ಮೈಸೂರು(ನ.23): ಹುಣಸೂರು ಕ್ಷೇತ್ರದಿಂದ 1998ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೊಟ್ಟಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಚಾಮುಂಡೇಶ್ವರಿ ಕ್ಷೇತ್ರದ ಹಾಲಿ ಶಾಸಕ ಜಿ.ಟಿ. ದೇವೇಗೌಡ ಅವರದ್ದು ಈಗ ಒಂದು ರೀತಿಯಲ್ಲಿ ‘ತ್ರಿಶಂಕು’ ಪರಿಸ್ಥಿತಿ. ಆದರೂ ‘ತ್ರಿಪಕ್ಷೀಯ’ರಿಂದಲೂ ಬೇಡಿಕೆ!.

ಇದು ವಿಚಿತ್ರವಾದರೂ ಸತ್ಯ..! ಎಪ್ಪತ್ತರ ದಶಕದಲ್ಲಿಯೇ ಸಹಕಾರ ಕ್ಷೇತ್ರದ ಮೂಲಕ ಸಾರ್ವಜನಿಕ ರಂಗಕ್ಕೆ ಪ್ರವೇಶಿಸಿದ ಜಿ.ಟಿ. ದೇವೇಗೌಡ ಮೈಸೂರು ಎಂಪಿಎಂಸಿ ಉಪಾಧ್ಯಕ್ಷರಾಗಿ, ನಂತರ ಇಲವಾಲ ಕ್ಷೇತ್ರದಿಂದ ಎರಡು ಬಾರಿ ಜಿಪಂ ಸದಸ್ಯರಾಗಿ, ಆಡಳಿತ ಪಕ್ಷದ ನಾಯಕರಾಗಿ, ಒಂದು ಅವಧಿಗೆ ಜಿಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ವಿಧಾನಸಭಾ ಚುನಾವಣೆಗೆ ಮುನ್ನವೇ 1996 ರಲ್ಲಿಯೇ ಮೈಸೂರು ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಆಗ ಎಚ್‌.ಡಿ.ದೇವೇಗೌಡ ಮುಖ್ಯಮಂತ್ರಿ, ಜೆ.ಎಚ್‌. ಪಟೇಲ್‌ ಉಪ ಮುಖ್ಯಮಂತ್ರಿಯಾಗಿದ್ದರು. ರಾಜ್ಯಾದ್ಯಂತ ಜನತಾದಳದ ಅಲೆ. ಹೀಗಾಗಿ ಆ ಪಕ್ಷ 16 ಸ್ಥಾನಗಳನ್ನು ಪಡೆಯಿತು. ಜಿ.ಟಿ. ದೇವೇಗೌಡರು ಪ್ರಬಲ ಪೈಪೋಟಿ ನೀಡಿದರೂ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ಎದುರು ಅಲ್ಪಮತಗಳ ಅಂತರದಿಂದ ಸೋತರು.

ಮೈಸೂರು: ಒಳ ಉಡುಪಿಗೆ ಅಂಬೇಡ್ಕರ್ ಚಿತ್ರ, BJP ಕಾರ್ಯಕರ್ತನಿಂದ ಅವಮಾನ

1996 ರಲ್ಲಿ ಕೇಂದ್ರದಲ್ಲಿ ಎಚ್‌.ಡಿ. ದೇವೇಗೌಡ ನೇತೃತ್ವದ ಸಂಯುಕ್ತ ರಂಗ ಸರ್ಕಾರ, ನಂತರ ಬಂದ ಐ.ಕೆ.ಗುಜ್ರಾಲ್‌ ನೇತೃತ್ವದ ಸರ್ಕಾರ ಪತನಗೊಂಡಿದ್ದರಿಂದ 1998ರಲ್ಲಿ ಮತ್ತೆ ಲೋಕಸಭೆ ಚುನಾವಣೆ. ಜಿ.ಟಿ. ದೇವೇಗೌಡ ಮತ್ತೆ ಜನತಾದಳ ಅಭ್ಯರ್ಥಿ. ಆಗ ಬಿಜೆಪಿ ಅಭ್ಯರ್ಥಿಯಾಗಿದ್ದ ಹುಣಸೂರಿನ ಅಂದಿನ ಶಾಸಕ ಸಿ.ಎಚ್‌. ವಿಜಯಶಂಕರ್‌ ಆಯ್ಕೆಯಾದರು. ಕಾಂಗ್ರೆಸ್‌ನಿಂದ ಎಸ್‌.ಚಿಕ್ಕಮಾದು ಅಭ್ಯರ್ಥಿಯಾಗಿದ್ದರು.

ತನ್ವೀರ್‌ ಹತ್ಯೆ ಯತ್ನಕ್ಕೂ ಮುನ್ನ ನಾಯಿ ರುಂಡ ಕತ್ತರಿಸಿ ರಿಹರ್ಸಲ್‌!

ಇದರಿಂದ 1998ರಲ್ಲಿ ಹುಣಸೂರು ಕ್ಷೇತ್ರದಿಂದ ವಿಧಾನಸಭೆಗೆ ಉಪ ಚುನಾವಣೆ ನಡೆಯಿತು. ಕಾಂಗ್ರೆಸ್‌ನಿಂದ ಎಚ್‌.ಎನ್‌. ಪ್ರೇಮಕುಮಾರ್‌, ಜನತಾದಳದಿಂದ ಜಿ.ಟಿ. ದೇವೇಗೌಡ, ಬಂಡಾಯ ಅಭ್ಯರ್ಥಿಯಾಗಿ ವಿ.ಪಾಪಣ್ಣ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಜಿ.ಟಿ. ದೇವೇಗೌಡ ಅಲ್ಪಮತಗಳ ಅಂತರದಿಂದ ವಿ. ಪಾಪಣ್ಣ ಅವರನ್ನು ಸೋಲಿಸಿ, ವಿಧಾನಸಭೆ ಪ್ರವೇಶಿಸಿದರು.

1999 ರಲ್ಲಿ ಸೋಲು:

1999ರ ಸಾರ್ವತ್ರಿಕ ಚುನಾವಣೆಯಲ್ಲಿ ಕೂಡ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಉಪ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿದ್ದ ವಿ.ಪಾಪಣ್ಣ ಆಗ ಬಿಜೆಪಿ ಅಭ್ಯರ್ಥಿಯಾಗಿ ಜಿ.ಟಿ.ದೇವೇಗೌಡರನ್ನು ಸೋಲಿಸಿದರು. ವಿ.ಪಾಪಣ್ಣ (ಬಿಜೆಪಿ)- 35,046, ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿದ್ದ ಎಸ್‌. ಚಿಕ್ಕಮಾದು- 32,256, ಜಿ.ಟಿ. ದೇವೇಗೌಡ (ಜೆಡಿಎಸ್‌)-31,051, ಚಂದ್ರಪ್ರಭ ಅರಸು (ಕಾಂಗ್ರೆಸ್‌)- 21,736 ಮತಗಳನ್ನು ಗಳಿಸಿದ್ದರು.

ಎರಡನೇ ಬಾರಿ ಆಯ್ಕೆ, ಸಹಕಾರ ಸಚಿವರಾದರು:

2004ರ ಚುನಾವಣೆ ಎದುರಾದಾಗ ಜಿ.ಟಿ.ದೇವೇಗೌಡರು ಮೂರನೇ ಬಾರಿ ಹುಣಸೂರಿನಿಂದ ಜೆಡಿಎಸ್‌ನಿಂದ ಕಣಕ್ಕಿಳಿದು, ಕಾಂಗ್ರೆಸ್‌ನ ಎಸ್‌. ಚಿಕ್ಕಮಾದು ಅವರನ್ನು ಸೋಲಿಸಿ, ಎರಡನೇ ಬಾರಿ ವಿಧಾನಸಭೆ ಪ್ರವೇಶಿಸಿದರು. ಜಿ.ಟಿ.ದೇವೇಗೌಡ (ಜೆಡಿಎಸ್‌)- 60,258, ಎಸ್‌.ಚಿಕ್ಕಮಾದು (ಕಾಂಗ್ರೆಸ್‌)- 46,126, ಬಿ.ಎಸ್‌. ಮರಿಲಿಂಗಯ್ಯ (ಬಿಜೆಪಿ)- 19,967 ಮತಗಳನ್ನು ಪಡೆದಿದ್ದರು.

ಫಲಿತಾಂಶದ ಬಳಿಕ ಬೆಂಬಲದ ಬಗ್ಗೆ ನಿರ್ಧಾರ: ಕುಮಾರಸ್ವಾಮಿ

ಈ ಅವಧಿಯಲ್ಲಿ ಎನ್‌.ಧರಂಸಿಂಗ್‌ ನೇತೃತ್ವದ ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಪತನವಾಯಿತು. ಸಿದ್ದರಾಮಯ್ಯ ಜೆಡಿಎಸ್‌ನಿಂದ ಹೊರಹೋದರು. ಅವಿಭಜಿತ ಮೈಸೂರು ಜಿಲ್ಲೆಯ ಡಾ.ಎಚ್‌.ಸಿ. ಮಹದೇವಪ್ಪ, ಕೆ. ವೆಂಕಟೇಶ್‌, ಮಂಚನಹಳ್ಳಿ ಮಹದೇವ ಹಾಗೂ ಎಂ.ಕೆ.ಸೋಮಶೇಖರ್‌ ಸಿದ್ದರಾಮಯ್ಯ ಅವರನ್ನು ಹಿಂಬಾಲಿಸಿದರು. ಆದರೆ, ಡಿ.ಟಿ.ಜಯಕುಮಾರ್‌, ಜಿ.ಟಿ.ದೇವೇಗೌಡ, ಎಚ್‌.ಎಸ್‌. ಮದೇವಪ್ರಸಾದ್‌, ಎಂ.ಪಿ. ವೆಂಕಟೇಶ್‌, ಪರಿಮಳಾ ನಾಗಪ್ಪ ಜೆಡಿಎಸ್‌ನಲ್ಲಿಯೇ ಉಳಿದರು. ಮುಂದೆ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌- ಬಿಜೆಪಿ ಸರ್ಕಾರ ರಚನೆಯಾದಾಗ ಮೊದಲು ಜಯಕುಮಾರ್‌, ನಂತರ ಜಿ.ಟಿ. ದೇವೇಗೌಡ, ಎಚ್‌.ಎಸ್‌. ಮಹದೇವಪ್ರಸಾದ್‌ ಸಚಿವರಾದರು.

ಗುಂಗ್ರಾಲ್‌ಛತ್ರ ಸಹಕಾರ ಸಂಘದ ಕಾರ್ಯದರ್ಶಿ ಹುದ್ದೆಯಿಂದ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದ ಜಿ.ಟಿ. ದೇವೇಗೌಡರು ನಂತರ ಸಹಕಾರ ಸಚಿವರಾದ ಹೆಗ್ಗಳಿಕೆಗೂ ಪಾತ್ರರಾದರು. ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿಯೂ ಜನತಾದರ್ಶನ, ಗ್ರಾಮ ವಾಸ್ತವ್ಯ ಮತ್ತಿತರ ಕಾರ್ಯಕ್ರಮಗಳ ಮೂಲಕ ಜನರಿಗೆ ಹತ್ತಿರವಾಗಿದ್ದರು.

ಬಿಜೆಪಿ ಸೇರಿ ಸೋತರು:

ಆಂತರಿಕ ಒಪ್ಪಂದದಂತೆ 20 ತಿಂಗಳ ನಂತರ ಕುಮಾರಸ್ವಾಮಿ ಬಿಜೆಪಿಯ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಲಿಲ್ಲ ಎಂದು ಜಿ.ಟಿ. ದೇವೇಗೌಡರು ಅಂದಿನ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್‌ ಸಮ್ಮುಖದಲ್ಲಿ ಪುರಭವನ ಆವರಣದಲ್ಲಿ ಬಿಜೆಪಿ ಸೇರಿ, 2008ರಲ್ಲಿ ಹುಣಸೂರಿನಿಂದ ಅಭ್ಯರ್ಥಿಯಾದರು. 2004ರ ನಂತರ ಅವರೇ ಕಾಂಗ್ರೆಸ್‌ನಿಂದ ಕರೆದುಕೊಂಡು ಬಂದು, ವಿಧಾನ ಪರಿಷತ್‌ ಸದಸ್ಯರಾಗಲು ಕಾರಣರಾಗಿದ್ದ ಎಸ್‌.ಚಿಕ್ಕಮಾದು ಜೆಡಿಎಸ್‌ ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್‌ನ ಎಚ್‌.ಪಿ. ಮಂಜುನಾಥ್‌ ಗೆದ್ದರು. ಎಚ್‌.ಪಿ. ಮಂಜುನಾಥ್‌ (ಕಾಂಗ್ರೆಸ್‌)- 57,497, ಎಸ್‌. ಚಿಕ್ಕಮಾದು (ಜೆಡಿಎಸ್‌)- 42,456, ಜಿ.ಟಿ. ದೇವೇಗೌಡ (ಬಿಜೆಪಿ)- 36,004 ಮತಗಳನ್ನು ಪಡೆದಿದ್ದರು. ಇದಾದ ನಂತರ ಜಿ.ಟಿ. ದೇವೇಗೌಡರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಜೆಡಿಎಸ್‌ಗೆ ಮರಳಿದರು.

ಚಾಮುಂಡೇಶ್ವರಿಗೆ ಸ್ಥಳಾಂತರ:

2013ರ ಚುನಾವಣೆ ಬಂದಾಗ ಹುಣಸೂರು ಟಿಕೆಟ್‌ಗೆ ಜಿ.ಟಿ. ದೇವೇಗೌಡ ಹಾಗೂ ಎಸ್‌.ಚಿಕ್ಕಮಾದು ಅವರ ನಡುವೆ ಪೈಪೋಟಿ. ಆಗ ವರಿಷ್ಠರು ದೇವೇಗೌಡರನ್ನು ಚಾಮುಂಡೇಶ್ವರಿಗೂ, ಚಿಕ್ಕಮಾದು ಅವರನ್ನು ಎಚ್‌.ಡಿ.ಕೋಟೆಗೆ ಸ್ಥಳಾಂತರಿಸಿದರು. ಇಬ್ಬರೂ ಗೆದ್ದರು. ಆದರೆ, ಹುಣಸೂರಿನಲ್ಲಿ ಕುರುಬ ಜನಾಂಗದ ಕುಮಾರಸ್ವಾಮಿ ಅವರಿಗೆ ಟಿಕೆಟ್‌ ನೀಡಲಾಗಿತ್ತು. ಅವರು ಸೋತು ಕಾಂಗ್ರೆಸ್‌ನ ಎಚ್‌.ಪಿ. ಮಂಜುನಾಥ್‌ ಪುನಾರಾಯ್ಕೆಯಾದರು.

 

ಕಳೆದ ಚುನಾವಣೆಯಲ್ಲೂ ಕೈತಪ್ಪಿದ ಟಿಕೆಟ್‌

ಹುಣಸೂರು ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡರು ಎರಡು ಬಾರಿ ಆಯ್ಕೆ, ಎರಡು ಬಾರಿ ಸೋತಿದ್ದರು. ಅವರ ಪತ್ನಿ ಕೆ.ಲಲಿತಾ ದೇವೇಗೌಡರು ಒಮ್ಮೆ ಹನಗೋಡು ಕ್ಷೇತ್ರದಿಂದ ಜಿಪಂಗೆ ಆಯ್ಕೆಯಾಗಿ, ಮತ್ತೊಂದು ಅವಧಿಗೆ ಬಿಳಿಕೆರೆ ಕ್ಷೇತ್ರದಿಂದ ಸೋತಿದ್ದರು. ಅವರ ಪುತ್ರ ಜಿ.ಡಿ. ಹರೀಶ್‌ಗೌಡ ಕ್ಷೇತ್ರದ ಸಂಪರ್ಕ ಬೆಳೆಸಿಕೊಂಡು ತಾಲೂಕಿನಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. 2018ರಲ್ಲಿ ಅವರನ್ನೇ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಕೆ.ಆರ್‌.ನಗರ ಶಾಸಕ ಸಾ.ರಾ. ಮಹೇಶ್‌ ಅವರು ಮಾಜಿ ಸಂಸದ ಎಚ್‌.ವಿಶ್ವನಾಥ್‌ ಅವರನ್ನು ಪಕ್ಷಕ್ಕೆ ಕರೆತಂದರು. ಅನಿವಾರ್ಯವಾಗಿ ವಿಶ್ವನಾಥ್‌ಗೆ ಟಿಕೆಟ್‌ ತ್ಯಾಗ ಮಾಡಬೇಕಾಯಿತು.

ಈ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರನ್ನು 36 ಸಾವಿರ ಮತಗಳ ಭಾರಿ ಅಂತರದಿಂದ ಸೋಲಿಸಿ, ಪುನಾರಾಯ್ಕೆಯಾದರು. ಹುಣಸೂರಿನಲ್ಲಿ ಎಚ್‌.ವಿಶ್ವನಾಥ್‌ ಕೂಡ ಗೆದ್ದರು. ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಜಿ.ಟಿ.ದೇವೇಗೌಡರು ಮಂತ್ರಿಯಾದರು. ಅವರು ಮೊದಲಿಗೆ ಕಂದಾಯ ಅಥವಾ ಸಾರಿಗೆ, ನಂತರ ಇಂಧನ, ಅಬಕಾರಿ, ಸಹಕಾರ ಖಾತೆ ಬಯಸಿದ್ದರು. ಆದರೆ, ಕೊಟ್ಟಿದ್ದು ಉನ್ನತ ಶಿಕ್ಷಣ. ಹೀಗಾಗಿ ಒಂದು ತಿಂಗಳು ಅಧಿಕಾರ ಸ್ವೀಕರಿಸಲಿಲ್ಲ. ಕೊನೆಗೆ ಒಪ್ಪಿದರು. ಆದರೆ, ಜಿಲ್ಲಾ ಉಸ್ತುವಾರಿ ಸಚಿವರಾದರೂ ತಮ್ಮ ಮಾತು ನಡೆಯುತ್ತಿಲ್ಲ. ಬದಲಿಗೆ ಜಿಲ್ಲೆಯವರೇ ಆದ ಮತ್ತೊರ್ವ ಸಚಿವ ಸಾ.ರಾ. ಮಹೇಶ್‌ ಮಾತು ನಡೆಯುತ್ತಿದೆ ಎಂದು ಜಿ.ಟಿ. ದೇವೇಗೌಡ ಅಸಮಾಧಾನಗೊಂಡರು.

ಪಕ್ಷದಿಂದ ದೂರ ದೂರ

ಲೋಕಸಭೆಯ ಚುನಾವಣೆ ನಂತರ ಅದರಲ್ಲೂ ಸಮ್ಮಿಶ್ರ ಸರ್ಕಾರ ಪತನಾನಂತರ ಜೆಡಿಎಸ್‌ನಿಂದ ಜಿಟಿಡಿ ದೂರವಾದರು. ಬಿಜೆಪಿಗೆ ಹತ್ತಿರವಾದರು. ಜೆಡಿಎಸ್‌ ಟಿಕೆಟ್‌ ಮೇಲೆ ಗೆದ್ದಿದ್ದ ಎಚ್‌.ವಿಶ್ವನಾಥ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ನಂತರ ಅನರ್ಹಗೊಂಡಿದ್ದರಿಂದ ಹಾಗೂ ಸುಪ್ರೀಂಕೋರ್ಟ್‌ ಎತ್ತಿಹಿಡಿದಿದ್ದರಿಂದ ಹುಣಸೂರು ಉಪ ಚುನಾವಣೆ ಎದುರಾಯಿತು. ವಿಶ್ವನಾಥ್‌ ಎಂಎಲ್ಸಿಯಾಗಿ, ಮಂತ್ರಿಯಾಗುತ್ತಾರೆ ಎಂಬ ಹಿನ್ನೆಲೆಯಲ್ಲಿ ದೇವೇಗೌಡರು ಜೆಡಿಎಸ್‌ನಲ್ಲಿದ್ದುಕೊಂಡೆ ಪುತ್ರ ಹರೀಶ್‌ಗೌಡರಿಗೆ ಬಿಜೆಪಿ ಟಿಕೆಟ್‌ಗೆ ಯತ್ನಿಸಿದ್ದರು. ವಿಶ್ವನಾಥ್‌ ಪುತ್ರ ಅಮಿತ್‌ ವಿ. ದೇವರಹಟ್ಟಿ, ಮಾಜಿ ಸಚಿವ ಸಿ.ಪಿ. ಯೋಗೇಶ್ವರ ಅಲ್ಲದೇ, ಬಿ.ಎಸ್‌.ಯೋಗಾನಂದಕುಮಾರ್‌ ಸೇರಿದಂತೆ ಕೆಲ ಸ್ಥಳೀಯರ ಹೆಸರಿದ್ದರೂ ಗೆಲ್ಲುವ ಉದ್ದೇಶದಿಂದ ಹರೀಶ್‌ಗೌಡರಿಗೆ ಟಿಕೆಟ್‌ ನೀಡುವುದಾಗಿ ಬಿಜೆಪಿಯ ಕೆಲವು ನಾಯಕರು ಭರವಸೆ ನೀಡಿದ್ದರು. ಆದರೆ, ಸುಪ್ರೀಂಕೋರ್ಟ್‌ ಅನರ್ಹರು ಗೆಲ್ಲದೇ ಮಂತ್ರಿಯಾಗುವಂತಿಲ್ಲ ಎಂದು ಹೇಳಿದ್ದರಿಂದ ಕೊನೆಕ್ಷಣದಲ್ಲಿ ವಿಶ್ವನಾಥ್‌ ಅಖಾಡಕ್ಕೆ ಇಳಿದರು. ಇದರಿಂದ ಜಿ.ಟಿ.ದೇವೇಗೌಡ ತೀವ್ರ ನಿರಾಶೆಗೊಂಡರು.

ಅಭಿಮಾನಿಗಳ ಒತ್ತಡಕ್ಕೂ ಮಣಿಯಲಿಲ್ಲ ಜಿಟಿಡಿ

ಕೊನೆ ಕ್ಷಣದಲ್ಲೂ ಜೆಡಿಎಸ್‌ನಿಂದ ಹರೀಶ್‌ಗೌಡರನ್ನು ನಿಲ್ಲಿಸಿದರೆ ಮಾತ್ರ ಗೆಲವು ಎಂದು ತಿಳಿದು, ಕೆಲ ನಾಯಕರು ಜಿ.ಟಿ.ದೇವೇಗೌಡರನ್ನು ಸಂಪರ್ಕಿಸಿ, ಟಿಕೆಟ್‌ ಆಫರ್‌ ನೀಡಿದರು. ಆದರೆ, ಪಕ್ಷದಿಂದ ಮಾನಸಿಕವಾಗಿ ದೂರವಾಗಿದ್ದ ದೇವೇಗೌಡರು ನಿರಾಕರಿಸಿದರು. ಹೊಸಕೋಟೆಯಲ್ಲಿ ಶರತ್‌ ಬಚ್ಚೇಗೌಡರಂತೆ ಹರೀಶ್‌ಗೌಡ ಪಕ್ಷೇತರರಾಗಿ ಕಣಕ್ಕಿಳಿಯಬೇಕು. ಖಂಡಿತಾ ಗೆಲ್ಲುತ್ತಾರೆ ಎಂಬ ಅಭಿಮಾನಿಗಳ ಒತ್ತಡಕ್ಕೂ ಕೂಡ ಅವರು ಮಣಿಯಲಿಲ್ಲ. ಏಕೆಂದರೆ, ಬಿಜೆಪಿ ಸರ್ಕಾರ ಮೂರೂವರೆ ವರ್ಷ ಮುಂದುವರಿದರೆ ಕ್ಷೇತ್ರದ ಕೆಲಸಗಳಾಗಬೇಕು ಎಂಬ ಉದ್ದೇಶ ಇದ್ದಂತೆ ಕಾಣಿಸುತ್ತದೆ.

ಕೆ. ಆರ್ ಪೇಟೆ: BJP ಅಭ್ಯರ್ಥಿಯ ಅಣ್ಣನಿಂದ ಕಾಂಗ್ರೆಸ್ ಪರ ಪ್ರಚಾರ..!

ಹೀಗಾಗಿ ಒಂದು ರೀತಿ ತ್ರಿಶಂಕು ಸ್ಥಿತಿಯಲ್ಲಿರುವ ಜಿ.ಟಿ.ದೇವೇಗೌಡರಿಗೆ ಮೂರು ಪಕ್ಷಗಳಿಂದಲೂ ಬೇಡಿಕೆ. ಬಿಜೆಪಿ ಅಭ್ಯರ್ಥಿ ಎಚ್‌.ವಿಶ್ವನಾಥ್‌ ಈಗಾಗಲೇ ಭೇಟಿ ಮಾಡಿ, ಬೆಂಬಲ ಕೋರಿದ್ದಾರೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಮಾತನಾಡುವುದಾಗಿ ಹೇಳಿದ್ದಾರೆ. ಆದರೆ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮಾತ್ರ ನಾನು ಮಾತನಾಡುವುದಿಲ್ಲ, ಆದರೆ, ಪಕ್ಷಕ್ಕೆ ಬೆಂಬಲ ನೀಡಿದರೆ ಸ್ವಾಗತಿಸುವೆ ಎಂದಿದ್ದಾರೆ. ಒಟ್ಟಾರೆ ಜಿ.ಟಿ. ದೇವೇಗೌಡ ಬೆಂಬಲಕ್ಕಾಗಿ ಮೂರು ಪಕ್ಷಗಳು ತೆರೆಮರೆಯಲ್ಲಿ ದುಂಬಾಲು ಬಿದ್ದಿರುವುದಂತೂ ಸತ್ಯ. ಗೌಡರ ‘ತಕ್ಕಡಿ’ ಯಾರ ಕಡೆ ‘ವಾಲು’ತ್ತದೆ ಕಾದು ನೋಡಬೇಕಿದೆ.

-ಅಂಶಿ ಪ್ರಸನ್ನಕುಮಾರ್‌