ಮನಾಲಿಯಿಂದ ಖರ್ದುಂಗ್ಲಾ ಪಾಸ್‌ವರೆಗಿನ 512 ಕಿಮೀ ಮಾರ್ಗವನ್ನು ಏಕಾಂಗಿಯಾಗಿ ಕಾಲ್ನಡಿಗೆಯಲ್ಲಿ ಕ್ರಮಿಸುವ ಯೋಜನೆಯ ಬಗ್ಗೆ ಗೆಳೆಯರಲ್ಲಿ ಹೇಳಿದಾಗ ಕೇಳಿದವರೆಲ್ಲಾ ಬೈದರು. ನಾನು ನಿರ್ಧಾರ ಬದಲಿಸುವವನಲ್ಲ ಎಂದು ತಿಳಿದ ಮೇಲೆ ಶುಭಕೋರಿ ಬೀಳ್ಕೊಟ್ಟರು. ಹೀಗೆ ಜುಲೈ 13ರಂದು ಬೆಂಗಳೂರಿನಿಂದ ನನ್ನ ಯಾತ್ರೆ ಆರಂಭವಾಯಿತು.

ಟ್ರೈನ್‌ ಮೂಲಕ ಚಂಡೀಗಡಕ್ಕೆ ಹೋಗಿ ಅಲ್ಲಿಂದ ಬಸ್‌ ಮೂಲಕ ಮನಾಲಿ ತಲುಪಿದೆ. ಅಲ್ಲಿಂದ ಮುಂದಿನ 10 ದಿನಗಳಲ್ಲಿ 512 ಕಿಮೀ ದೂರವಿರುವ ವಿಶ್ವದ ಅತೀ ಎತ್ತರದ ಮೋಟೋರೇಬಲ್‌ ಪಾಸ್‌ (18,380 ಅಡಿ ಎತ್ತರದಲ್ಲಿರುವ ವಾಹನ ಸಂಚಾರಿ ಮಾರ್ಗ) ಖರ್ದುಗ್‌ ಲಾ ಪಾಸ್‌ಗೆ ನಡೆದು ಸಾಗುವ ಗುರಿಯಿತ್ತು.

ಬಂದೇ ಬಿಡ್ತು ದಸರಾ; ರಜೆ ಮಜಾ ಮಾಡಲು ಓಕಿನಾವಾಗೆ ಪ್ರವಾಸ ಹೋಗಲು ರೆಡಿಯಾಗಿ!

ನಾನು ದಾರಿತೋರುವ ಗುರುವಿನ ಸ್ಥಾನದಲ್ಲಿರಿಸಿದ್ದ ಗೂಗಲ್‌ ಮ್ಯಾಪ್‌ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಮಾರ್ಗ ಮಧ್ಯದಲ್ಲೇ ಕೈಕೊಟ್ಟು ನನ್ನ ಅಕ್ಷರಶಃ ಒಂಟಿಯಾಗಿಸಿತ್ತು. ಸ್ಲೀಪಿಂಗ್‌ ಬ್ಯಾಗ್‌, ಒಂದು ಜೊತೆ ಚಪ್ಪಲಿ, ಶೂ, ಬಟ್ಟೆತುಂಬಿಕೊಂಡಿದ್ದ ಎರಡು ಬ್ಯಾಗ್‌ಗಳು ನನ್ನ ಪ್ರಯಾಣದ ಸಂಗಾತಿಗಳಾಗಿದ್ದವು.

ಜುಲೈ 16ರಂದು ಬೆಳಗ್ಗೆ 8 ಗಂಟೆಗೆ ನನ್ನ ಪ್ರಯಾಣ ಶುರುವಾಯ್ತು. ಈ ಭಾಗದಲ್ಲಿ ಕ್ಷಣಕ್ಷಣಕ್ಕೂ ಬದಲಾಗುವ ಪ್ರಕೃತಿಯ ಅನಿಶ್ಚಿತತೆ ಎದುರಿಸುವುದೇ ಚಾರಣಿಗರಿಗೆ ದೊಡ್ಡ ಸವಾಲು. ಒಮ್ಮೆ ತಿಳಿಬಿಸಿಲು, ಕ್ಷಣಮಾತ್ರದಲ್ಲಿ ಮಳೆ, ಅರೆಕ್ಷಣದಲ್ಲಿ ಹಿಮಮಳೆ, ಕೊರೆಯುವ ಚಳಿ ಹೀಗೆ ಎಲ್ಲವನ್ನೂ ಎದುರುಗೊಳ್ಳಲು ಸಿದ್ಧರಿರಬೇಕು. ಆ ದಿನವೂ ಓಲ್ಡ್‌ ಮನಾಲಿಯಲ್ಲಿ ಜೋರುಮಳೆ.

ಮೊದಲ ದಿನ 35 ಕಿಮೀ ನಡೆದು ಮರಿ ಎಂಬ ಜಾಗದಲ್ಲಿ ಟೆಂಟ್‌ ಬಿಚ್ಚಿ ಮಲಗಿದೆ. ಅಲ್ಲಿ ಖರ್ದುಂಗ್ಲಾ ಪಾಸ್‌ ಕಣ್ತುಂಬಿಕೊಳ್ಳಲು ಸೈಕ್ಲಿಂಗ್‌ ಮೂಲಕ ಹೊರಟಿದ್ದ ಪುಣೆಯ ನಿವಾಸಿ ಅಜಯ್‌ ಎಂಬುವವರು ಸಿಕ್ಕಿದರು. ಅಂತಹ ಅಪರಿಚಿತ ಜಾಗದಲ್ಲೂ ಕನ್ನಡಿಗರೊಬ್ಬರು ಮಾತಿಗೆ ಸಿಕ್ಕಿದ್ದಕ್ಕೆ ನನಗಂತೂ ಬಹಳವೇ ಖುಷಿಯಾಯ್ತು. ಮರುದಿನ ಮರಿಯಿಂದ 51 ಕಿಮೀ ದೂರವಿರುವ ಸಿಸು ತಲುಪುವ ಗುರಿಯೊಂದಿಗೆ ನಡೆಯಲು ಶುರುಮಾಡಿದೆ. 11 ಗಂಟೆ ಸುಮಾರಿಗೆ ರೋಹ್ಟಂಗ್‌ ಪಾಸ್‌ ತಲುಪಿದೆ.

ಜಗತ್ತಿನ ಮೈ ನವಿರೇಳಿಸುವ ಹೋಟೆಲ್ ಪೂಲ್‌ಗಳಿವು!

13,000 ಅಡಿ ಎತ್ತರದಲ್ಲಿರುವ ರೋಹ್ಟಂಗ್‌ ಪಾಸ್‌ನಿಂದ ಮುಂದಿನ ದಾರಿ ಕಡಿದಾದ ಇಳಿಜಾರುಗಳಲ್ಲಿ ಸಾಗುತ್ತದೆ. ಕುಕ್ಸಾರ್‌ನಲ್ಲಿ ಎತ್ತರೆತ್ತರದ ಪರ್ವತಗಳನ್ನು ಅಡ್ಡಲಾಗಿ ಕೊರೆದು ಮಾಡಿದ್ದ ಹೆಬ್ಬಾವಿನ ದೇಹದಂತೆ ಅಂಕುಡೊಂಕಾಗಿ ಕೆಳಮುಖ ಸಾಗಿದ್ದ ರಸ್ತೆಯನ್ನು ನೋಡಿದ ಮೇಲೆ ಹೀಗೆ ಸುತ್ತಿಬಳಸಿ ಇಳಿಯುವ ಬದಲು ನೇರಾನೇರ ಕೆಳಕ್ಕಿಳಿದರೆ ಹೇಗೆಂಬ ಯೋಚನೆ ಬಂತು. ಆದರೆ ಅದೆಂತಹ ಅಪಾಯಕಾರಿ, ಮೂರ್ಖತನದ ನಿರ್ಧಾರವೆಂಬುದು ಕೆಳಕ್ಕಿಳಿಯುವಾಗಲೇ ಅನುಭವಕ್ಕೆ ಬಂದಿದ್ದು.

ಕಾಲಡಿ ಜಾರುತ್ತಿದ್ದ ಕಲ್ಲುಗಳು, ಅಡಿಗಡಿಗೆ ಕುಸಿಯುತ್ತಿದ್ದ ನೆಲ, ಕೆಳಗಿನಿಂದ ಅಣಕಿಸುತ್ತಿದ್ದ ಕಣಿವೆ, ಎದುರಿಗೆ ಭಾನುಮುಟ್ಟುವ ಪರ್ವತಗಳು ದಿಗಿಲಿಕ್ಕಿಸಿದವು. ಹಾಗೂ ಹೀಗೂ ಸಾಹಸಮಾಡಿ 15 ಕಿಮೀ ಕೆಳಕ್ಕಿಳಿಯುವಷ್ಟರಲ್ಲಿ ಮೈಯೆಲ್ಲಾ ಬೆವರು ಕಿತ್ತುಬಂದು ಸಾಕಪ್ಪಾ ಸಾಕು ಅನ್ನಿಸಿತ್ತು. ಆ ದಿನ 5.30ರ ಸುಮಾರಿಗೆ ಸಿಸು ತಲುಪಿದೆ.

ಗುಂಡುಮುಖ, ಕೆಂಪು ಕೆನ್ನೆ, ಸಣ್ಣ ಕಣ್ಣುಗಳ ಟಿಬೇಟಿಯನ್‌ ಚಹರೆ ಹೊಂದಿದ್ದ ಜನರ ಸಾಲು ಸಾಲು ಮನೆಗಳು. ಬೀದಿಯಲ್ಲಿ ಕ್ರಿಕೆಟ್‌ ಆಡುತ್ತಿದ್ದ ಚಿಣ್ಣರು ಆಟಕ್ಕೆ ಆಹ್ವಾನಿಸಿದರು. ಅಲ್ಲಿಯೇ ಪರಿಚಿತರಾದ ಸ್ಥಳೀಯ ವ್ಯಕ್ತಿಯೊಬ್ಬರು ಅಂದು ತಮ್ಮ ಮನೆಯಲ್ಲಿ ಉಳಿದುಕೊಳ್ಳುವಂತೆ ಒತ್ತಾಯಿಸಿದರು.

ಇಲ್ಲಿ ಮನೆ ತಗೋಬೇಕಂದ್ರೆ ಚದರ ಅಡಿಗೆ 56,000 ರೂ ಕೊಡ್ಬೇಕು!

ಅವರು ರೋಟಿ, ರೈಸ್‌, ಸಬ್ಜಿ, ಬಿಸಿಬಿಸಿ ಸೂಪ್‌ ಮಾಡಿ ಬಡಿಸಿದ್ದನ್ನು ಎಂದಿಗೂ ಮರೆಯಲಾರೆ. ಮಾತಿನ ನಡುವೆ ನಾನು ಏಕಾಂಗಿಯಾಗಿ ಖಾರ್ದುಂಗ್‌ ಲಾ ಪಾಸ್‌ಗೆ ಹೊರಟಿರುವ ವಿಚಾರ ತಿಳಿದು, ಮುಂದಿನ ದಾರಿ ಅಪಾಯಕಾರಿಯಾಗಿದೆ. ನಡೆದು ಸಾಗುವುದು ಕಷ್ಟಸಾಧ್ಯ ಇಲ್ಲಿಂದಲೇ ವಾಪಸ್‌ ಹೊರಡುವಂತೆ ಪ್ರೀತಿಪೂರ್ವಕವಾಗಿ ಗದರಿದರು.

ಮೂರನೇಯ ದಿನ ಕೆಲಾಂಗ್‌ ತಲುಪಿ ಉಳಿದುಕೊಂಡೆ. ನಾಲ್ಕನೆಯ ದಿನ ಅಲ್ಲಿಂದ 32 ಕಿಮೀ ದೂರವಿರುವ ಡಾರ್ಚಾ ತಲುಪುವ ಗುರಿಯೊಂದಿಗೆ ಹೊರಟೆ. ಈ ಭಾಗದ ಜನರ ಅತಿಥಿ ಸತ್ಕಾರ ಗುಣವನ್ನು ಪದಗಳಲ್ಲಂತೂ ವರ್ಣಿಸಲು ಸಾಧ್ಯವಿಲ್ಲ. ಒಬ್ಬಂಟಿಯಾಗಿ ನಡೆದು ಬರುತ್ತಿದ್ದ ನನ್ನನ್ನು ಕಂಡ ವ್ಯಕ್ತಿಯೊಬ್ಬರು, ‘ಏನಪ್ಪಾ ಊಟ ಮಾಡಿ ಹೊರಟೆಯೋ ಹೇಗೆ?’ ಎಂದು ವಿಚಾರಿಸಿದರು. ಅವರ ಆಹ್ವಾನದಂತೆ ಆ ದಿನ ಅವರ ಮನೆಯಲ್ಲೇ ಉಳಿದುಕೊಂಡೆ. ರಾತ್ರಿ ಊಟಕ್ಕೆ ಮಟನ್‌ ಮಾಡಿ ಬಡಿಸಿದ್ದರು. ಆನಂತರ ತಿಳಿದಿದ್ದು ಅವರು ಪಕ್ಕಾ ಸಸ್ಯಹಾರಿಯಾಗಿದ್ದರೂ ನಾನು ಮಾಂಸಹಾರಿಯೆಂದು ತಿಳಿದ ಮೇಲೆ ಡಾರ್ಚಾದಿಂದ 34 ಕಿಮೀ ಕೆಳಭಾಗಕ್ಕೆ ನಡೆದು ಹೋಗಿ ಮಟನ್‌ ತಂದು ಅಡಿಗೆ ಮಾಡಿ ಬಡಿಸಿದ್ದರು. ಅವರ ಒಳ್ಳೆಯತನಕ್ಕೆ, ನನಗಾಗಿ ಅವರು ತಗೆದುಕೊಂಡ ಶ್ರಮಕ್ಕೆ ಹೃದಯ ತುಂಬಿಬಂತು.

ಅಪ್ಪರ್‌ ಲೀಗ್‌ಜಿಂಗ್‌ ಬಾರ್‌ನತ್ತ ಹೋಗುತ್ತಿರುವಾಗ ಅಚಾನಕ್ಕಾಗಿ ವಿಶೇಷ ವ್ಯಕ್ತಿಯೊಬ್ಬರು ಸಿಕ್ಕಿದರು. ಫ್ರಾನ್ಸ್‌ ಸಮೀಪದ ಯಾವುದೋ ದೇಶದವನಾದ (ಹೆಸರು ನೆನಪಿಲ್ಲ) ಆತ ಕಳೆದ 10 ತಿಂಗಳಿಂದ ಹಿಮಾಲಯದ ಜನರು ಓಡಾಡದಿರುವ ಸ್ಥಳಗಳಲ್ಲಿ ತಿರುಗಾಡಿ ಗುಹೆಗಳಲ್ಲಿ ಧ್ಯಾನಸ್ಥರಾಗಿರುವ ಯೋಗಿಗಳನ್ನು ಭೇಟಿಯಾಗುತ್ತಿದ್ದಾನೆಂಬುದು ತಿಳಿಯಿತು. ನನಗೂ ಕುತೂಹಲ ಹೆಚ್ಚಿ ಹೆಚ್ಚಿನ ವಿಚಾರ ಕೇಳುವ ಎಂದರೆ ನಾಚಿಕೆ ಸ್ವಭಾವದ ಆತ ಹೆಚ್ಚಿನ ಮಾತಿಗೆ ನಿಲ್ಲಲಿಲ್ಲ.

ಅಪ್ಪರ್‌ ಲಿಂಗ್‌ಜಿಂಗ್‌ ಬಾರ್‌ನಲ್ಲಿನ ವಾತಾವರಣ ಥೇಟ್‌ ಮರುಭೂಮಿಯಂತಿತ್ತು. ಮೇಲೆ ನೆತ್ತಸುಡುವ ರಣಬಿಸಿಲು. ದಾಹವಾಗುತ್ತಿತ್ತು ಆದರೆ, ನೀರು ಬೇಕೆಂದರೆ ಮತ್ತೆ 10 ಕಿಮೀ ಕೆಳಕ್ಕಿಳಿದು ಲಿಂಗ್‌ಜಿಂಗ್‌ ಬಾರ್‌ನಲ್ಲಿ ಹರಿಯುತ್ತಿದ್ದ ನದಿಯ ಬಳಿ ತೆರಳಬೇಕಿತ್ತು. ಆ ದಿನ ಅಪ್ಪರ್‌ ಲಿಂಗ್‌ಜಿಂಗ್‌ ಬಾರ್‌ನ ಮೈದಾನವೊಂದರಲ್ಲಿ ಟೆಂಟ್‌ ಬಿಚ್ಚಿ ಮಲಗಿ ವಿಶ್ರಮಿಸಿದೆ. ಇಲ್ಲಿನ ವಿಶೇಷವೆಂದರೆ ರಾತ್ರಿ 8 ಗಂಟೆಯಾದರೂ ಪೂರ್ತಿಯಾಗಿ ಕತ್ತಲು ಆವರಿಸುವುದಿಲ್ಲ. ಬೆಳಗ್ಗೆ 5ಕ್ಕೆಲ್ಲಾ ತಿಳಿ ಬಿಸಿಲು ಬಂದಿರುತ್ತದೆ.

ಡಾರ್ಕ್ ಟೂರಿಸಂ; ಕ್ರೂರವಾದ ಕಣ್ಣೀರ ಕಥೆ ಹೇಳುವ ತಾಣಗಳಿವು

ಅಲ್ಲಿಂದ ಹೊರಟು 33 ಕಿಮೀ ದೂರವಿರುವ ಕಿಲ್ಲಿಂಗ್‌ ಸೆರಾಯ್‌ ತಲುಪಿ ಮುಂದೆ ಸಿಗುವ ವಿಸ್ಕಿನಾಲಾಂಬ ಪ್ರದೇಶದಲ್ಲಿ ಉಳಿದುಕೊಂಡೆ. 9ನೇ ದಿನ ವಾಹನಗಳು ಸಂಚರಿಸುವ ವಿಶ್ವದ ಎರಡನೆಯ ಅತೀ ಎತ್ತರದ ರಸ್ತೆ ಟಾಂಗ್ಲಾಂಗ್‌ ಲಾ ಪಾಸ್‌ ರಸ್ತೆಯಲ್ಲಿ 20 ಕಿ.ಮೀ ಸಂಚರಿಸಿ ರೂಮ್ಸೆಯಲ್ಲಿ ಉಳಿದುಕೊಂಡೆ. 10 ನೇಯ ದಿನ ಡಾರ್ಚಾದಲ್ಲಿ ನಡೆಯುತ್ತಿರುವಾಗ ಪೋನ್‌ ನೆಟ್ವರ್ಕ್ ಸಿಕ್ಕಿತು.

ಪ್ರಯಾಣ ಆರಂಭವಾದ ನಾಲ್ಕನೆಯ ದಿನ ತಪ್ಪಿಸಿಕೊಂಡಿದ್ದ ನೆಟ್‌ವರ್ಕ್ ಆಗಲೇ ಸಿಕ್ಕಿದ್ದು. ಆದರೆ ಖುಷಿ ಜಾಸ್ತಿ ಸಮಯ ಉಳಿಯಲಿಲ್ಲ. ಅಂತರ್ಜಾಲ ನೋಡುತ್ತಿರುವಾದ ಅಘಾತವೊಂದು ಕಾದಿತ್ತು. ನಾನು ಸಂಪರ್ಕಕ್ಕೆ ಸಿಗದಿದ್ದುದರಿಂದ ಆತಂಕಗೊಂಡಿದ್ದ ಗೆಳೆಯರು ಇಂಟರ್‌ನೆಟ್‌ನಲ್ಲಿ ಮಿಸ್ಸಿಂಗ್‌ ಎಂದು ಪೋಸ್ಟ್‌ ಹಾಕಿದ್ದರು. ಜೊತೆಗೆ ಜಮ್ಮು- ಕಾಶ್ಮೀರ ಪೊಲೀಸ್‌ ಠಾಣೆಯಲ್ಲೂ ಮಿಸ್ಸಿಂಗ್‌ ಕೇಸು ದಾಖಲಿಸಿದ್ದರು.

11ನೆಯ ದಿನ ಲಡಾಕ್‌ನ ಕ್ಯಾಪಿಟಲ್‌ ಸಿಟಿ ಲೇ ತಲುಪಿದೆ. ಅಲ್ಲಿಂದ 37 ಕಿಮೀ ಸಂಚರಿಸಿದರೆ ಖರ್ದುಂಗ್‌ ಪಾಸ್‌ ತಲುಪಬಹುದು. 12ನೇಯ ದಿನ ಬೆಳಗ್ಗೆ 6ಕ್ಕೇ ಹೊರಟು ವಾಹನಗಳು ಸಂಚರಿಸುವ ವಿಶ್ವದ ಎತ್ತರದ ರಸ್ತೆ ಖರ್ದುಂಗ್‌ ಲಾ ಪಾಸ್‌ ರಸ್ತೆಯಲ್ಲಿ ಸಾಗಿದ್ದು ಜೀವನದ ಅವೀಸ್ಮರಣೀಯ ಕ್ಷಣ. ಸೌತ್‌ಫುಲ್‌ ಆರ್ಮಿ ಚೆಕ್ಕಿಂಗ್‌ ಫೋಸ್ಟ್‌ ದಾಟಿದ ನಂತರ ಮುಖ್ಯದಾರಿ ಬಿಟ್ಟು ಕಾಲುದಾರಿಯೊಂದರಲ್ಲಿ ಮೇಲೆ ಹತ್ತುತ್ತಿರುವಾಗ ಮುಂದೊಂದು ಹಿಂದೊಂದು ಹಾಕಿಕೊಂಡಿದ್ದ ಬ್ಯಾಗ್‌ಗಳು ತೊಂದರೆ ಕೊಡುತ್ತಿವೆಯೆಂದೆನಿಸಿ ಮುಂದಿದ್ದ ರಸ್ತೆಯಲ್ಲಿ ಎಸೆದೆ.

ಮೇಲಿನ ರಸ್ತೆಯಲ್ಲಿ ಬರುತ್ತಿದ್ದ ಸೈನಿಕರಿದ್ದ 20- 30 ಟ್ರಕ್‌ಗಳು ಬ್ಯಾಗ್‌ ಕಂಡಿದ್ದೇ ಗಕ್ಕನೆ ನಿಂತವು. ಕ್ಷಣಮಾತ್ರದಲ್ಲಿ ಕೆಲವು ಸೈನಿಕರು ನನ್ನನ್ನು ಸುತ್ತುವರೆದರು. ನನಗಂತೂ ಪರಿಸ್ಥಿತಿ ಅರ್ಥವಾಗದೇ ಕಕ್ಕಾಬಿಕ್ಕಿಯಾದೆ. ಮೇಲೆ ಎಸೆದ ಬ್ಯಾಗ್‌, ಕೆಳಗಿನಿಂದ ತೆವಳಿಕೊಂಡು ಬರುತ್ತಿದ್ದ ನಾನು ಅವರಿಗೆ ಭಯೋತ್ಪಾದಕನಂತೆ ಕಂಡಿದ್ದೆ. ನೂರಾರು ಪ್ರಶ್ನೆ ಕೇಳಿ, ನಾನು ಪ್ರವಾಸಿಯೆಂಬುದು ಖಚಿತವಾದ ಮೇಲೆ ಮುಂದೆ ಸಾಗಲು ಅನುಮತಿಸಿದರು.

ಪ್ರವಾಸಿಗರ ಕಂಡು ಚಂಗನೆ ನೆಗೆದು ಮಾಯವಾಗುವ ಕಾಡು ಕುದುರೆಗಳು, ಮೈ ಕೊರೆಯುವ ಚಳಿ, ಸುತ್ತಲೂ ಹಿಮದ ಸೀರೆ ಹೊದ್ದು ಮಲಗಿರುವ ಶ್ವೇತವರ್ಣದ ಪರ್ವತ ಶ್ರೇಣಿಗಳು, ಕೆಳಗೆ ವಿಸ್ತಾರವಾಗಿ ಚಾಚಿಕೊಂಡಿರುವ ಕಣಿವೆಗಳು. ಇಲ್ಲಿ ಪ್ರಕೃತಿ ಸೃಜಿಸಿರುವ ಮಾಯಾಲೋಕ ಎಂತವರನ್ನೂ ಮಂತ್ರಮುಗ್ಧಗೊಳಿಸುತ್ತದೆ. ಖುರ್ದುಂಗ್‌ ಲಾ ಪಾಸ್‌ ನಲ್ಲಿ ಹಿಮಪಾತವಾಗಿದ್ದರೆ ರಸ್ತೆ ಮುಚ್ಚಿಕೊಂಡು ಪ್ರಯಾಣ ಸಾಧ್ಯವಾಗದಿರಬಹುದು. ಆದರೆ ಅದೃಷ್ಟವಶಾತ್‌ ನಾನು ಅಲ್ಲಿದ್ದ ದಿನ ಹಿಮಪಾತವಾಗಿರಲಿಲ್ಲ. ಪ್ರಕೃತಿಯ ಅಸಾದೃಶ ಚೆಲುವನ್ನು ಕಣ್ತುಂಬಿಕೊಂಡು ಒಂದೆರೆಡು ಫೋಟೋ ಕ್ಲಿಕ್ಕಿಸಿಕೊಂಡು ವಾಪಸ್‌ ಹೊರಟೆ.

- ಮೋಹಿತ್ ಎಸ್ ಗೌಡ ಹಾಸನ