Asianet Suvarna News Asianet Suvarna News

ಈ ಸರೋವರದ ಬಳಿ ವರ್ಷ ಪೂರ್ತಿ ಬೇಸಿಗೆ!

ಇಸ್ರೇಲ್ ಹಾಗೂ ಜೋರ್ಡಾನ್ ನಡುವೆ ಇರುವ ಡೆಡ್ ಸೀ ಹಲವು ಅಚ್ಚರಿಗಳ ತಾಣ. ಹಾಗಾಗಿಯೇ ಇದು ವಿಜ್ಞಾನಿಗಳ ಅಚ್ಚುಮೆಚ್ಚಿನ ಪ್ರದೇಶ. ಇದರ ಹತ್ತು ಹಲವು ವೈಶಿಷ್ಟ್ಯಗಳು ಜಗತ್ತನ್ನೇ ಬೆರಗುಗೊಳಿಸಿವೆ.

7 interesting facts about Dead Sea
Author
Bangalore, First Published Aug 3, 2019, 12:25 PM IST

ಡೆಡ್ ಸೀಯ ಹಬ್ಬಿ ಹರಡಿಯೂ ಹರಿಯದೆ ನಿಂತ ನೀರು ಸಾವಿರಾರು ವರ್ಷಗಳಿಂದ ಜನರಿಗೆ ಕುತೂಹಲದ ಕೇಂದ್ರ. ಅಚ್ಚರಿಗಳ ಪರಮಾವಧಿ. ಜಗತ್ತಿನ ಮೊದಲ ಹೆಲ್ತ್ ರೆಸಾರ್ಟ್ ಎನಿಸಿಕೊಂಡಿರುವ ಡೆಡ್ ಸೀಯ ಕೆಸರುಮಣ್ಣು ಈಜಿಪ್ಟಿನ ಮಮ್ಮಿಗಳಿಗೂ ಬಾಮ್ ಆಗಿ ಬಳಕೆಯಾಗಿದೆ, ಗೊಬ್ಬರಕ್ಕೆ ಪೊಟ್ಯಾಶ್ ಆಗಿಯೂ ಬಳಕೆಯಾಗಿದೆ, ಸೌಂದರ್ಯವರ್ಧಕಗಳ ಪ್ರಮುಖ ಉತ್ಪನ್ನವಾಗಿಯೂ ಹೆಸರು ಮಾಡಿದೆ. ಇಲ್ಲಿನ ಸಿಕ್ಕಾಪಟ್ಟೆ ಉಪ್ಪುಪ್ಪಾದ ನೀರಿನಲ್ಲಿ ವಿಜ್ಞಾನಿಗಳು, ಸಂಶೋಧಕರು ಹೊಸತನ್ನು ಕಂಡುಕೊಳ್ಳುತ್ತಲೇ ಇದ್ದಾರೆ. ಹೆಕ್ಕಿದಷ್ಟೂ ಮುಗಿಯದ, ತೆಗೆದಷ್ಟೂ ತಣಿಯದ ವಿಶೇಷತೆಗಳು ಇಲ್ಲಿವೆ. ಅದರಲ್ಲಿ ಹೆಕ್ಕಿ ತಂದ ಕೆಲ ಕೌತುಕ ಸತ್ಯಗಳು ನಿಮ್ಮನ್ನು ಬೆರಗುಗೊಳಿಸದೆ ಇರವು. 

ಜಂಜಾಟದಿಂದ ಮುಕ್ತಿ ಬೇಕಾ? ಇಲ್ಲಿನ ಶಾಂತಿಯ ಬದುಕಿಗೆ ಜಂಪ್ ಮಾಡಿ

1. ಡೆಡ್ ಸೀ ಸಮುದ್ರವಲ್ಲ

ಉಪ್ಪಿನ ಸಮುದ್ರ ಎಂದೂ ಕರೆಯಲ್ಪಡುವ ಡೆಡ್ ಸೀ ನಿಜವೆಂದರೆ ಸಮುದ್ರವೇ ಅಲ್ಲ. ಅದೊಂದು ಉಪ್ಪಿನ ಕೆರೆಯಷ್ಟೇ. ಇದಕ್ಕಿರುವುದು ಒಂದೇ ಮೂಲ, ಅದು ಜೋರ್ಡಾನ್ ನದಿ. ಇದು ಸಮುದ್ರಕ್ಕೆ ಯಾವುದೇ ಸಂಪರ್ಕವನ್ನು ಕೂಡಾ ಹೊಂದಿಲ್ಲ. 

2. ಡೆಡ್ ಸೀಯಲ್ಲಿ ನಾವು ಮುಳುಗುವುದಿಲ್ಲ

ಡೆಡ್ ಸೀ ಲ್ಯಾಂಡ್ ಲಾಕ್ಡ್ ಆಗಿದ್ದು, ಸುತ್ತಮುತ್ತಲಿನ ಎಲ್ಲ ಊರುಗಳ ಮಿನರಲ್‌ಗಳು ಇಲ್ಲಿಗೇ ಹರಿದು ಬರುತ್ತವೆ. ಸೂರ್ಯನ ಉರಿಬಿಸಿಲಿಗೆ ಬಹುತೇಕ ನೀರು ಆವಿಯಾಗಿ ಅತಿಯಾದ ಉಪ್ಪಿನ ನೀರಷ್ಟೇ ಉಳಿಯುತ್ತದೆ. ಈ ಕಾನ್ಸೆಂಟ್ರೇಟೆಡ್ ಸಾಲ್ಟ್ ಸೊಲ್ಯೂಶನ್‌ಗೆ ಜಿಗಿದರೆ ಮುಳುಗದೆ ಮೇಲೆ ತೇಲುತ್ತಿರುತ್ತೇವೆ. ಅಷ್ಟೇ ಅಲ್ಲ, ಈಜಬೇಕೆಂದರೂ ಕೈ ಕಾಲು ತಾನೇ ಮೇಲೆ ಬಂದು ತೇಲಲಾರಂಭಿಸುತ್ತದೆ. ಇಲ್ಲಿ ನಿಮ್ಮ ಕಾಲು ನೀರೊಳಗಿನ ನೆಲ ಮುಟ್ಟುವುದಿಲ್ಲ.

ಭೂಮಿ ಮೇಲೆ ಇಂಥ ಸ್ಥಳಗಳಿವೆ ಅಂದ್ರೆ ನೀವು ನಂಬೋಲ್ಲ!

3. 'ಡೆಡ್' ಸೀಯಲ್ಲೂ 'ಲೈಫ್' ಇದೆ

ಮುಂಚೆ ಸಾಲ್ಟ್ ಲೇಕ್ ಎಂದು ಕರೆಸಿಕೊಳ್ಳುತ್ತಿದ್ದ ಡೆಡ್ ಸೀ, ರೋಮನ್ನರ ಕಾಲದಲ್ಲಿ ಡೆಡ್ ಸೀ ಹೆಸರು ಪಡೆಯಿತು. ಏಕೆ ಗೊತ್ತೇ? ಇಲ್ಲಿಗೆ ಭೇಟಿ ನೀಡಿದ ಪ್ರವಾಸಿಗರು ನೀರಿನಲ್ಲಿ ಜಲಚರಗಳಾಗಲೀ, ಸಸ್ಯವಾಗಲೀ ಇಲ್ಲದ್ದನ್ನು ನೋಡಿ ಈ ಹೆಸರು ಕೊಟ್ಟರು. ಇದರ ಅತಿಯಾದ ಉಪ್ಪಿನ ಕಾರಣದಿಂದ ಜೀವರಾಶಿ ಇಲ್ಲಿ ಬದುಕುವುದಿಲ್ಲ, ಬೆಳೆಯುವುದಿಲ್ಲ ಎಂದು ನಂಬಲಾಗಿತ್ತು. ಆದರೆ, ಸೂಕ್ಷ್ಮ ಜೀವಿಗಳು ಡೆಡ್‌ಸೀಯಲ್ಲಿ ಆರಾಮಾಗಿ ಕಾಲು ಚಾಚಿ ಮಲಗಿರುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಇಂಥ ಉಪ್ಪಿನ ನೀರಲ್ಲೂ, ಅತಿರೇಖದ ಹವಾಮಾನದಲ್ಲೂ ಬ್ಯಾಕ್ಟೀರಿಯಾ ಹಾಗೂ ಫಂಗೈ ಇರುವುದು, ವಿಶ್ವಾದ್ಯಂತ ಸಲೈನ್ ಅಗ್ರಿಕಲ್ಚರ್ ಎಂಬ ಹೊಸ ಕೃಷಿಪದ್ಧತಿ ಬೆಳೆಯಲು ಕಾರಣವಾಗಿದೆ. 

4. ಭೂಮಿಯಲ್ಲೇ ಅತಿ ಉಪ್ಪಾದ ಕೆರೆ ಇದಲ್ಲ

ಬಹಳ ಇತ್ತೀಚಿನವರೆಗೆ ಡೆಡ್ ಸೀ ಜಗತ್ತಿನಲ್ಲೇ ಅತಿ ಉಪ್ಪಾದ ನೀರಿನ ಆಕರ ಎಂದು ನಂಬಲಾಗಿತ್ತು. ಆದರೆ, ಅಂಟಾರ್ಟಿಕಾದ ಡಾನ್ ಜುವಾನ್ ಪಾಂಡ್ ಶೇ.40ರಷ್ಟು ಸ್ಯಾಲಿನಿಟಿಯೊಂದಿಗೆ ಈ ವಿಷಯದಲ್ಲಿ ಮೊದಲ ಸ್ಥಾನಕ್ಕೇರಿದರೆ, ಡೆಡ್ ಸೀಯ ಸ್ಯಾಲಿನಿಟಿ ಪ್ರಮಾಣ ಶೇ.34ರಷ್ಟು. 

5. ಡೆಡ್ ಸೀಯ ತೀರ ಭೂಮಿಯ ಅತಿ ಕೆಳಗಿನ ಒಣಭೂಮಿ

ಡೆಡ್ ಸೀ‌ಯನ್ನು ಸುತ್ತುವರೆದ ತೀರಪ್ರದೇಶ ಸಮುದ್ರ ಮಟ್ಟಕ್ಕಿಂತ 1,400 ಅಡಿ ಕೆಳಗಿದ್ದು, ಭೂಮಿಯಲ್ಲೇ ಓಪನ್ ಏರ್‌ನಲ್ಲಿ ಜನ ಸಂಚರಿಸಬಹುದಾದ ಅತಿ ಕೆಳಗಿನ ಪ್ರದೇಶವಾಗಿದೆ. ಇಂಥ ಕೆಳ ಒಣ ಪ್ರದೇಶದಲ್ಲಿ ನಿಂತ ಕೆರೆಯು ಸುಮಾರು 1000 ಅಡಿಗಳಷ್ಟು ಆಳವಿದ್ದು, ಜಗತ್ತಿನಲ್ಲೇ ಅತಿ ಆಳದ ಅತಿ ಉಪ್ಪಾದ ಕೆರೆ ಇದಾಗಿದೆ. 

ವಾಟರ್ ಪಾರ್ಕ್‌ಗೆ ಹೋಗಿದ್ರಾ? ಎಂಥಾ ನೀರಿನಲ್ಲಿ ಆಡಿಬಂದಿರಿ ಗೊತ್ತಾ?

6. ಡೆಡ್ ಸೀಯಲ್ಲಿ ವರ್ಷ ಪೂರ್ತಿ ಬಿಸಿಲು

ವರ್ಷಕ್ಕೆ 2 ಇಂಚು ಮಳೆ ಬರಬಹುದು, ಆದರೆ, ವರ್ಷವಿಡೀ ಈ ಪ್ರದೇಶದಲ್ಲಿ ಬಿಸಿಲೋ ಬಿಸಿಲು. ಚಳಿಗಾಲದಲ್ಲಿ ಇಲ್ಲಿ ಸುಮಾರು 70 ಡಿಗ್ರಿ ಫ್ಯಾರನ್‌ಹೀಟ್ ತಾಪಮಾನವಿದ್ದರೆ, ಬೇಸಗೆಯಲ್ಲಿ ಕೇಳುವುದೇ ಬೇಡ, 100 ಡಿಗ್ರಿಗಿಂತ ಕೆಳಗಿಳಿವ ಛಾನ್ಸೇ ಇಲ್ಲ. ಇಷ್ಟೊಂದು ಸನ್ನಿಯಾಗಿದ್ದರೂ, ಆಶ್ಚರ್ಯವೆಂದರೆ ನೀವಿಲ್ಲಿ ಸನ್‌ಸ್ಕ್ರೀನ್ ಹಚ್ಚದೆಯೇ ಆರಾಮಾಗಿ ತಿರುಗಾಡಬಹುದು. ಏಕೆಂದರೆ, ಯುವಿ ಕಿರಣಗಳು ಇಲ್ಲಿಗೆ ತಲುಪಲು ಹೆಣಗಾಡಿ ಸೋಲುವುದೇ ಹೆಚ್ಚು. ಹಾಗಾಗಿ, ಇಲ್ಲಿನ ಬಿಸಿಲು ಹೆಚ್ಚು ಸುಡುವುದಿಲ್ಲ.

7. ಡೆಡ್ ಸೀ ಎಂಬುದು ಚಿಕಿತ್ಸಾ ಕೇಂದ್ರ

ಬಹಳಷ್ಟು ಆರೋಗ್ಯ ಸಮಸ್ಯೆಗಳಿಗೆ ಈ ಕೆರೆ ಚಿಕಿತ್ಸಾ ಸ್ವರ್ಗ ಎನ್ನುತ್ತಾರೆ ಹಲವರು. ಇಲ್ಲಿನ ಕೆಸರನ್ನು ಬಹಳಷ್ಟು ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಅತಿಯಾದ ವಾತಾವರಣದ ಒತ್ತಡ, ಕಡಿಮೆ ಅಲರ್ಜಿಕಾರಕಗಳು, ಸಮುದ್ರ ಮಟ್ಟಕ್ಕಿಂತ ಹೆಟ್ಚು ಆಮ್ಲಜನಕ- ಅನುಮಾನವೇ ಇಲ್ಲ, ಇಷ್ಟೊಂದು ಫ್ರೆಶ್ ಏರ್ ನೀವು ಎಂದೂ ಉಸಿರಾಡಿರುವುದಿಲ್ಲ. ಜೊತೆಗೆ ನೀರಿನಲ್ಲಿರುವ ಅತ್ಯಧಿಕ ಮಿನರಲ್ ಪ್ರಮಾಣ ಬೇರೆ. ಇಂಥ ನೀರಲ್ಲಿ ತೇಲುತ್ತಾ ಗಂಟೆಗಳನ್ನು ತೆಗೆದರೆ ಎಂಥ ಕಾಯಿಲೆಯಾದರೂ ಓಡಿ ಹೋಯಿತು ಎನಿಸದಿರಲು ಸಾಧ್ಯವೇ ಇಲ್ಲ. 

Follow Us:
Download App:
  • android
  • ios