Asianet Suvarna News Asianet Suvarna News

ಅಪ್ಪನ ಸವಾಲು ಸ್ವೀಕರಿಸದೆಯೇ ವಿಶ್ವ ಚಾಂಪಿಯನ್‌ ಆದ ವಿಶ್ವನಾಥನ್ ಆನಂದ್!

ಐದು ಬಾರಿ ವಿಶ್ವ ಚೆಸ್ ಚಾಂಪಿಯನ್ ಆದ ವಿಶ್ವನಾಥನ್ ಆನಂದ್ ಜೀವನ ಚರಿತ್ರೆ  'ಮೈಂಡ್‌ ಮಾಸ್ಟರ್‌: ವಿನ್ನಿಂಗ್‌ ಲೆಸನ್ಸ್‌ ಫ್ರಮ್‌ ಎ ಚಾಂಪಿಯನ್ಸ್‌ ಲೈಫ್‌; ಇತ್ತೀಚಿಗೆ ಬಿಡುಗಡೆಯಾಗಿದೆ. ವಿಶ್ವನಾಥನ್ ಆನಂದ್ ಚಾಂಪಿಯನ್ ಆಗಿ ಬೆಳೆದ ಹಿಂದಿನ ಕಥೆಯನ್ನು ಇಲ್ಲಿ ಹೇಳಲಾಗಿದೆ. ಬಯೋಪಿಕ್‌ನ ಆಯ್ದ ಭಾಗವೊಂದು ಇಲ್ಲಿದೆ. 
 

Inspirational story behind Chess grand master Viswanathan Anand
Author
Bengaluru, First Published Dec 22, 2019, 1:28 PM IST
  • Facebook
  • Twitter
  • Whatsapp

ಮೌರಿಸಿಯೋ ಪೆರೇರಾ ಮತ್ತು ನೀವ್ಸ್‌. ಈ ದಂಪತಿಯನ್ನು ನನ್ನ ಯುರೋಪಿಯನ್‌ ತಂದೆ-ತಾಯಿ ಎಂದೇ ಭಾವಿಸಿದ್ದೇನೆ. ಇವರು ಸ್ಪೇನ್‌ನವರು. ಈಗ ಇಬ್ಬರೂ ಇಹಲೋಕ ತ್ಯಜಿಸಿದ್ದಾರೆ. ನನ್ನಲ್ಲಿ ಅದೇನು ಕಂಡರೋ ಗೊತ್ತಿಲ್ಲ, ಚೆಸ್‌ ಆಟದಲ್ಲಿ ಒಂದಷ್ಟುಸಾಧನೆ ಮಾಡಿದ್ದ ನನ್ನನ್ನು ವಿಶ್ವ ಚೆಸ್‌ ಚಾಂಪಿಯನ್ನಾಗಿ ರೂಪಿಸುವ ಹೊಣೆ ಹೊತ್ತವರಂತೆ ಸಾಕಿ ಬೆಳೆಸಿದರು. ನಾನು ವಿಶ್ವ ಚಾಂಪಿಯನ್‌ ಆಗಿದ್ದರ ಹಿಂದೆ ಇವರ ಕೊಡುಗೆ ದೊಡ್ಡದು.

1996ರ ಜೂನ್‌ನಲ್ಲಿ ಚೆನ್ನೈನಲ್ಲಿ ನನ್ನ ಮದುವೆಯಾಯಿತು. ಅಲ್ಲಿಗೆ ಮೌರಿಸಿಯೋ ಪೆರೇರಾ ಮತ್ತು ನೀವ್‌್ಸ ಬಂದಿದ್ದರು. ಅರುಣಾ ನನ್ನ ಬಾಳ ಸಂಗಾತಿಯಾಗಿದ್ದಳು. ಒಂದು ಸಂಜೆ ಹೀಗೇ ಮಾತನಾಡುತ್ತಾ ಕುಳಿತಿದ್ದಾಗ ನನ್ನ ತಂದೆ ‘ನಾನು ಬೇಕಾದರೆ ಚಾಲೆಂಜ್‌ ಮಾಡುತ್ತೇನೆ, ವಿಶಿ ವಿಶ್ವ ಚಾಂಪಿಯನ್‌ ಆಗಲು ಸಾಧ್ಯವೇ ಇಲ್ಲ’ ಎಂದು ಹೇಳಿಬಿಟ್ಟರು. ಅದೊಂದು ದೇಶಾವರಿ ಟಾಂಟ್‌ ಆಗಿತ್ತು. ನಾನು ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಏಕೆಂದರೆ ನಾನು ಹುಟ್ಟಿದಾಗಿನಿಂದ ನನ್ನ ತಂದೆಯ ಸ್ವಭಾವ ನೋಡುತ್ತಾ ಬೆಳೆದವನು.

ಒಂದೇ ಸ್ಪರ್ಧೆಯಲ್ಲಿ 27 ದಾಖಲೆ ಮುರಿದ ಜೆರೆಮಿ!

ಮಕ್ಕಳೊಂದಿಗೆ ನಾಟಕೀಯವಾಗಿ ಮಾತನಾಡೋದು, ಅವರಿಗೆ ಕಿರಿಕಿರಿ ಮಾಡೋದು, ಮುದ್ದುಮಾಡುವುದು, ಕೆಲವೊಮ್ಮೆ ಗದರುವುದು ಅವರ ಸ್ವಭಾವ. ಹಾಗಾಗಿ ಈ ಬಾರಿಯೂ ಅದನ್ನು ನಾನು ಗಂಭೀರವಾಗಿ ಪರಿಗಣಿಸದೆ, ನಕ್ಕು ಸುಮ್ಮನಾದೆ. ಆದರೆ, ಅಲ್ಲೇ ಇದ್ದ ನೀವ್ಸ್‌ ಅದನ್ನು ಮನಸ್ಸಿಗೆ ತೆಗೆದುಕೊಂಡರು. ನೀವ್ಸ್‌ ಸಿಟ್ಟು ಬಂದಿತ್ತು. ಆಕೆ ನನ್ನನ್ನು ತಾಯಿಯಂತೆ ಪ್ರೀತಿಸುತ್ತಿದ್ದರು.

ನಾನೇನೂ ತಂದೆಯ ಮಾತನ್ನು ಸವಾಲಾಗಿ ಪರಿಗಣಿಸಿರಲಿಲ್ಲ. ಆದರೆ, ಚೆಸ್‌ನಲ್ಲಿ ಹಂತಹಂತವಾಗಿ ಬೆಳೆಯುತ್ತಾ ಹೋದೆ. ನನ್ನ ಪ್ರಯತ್ನ ತೀವ್ರವಾಯಿತು. ಅದಕ್ಕೆ ನೀವ್‌್ಸ ಪ್ರೋತ್ಸಾಹ ಅಗಾಧವಾಗಿತ್ತು. ನಿನ್ನ ತಂದೆಯ ಮಿಂದೆ ನೀನು ವಿಶ್ವ ಚಾಂಪಿಯನ್‌ ಆಗಿ ತೋರಿಸಬೇಕು ಎಂದು ಹೇಳುತ್ತಿದ್ದಳು. ಕೊನೆಗೂ ನಾನು ಆಕೆಯ ಕನಸು ಈಡೇರಿಸಿದೆ.

ಮದುವೆಯ ನಂತರ ಬದಲಾದ ಆಟ

ಮದುವೆಯ ಬಳಿಕ ಆ ವರ್ಷ ಜುಲೈನಲ್ಲಿ ಡಾರ್ಟ್‌ಮಂಡ್‌ನಲ್ಲಿ ನಡೆದ ಚೆಸ್‌ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಎಂಟು ಆಟಗಾರರನ್ನು ಸೋಲಿಸಿ ವ್ಲಾಡಿಮಿರ್‌ ಕ್ರಾಮ್ನಿಕ್‌ ಅವರೊಂದಿಗೆ ಸಮಬಲದ ಪ್ರದರ್ಶನ ನೀಡಿದೆ. ಮುಂದಿನ ವರ್ಷ 1997ರಲ್ಲಿ ಅತ್ಯುತ್ತಮ ಫಲಿತಾಂಶದೊಂದಿಗೆ ನಿರಂತರವಾಗಿ ಗೆದ್ದುಬಂದೆ. ಕ್ರಮೇಣ ನನ್ನ ಆಟ ಉತ್ತಮವಾಗುತ್ತಾ ಹೋಯಿತು. ಅಂಬರ್‌ ಟೂರ್ನಮೆಂಟ್‌ ಮತ್ತು ಬೀಯಲ್‌ನಲ್ಲಿನ ಕ್ರೆಡಿಟ್‌ ಸ್ಯೂಸ್‌ ಕ್ಲಾಸಿಕ್‌ ಅನ್ನೂ ಗೆದ್ದೆ. ಸ್ಪೇನ್‌ನಲ್ಲಿನ 29ನೇ ವರ್ಷದ ಡಾಸ್‌ ಹರ್ಮಾನಾಸ್‌ ಪಂದ್ಯಾವಳಿ ಮತ್ತು ಬೆಲ್‌ಗ್ರೇಡ್‌ನಲ್ಲಿನ ಇನ್ವೆಸ್‌ಬೆಂಕಾ ಪಂದ್ಯಾವಳಿಯಲ್ಲಿ ಜಂಟಿ ಪ್ರಥಮ ಸ್ಥಾನ ಪಡೆದೆ. ಡಾರ್ಟ್‌ಮಂಡ್‌ ಸ್ಪಾರ್ಕಾಸೆನ್‌ನಲ್ಲಿ ಎರಡನೇ ಸ್ಥಾನ ಗಳಿಸಿದೆ.

RCB ಸೇರಿದ ಕನ್ನಡಿಗ ಪವನ್ ದೇಶಪಾಂಡೆ ಜೊತೆ ಸುವರ್ಣನ್ಯೂಸ್.ಕಾಂ Exclusive ಮಾತು!

ಚೆಸ್‌ ಹೊರತುಪಡಿಸಿ ನನ್ನ ಜೀವನದಲ್ಲಿ ಎಲ್ಲವನ್ನೂ ನಿಭಾಯಿಸುವ ಅಧಿಕಾರ ನೀವ್‌್ಸಳಿಂದ ಅರುಣಾಗೆ ವರ್ಗಾವಣೆಯಾಗಿತ್ತು. ಪಂದ್ಯಕ್ಕೆ ಸಂಬಂಧಿಸಿದ ಇ-ಮೇಲ್‌ಗಳಿಗೆ ಉತ್ತರಿಸುವುದರಿಂದ ಹಿಡಿದು ಮುಂಬರುವ ಪಂದ್ಯಾವಳಿಯ ವ್ಯವಸ್ಥಾಪನೆ ಎಲ್ಲವೂ ಅರಣಾಳ ಹೆಗಲಿಗೆ ಬಿತ್ತು. ನನ್ನ ಸೂಟ್‌ಕೇಸ್‌ನಲ್ಲಿ ಚೊಕ್ಕವಾಗಿ ಜೋಡಿಸಿಟ್ಟಮ್ಯಾಚಿಂಗ್‌ ಬಟ್ಟೆಗಳು ಕಾಣಿಸಿಕೊಳ್ಳತೊಡಗಿದವು. ಆಕ್ರ್ಟಿಕ್‌ ಶೀತದ ಹವಾಮಾನಕ್ಕೆ ಅಥವಾ ಮೆಡಿಟರೇನಿಯನ್‌ ವಸಂತಕ್ಕೆ ಒಗ್ಗುವ ಸಾಕ್ಸ್‌ ಮತ್ತು ಉಣ್ಣೆಯ ಬಟ್ಟೆಗಳು ಆಯಾ ಕಾಲಕ್ಕೆ ತಕ್ಕಂತೆ ಸೂಟ್‌ಕೇಸ್‌ನಲ್ಲಿ ಪ್ರತ್ಯಕ್ಷವಾಗುತ್ತಿದ್ದವು.

ಔಷಧಿಗಳ ಮೇಲೆ ಹೆಸರು ಬರೆದು ಸಾಲಾಗಿ ಜೋಡಿಸಿಡಲಾಗುತ್ತಿತ್ತು. ವಾಸ್ತವವಾಗಿ ನನಗೆ ನನ್ನ ಪಂದ್ಯಾವಳಿಗಳು ಮತ್ತು ಪ್ರಯಾಣಕ್ಕೆ ಸಂಬಂಧಿಸಿದ ಕೆಲಸಗಳನ್ನು ನೋಡಿಕೊಳ್ಳುವುದು ತಲೆನೋವಿನ ಕೆಲಸವಾಗಿತ್ತು. ಒಪ್ಪಂದಗಳ ಬಗ್ಗೆ ಮಾತುಕತೆ ನಡೆಸುವುದು, ಹೋಟೆಲ್‌ಗಳು ಮತ್ತು ಫ್ಲೈಟ್‌ ಟಿಕೆಟ್‌ಗಳನ್ನು ಕಾಯ್ದಿರಿಸುವುದು, ಅದಕ್ಕಾಗಿ ಕಾಯುವುದು ಎಲ್ಲವೂ ಅನಗತ್ಯ ಒತ್ತಡವಾಗಿತ್ತು. ಅದೆಲ್ಲವನ್ನೂ ಅರುಣಾ ವಹಿಸಿಕೊಂಡಳು. ಆಗ ನಾನು ಚೆಸ್‌ ಮೇಲೇ ಗಮನ ಕೇಂದ್ರೀಕರಿಸಲು ಸಾಧ್ಯವಾಯಿತು. ಪರಿಣಾಮ ನನ್ನ ಆಟ ಸುಧಾರಿಸಿತು.

ಚೆಸ್‌ ಜಗತ್ತಿನ ಪಕ್ಷಪಾತ ಮತ್ತು ಪವಾಡ

ಚೆಸ್‌ ಜಗತ್ತಿನಲ್ಲಿ ಪಕ್ಷಪಾತ ಬಹಳ ಸಾಮಾನ್ಯ. ಎಫ್‌ಐಡಿಇನ ನಾಕೌಟ್‌ ಪಂದ್ಯಗಳಲ್ಲಿ ಗೆದ್ದವರಿಗೆ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ನೀಡಲಾಗುತ್ತದೆ. ಆದರೆ, 1997-98ರಲ್ಲಿ ಅನಾಟೊಲಿ ಕಾರ್ಪೋವ್‌ ಅವರಿಗೆ ನೇರವಾಗಿ ಫೈನಲ್‌ಗೆ ಪ್ರವೇಶಿಸಲು ಅನುಮತಿ ನೀಡಲಾಗಿತ್ತು. ಆದ್ದರಿಂದ ಗ್ರೊನಿಂಗೆನ್‌ನಲ್ಲಿ ನಡೆದ ನಾಕೌಟ್‌ ಪಂದ್ಯಾವಳಿಯನ್ನು ಯಾರೇ ಗೆದ್ದರೂ 1998ರ ಜನವರಿಯಲ್ಲಿ ಲೌಸೇನ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಮೂರು ದಿನಗಳ ಅಂತರದಲ್ಲಿ ಕಾರ್ಪೋವ್‌ ಜೊತೆ ಆಡಲು ಅರ್ಹತೆ ಪಡೆಯುತ್ತಿದ್ದರು.

RCB ಗರ್ಲ್ ಹಿಂದಿಕ್ಕಿ ಹುಡುಗರ ನಿದ್ದೆ ಕದ್ದ ಸನ್ ರೈಸರ್ಸ್ ಸುಂದರಿ, ಯಾರೀಕೆ?

ಇದೊಂದು ಮೋಸದ ಆಟ. ಆದರೆ ಈ ಎಲ್ಲಾ ಆಲೋಚನೆಗಳನ್ನು ಬದಿಗಿಟ್ಟು ಆಟದ ಮೇಲೆ ಮಾತ್ರ ಗಮನ ಕೇಂದ್ರೀಕರಿಸಬೇಕು ಎಂದು ನನಗೆ ನಾನೇ ಹೇಳಿಕೊಂಡೆ. ಗ್ರೊನಿಂಗೆನ್‌ನಲ್ಲಿ ನಾನು ಎಷ್ಟುಹೊತ್ತು ಇದ್ದೆನೋ ಅಷ್ಟೂಹೊತ್ತು ಇದನ್ನೇ ಪಾಲಿಸಿದೆ. ಪಂದ್ಯಾವಳಿ ಪ್ರಾರಂಭವಾದ ನಂತರ, ಮೊದಲ ಪಂದ್ಯದಲ್ಲಿ ನಾನು ಪ್ರಿಡ್ರಾಗ್‌ ನಿಕೋಲಿಕ್‌ ಅವರನ್ನು ಸಲೀಸಾಗಿ ಸೋಲಿಸಿದೆ. ಎರಡನೇ ಸುತ್ತಿನಲ್ಲಿ ಅಲೆಕ್ಸಾಂಡರ್‌ ಖಲೀಫ್‌ಮನ್‌ ಎದುರು ಸೋಲಿನ ಬಾಗಿಲು ತಟ್ಟಿನಂತರ ಗೆದ್ದೆ. ನಾಕೌಟ್‌ ಒಂದು ತಮಾಷೆಯ ವಿಷಯ.

ಮುಂದಿನ ಕ್ಷಣದಲ್ಲಿ ನೀವಿರುವ ಕಾರು ಅಪಘಾತಕ್ಕೀಡಾಗಿ ನೀವು ಬಲಿಯಾಗುವಿರಿ ಎಂಬುದು ಗೊತ್ತಿದ್ದೂ ಅದನ್ನು ಹೇಗೆ ನಿಲ್ಲಿಸುವುದು ಎಂದು ತಿಳಿಯದಿರುವ ಮನಸ್ಥಿತಿಯಂತೆ. ಖಲೀಫ್‌ಮನ್‌ ವಿರುದ್ಧದ ಪಂದ್ಯದ ಕೊನೇ ಕ್ಷಣದಲ್ಲಿ, ‘ಓ ಮೈ ಗುಡ್‌ನೆಸ್‌, ಈ ಪಂದ್ಯದಲ್ಲಿ ನಾನು ಸೋತ ನಂತರ ಬ್ಯಾಗ್‌ ಪ್ಯಾಕ್‌ ಮಾಡಿಕೊಂಡು ಇಂದು ರಾತ್ರಿಯೇ ಹೊರಡಬೇಕು’ ಎಂದು ಯೋಚಿಸುತ್ತಿದ್ದೆ. ಅರೆಕ್ಷಣದಲ್ಲಿ ಒಂದು ದೈವಿಕ ಪವಾಡ ಘಟಿಸಿತು. ಖಲೀಫ್‌ಮನ್‌ ಏನು ಮಾಡಬೇಕೆಂದು ತಿಳಿಯದೆ ಗೊತ್ತು ಗುರಿಯಿಲ್ಲದೆ ಮುನ್ನಡೆಸುತ್ತಿರುವುನ್ನು ನಾನು ನೋಡಿದೆ. ನಂತರ ಟೈ-ಬ್ರೇಕ್‌ನಲ್ಲಿ ಅವರನ್ನು ಸೋಲಿಸಿ ಸಾವಿನಿಂದ ಬದುಕುಳಿದವರಂತೆ ಪಂದ್ಯದಿಂದ ಹೊರಬಂದೆ.

ವಿಶಿ ಒಳ್ಳೆಯ ಆಟಗಾರ ಆದರೆ...

1998ರ ಕ್ರಿಸ್‌ಮಸ್‌ ಸಮಯ. ಲೌಸೇನ್‌ನಲ್ಲಿ ಕಾರ್ಪೋವ್‌ ವಿರುದ್ಧ ನನ್ನ ಆಟ. 5 ಪಂದ್ಯಗಳ ಕೊನೆಯಲ್ಲಿ ಕಾರ್ಪೋವ್‌ ಒಂದು ಪಾಯಿಂಟ್‌ ಮುನ್ನಡೆ ಸಾಧಿಸಿದ್ದರು. ಆರನೇ ಮತ್ತು ಅಂತಿಮ ಸುತ್ತಿನಲ್ಲಿ ಆಕ್ರಮಣಕಾರಿಯಾಗಿ ಆಡಿ ಸ್ಕೋರನ್ನು 3-3ಗೆ ತಂದು ನಿಲ್ಲಿಸಿದೆ. ಜೊತೆಗೆ ಎರಡು ಕ್ಷಿಪ್ರ ಆಟದಲ್ಲಿ ಟೈಬ್ರೇಕ್‌ ಮಾಡುವಲ್ಲಿ ಯಶಸ್ವಿಯಾದೆ. ಆದರೆ ಕೊನೆಯಲ್ಲಿ ಕಾರ್ಪೋವ್‌ ಅವರೇ ಮತ್ತೆ ವಿಶ್ವ ಚಾಂಪಿಯನ್‌ ಆದರು. ಆಟದ ಬಳಿಕ ಕಾರ್ಪೋವ್‌, ‘ವಿಶಿ ಒಳ್ಳೆಯ ಆಟಗಾರ. ಆದರೆ ವಿಶ್ವಚಾಂಪಿಯನ್‌ಶಿಪ್‌ ಗೆಲ್ಲುವ ತಾಕತ್ತು ಇಲ್ಲ’ ಎಂದರು.

ಪಂದ್ಯದ ಬಳಿಕ ನಾನು ‘ಗ್ರೇಟ್‌ ಪ್ಲೇಯರ್‌’ನಿಂದ ‘ಚಾಂಪಿಯನ್‌’ ಆಗಲು ಬೇಕಾಗುವ ಸಲಹೆ ಪಡೆಯಲು ಮನಃಶಾಸ್ತ್ರಜ್ಞರ ಬಳಿ ಹೋಗಬೇಕೆಂಬ ಸಲಹೆ ಬಂತು. ಅರುಣಾಳ ಒತ್ತಾಯದ ಮೇರೆಗೆ ಕ್ರೀಡಾ ಮನಃಶಾಸ್ತ್ರಜ್ಞರನ್ನು ಒಂದು ದಿನ ಭೇಟಿ ಮಾಡಿದೆ. ಅದರಿಂದ ಅಷ್ಟೇನೂ ಪ್ರಯೋಜನವಾಗಲಿಲ್ಲ. ಆ ಯೋಚನೆ ಅಲ್ಲಿಗೇ ಕೈಬಿಟ್ಟೆ.

ವಿಶ್ವ ಚಾಂಪಿಯನ್‌ ಆಗುತ್ತೇನೆಂಬ ನಂಬಿಕೆ ಇರಲಿಲ್ಲ

ಲಂಡನ್‌ನಲ್ಲಿ ನಡೆದ 2000ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕ್ಯಾಸ್ಪರೋವ್‌ ವಿರುದ್ಧ ಕ್ರಾಮ್ನಿಕ್‌ ಗೆಲುವು ನನ್ನಲ್ಲಿ ಸ್ಫೂರ್ತಿ ತುಂಬಿತ್ತು. ಆದರೂ ನನಗೆ ವಿಶ್ವ ಚಾಂಪಿಯನ್‌ಶಿಪ್‌ ಗೆಲ್ಲುವ ಮಾನಸಿಕ ಸ್ಥೈರ್ಯ ನನಗಿಲ್ಲ ಎಂದೇ ಅನ್ನಿಸುತ್ತಿತ್ತು. ನನ್ನ ವೃತ್ತಿಜೀವನದಲ್ಲಿ ದೀರ್ಘಕಾಲದವರೆಗೆ ನಾನು ವಿಶ್ವ ಚಾಂಪಿಯನ್‌ ಆಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಆಡಿರಲಿಲ್ಲ. ವಿವಿಧ ವಿಭಾಗಗಳಲ್ಲಿ ‘ಮೊದಲ ಭಾರತೀಯ’ ಅಥವಾ ‘ಮೊದಲ ಏಷ್ಯನ್‌’ ಎಂಬ ಪಟ್ಟಗಳು ನನಗೆ ದಕ್ಕಿದ್ದವು. ನಾನು ಪ್ರಪಂಚದಾದ್ಯಂತ ಚೆಸ್‌ ಆಡಲು ಸಂಚರಿಸುತ್ತಿದ್ದೆ.

ಉತ್ತಮ ಆಟಗಳನ್ನು ಆಡುತ್ತಿದ್ದೆ ಅಷ್ಟೆ. 1995ರಲ್ಲಿ ನ್ಯೂಯಾರ್ಕ್ನಲ್ಲಿ ನಡೆದ ಕ್ಯಾಸ್ಪರೋವ್‌ ವಿರುದ್ಧದ ಪಂದ್ಯ ನನ್ನ ಈ ಮನೋಭಾವವನ್ನು ಬದಲಿಸಿತು. ನಮ್ಮ ನಡುವೆ ಎಂಟು ಡ್ರಾಗಳ ಡೆಡ್‌ಲಾಕನ್ನು ಗೆಲುವಿನೊಂದಿಗೆ ಮುರಿಯುವಲ್ಲಿ ಕ್ಯಾಸ್ಪರೋವ್‌ ಸಫಲರಾಗಿದ್ದರು. ಆಗ ಆಟಗಾರನ ಮನದಿಂಗಿತವನ್ನು ಊಹಿಸುವಂತಿದ್ದರೆ ಏನಾಗುತ್ತದೆ ಎಂಬ ಪಾಠ ಕಲಿತೆ. ಪಂದ್ಯವನ್ನು ಗೆಲ್ಲುವಲ್ಲಿ ನಾನೆಲ್ಲಿ ಸೋತಿದ್ದೆ ಎಂಬ ಎಲ್ಲಾ ಅಂಶಗಳನ್ನೂ ನಾನೇ ವಿಮರ್ಶಿಸಿಕೊಂಡು ನನ್ನಲ್ಲಿನ ದೌರ್ಬಲ್ಯಗಳನ್ನು ಕಿತ್ತೆಸೆದೆ. ಭವಿಷ್ಯದ ಪಂದ್ಯಗಳಿಗೆ ಇದು ನೆರವಾಯಿತು. ಒಳ್ಳೆಯ ಆಟಗಾರನಿಂದ ಚಾಂಪಿಯನ್‌ ಆಗುವುದು ಅಷ್ಟುಸುಲಭದ ಕೆಲಸವಲ್ಲ ಎನ್ನುವ ವಾಸ್ತವ ಅರಿವಾಯಿತು.

‘ಅಪ್ಪನ ಬಳಿ ಬೆಟ್‌ ಹಣ ವಸೂಲಿ ಮಾಡು’

2000ನೇ ಇಸವಿಯಲ್ಲಿ ಎಫ್‌ಐಡಿಇ ವಿಶ್ವ ಚಾಂಪಿಯನ್‌ಶಿಪ್‌ ಪಂದ್ಯಾವಳಿಯನ್ನು ನವದೆಹಲಿಯಲ್ಲಿ ಆಯೋಜಿಸಿತ್ತು. ನನ್ನ ನೆಲದಲ್ಲಿಯೇ ನನಗೆ ಸಿಕ್ಕ ಸುವರ್ಣಾವಕಾಶ. ನಾಕೌಟ್‌ ಪಂದ್ಯಾವಳಿಯು ಎರಡು ಆಟಗಳನ್ನೊಳಗೊಂಡಿತ್ತು. ಕ್ವಾರ್ಟರ್‌ ಫೈನಲ್‌ನಲ್ಲಿ ಮತ್ತೆ ಖಲೀಫ್‌ಮನ್‌ ನನ್ನ ಎದುರಾಳಿ. ಆವತ್ತು ನನ್ನ ಜನ್ಮದಿನ ಬೇರೆ. ರೋಚಕ ಪಂದ್ಯದಲ್ಲಿ ಸತತ ನಾಲ್ಕು ಡ್ರಾಗಳ ನಂತರ 5ನೇ ಪಂದ್ಯದಲ್ಲಿ ಖಲೀಫ್‌ಮನ್‌ರನ್ನು ಸೋಲಿಸಿದೆ. ಸೆಮಿಫೈನಲ್‌ನಲ್ಲಿ ಆ್ಯಡಂ ನನ್ನ ಪ್ರತಿಸ್ಪರ್ಧಿ. ಅಲ್ಲಿ ಗೆದ್ದು ಅಂತಿಮ ಸುತ್ತಿಗೆ ಆಯ್ಕೆಯಾದೆ.

ಆ ಪಂದ್ಯ ಇರಾನ್‌ನ ತೆಹ್ರಾನ್‌ನಲ್ಲಿ ಆಯೋಜನೆಗೊಂಡಿತ್ತು. ಅಲ್ಲಿ ಶಿರೋವ್‌ ನನ್ನ ಎದುರಾಳಿ. ಹಿಂದೆ ಕೆಲ ಸಲ ಶಿರೋವ್‌ ನನ್ನನ್ನು ಮಣಿಸಿದ್ದರು. ಹಾಗಾಗಿ ಈಗ ನಾನು ಗೆಲ್ಲುವುದು ಸುಲಭವಿರಲಿಲ್ಲ. ಮೊದಲ ಪಂದ್ಯ ಡ್ರಾ ಆಯಿತು. ಆದರೆ ನಂತರದ ಮೂರೂ ಸುತ್ತುಗಳಲ್ಲಿ ನಾನೇ ಗೆದ್ದೆ. ಅಲ್ಲಿಗೆ ನಾನು ಭಾರತದ ಮೊದಲ ಚೆಸ್‌ ವಿಶ್ವ ಚಾಂಪಿಯನ್‌ ಆಗಿದ್ದೆ. ಈ ವಿಷಯವನ್ನು ನೀವ್‌್ಸಗೆ ತಿಳಿಸಿದಾಗ ಅವಳ ಕಣ್ಣು ಒದ್ದೆಯಾಗಿದ್ದವು. ‘ನೀನು ವಿಶ್ವ ಚಾಂಪಿಯನ್‌ ಆಗೋದಿಲ್ಲ ಎಂದು ನಿನ್ನ ಅಪ್ಪ ಬೆಟ್‌ ಕಟ್ಟಿದ್ದರಲ್ಲ... ಹೋಗಿ ದುಡ್ಡು ವಸೂಲಿ ಮಾಡು’ ಎಂದಳು.

ಭಾರತದ ಮೊದಲ ಚೆಸ್‌ ಗ್ರಾಂಡ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ಅವರ ಆತ್ಮಚರಿತ್ರೆ ‘ಮೈಂಡ್‌ ಮಾಸ್ಟರ್‌: ವಿನ್ನಿಂಗ್‌ ಲೆಸನ್ಸ್‌ ಫ್ರಮ್‌ ಎ ಚಾಂಪಿಯನ್ಸ್‌ ಲೈಫ್‌’ನ ಆಯ್ದ ಭಾಗ.

Follow Us:
Download App:
  • android
  • ios