Asianet Suvarna News Asianet Suvarna News

ಬತ್ತಿದ ಜಲಾಶಯದೊಳಗಿಂದ ಎದ್ದು ಬಂದಿವೆ ಸಾವಿರದ ಕಥೆಗಳು!

ನಮ್ಮನೆಯ ಲೈಟು ಬೆಳಗುವುದಷ್ಟೇ ನಮಗೆ ಮುಖ್ಯ ಅನ್ನುವ ಆಧುನಿಕ ಮನಸ್ಸು ಒಂದು ಕಡೆ. ಕಣ್ಣೆದುರು ಉಕ್ಕಿ ಬರುವ ನೀರು ಮನೆ, ಹೊಲ, ಬದುಕನ್ನೇ ನುಂಗಿ ಹಾಕುವುದನ್ನು ನೋಡುತ್ತ ಉಗುಳು ನುಂಗುವ ಜೀವಗಳು ಇನ್ನೊಂದು ಕಡೆ. ದಶಕಗಳ ಬಳಿಕ ಕಣ್ಣೀರ ಕಥೆಗೆ ಮತ್ತೆ ಜೀವ ಬಂದಿದೆ. ಬರಿದಾದ ಲಿಂಗನಮಕ್ಕಿ ಜಲಾಶಯ ಸಾವಿರದ ಕಥೆಗಳಿಗೆ ಉಸಿರು ತುಂಬಿದೆ.

karnataka reservorirs empty as no rain fall in around region incuding Shivamogga
Author
First Published Jul 9, 2023, 2:47 PM IST

-ಗೋಪಾಲ್ ಯಡಗೆರೆ

ಕಣ್ಣು ಹಾಯಿಸಿದಷ್ಟು ದೂರದವರೆಗೆ ಸಮುದ್ರದ ಹಾಗೆ ನೀಲ ನೀರು. ನಡು ನಡುವೆ ನೀರ ಸೀಳಿ ಎದ್ದು ನಿಂತು ಅಸ್ತಿತ್ವ ದಾಖಲಿಸುತ್ತಿರುವ ಕಿರು ಗುಡ್ಡಗಳು. ಅದರ ಪಾದ ತೊಳೆಯುತ್ತಿರುವ ತೆಳುವಾದ ಅಲೆಗಳು. ಈ ನೀಲ ನೀರ ಮೇಲೆ ಮೆಲ್ಲಗೆ ಲಾಂಚ್ ಶಬ್ದ ಮಾಡುತ್ತಾ ಹೋಗುತ್ತಿದ್ದಂತೆ ಅದೇನೋ ಆನಂದ! ಆದರೆ ಇದೆಲ್ಲ ಕ್ಷಣಿಕವಾಗುವುದು ನೀರ ಒಳಗೆ ಏನಿರಬಹುದೆಂಬ ಊಹೆಯತ್ತ ಮನವು ತಿರುಗಿದಾಗ.

ಈಗ ಈ ಆನಂದಕ್ಕೆ ಕೊಳ್ಳಿ ಇಡುವ ದೃಶ್ಯಗಳು ಅಲ್ಲಲ್ಲಿ ಎದ್ದು ಕಾಣುತ್ತಿದ್ದು, ಇಡೀ ಶರಾವತಿಯ ದುರಂತ ಕತೆಯನ್ನು ಮತ್ತೆ ಹೇಳಲು ಯತ್ನಿಸುತ್ತಿರುವಂತೆ ಭಾಸವಾಗುತ್ತಿದೆ. ಸಾವಿರ ಸಾವಿರ ಕುಟುಂಬಗಳ ಬೇರುಗಳನ್ನು ಕತ್ತರಿಸಿದ, ಛಿದ್ರ ಛಿದ್ರ ಸ್ಥಿತಿಯಲ್ಲಿ ಎಲ್ಲೆಲ್ಲೋ ಎಸೆಯಲು ಕಾರಣವಾದ, ಆಧುನಿಕರಣದ ದ್ಯೋತಕ ಎಂಬ ಹೆಗ್ಗಳಿಕೆಯ ಹೆಸರಿನಲ್ಲಿ ನಿರ್ಮಾಣವಾಗಿ ಶಾಂತವಾಗಿ ನಿಂತಿರುವ ಲಿಂಗನಮಕ್ಕಿ ಜಲಾಶಯ ನಾಡಿಗೆ ಬೆಳಕು ನೀಡಿದ್ದು ನಿಜವಾದರೂ ಸಾವಿರ ಸಾವಿರ ಮನೆ, ಮನದ ಬೆಳಕು ನಂದಿಸಿದ್ದು ಅಷ್ಟೇ ನಿಜ!

ಜಲಾಶಯ ನಿರ್ಮಾಣದ ವೇಳೆ ಒಂದು ಸಂಸ್ಕೃತಿಯೇ ಮುಳುಗಿ ಹೋದ ಕತೆಗಳು ಇಲ್ಲಿದೆ. ನೂರಾರು ಗೋಳಿನ, ಸಂಕಷ್ಟದ ಕತೆಗಳು, ಕಣ್ಣೀರು ಜಲಾಶಯದ ನೀರಿನಲ್ಲಿ ಕರಗಿ ಹೋಗಿದ್ದು ಕೂಡ ಇತಿಹಾಸ. ಇಲ್ಲಿಂದ ವಲಸೆ ಹೋದ ಸಾವಿರಾರು ಮಂದಿ ತಮ್ಮ ಸಂಬಂಧಗಳು, ಭಾವನೆಗಳ ಕೊಂಡಿಗಳನ್ನು ಕಳೆದುಕೊಂಡು ಎಲ್ಲೆಲ್ಲಿಯೋ ಛಿದ್ರವಾಗಿ ಹೋದರು. ಸಾವಿರಾರು ಜನರ ಬದುಕು ಬೀದಿ ಪಾಲಾಯಿತು. ಸಂತ್ರಸ್ತರಿಗೆ ಇನ್ನೂ ಸೂಕ್ತ ಪರಿಹಾರ ಸಿಗದೆ, ಸೂಕ್ತ ನೆಲೆ ಸಿಗದೆ ಅನಾಥರಂತೆ ಬದುಕುತ್ತಿರುವ ಕತೆಗಳು ಒಂದರ ಹಿಂದೆ ಜೋಡಿಸಿ ನಿಂತಿವೆ.

ಹನಿ ನೀರಿಗಾಗಿ ಹಾಹಾಕಾರ: ನಮಗೆ ನಿಮ್ಮ ಗ್ಯಾರಂಟಿಗಳು ಬೇಡ, ಕುಡಿಯಲು ನೀರು ಕೊಡಿ ಎನ್ನುತ್ತಿರುವ ಜನ..!

ಮತ್ತೆ ಬರಿದಾದ ಜಲಾಶಯ
ಜಲಾಶಯ ತುಂಬಲು ಕಾರಣವಾದ ಪ್ರಕೃತಿಯೇ ಈ ಬಾರಿ ಜಲಾಶಯವನ್ನು ಬರಿದು ಮಾಡುತ್ತಿದೆ. ಹೀಗೆ ಬರಿದು ಮಾಡುವ ಮೂಲಕ ಈ ಯೋಜನೆಯ ಹಿಂದಿನ ರೋಚಕ, ರೋಧನೆಯ, ವಿಷಾದದ ಕತೆಗಳು ಮೇಲೇಳುತ್ತಿದೆ. ಈ ಎಲ್ಲ ಅಪಸವ್ಯಜೀವನದಿ ಶರಾವತಿಯನ್ನು ಬಂಧಿಸಿದೆ. ಅದರ ಹೆಸರಿಗೆ ಮೆತ್ತಿರುವ ಕಥಾನಕ ಮೆಲು ಶಬ್ದದ ಸುಳಿಗಾಳಿಯಲ್ಲಿ ಕೇಳಿ ಬರುವಂತೆ ಮಾಡಿದೆ.

ಜೂನ್ ಕೊನೆಯಾದರೂ ಬಾರದ ಮಳೆರಾಯ ಜಲಾಶಯವನ್ನು ಅಣಕಿಸುತ್ತಾ ನಿಂತಂತೆ ಅನಿಸುತ್ತಿದೆ. ಮುಳುಗಡೆಯಿಂದ ಮಾರು ದೂರವಿದ್ದ ಮನೆಗಳೆಲ್ಲ ಹಲವು ಯೋಜನಗಳಷ್ಟು ದೂರವಾಗಿದ್ದವು. ಈಗ ಅವೆಲ್ಲ ಮತ್ತೆ ಹತ್ತಿರವಾಗುತ್ತಿದೆ. ಮನೆ ಮಾರು, ತೋಟ-ಗದ್ದೆಗಳನ್ನು ಮುಳುಗಿಸಿದ್ದ ಹಿನ್ನೀರು ಎಲ್ಲವನ್ನೂ ಮತ್ತೆ ಅನಾವರಣಗೊಳಿಸುತ್ತಿದೆ. ತಮ್ಮ ಹಿರಿಯರಿದ್ದ ಜಾಗ ಎಂದು ಮಕ್ಕಳಿಗೆ ಕತೆ ಹೇಳುವ ಗುಂಪೂ ಇಲ್ಲಿ ನಿಂತು ನೋಡುತ್ತಿದೆ. ಅವರ ನೋವು ನಲಿವುಗಳ ಕತೆಯನ್ನು ತಮ್ಮ ಮುಂದಿನ ತಲೆಮಾರಿಗೆ ತೋರಿಸುತ್ತಾ, ತಮ್ಮ ತೋಟವಿತ್ತಿಲ್ಲಿ, ತಮ್ಮೂರ ದೇವಸ್ಥಾನವಿದು, ನಮ್ಮ ಆರಂಕಣದ ಮನೆಯ ಅಂಗಳವಿದು ಎಂದೆಲ್ಲ ಸಾಕ್ಷ್ಯದೊಂದಿಗೆ ತೋರಿಸುತ್ತಿದ್ದಾರೆ. ನಾವು ಓಡಾಡುತ್ತಿದ್ದ ಹಕ್ಕಲು, ಗದ್ದೆಯ ದಾರಿ ಎಂದೆಲ್ಲ ಕೆಸರು ಗಟ್ಟಿಯಾಗಿ ನೆಪಕ್ಕಷ್ಟೇ ಉಳಿದ ಕುರುಹುಗಳನ್ನು ಅಂದಾಜಿನ ಮೇಲೆ ತೋರಿಸುತ್ತಾ ಕಣ್ಣಂಚಿನಲ್ಲಿ ಇಣುಕುವ ಹನಿಯನ್ನು ಮರೆಯಲ್ಲೇ ಒರೆಸುವ ಮಂದಿಗೂ ಇಲ್ಲಿ ಬರವಿಲ್ಲ.

ಲಿಂಗನಮಕ್ಕಿ ಜಲಾಶಯದಲ್ಲೀಗ ಶೇ.10ರಷ್ಟು ಮಾತ್ರ ನೀರಿದೆ. ಮಳೆಯ ಕೊರತೆಯಿಂದ ದಿನದಿಂದ ದಿನಕ್ಕೆ ನೀರು ಬತ್ತುತ್ತಿದೆ. ಜಲಾಶಯದ ನೀರು ಹಿಂದಕ್ಕೆ ಸರಿದಂತೆ ಮುಳುಗಿದ ಊರುಗಳು ಮೇಲೆದ್ದು ಬಂದು ಬಂದು ತಮ್ಮ ಕತೆಯನ್ನು ಜಗತ್ತಿಗೆ ಬಿತ್ತರಿಸುವಂತೆ ಭಾಸವಾಗುತ್ತಿದೆ. ಪ್ರವಾಸಿಗರಂತೆ ಬಂದು ನಿಂತು ಬತ್ತಿದ ಜಲಾಶಯದ ಖಾಲಿ ಜಾಗವನ್ನು ನೋಡುತ್ತಾ ವಿಷಾದ ಯೋಗದಿಂದ ಬಳಲುವವರೂ ಇದ್ದಾರೆ.

ಇದರ ನಡುವೆ ಲಿಂಗನಮಕ್ಕಿ ಜಲಾಶಯದ ಇನ್ನೊಂದು ತುದಿಯಲ್ಲಿ ಇರುವ ಸಿಗಂದೂರು ದೇವಸ್ಥಾನಕ್ಕೆ ಲಾಂಚ್‌ನಲ್ಲಿ ಹೋಗಲಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಹೊಳೆಬಾಗಿಲಿನಿಂದ ಸಿಗಂದೂರು ದೇವಸ್ಥಾನಕ್ಕೆ 1.5 ಕಿಮೀ ಉದ್ದದ ಸೇತುವೆ ನಿರ್ಮಿಸಲಾಗುತ್ತಿದ್ದು, ಭವಿಷ್ಯದಲ್ಲಿ ಇದೂ ಕೂಡ ಪ್ರವಾಸಿಗರ ಆಕರ್ಷಣೆಯಾಗಬಹುದು. ಆದರೆ ಲಾಂಚ್ ಪ್ರಯಾಣ ಎಂಬುದು ಮರೀಚಿಕೆಯಾಗುತ್ತದೆ.

Karnataka Rain Updates; ಜಲಪಾತ, ಜಲಾಶಯ ನೋಡಲು ಜನಸಾಗರ

ಎದ್ದು ನಿಂತ ಹಿರೇಭಾಸ್ಕರ ಜಲಾಶಯ
ನೂರಾರು ಊರುಗಳನ್ನು ಮುಳುಗಿಸಿದ್ದ ಮಡೆನೂರು ಅಥವಾ ಹಿರೇಭಾಸ್ಕರ ಜಲಾಶಯವನ್ನು ಅದು ನಿರ್ಮಾಣವಾದ ಕೇವಲ 15 ವರ್ಷಗಳಲ್ಲಿ ಆಪೋಶನ ತೆಗೆದುಕೊಂಡ ಹೆಮ್ಮೆ ಕೂಡ ಲಿಂಗನಮಕ್ಕಿ ಜಲಾಶಯಕ್ಕಿದೆ.

1939ರಲ್ಲಿ ಆಗಿನ ಮೈಸೂರು ಮಹಾರಾಜ ಕೃಷ್ಣರಾಜ ಒಡೆಯರ್ ಶರಾವತಿ ನದಿಗೆ ಅಡ್ಡಲಾಗಿ ಮಡೆನೂರು ಎಂಬಲ್ಲಿ ಅಣೆಕಟ್ಟೊಂದನ್ನು ನಿರ್ಮಿಸಲು ಅಡಿಪಾಯ ಹಾಕಿದರು. ಹತ್ತು ವರ್ಷಗಳ ಕಾಲ ಇದನ್ನು ನಿರ್ಮಿಸಿ ಸ್ವಾತಂತ್ರ್ಯದ ಬಳಿಕ ಅಂದರೆ 1949ರಲ್ಲಿ ಉದ್ಘಾಟಿಸಲಾಯಿತು. ಆಗ ಇದಕ್ಕೆ ಬಳಸಿದ್ದು ಸಿಮೆಂಟ್ ಅಲ್ಲ. ಮರಳು, ಸುಣ್ಣ ಮತ್ತಿತರ ವಸ್ತುಗಳನ್ನು ಬಳಸಿ ತಯಾರಿಸಿದ ಗಾರೆಯನ್ನು ಉಪಯೋಗಿಸಲಾಗಿದೆ. 60ರ ದಶಕದಲ್ಲಿ ಇದಕ್ಕಿಂತ ದೊಡ್ಡದಾದ ಅಣೆಕಟ್ಟನ್ನು ನಿರ್ಮಿಸಲು ನಿರ್ಧರಿಸಲಾಯಿತು. ಭಾರೀ ಜಲಾಶಯವಾದ ಲಿಂಗನಮಕ್ಕಿ ಅಣೆಕಟ್ಟಿನಲ್ಲಿ ಹಿರೇ ಭಾಸ್ಕರ ಮುಳುಗಿ ಹೋಯಿತು. ಆಗಾಗ ನೀರು ಇಳಿದಾಗ ಈ ಹಿರೇಭಾಸ್ಕರ ಜಲಾಶಯ ಮೇಲೆದ್ದು ತನ್ನ ಅಸ್ತಿತ್ವ ತೋರಿಸುತ್ತದೆ. ಮಡೆನೂರು ಅಣೆಕಟ್ಟು ಹಳೆಯ ಮೈಸೂರು ಪ್ರದೇಶದ ಸಿವಿಲ್ ಇಂಜಿನಿಯರ್ ಗಣೇಶ್ ಅಯ್ಯರ್ ಉಸ್ತುವಾರಿಯಲ್ಲಿ ನಿರ್ಮಾಣವಾಗಿದ್ದು, ಇದು ಸೈಫನ್ ತಂತ್ರಜ್ಞಾನದೊಂದಿಗೆ ನಿರ್ಮಾಣವಾಯಿತು. ಈ ತಂತ್ರಜ್ಞಾನದಲ್ಲಿ ಅಯ್ಯರ್ ಪರಿಣಿತರಾಗಿದ್ದರು. ಜಲಾಶಯದಲ್ಲಿ ನೀರು ಗರಿಷ್ಟ ಮಟ್ಟ ಮುಟ್ಟಿದಾಗ ಸ್ವಯಂಚಾಲಿತವಾಗಿ ನೀರು ಜಲಾಶಯದಿಂದ ಹೊರ ಹೋಗುವ ತಂತ್ರಜ್ಞಾನವೇ ಸೈಫನ್. ಇದರ ಜೊತೆಗೆ 3 ಕ್ರಸ್ಟ್‌ಗೇಟ್‌ಗಳೂ ಇವೆ.

ಸುಮಾರು 60 ವರ್ಷಗಳಿಂದ ನೀರಿನಲ್ಲಿಯೇ ಮುಳುಗಿರುವ ಈ ಜಲಾಶಯ ಆಗಾಗ್ಗೆ ಮೇಲಕ್ಕೆ ಬಂದು ಗೋಚರಿಸುತ್ತದೆ. ಈಗಲೂ ಇದು ಹಾಗೆಯೇ ಇದೆ. ಸಣ್ಣಪುಟ್ಟ ಡ್ಯಾಮೇಜ್ ಬಿಟ್ಟರೆ ಇನ್ನೂ ಹಾಗೆಯೇ ಇರುವುದು ಆಗಿನ ಗುಣಮಟ್ಟದ ಕಾಮಗಾರಿಗೆ ಹಿಡಿದ ಕನ್ನಡಿಯಾಗಿದೆ. ಇಲ್ಲಿಗೆ ಪ್ರವಾಸಿಗರು ಮುಗಿಬೀಳುತ್ತಾರೆ. ಇದೊಂದು

ಅಪಾಯಕಾರಿ ಜಾಗ ಕೂಡ ಹೌದು. ನೀರು ಇಳಿದಾಗ ನಡೆದುಕೊಂಡು ಅಥವಾ ಸ್ವಂತ ವಾಹನದಲ್ಲಿ ಹೋಗಬಹುದು. ಆದರೆ ಈ ಬಾರಿ ಅರಣ್ಯ ಇಲಾಖೆ ಪ್ರವೇಶ ನಿರಾಕರಿಸಿದೆ.

Karnataka Reservoir Water Level:ಮುಂಗಾರು ಅಬ್ಬರದ ಮಧ್ಯೆ ಇಂದು ಜಲಾಶಯಗಳಲ್ಲಿ ಎಷ್ಟಿದೆ ನೀರಿನ ಪ್ರಮಾಣ?

15 ಸಾವಿರ ಸಂತ್ರಸ್ತರು
ಲಿಂಗನಮಕ್ಕಿ ಜಲಾಶಯದ ಹಿನ್ನೀರು 336 ಕಿ.ಮೀ ವ್ಯಾಪಿಸಿದೆ. ಒಟ್ಟು 79 ಸಾವಿರ ಎಕರೆ ಭೂಮಿ ಜಲದೊಡಲು ಸೇರಿತ್ತು. ಅದರಲ್ಲಿ 965 ಅಡಕೆ ತೋಟ 12,500 ಎಕರೆ ಭತ್ತದ ಗದ್ದೆ. 1750 ಎಕರೆ ಖುಷ್ಕಿ ಜಮೀನುಗಳು, 2500 ಕುಟುಂಬಗಳ 15 ಸಾವಿರ ಜನರು ಸಂತ್ರಸ್ತರು ಚದುರಿ ಹೋದರು.

Follow Us:
Download App:
  • android
  • ios