Chamarajanagar ಚಾತಕ ಪಕ್ಷಿಯಂತೆ ಕಾಯುತ್ತಿರುವ ರೈತರು : ನೀರು ಬರೋದು ಯಾವಾಗ?

  • ವೀರನಪುರ ಬಳಿ ನಲ್ಲೂರು ಅಮಾನಿಕೆರೆಗೆ ನದಿ ಮೂಲದ ನೀರು ಬರುತ್ತದೆ ಎಂದು ಚಾತಕ ಪಕ್ಷಿಯಂತೆ  ಕಾಯುತ್ತಿರುವ ಈ ಭಾಗದ ರೈತರು
  • ರೂಪವೇ ಇಲ್ಲದಂತಿರುವ ಕೆರೆಗೆ ಪುನಶ್ಚೇತನ ಮಾಡುವ ಬಗ್ಗೆ ತಾಲೂಕು ಆಡಳಿತ ಮಾತ್ರ ಗಮನ ಹರಿಸಿಲ್ಲ
Chamarajanagar Farmers Waiting  for water  to Amanikere snr

ವರದಿ :  ರಂಗೂಪುರ ಶಿವಕುಮಾರ್‌

 ಗುಂಡ್ಲುಪೇಟೆ (ನ.08):  ವೀರನಪುರ ಬಳಿ ನಲ್ಲೂರು ಅಮಾನಿಕೆರೆಗೆ ನದಿ (River) ಮೂಲದ ನೀರು ಬರುತ್ತದೆ ಎಂದು ಈ ಭಾಗದ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಕೆರೆಗೆ ನೀರು ಬರುವುದು ಯಾವಾಗ?ಒಂದು ವೇಳೆ ನಲ್ಲೂರು ಅಮಾನಿಕೆರೆಗೆ ನೀರು ಬರುತ್ತದೆ ಎಂದಾದಲ್ಲಿ ಕೆರೆಯ ಸ್ಥಿತಿ, ಗತಿ ಹೇಗಿದೆ? ಕೆರೆಯ (Lake) ರೂಪವೇ ಇಲ್ಲದಂತಿರುವ ಕೆರೆಗೆ ಪುನಶ್ಚೇತನ ಮಾಡುವ ಬಗ್ಗೆ ತಾಲೂಕು ಆಡಳಿತ ಗಮನ ಹರಿಸಿಲ್ಲ!

ಕೆರೆಯ ಸ್ಥಿತಿ: ಜಲಾಶಯ (water Reservoir) ನಿರ್ಮಾಣದ ವೇಳೆ ಅಧಿಕಾರಿ ಮತ್ತು ನೌಕರರ ವಾಸ್ತವ್ಯ, ನಿರ್ಮಾಣ ಸಾಮಗ್ರಿಗಳ ಸಂಗ್ರಹದ ಸಲುವಾಗಿ ವಸತಿ ಗೃಹಗಳು, ಕಚೇರಿ,ಗೋದಾಮು ಇತರೆ ಕಟ್ಟಡ (Building) ನಿರ್ಮಾಣಗೊಂಡಿದ್ದವು.ಈಗ ಪುಂಡರ ಹಾವಳಿಯಿಂದ ನಾಶವಾಗಿವೆ. ತೂಬುಗಳು ಕೂಡ ಶಿಥಿಲಾವಸ್ಥೆ ತಲುಪಿವೆ. ನಾಲ್ಕು ದಶಕದ ಹಿಂದೆ ಲಕ್ಷಗಟ್ಟಲೇ ಹಣ ವ್ಯಯಿಸಿ ನಲ್ಲೂರು ಅಮಾನಿಕೆರೆ (Amanikere) ಜಲಾಶಯ ನಿರ್ಮಿಸಲಾಗಿದೆ.

ನಿರೀಕ್ಷಿತ ಪ್ರಮಾಣದಲ್ಲಿ ಮಳೆ ನೀರು (Rain water) ಹರಿದು ಬಾರದ ಕಾರಣ ಕೆರೆ ಬರಿದಾಗಿದೆ. ಮರ ಕಡಿಯುವುದು, ಮರಳು ಅಕ್ರಮ ಸಾಗಾಣಿಕೆ ಹಾಗೂ ಕಟ್ಟಡಗಳ ನಾಶ, ತೂಬು ಹಾಳಾದರೂ ಯಾರೊಬ್ಬರೂ ಗಮನ ನೀಡುತ್ತಿಲ್ಲ. ಇದರಿಂದ ಜಲಾಶಯ ಯೋಜನೆ ಸಂಪೂರ್ಣ ಹಾಳಾಗುತ್ತಿದೆ. ಲಕ್ಷಾಂತರ ಜನರ ನೀರಿನ ದಾಹ ಹಾಗೂ ಸಾವಿರಾರು ಎಕರೆ ಭೂಮಿಗೆ ನೀರುಣಿಸಬೇಕಿದ್ದ ನಲ್ಲೂರು ಅಮಾನಿಕೆರೆ ಜಲಾಶಯ ವ್ಯಾಪಕ ಪ್ರಮಾಣದಲ್ಲಿ ಬೆಳೆದು ನಿಂತ ಬಳ್ಳಾರಿ ಜಾಲಿ, ಮರಳು ಮತ್ತು ಮರಳು ಮತ್ತು ಮಣ್ಣು ಗಣಿಗಾರಿಕೆಯಿಂದಾಗಿ (Mining) ಮೂಲ ಉದ್ದೇಶವೇ ದೂರ ಸರಿದಿದೆ.

ಪ್ರತಿ ವರ್ಷ ಮಳೆಗಾಲದಲ್ಲಿ ಮಳೆ ನೀರು ಕೆರೆಯ ಒಂದು ಮೂಲೆಯಲ್ಲಿ ಸಂಗ್ರಹವಾಗುತ್ತದೆ. ಉಳಿದ ಭಾಗದಲ್ಲಿ ಈ ಹಿಂದೆ ತೆಂಗು, ಸಪೋಟ, ಹಲಸು ಹಣ್ಣಿನ ಗಿಡಗಳಿದ್ದ ಪ್ರದೇಶವಾಗಿತ್ತು. ವಾಹನಗಳು ಸರಾಗವಾಗಿ ಹೋಗಲು ಅವಕಾಶವಿದ್ದ ಏರಿ, ಕೋಡಿ ಭಾಗ ಹೀಗೆ ಎಲ್ಲಾ ಕಡೆಗಳಲ್ಲೂ ಬಳ್ಳಾರಿ ಜಾಲಿ ಆವರಿಸಿದೆ. ಇದರಿಂದಾಗಿ ಜಲಾಶಯದ ಇರುವಿಕೆಯೇ ಕಂಡು ಬರುತ್ತಿಲ್ಲ.

ಈ ಯೋಜನೆ ಸಮರ್ಪಕವಾಗಿ ಜಾರಿಯಾಗಿದ್ದೇ ಆದಲ್ಲಿ ಬಹುತೇಕ ಪ್ರದೇಶ ನೀರಾವರಿಯಾಗಿ (Irrigation)  ತಾಲೂಕಿನ ಸಾಕಷ್ಟುಪ್ರಮಾಣದ ಅಂತರ್ಜಲ (Ground water) ಕೊರತೆ ನೀಗುತ್ತಿತ್ತು. ಆದರೆ, ಆಡಳಿತ ಶಾಹಿಯ ನಿರ್ಲಕ್ಷ್ಯ ಧೋರಣೆ ಎಲ್ಲವನ್ನೂ ಮಣ್ಣು ಪಾಲು ಮಾಡಿದೆ.

ನೀರು ಬಿಡಲಿ: ಕೆಲವು ಕೆರೆಗಳಿಗೆ ಕಬಿನಿ ನೀರು (Kabini Water) ಹರಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (BS Yedoyurappa) ಅಡಿಗಲ್ಲು ಹಾಕಿದ್ದರು. ಬಳಿಕ ಮಾಜಿ ಸಚಿವ ಎಚ್‌.ಎಸ್‌.ಮಹದೇವ ಪ್ರಸಾದ್‌ (Mahadeva Prasad) ಯೋಜನೆಗೆ ವೇಗ ನೀಡಿ ಕಾಮಗಾರಿ ಪೂರ್ಣಗೊಳಿಸಿದ್ದು ಕೆರೆಗಳಿಗೆ ನೀರು ಬರಲು ಕಾರಣರಾದರು.

ಈಗ ಅಮಾನಿ ಕೆರೆಗೆ ಕಬಿನಿ ನೀರು ಹರಿಸುವ ಮನಸ್ಸು ಶಾಸಕ ಸಿ.ಎಸ್‌.ನಿರಂಜನ್‌ ಕುಮಾರ್‌ ಮಾಡಿದರೆ ಗತಕಾಲದ ವೈಭವ ಮರುಕಳಿಸಲಿದ್ದು ಕೆರೆಗೆ ತುರ್ತಾಗಿ ನೀರು ತುಂಬಿಸಲಿ ಎಂಬುದು ಜನರ ಆಶಯ.

ನಲ್ಲೂರು ಅಮಾನಿ ಕೆರೆಗೆ ಹಿನ್ನೋಟ?

ಗುಂಡ್ಲುಪೇಟೆ: ಗುಂಡ್ಲುಪೇಟೆ ಕ್ಷೇತ್ರ್ರವನ್ನು ಸತತ ಏಳು ಸಲ ಪ್ರತಿನಿಧಿಸಿ, ಅಮ್ಮ ಎಂದೇ ಖ್ಯಾತಿ ಗಳಿಸಿದ್ದ ಕೆ.ಎಸ್‌.ನಾಗರತ್ನಮ್ಮರ ಕಾಲದಲ್ಲಿ (1983-84) ನಲ್ಲೂರು ಅಮಾನಿ ಕೆರೆ ಜಲಾಶಯ ನಿರ್ಮಾಣವಾಗಿದೆ.

231 ದಶ ಲಕ್ಷ ಘನ ಅಡಿ ನೀರು ಸಂಗ್ರಹ ಸಾಮರ್ಥ್ಯ, 14 ಕಿ.ಮೀ ಉದ್ದದ ಎಡದಂಡೆ ಮತ್ತು ಬಲದಂಡೆ ನಾಲೆ, 3200 ಎಕರೆ ನೀರಾವರಿಗಾಗಿ ಯೋಜನೆ ಕಾರ್ಯಗೊಂಡಿತು.ಈ ಯೋಜನೆಯು ಮಧ್ಯಮ ನೀರಾವರಿ ಯೋಜನೆಯಾಗಿದ್ದು, 1975ರಲ್ಲಿ ಪ್ರಾರಂಭವಾಯಿತು ಮತ್ತು 1987 ರಲ್ಲಿ ಪೂರ್ಣಗೊಂಡಿತು. ಈ ಜಲಾಶಯವು ಗುಂಡ್ಲುಪೇಟೆ ಪಟ್ಟಣಕ್ಕೆ ಹತ್ತಿರದಲ್ಲಿದೆ.

ಇಂಗಲವಾಡಿ ಬಳಿ ಗುಂಡ್ಲು ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲಾಗಿದ್ದು, ವೀರನಪುರ ಮತ್ತು ಇಂಗಲವಾಡಿ ನಡುವೆ ಇದೆ. ಈ ಕೆರೆಯಿಂದ ಸುಮಾರು 30 ಹಳ್ಳಿಗಳು ಬರಡು ಭೂಮಿಯಿಂದ ನೀರಾವರಿ ಪ್ರದೇಶವಾಗಿ ಪರಿವರ್ತನೆಯಾಗಿತ್ತು.

ಆದರೆ, ಅಧಿಕಾರಿಗಳ ಮತ್ತು ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಮತ್ತೆ ಬರಡು ಪ್ರದೇಶವಾಗಿದೆ ಮತ್ತು ಈ ಭಾಗದ ರೈತರ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಕೆರೆಗೆ ನೀರು ತುಂಬಿಸುವ ಪ್ರಯತ್ನ ನಡೆದಿದೆ.

Latest Videos
Follow Us:
Download App:
  • android
  • ios