈಗಲಾದರೂ ಅವರಿಗೆ ಆ ಕಷ್ಟಕೊಡದಿದ್ದರೆ ಹೇಗೆ!

ನಾಗೇಶ ಹೆಗಡೆ ಹೀಗೇ ಮೆತ್ತಗೆ ಮಾತನಾಡುತ್ತಾ ಗಟ್ಟಿಯಾಗಿ ಬರೆಯುತ್ತಿರಲಿ. ಅವರು ತಿದ್ದಬೇಕಿರುವುದು ಇನ್ನೂ ಬಹಳಷ್ಟಿದೆ.

Follow Us:
Download App:
  • android
  • ios