Asianet Suvarna News Asianet Suvarna News

ಮಿಲಿಟರಿ ವ್ಯವಹಾರಗಳಲ್ಲಿನ ಕ್ರಾಂತಿ ಹಾಗೂ ತಲೆಮಾರುಗಳ ಯುದ್ಧ ತಂತ್ರ!

ವಿವಿಧ ತಲೆಮಾರುಗಳ ಯುದ್ಧಗಳು ಹಲವು ಶತಮಾನಗಳ ಅವಧಿಯಲ್ಲಿ ಸಾಕಷ್ಟು ವಿಕಾಸ ಹೊಂದಿವೆ. ಇವುಗಳನ್ನು ವಿವಿಧ ವಿಭಾಗಗಳಲ್ಲಿ ವಿಭಜಿಸಬಹುದು. ಮೊದಲಿಗೆ ನೆಲದ ಮೇಲೆ ನಡೆಯುತ್ತಿದ್ದ ಯುದ್ಧಗಳು ಬಳಿಕ ನೀರಿನ ಮೇಲೆ ನಡೆಯತೊಡಗಿದವು. ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ವೈಮಾನಿಕ ಯುದ್ಧಗಳು ಆರಂಭಗೊಂಡವು.

Revolution in Military Affairs and Generation War Strategy pod
Author
Bangalore, First Published Jun 6, 2022, 8:49 PM IST | Last Updated Jun 7, 2022, 6:43 AM IST

ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಬೆಂಗಳೂರು(ಜೂ.06): ಭವಿಷ್ಯದಲ್ಲಿ ನಡೆಯುವ ಯುದ್ಧಗಳು ಟ್ಯಾಂಕ್, ಗನ್, ಪರಮಾಣು ಶಸ್ತ್ರಾಸ್ತ್ರಗಳ ಮೂಲಕ ನಡೆಯುವುದಿಲ್ಲ. ಯುದ್ಧ ವಿಮಾನಗಳೂ ಅಪ್ರಯೋಜಕವಾಗಿ ಬಿಡುತ್ತವೆ. ಯುದ್ಧಗಳಲ್ಲಿ ಒಂದೂ ಗುಂಡು ಹಾರುವುದಿಲ್ಲ, ಅಣು ಬಾಂಬ್‌ಗಳು ಪ್ರಯೋಗಿಸಲ್ಪಡುವುದಿಲ್ಲ, ಕ್ಷಿಪಣಿಗಳ ಬಳಕೆಯಾಗುವುದಿಲ್ಲ. ಸೈನ್ಯಗಳೆಲ್ಲ ಆಯುಧ ರಹಿತವಾಗಿರುತ್ತವೆ.

ವಿವಿಧ ತಲೆಮಾರುಗಳ ಯುದ್ಧಗಳು ಹಲವು ಶತಮಾನಗಳ ಅವಧಿಯಲ್ಲಿ ಸಾಕಷ್ಟು ವಿಕಾಸ ಹೊಂದಿವೆ. ಇವುಗಳನ್ನು ವಿವಿಧ ವಿಭಾಗಗಳಲ್ಲಿ ವಿಭಜಿಸಬಹುದು. ಮೊದಲಿಗೆ ನೆಲದ ಮೇಲೆ ನಡೆಯುತ್ತಿದ್ದ ಯುದ್ಧಗಳು ಬಳಿಕ ನೀರಿನ ಮೇಲೆ ನಡೆಯತೊಡಗಿದವು. ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ವೈಮಾನಿಕ ಯುದ್ಧಗಳು ಆರಂಭಗೊಂಡವು. 21ನೇ ಶತಮಾನದ ಮೂರನೇ ದಶಕದ ವೇಳೆಯಲ್ಲಿ ಘರ್ಷಣೆಗಳು ಅಂತರಿಕ್ಷಕ್ಕೆ ತಲುಪಿವೆ. ಯುದ್ಧಗಳ ವಿಕಾಸವು ನೂತನ ಆಯುಧ ತಂತ್ರಜ್ಞಾನಗಳ ಮೂಲಕವೇ ಆಗುತ್ತಾ ಬಂದಿವೆ. ಹೊಸ ಆಯುಧಗಳು ಯುದ್ಧ ರಂಗವನ್ನು ಪ್ರವೇಶಿಸುತ್ತಿದ್ದಂತೆ, ಅದನ್ನು ಪ್ರತಿರೋಧಿಸುವ ತಂತ್ರಜ್ಞಾನವೂ ಆರಂಭಗೊಂಡವು.

ಯುರೋಪಿನ ಗೆಳೆಯರ ಕೈಗೆ ಆಯುಧ ನೀಡುತ್ತಿರುವ ಚೀನಾ!

ಇವೆಲ್ಲವನ್ನೂ ಕಾಲಾನುಕ್ರಮವಾಗಿ ನೋಡುತ್ತಾ ಬಂದರೆ, ಅವುಗಳು ಬೇರೆ ಬೇರೆ ತಲೆಮಾರುಗಳ ಯುದ್ಧಗಳಾಗಿರುತ್ತವೆ. ಹೀಗೆ ಒಂದು ತಲೆಮಾರಿನಿಂದ ತಲೆಮಾರಿಗೆ ಬದಲಾಗುವ ಯುದ್ಧ ತಂತ್ರಗಳನ್ನು ರೆವಲ್ಯೂಷನ್ ಇನ್ ಮಿಲಿಟರಿ ಅಫೇರ್ಸ್ (ಆರ್ಎಂಎ) ಎಂದು ಕರೆಯಲಾಗುತ್ತದೆ.

ಮೊದಲ ತಲೆಮಾರಿನ ಯುದ್ಧ:

ಯುದ್ಧಗಳಲ್ಲಿ ಮನುಷ್ಯರ ಬಲ, ಬಿಲ್ಲು – ಬಾಣ, ಖಡ್ಗ, ಈಟಿ, ಜೊತೆಗೆ ಕುದುರೆಗಳು ಹಾಗೂ ಆನೆಗಳನ್ನು ಉಪಯೋಗಿಸುತ್ತಿದ್ದುದನ್ನು ಮೊದಲ ತಲೆಮಾರಿನ ಯುದ್ಧ ಎನ್ನಬಹುದು. ಆ ಸಂದರ್ಭದಲ್ಲಿ ವಿರೋಧಿ ಬಣಗಳು ಮನುಷ್ಯರನ್ನು ಬಳಸಿ, ವ್ಯೂಹ ರಚಿಸಿ ಹೋರಾಡುತ್ತಿದ್ದರು. ಅಮೇರಿಕಾದ ಆಂತರಿಕ ಯುದ್ಧ, ಹಾಗೂ ಮಹಾಭಾರತ ಯುದ್ಧವನ್ನೂ ಸೇರಿದಂತೆ ಎಲ್ಲಾ ಪುರಾತನ, ಐತಿಹಾಸಿಕ ಯುದ್ಧಗಳನ್ನೂ ಮೊದಲ ತಲೆಮಾರಿನ ಯುದ್ಧ ಎನ್ನಲಾಗುತ್ತದೆ. ಇದರಲ್ಲಿನ ಪ್ರಮುಖ ಅಂಶ ಎಂದರೆ ಮನುಷ್ಯರು. ಆದರೆ ಅವರಿಗೆ ವಿವಿಧ ಆಯುಧಗಳು ಸಹಕಾರ ನೀಡುತ್ತಿದ್ದವು. ಕವಚಗಳು ವಿರೋಧಿಗಳ ಹೊಡೆತದಿಂದ ರಕ್ಷಣೆ ನೀಡುತ್ತಿದ್ದವು. ಇಲ್ಲಿ ಮನುಷ್ಯರ ಮಧ್ಯ ನೇರಾನೇರ ಹೊಡೆದಾಟ ನಡೆಯುತ್ತಿತ್ತು.

ಎರಡನೇ ತಲೆಮಾರಿನ ಯುದ್ಧ:

ಎರಡನೇ ತಲೆಮಾರಿನ ಯುದ್ಧದಲ್ಲಿ ಸೈನಿಕರನ್ನು ಆಯುಧಗಳಿಂದ ಹಾಗೂ ಮದ್ದುಗುಂಡುಗಳಿಂದ ರಕ್ಷಿಸಲು ಇನ್ನೂ ದೊಡ್ಡದಾದ ಗುರಾಣಿಗಳು ಹಾಗೂ ಕಂದಕಗಳ ನಿರ್ಮಾಣ ನಡೆಯಿತು. ಈ ಕಂದಕಗಳ ಮೊದಲು ಸೈನಿಕರ ರಕ್ಷಣೆಗೆ ಕೋಟೆಗಳಿದ್ದವು. ಈ ಹೊಸ ತಂತ್ರ ಮೊದಲನೇ ಮಹಾಯುದ್ಧದ ವೇಳೆ ಟ್ರೆಂಚ್ ಯುದ್ಧ ತಂತ್ರ ಎಂಬ ಹೆಸರು ಪಡೆಯಿತು. ಇದು ನೇರಾನೇರ ಯುದ್ಧವಲ್ಲದೆ ಹೋದರೂ, ಇದು ಸಮೀಪದಿಂದ, ಎದುರು ಬದುರಾಗಿ ನಡೆಸುವ ಯುದ್ಧವಾಗಿತ್ತು.

Indo China border tensions ಹಿಂದೂ ಮಹಾಸಾಗರದಲ್ಲಿ ಚೀನಾ ಬಂದರು ನಿರ್ಮಾಣ, ಹೆಚ್ಚಿತು ಭಾರತದ ಆತಂಕ!

ಮೂರನೇ ತಲೆಮಾರಿನ ಯುದ್ಧ:

ಇದು ನಿಂತಲ್ಲೇ ನಡೆಸುವ ಯುದ್ಧವಲ್ಲದೆ, ಚಲನೆಯ ಮೂಲಕ ನಡೆಸುತ್ತಿದ್ದ ಯುದ್ಧ ವಿಧಾನವಾಗಿತ್ತು. ಇಲ್ಲಿ ಶತ್ರುವಿನ ರಕ್ಷಣೆಯನ್ನು ಭೇದಿಸಲು ಪರೋಕ್ಷ ವಿಧಾನಗಳನ್ನು, ಅಂದರೆ, ಟ್ಯಾಂಕ್ಗಳು, ಫಿರಂಗಿಗಳು, ಹಾಗೂ ಯುದ್ಧ ವಿಮಾನಗಳಿಂದ ದಾಳಿ ನಡೆಸಲಾಯಿತು. ಇಲ್ಲಿ ಎದುರಾಳಿಗಳಿಗೆ ಆಶ್ಚರ್ಯವಾಗುವಂತೆ ಹಾಗೂ ವಂಚನೆಗಳ ಮೂಲಕ ದಾಳಿ ನಡೆಸುವುದು ಪ್ರಮುಖ ಅಂಶವಾಗಿತ್ತು.

ನಾಲ್ಕನೇ ತಲೆಮಾರಿನ ಯುದ್ಧ:

ಅಣ್ವಸ್ತ್ರ ಹಾಗೂ ಸಮೂಹ ನಾಶಕ ಶಸ್ತ್ರಾಸ್ತ್ರಗಳ (ಡಬ್ಲ್ಯೂಎಂಡಿ) ಸಂಶೋಧನೆಯ ಬಳಿಕ ಸಮಾನ ಸಾಮರ್ಥ್ಯದ ಶತ್ರುಗಳೊಡನೆ ಹೋರಾಡುವುದು ಅತ್ಯಂತ ಕಷ್ಟಕರವಾಗಿತ್ತು. ಹಾಗಾಗಿ ಛಾಯಾ ಯುದ್ಧಗಳು (ಪ್ರಾಕ್ಸಿ ವಾರ್), ಪ್ರಾಯೋಜಿತ ಹಿಂಸೆಗಳು ಹಾಗೂ ದಂಗೆಗಳು ಶತ್ರುಗಳ ವಿರುದ್ಧ ಮೇಲುಗೈ ಸಾಧಿಸಲು ಹಾಗೂ ರಾಜಕೀಯ ಲಾಭ ಪಡೆಯಲು ಪ್ರಮುಖ ಮಾರ್ಗಗಳಾದವು.

ಅಫ್ಘಾನಿಸ್ತಾನ, ಸಿರಿಯಾ, ಇರಾಕ್, ಕಾಶ್ಮೀರ ಹಾಗೂ ಕೊಸೊವೊಗಳಲ್ಲಿ ನಡೆದ ಯುದ್ಧಗಳು ಇದಕ್ಕೆ ಕೆಲವು ಉದಾಹರಣೆಗಳಾಗಿವೆ. ಇದು ವಾರ್ ಬೈ ಅದರ್ ಮೀನ್ಸ್ (ಡಬ್ಲ್ಯುಒಎಂ) ಎನ್ನುವ ತಂತ್ರಕ್ಕೆ ದಾರಿ ಮಾಡಿತು. ಇದರಲ್ಲಿ ನಾವು ನಮ್ಮ ಬಲವನ್ನು ಪ್ರಯೋಗಿಸದೆ ಅಥವಾ ಕನಿಷ್ಠ ಬಲ ಪ್ರಯೋಗಿಸಿ, ಉಗ್ರಗಾಮಿಗಳು, ಬಂಡುಕೋರರು, ಭಯೋತ್ಪಾದಕರು, ರಾಷ್ಟ್ರ ವಿರೋಧಿ ಬರಹಗಾರರನ್ನು ಬಳಸಿ, ಶತ್ರುವಿನ ಆಂತರಿಕ ದೌರ್ಬಲ್ಯವನ್ನು ಕಂಡು ಹಿಡಿದು ಸೋಲಿಸುವುದಾಗಿದೆ. ಇಂತಹವರನ್ನು ಅನಿಯಮಿತ ಸೈನಿಕರು ಹಾಗೂ ಈ ಪರಿಸ್ಥಿತಿಯನ್ನು ಅನಿಯಮಿತ ಯುದ್ಧತಂತ್ರ ಎಂದೂ ಕರೆಯಲಾಗುತ್ತದೆ.

ದೇಶೀಯ ರಕ್ಷಣಾ ಉತ್ಪಾದನೆಯಲ್ಲಿ ಖಾಸಗಿ ವಲಯದ ಸಹಭಾಗಿತ್ವ! Page views: 19

ಐದನೇ ತಲೆಮಾರಿನ ಯುದ್ಧ:

ಐದನೇ ತಲೆಮಾರಿನ ಯುದ್ಧದ ಪ್ರಮುಖ ವಿಧಾನವೆಂದರೆ. ಮಾಧ್ಯಮಗಳ ಮೂಲಕ ಸುಳ್ಳು ಮಾಹಿತಿ ಹಬ್ಬಿಸುವುದು, ಮಾನಸಿಕ ದಾಳಿಗಳ ಮೂಲಕ ಸುಳ್ಳುಗಳನ್ನು ಜನರು ನಂಬುವಂತೆ ಮಾಡುವುದು ಹಾಗೂ ಅನಿಯಮಿತ ಸೈನಿಕರನ್ನು ಬಳಸಿಕೊಳ್ಳುವುದು. ಇದನ್ನು ಹೈಬ್ರಿಡ್ ಯುದ್ಧ ತಂತ್ರ ಎಂದೂ ಕರೆಯಲಾಗಿದೆ. ಆರ್ಥಿಕ ನಿರ್ಬಂಧವೂ ಸಹ ಈ ತಲೆಮಾರಿನ ಯುದ್ಧದ ಭಾಗವೇ. ಶತ್ರುವನ್ನು ಆಂತರಿಕವಾಗಿ ಸೋಲಿಸುವುದು ಉದ್ದೇಶವಾಗಿರುವುದರಿಂದ ಇಲ್ಲಿ ಗಡಿಗಳಲ್ಲಿ ಯುದ್ಧ ನಡೆಯುವುದಿಲ್ಲ.

ಆರನೇ ತಲೆಮಾರಿನ ಯುದ್ಧ ತಂತ್ರ:

ಬಲ ಪ್ರಯೋಗದಿಂದ ಮೆದುಳಿನ ಪ್ರಯೋಗಕ್ಕೆ ಬದಲಾವಣೆ, ಕಣ್ಣಿಗೆ ಕಾಣದ ರೀತಿಯ ಯುದ್ಧತಂತ್ರ ಆರನೇ ತಲೆಮಾರಿನದ್ದು. ಇಲ್ಲಿ ಕಣ್ಣಿಗೆ ಕಾಣದ ಆಯುಧವನ್ನು ಬಳಸುವುದರಿಂದ ಶತ್ರುವಿನ ಯುದ್ಧ ಸಾಮರ್ಥ್ಯ ಎಷ್ಟೇ ಇದ್ದರೂ ಅದು ಗಣನೆಗೆ ಬರುವುದಿಲ್ಲ. ಇದು ಯಾವ ನೈತಿಕತೆ ಅಥವಾ ನಿಯಮಗಳೇ ಇಲ್ಲದ ಯುದ್ಧ. ಜೈವಿಕ ಆಯುಧಗಳು ಹಾಗೂ ಸೂಕ್ಷ್ಮಾಣು ಜೀವಿಗಳು ಈ ಯುದ್ಧ ನಡೆಸುತ್ತವೆ. ಪ್ಯಾನ್ಡೆಮಿಕ್ ಯುದ್ಧಗಳು ಭವಿಷ್ಯದಲ್ಲಿ ಹೆಚ್ಚಾಗಿ ಕಂಡುಬರಲಿವೆ. ಸೈನ್ಯಗಳು ಇನ್ನು ಮುಂದೆ ಈ ಕಣ್ಣಿಗೆ ಕಾಣದ ಆಯುಧಗಳ ವಿರುದ್ಧ ಹೋರಾಡಬೇಕಾಗುತ್ತದೆ.

ಏಳನೇ ತಲೆಮಾರಿನ ಯುದ್ಧ:

ಏಳನೇ ತಲೆಮಾರಿನ ಯುದ್ಧ ಅಂತರಿಕ್ಷದಲ್ಲಿ ನಡೆಯುವ ಯುದ್ಧವಾಗಲಿದೆ. ಆ್ಯಂಟಿ ಸ್ಯಾಟಲೈಟ್ ವೆಪನ್ಸ್ (ಎಎಸ್ಎಟಿ) ಹಾಗೂ ಲೇಸರ್ ಆಯುಧಗಳು ಇಲ್ಲಿ ಹೆಚ್ಚಾಗಿ ಪ್ರಯೋಗವಾಗಲಿವೆ. ಈಗ ಇದು ಕೇವಲ ವೈಜ್ಞಾನಿಕ ಕಾದಂಬರಿ ಎನಿಸಬಹುದಾದರೂ, ಈ ಶತಮಾನದ ಅಂತ್ಯದ ವೇಳೆಗೆ ಅಂತರಿಕ್ಷ ಯುದ್ಧಗಳು ಭೂಮಿಯ ಮೇಲಿನ ಯುದ್ಧಕ್ಕೆ ಬದಲಾಗಿ ನಡೆಯಲಿವೆ.

ರೆವಲ್ಯೂಷನ್ ಇನ್ ಮಿಲಿಟರಿ ಅಫೇರ್ಸ್ (ಆರ್ಎಂಎ):

ಈಗಾಗಲೇ ಹೇಳಿದಂತೆ, ಒಂದಾದ ನಂತರ ಒಂದು ಯುದ್ಧತಂತ್ರವನ್ನು ನೋಡುತ್ತಾ ಬಂದಂತೆ ಅವುಗಳ ಮಧ್ಯದಲ್ಲಿರುವ ವ್ಯತ್ಯಾಸಗಳು ತುಂಬಾ ಕಡಿಮೆ ಎನಿಸುತ್ತವೆ. ಆದರೆ ಅವುಗಳನ್ನು ಬೇರೆಬೇರೆಯಾಗಿ ಕಂಡರೆ ನಮಗೆ ಆ ವ್ಯತ್ಯಾಸಗಳು ತಿಳಿಯುತ್ತವೆ. ಒಂದು ಉದಾಹರಣೆಗೆ, ಮೊದಲ ಹಾಗೂ ಎರಡನೇ ತಲೆಮಾರಿನ ಕುರಿತು ಚರ್ಚಿಸುವಾಗ, ಅವೆರಡರ ಮಧ್ಯ ತೀರಾ ಕನಿಷ್ಠ ವ್ಯತ್ಯಾಸಗಳು ಕಾಣಿಸುತ್ತವೆ. ಆದರೆ ಮೊದಲ ಹಾಗೂ ಮೂರನೇ ತಲೆಮಾರು ಅಥವಾ ಎರಡನೇ ಹಾಗೂ ನಾಲ್ಕನೇ ತಲೆಮಾರಿನ ಯುದ್ಧಗಳನ್ನು ಗಮನಿಸಿದಾಗ ಸಾಕಷ್ಟು ವ್ಯತ್ಯಾಸಗಳು ಗಮನಕ್ಕೆ ಬರುತ್ತವೆ.

ಆರ್‌ಎಂಎಯ ಕುರಿತಾಗಿ ಮಾತನಾಡುವಾಗ, ನಾವು ಸಂಪೂರ್ಣವಾಗಿ ಯುದ್ಧದ ಪ್ರಕ್ರಿಯೆಯನ್ನು ಪರಿಗಣಿಸಬೇಕಾಗುತ್ತದೆ. ಹಾಗೆ ಮಾಡುವ ಮೂಲಕ ನಾವು ಈ ಕೆಳಗಿನ ಅಂಶಗಳನ್ನು ಪರಿಶೀಲಿಸಬಹುದು:

ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಒಳಗೊಂಡಂತೆ, ಶಸ್ತ್ರಾಸ್ತ್ರ ವ್ಯವಸ್ಥೆಗಳಲ್ಲಿ ನಡೆಯುತ್ತಿರುವ ಪ್ರಗತಿ. ಇದರಲ್ಲಿ ಆಯುಧಗಳ ವ್ಯಾಪ್ತಿ, ನಿಖರತೆ, ಮತ್ತು ಮಾರಕತೆ.

ಶಸ್ತ್ರಾಸ್ತ್ರಗಳು ಹಾಗೂ ಸೈನಿಕರ ಆದೇಶ ಹಾಗೂ ನಿಯಂತ್ರಣ ವ್ಯವಸ್ಥೆ.

ಸಂವಹನ, ಮಾಹಿತಿ ಹಾಗೂ ಉಪಾಯಗಳನ್ನು ಕ್ಷಿಪ್ರವಾಗಿ ಗಳಿಸಿಕೊಳ್ಳುವುದು. ಇದು ಕೃತಕ ಬುದ್ಧಿಮತ್ತೆ (ಏಐ), ಕಣ್ಗಾವಲು ಮತ್ತು ವಿಚಕ್ಷಣೆಗಳನ್ನೂ ಒಳಗೊಂಡಿದೆ.

ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ವಿತರಣಾ ವ್ಯವಸ್ಥೆಯ ಅಭಿವೃದ್ಧಿ. ಪ್ರಸ್ತುತ ಡ್ರೋನ್‌ಗಳು ಹಾಗೂ ಕ್ಷಿಪಣಿಗಳು ಹೆಚ್ಚಿನ ವ್ಯಾಪ್ತಿಯನ್ನು ಹೊಂದಿವೆ.

ಆಯುಧಗಳ ಪರಿಣಾಮವನ್ನ ಇನ್ನಷ್ಟು ಹೆಚ್ಚಿಸುವಂತಹ ಲಾಜಿಸ್ಟಿಕ್ ಸಿಸ್ಟಮ್‌ಗಳು.

ಈ ಐದು ಅಂಶಗಳು ಆರ್‌ಎಂಎಗೆ ಕಾರಣವಾಗುತ್ತವೆ. ನೂತನ ತಂತ್ರಜ್ಞಾನಗಳು ನಮ್ಮ ಮಿಲಿಟರಿ ಸಿದ್ಧಾಂತವನ್ನು ಹೇಗೆ ಬದಲಾಯಿಸುತ್ತವೆ ಎಂಬುದನ್ನು ನಾವು ಗಮನಿಸಿದ್ದೇವೆ. ಅದರೊಡನೆ ನಾವು ತಂತ್ರಜ್ಞಾನ ಹಾಗೂ ಯುದ್ಧತಂತ್ರಗಳು ಎಲ್ಲಿ ಮಿಳಿತವಾಗುತ್ತವೆ ಎಂಬುದನ್ನೂ ಪರಿಗಣಿಸಬೇಕು. ಈ ಎರಡರ ನಡುವಿನ ಸಂಬಂಧವೇ ಆರ್‌ಎಂಎಯ ಪಂಥಾಹ್ವಾನವನ್ನು ವಿವರಿಸುತ್ತದೆ.

ಇಂದು ಜಗತ್ತಿನಲ್ಲಿ ನ್ಯಾನೋ ತಂತ್ರಜ್ಞಾನ ಹಾಗೂ ರೋಬೋಟಿಕ್ಸ್‌ಗಳು ಕಣ್ಣಿಗೆ ಕಾಣದ ಯುದ್ಧಕ್ಕೆ ಚಾಲನೆ ನೀಡಿ, ಯುದ್ಧ ವಿಧಾನವನ್ನೇ ಸಂಪೂರ್ಣವಾಗಿ ಬದಲಾಯಿಸಿವೆ. ನಾವು ಅದನ್ನು ಜೈವಿಕ ಆಯುಧಗಳು, ಲೇಸರ್ ಆಯುಧಗಳು, ಇಲೆಕ್ಟ್ರೋಮ್ಯಾಗ್ನೆಟಿಕ್ ಪಲ್ಸ್ (ಇಎಂಪಿ) ಗನ್‌ಗಳ ರೂಪದಲ್ಲಿ ಕಾಣುತ್ತಿದ್ದೇವೆ.

ಇನ್ನು ಸಂವಹನದ ವಿಚಾರವಾಗಿ, ನ್ಯಾನೋ ತಂತ್ರಜ್ಞಾನ ಸಣ್ಣ ನೊಣಗಳ ಗಾತ್ರದ ಡ್ರೋನ್‌ಗಳನ್ನೂ ತಯಾರಿಸಿದೆ. ಇವು ರಕ್ಷಣಾ ವ್ಯವಸ್ಥೆಯ ಕಣ್ಣಿಗೆ ಕಾಣದ ರೀತಿಯಲ್ಲಿ ಮಹತ್ವದ ಸ್ಥಳಗಳಲ್ಲಿ ಸಂಚರಿಸಬಲ್ಲವು. ಇದರೊಡನೆ ಸ್ವಾರ್ಮ್ ಆಯುಧ ವ್ಯವಸ್ಥೆಗಳು ದಾಳಿಯ ಮಾರಕತೆ ಹಾಗೂ ನಿಖರತೆಯನ್ನು ಇನ್ನಷ್ಟು ಹೆಚ್ಚಿಸಿವೆ. ಲೇಸರ್ ಹಾಗೂ ಎಎಸ್ಎಟಿ ಆಯುಧಗಳು, ಡ್ರೋನ್‌ಗಳು ಹಾಗೂ ಕ್ಷಿಪಣಿಗಳೊಡನೆ ವಿತರಣಾ ವ್ಯವಸ್ಥೆಗಳಿಗೆ ಅಪಾರ ಬಲ ನೀಡಿವೆ.

ಕೊನೆಯದಾಗಿ, ಕೋವಿಡ್ – 19 ಸೃಷ್ಟಿಸಿದ ಅಪಾಯಗಳು ನಾವು ಯಾವ ನಿಯಮಗಳೂ ಇಲ್ಲದ ಯುದ್ಧಗಳ ಮಧ್ಯದಲ್ಲಿದ್ದೇವೆ ಎಂಬ ಸೂಚನೆ ನೀಡಿವೆ. ಆರ್ಎಂಎ ಈಗ ನಾಲಕ್ಕು ಹಾಗೂ ಐದನೇ ತಲೆಮಾರಿನ ಯುದ್ಧತಂತ್ರಗಳನ್ನು ಮೀರಿದೆ. ತಂತ್ರಜ್ಞಾನಗಳು ಯುದ್ಧತಂತ್ರವನ್ನು ನಿರ್ಧರಿಸುತ್ತವೆ ಎಂಬ ಹಳೆಯ ಪರಿಕಲ್ಪನೆ ಬದಲಾಗಿ, ನೂತನ ತಂತ್ರಜ್ಞಾನಗಳಿಗೆ ತಕ್ಕಂತೆ ಯುದ್ಧತಂತ್ರ ರಚನೆಯಾಗುತ್ತಿದೆ. ಇದು 21ನೇ ಶತಮಾನದಲ್ಲಿ ಯುದ್ಧಗಳು ಹೇಗೆ ನಡೆಯುತ್ತವೆ ಎಂಬುದರಲ್ಲಿರುವ ಮಹತ್ತರ ಬದಲಾವಣೆ. ಕೊರೋನಾ ವೈರಸ್ ದಾಳಿ ಅಮೇರಿಕಾ ಹಾಗೂ ಚೀನಾ ಮಧ್ಯದ ವ್ಯಾಪಾರ ಯುದ್ಧದ ಪರಿಣಾಮವೇ ಆಗಿದೆ. ನಿಯಮಗಳಿಲ್ಲದ ಯುದ್ಧತಂತ್ರ ಕೊರೋನಾ ವೈರಸ್ಸನ್ನು ಕಣ್ಣಿಗೆ ಕಾಣದ ಆಯುಧವನ್ನಾಗಿ ಮಾರ್ಪಡಿಸಿದೆ.

ಭವಿಷ್ಯದ ಸವಾಲುಗಳು:

ಸೈನ್ಯಗಳು ಇನ್ನೂ ಹೆಚ್ಚು ಭಯಾನಕವಾದ ಹಾಗೂ ಆಗಾಗ ಕಾಣಿಸಿಕೊಳ್ಳುವ ಪ್ಯಾನ್ಡೆಮಿಕ್ ಯುದ್ಧವನ್ನು ಎದುರಿಸಲು ಸಜ್ಜಾಗಬೇಕಿದೆ. ಏಪ್ರಿಲ್ 11ರಂದು ಡಾನ್ ಪತ್ರಿಕೆಯಲ್ಲಿ ಪಾಕಿಸ್ತಾನದ ವಿದ್ವಾಂಸರಾದ ಅಶ್ರಫ್ ಜಹಾಂಗೀರ್ ಕಾಜ಼ಿ ತಮ್ಮ ಲೇಖನದಲ್ಲಿ, “ಕೋವಿಡ್ – 19 ಹಾಗೂ ಅದರ ಮುಂದಿನ ಪೀಳಿಗೆಗಳ ಪ್ಯಾನ್ಡೆಮಿಕ್ಗಳು ಕಡಿಮೆ ಅವಧಿಯ ನಡುವೆ ಹೆಚ್ಚು ಹೆಚ್ಚು ಕಾಣಿಸಿಕೊಳ್ಳಲಿವೆ” ಎಂದಿದ್ದಾರೆ.

ಭವಿಷ್ಯದ ಯುದ್ಧಗಳು ಹೀಗೆ ಡಬ್ಲ್ಯೂಒಎಂ ಆಗಿರಲಿವೆ. ಇವುಗಳು ಪ್ರಸ್ತುತ ಬಳಕೆಯಲ್ಲಿರುವ ಬೃಹತ್ ಆಯುಧಗಳನ್ನು ಲೆಕ್ಕಕ್ಕಿಲ್ಲದಂತೆ ಮಾಡಿ ಬಿಡಲಿವೆ. ಟ್ಯಾಂಕ್, ಗನ್, ಪರಮಾಣು ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳು ಅಪ್ರಯೋಜಕವಾಗುತ್ತವೆ. ಯುದ್ಧಗಳಲ್ಲಿ ಒಂದೂ ಗುಂಡು ಹಾರುವುದಿಲ್ಲ, ಅಣು ಬಾಂಬ್ಗಳು ಪ್ರಯೋಗಿಸಲ್ಪಡುವುದಿಲ್ಲ. ಸೈನ್ಯಗಳ ಕೈಯಲ್ಲಿ ಆಯುಧಗಳಿರುವುದಿಲ್ಲ.

ವಿನ್ಸ್ಟನ್ ಚರ್ಚಿಲ್ ಹೇಳಿದ ಮಾತುಗಳನ್ನು ಜ್ಞಾಪಿಸಿಕೊಳ್ಳೋಣ: ಭವಿಷ್ಯದ ಯುದ್ಧಗಳು ಆಯುಧಗಳ ಮೂಲಕ ನಡೆಯುವುದಿಲ್ಲ. ಬದಲಿಗೆ ಮೆದುಳಿನ ಮೂಲಕ ನಡೆಯುತ್ತವೆ. ಯಾರ ಬಳಿ ಕಣ್ಣಿಗೆ ಕಾಣದಂತಹಾ ಯುದ್ಧವನ್ನು ವಿನ್ಯಾಸಗೊಳಿಸಿ, ಅದನ್ನು ನಿಯಂತ್ರಿಸಲೂ ಸಾಧ್ಯವೋ, ಅವರೇ ಜಗತ್ತನ್ನು ಆಳುತ್ತಾರೆ.

ನಿಮ್ಮನ್ನು ನೀವು ಯುದ್ಧ ವಿನ್ಯಾಸಕ್ಕೆ ಅನುವಾಗಿಸಿ - ಇದು 21ನೇ ಶತಮಾನದ ಆರ್ಎಂಎಯ ಕರೆ.

ನಾವು ಈ ಭವಿಷ್ಯವನ್ನು ಹೇಗೆ ವ್ಯಾಖ್ಯಾನಿಸುತ್ತೇವೆ? ಇದು ನಾಳೆ ಅಥವಾ ನಾಡಿದ್ದಿನ ಮಾತಲ್ಲ. ನಾವು ಇಲ್ಲಿ ಭವಿಷ್ಯ ಎಂದರೆ ಅದು ಇನ್ನೂ ಒಂದು ತಲೆಮಾರಿನ ನಂತರದ, ಅಂದರೆ 25 – 30 ವರ್ಷಗಳ ನಂತರದ ಸಮಯ. ಆದ್ದರಿಂದ ಈ ಲೇಖನದಲ್ಲಿ ನಾವು ಚರ್ಚಿಸಿದ ಭವಿಷ್ಯ 2040 – 50 ಹಾಗೂ ಅದರಾಚೆಗಿನ ಕಾಲ.

Latest Videos
Follow Us:
Download App:
  • android
  • ios