ಬೆಂಗಳೂರು[ನ.23]: ಮೈಸೂರಿನ ಹಿರಿಯ ಕಾಂಗ್ರೆಸ್‌ ನಾಯಕ ಹಾಗೂ ಶಾಸಕ ತನ್ವೀರ್‌ ಸೇಠ್‌ ಕೊಲೆ ಯತ್ನ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಈ ಸಂಬಂಧ ಮತೀಯ ಸಂಘಟನೆಯೊಂದು ನಾಯಿಗಳ ಕತ್ತು ಕತ್ತರಿಸಿ ಹಂತಕರಿಗೆ ತರಬೇತಿ ನೀಡಿತ್ತು ಎಂಬ ಸ್ಫೋಟಕ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಕೇರಳ ಹಾಗೂ ಕರ್ನಾಟಕದಲ್ಲಿ ಹಿಂದೂ ಪರ ಸಂಘಟನೆಗಳ ಮುಖಂಡರ ಹತ್ಯೆ ನಡೆಸಿ ಕುಖ್ಯಾತಿ ಪಡೆದಿರುವ ಸಂಘಟನೆಯು ಕೆಲವು ರಾಜಕೀಯ ವಿಚಾರಗಳಿಗೆ ತನ್ವೀರ್‌ ಸೇಠ್‌ ಮೇಲೆ ಅಸಮಾಧಾನಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸೇಠ್‌ ಹತ್ಯೆಗೆ ನಿರ್ಧರಿಸಿದ್ದ ಅದು, ಸಂಚು ಕಾರ್ಯಗತಗೊಳಿಸಲು ಭರ್ಜರಿಯಾಗಿ ಪೂರ್ವಸಿದ್ಧತೆ ನಡೆಸಿತ್ತು ಎನ್ನಲಾಗಿದೆ.

ತನ್ವೀರ್‌ ಧ್ವನಿಪೆಟ್ಟಿಗೆಗೆ ಹಾನಿ, ತುಂಡಾಗಿರುವ ಕಿವಿ ಕುಟುಂಬಸ್ಥರಿಗೆ ಹಸ್ತಾಂತರ!

ಮಾಜಿ ಸಚಿವರ ಹತ್ಯೆಗೆ ಫರ್ಹಾನ್‌ ಪಾಷಾ ಸೇರಿದಂತೆ ಐವರ ತಂಡ ರಚಿಸಿದ್ದ ಸಂಘಟನೆಯು, ಆ ಹಂತಕರಿಗೆ ಕೃತ್ಯ ಎಸಗುವ ಮುನ್ನ ತರಬೇತಿ ನೀಡಿತ್ತು. ಒಂದೇ ಏಟಿಗೆ ಕತ್ತನ್ನು ಕತ್ತರಿಸುವುದು ಹೇಗೆ ಎಂಬುದನ್ನು ತಿಳಿಸಲು ದುಷ್ಕರ್ಮಿಗಳು ಫರ್ಹಾನ್‌ ಪಾಷಗೆ ನಾಯಿಗಳ ರುಂಡ ಕತ್ತರಿಸಿ ತರಬೇತಿ ನೀಡಿದ್ದರು. ಈ ತರಬೇತಿ ಸಂಗತಿಯನ್ನು ವಿಚಾರಣೆ ವೇಳೆ ಆತನೇ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಕೆಲ ವರ್ಷಗಳ ಹಿಂದೆ ಇದೇ ಮಾದರಿಯಲ್ಲೇ ಮೈಸೂರಿನ ಸಂಘ ಪರಿವಾರದ ಮುಖಂಡ ಕ್ಯಾತಮಾರನಹಳ್ಳಿ ರಾಜು, ಬೆಂಗಳೂರಿನ ಶಿವಾಜಿನಗರದ ರುದ್ರೇಶ್‌ ಹಾಗೂ ಮಂಗಳೂರಿನ ಶರತ್‌ ಮಡಿವಾಳ ಸೇರಿದಂತೆ ಹಿಂದೂ ಸಂಘಟನೆಗಳ ಮುಖಂಡರ ಹತ್ಯೆಗಳು ನಡೆದಿದ್ದವು. ಈ ಕೊಲೆಗಳಿಗೂ ಮುನ್ನ ಸಹ ನಾಯಿಗಳ ತಲೆ ಕತ್ತರಿಸುವ ಮೂಲಕವೇ ಹಂತಕರಿಗೆ ತರಬೇತಿ ಕೊಡಲಾಗಿತ್ತು. ಈ ಕೊಲೆ ಪ್ರಕರಣಗಳಲ್ಲಿ ಪಿಎಫ್‌ಐ ಸಂಘಟನೆಯ ಸದಸ್ಯರು ಬಂಧಿತರಾಗಿದ್ದರು. ಹೀಗಾಗಿ ಮಾಜಿ ಸಚಿವ ತನ್ವೀರ್‌ ಸೇಠ್‌ ಅವರ ಹತ್ಯೆಗೂ ಸಹ ಮತೀಯ ಸಂಘಟನೆಯು ಕತ್ತು ಕತ್ತರಿಸುವ ಕೃತ್ಯದ ಮಾದರಿಯನ್ನೇ ಅನುಸರಿಸಿದೆ ಎಂದು ತಿಳಿದುಬಂದಿದೆ.

'ತನ್ವೀರ್ ಸೇಠ್ ಆರೋಗ್ಯ ಸ್ಥಿತಿ ಗಂಭೀರ, 48 ಗಂಟೆ ಏನೂ ಹೇಳೋಕಾಗಲ್ಲ'

ಈ ಅನುಮಾನಕ್ಕೆ ಪುಷ್ಟಿನೀಡುವಂತೆ ತನ್ವೀರ್‌ ಸೇಠ್‌ ಅವರ ಕತ್ತಿಗೆ ಪೆಟ್ಟಾಗಿದೆ. ಮಾಜಿ ಸಚಿವರ ಕತ್ತನ್ನೇ ಆರೋಪಿ ಫರ್ಹಾನ್‌ ಪಾಷ ಕತ್ತರಿಸಲು ಯತ್ನಿಸಿದ್ದಾನೆ. ಹೀಗಾಗಿ ಹಿಂದೂ ಪರ ಸಂಘಟನೆಗಳನ್ನು ಹೊರತುಪಡಿಸಿ ತಮ್ಮ ಸಮುದಾಯದ ಹಿರಿಯ ಮುಖಂಡನ ಬಲಿ ಪಡೆಯುವ ಆರೋಪಿಗಳ ಸಂಚು ನಿಗೂಢವಾಗಿದೆ ಎಂದು ಮೂಲಗಳು ತಿಳಿಸಿವೆ.

ಶಾಸಕ ತನ್ವೀರ್ ಸೇಠ್‌ಗೆ ಚಾಕು ಇರಿತ: ಆಸ್ಪತ್ರೆಗೆ ದಾಖಲು