ಯುರೋಪಿನ ಗೆಳೆಯರ ಕೈಗೆ ಆಯುಧ ನೀಡುತ್ತಿರುವ ಚೀನಾ!
* ತನ್ನ ಒಂದು ವಾಯುನೆಲೆಯಲ್ಲಿ ‘ಶೀಲ್ಡ್ 2022’ ಹೆಸರಿನ ರಕ್ಷಣಾ ವ್ಯವಸ್ಥೆಯ ಪ್ರದರ್ಶನ ನಡೆಸಿದ್ದ ಸರ್ಬಿಯಾ
* ಸಮಾರಂಭದಲ್ಲಿ ಭಾಗವಹಿಸಿದ್ದ ಸರ್ಬಿಯಾದದ ನಾಯಕರು
* ಆಯುಧ, ಉಪಕರಣಗಳನ್ನು ವೀಕ್ಷಸಲು ಅನುಮತಿ
ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಬೆಂಗಳೂರು(ಜೂ.01): ಕಳೆದ ಏಪ್ರಿಲ್ ತಿಂಗಳಲ್ಲಿ ಯುರೋಪಿನ ಸರ್ಬಿಯಾ ರಾಷ್ಟ್ರ ತನ್ನ ಒಂದು ವಾಯುನೆಲೆಯಲ್ಲಿ ‘ಶೀಲ್ಡ್ 2022’ ಹೆಸರಿನ ರಕ್ಷಣಾ ವ್ಯವಸ್ಥೆಯ ಪ್ರದರ್ಶನವನ್ನು ಏರ್ಪಡಿಸಿತ್ತು. ಆ ಸಮಾರಂಭದಲ್ಲಿ ಸರ್ಬಿಯಾದ ನಾಯಕರು ಭಾಗವಹಿಸಿದ್ದು, ದೇಶದ ಸಾವಿರಾರು ನಾಗರಿಕರೂ ಭಾಗವಹಿಸಿ ಅಲ್ಲಿ ಪ್ರದರ್ಶಿಸಿದ್ದ ಸಮರ ಆಯುಧ, ಉಪಕರಣಗಳನ್ನು ವೀಕ್ಷಸಲು ಅನುಮತಿ ನೀಡಲಾಗಿತ್ತು. ಬೆಲ್‌ಗ್ರಾಡ್ ಈಗ ಯುರೋಪಿಯನ್ ಒಕ್ಕೂಟದಿಂದ ನಿರಾಶೆಗೊಂಡು, ಬೀಜಿಂಗ್ ಹಾಗೂ ಮಾಸ್ಕೋ ಜೊತೆಗಿನ ದೀರ್ಘ ಸಮಯದ ಒಡನಾಟವನ್ನು ಹೆಚ್ಚಿಸುತ್ತಿರುವ ಈ ಸಂದರ್ಭದಲ್ಲಿ, ತೆರೆದ ಬಯಲಿನಲ್ಲಿ ಅತ್ಯಂತ ಜಾಗರೂಕವಾಗಿ ನಡೆದ ಸರ್ಬಿಯಾದ ಈ ಪ್ರದರ್ಶನ ಆ ರಾಷ್ಟ್ರದ ಸೈನ್ಯದ ಸಾಮರ್ಥ್ಯವನ್ನು ಅನಾವರಣಗೊಳಿಸಿತ್ತು.
ಶೀಲ್ಡ್ 2022ರಲ್ಲಿ ಸರ್ಬಿಯಾಕ್ಕೆ ಚೀನಾ ಮತ್ತು ರಷ್ಯಾ ಜತೆಗಿರುವ ಸಂಬಂಧವನ್ನು ದೃಢೀಕರಿಸಲು ಬೇಕಿದ್ದ ಕುರುಹುಗಳೂ ಇದ್ದವು. ಕನಿಷ್ಠ ಒಂದು ಬ್ಯಾಟರಿ ಚೀನಾ ನಿರ್ಮಿತ ಎಚ್ ಕ್ಯೂ – 22 ಎಸ್‌ಎಎಂಗಳು (ನೆಲದಿಂದ ಆಗಸಕ್ಕೆ ದಾಳಿ ಮಾಡುವ ಕ್ಷಿಪಣಿಗಳು) ಹಾಗೂ ರಷ್ಯಾ ನಿರ್ಮಿತ ಪಾಂಟ್ಸಿರ್ ಎಸ್1ಗಳು ಪ್ರದರ್ಶಿಸಲ್ಪಟ್ಟಿದ್ದವು. ಇದರೊಡನೆ, ಸರ್ಬಿಯಾದ ಅತ್ಯಾಧುನಿಕ ರಕ್ಷಣಾ ಕೈಗಾರಿಕಾ ವಲಯವು ನ್ಯಾಟೋ ಸದಸ್ಯ ರಾಷ್ಟ್ರಗಳೊಂದಿಗೂ ಸಹಯೋಗ ಹೊಂದಿದೆ.
ಚೀನಾದ ಎಚ್ ಕ್ಯೂ – 22 ಮೀಡಿಯಂ ರೇಂಜ್ ಎಸ್‌ಎಎಂಗಳು (ರಫ್ತಾದ ಸಂದರ್ಭದಲ್ಲಿ ಅದನ್ನು ಎಫ್‌ಕೆ – 3 ಎಂದು ಗುರುತಿಸಲಾಗಿತ್ತು) ಶೀಲ್ಡ್ 2022ರಲ್ಲಿ ಏಪ್ರಿಲ್ 30ರಂದು ಕಾಣಿಸಿಕೊಂಡದ್ದು ಹಲವು ಕಾರಣಗಳನ್ನು ಪ್ರತಿನಿಧಿಸುತ್ತವೆ. ಇದನ್ನು 1990ರ ದಶಕದ ಕೊನೆಯಲ್ಲಿ ಅನುಭವಿಸಿದ ಕುಸಿತ ಮತ್ತು ದಶಕಗಳ ಕಾಲ ಅನುಭವಿಸಿದ ಮರುಬಂಡವಾಳ ಹೂಡಿಕೆಯ ಕೊರತೆಯ ನಂತರ ಸರ್ಬಿಯಾದ ವಾಯು ರಕ್ಷಣೆಯಲ್ಲಿನ ಅತಿ ದೊಡ್ಡ ಜಿಗಿತ ಎಂದೇ ಪರಿಗಣಿಸಬಹುದು. ಆ ಕಾರಣದಿಂದ ಬಹುತೇಕ ಕಳೆದ ವರ್ಷದ ತನಕ ಸರ್ಬಿಯಾದ ವಾಯುಪಡೆ ರಷ್ಯಾ ನಿರ್ಮಿತ, ಈಗಾಗಲೇ ಹಳೆಯದಾಗಿದ್ದ ಎಸ್ಎಎಂಗಳ ಮೇಲೆ ಅವಲಂಬಿತವಾಗಿತ್ತು. ಚೀನಾ ನಿರ್ಮಿತ ಎಸ್‌ಎಎಂ ಎಚ್‌ಕ್ಯೂ – 9/9ಬಿ/9ಬಿಇ ಜೊತೆ ಹೋಲಿಕೆ ಇದ್ದರೂ, ಎಚ್‌ಕ್ಯೂ – 22ರ ಪಾತ್ರ ಬಹುಪದರಗಳ ವಾಯು ರಕ್ಷಣಾ ಜಾಲದಲ್ಲಿನ ಅಂತರವನ್ನು ಕಡಿಮೆ ಮಾಡುವುದಾಗಿದೆ. ಪಿಎಲ್‌ಎ ಮೂಲಕ ನಿರ್ವಹಿಸಲ್ಪಟ್ಟಾಗ, ವಿಮಾನ ವಿರೋಧಿ ದಾಳಿಯಲ್ಲಿ ಎಚ್‌ಕ್ಯೂ – 7 ಹಾಗೂ ಎಚ್‌ಕ್ಯೂ – 17/17ಎಇಗಳು ಕನಿಷ್ಠ ದೂರದ್ದಾದರೆ, ಎಚ್‌ಕ್ಯೂ – 16 ಹಾಗೂ ಎಚ್‌ಕ್ಯೂ – 22 ಮಿಡ್ ರೇಂಜ್ ವ್ಯವಸ್ಥೆಗಳಾಗಿದ್ದು, ಕ್ರೂಸ್ ಕ್ಷಿಪಣಿ ಹಾಗೂ ಡ್ರೋನ್‌ಗಳನ್ನು ಹೊಡೆದುರುಳಿಸಬಲ್ಲವು. ಕೊನೆಯದಾಗಿ ಎಚ್‌ಕ್ಯು – 9 ಹಾಗೂ ರಷ್ಯಾ ಪೂರೈಸಿರುವ ಎಸ್ – 400 ಗಳು, ಒಳಬರುವ ಶತ್ರು ವಿಮಾನಗಳು, ಬಾಂಬರ್‌ಗಳು, ಅತ್ಯಂತ ಎತ್ತರದಲ್ಲಿ ಹಾರುವ ಡ್ರೋನ್‌ಗಳು ಹಾಗೂ ದಾಳಿ ಎಸಗುವ ಯುದ್ಧ ವಿಮಾನಗಳನ್ನು ಗುರುತಿಸಿ, ದಾಳಿ ನಡೆಸುವ ನಡೆಸಬಲ್ಲವಾಗಿವೆ. ಈ ವಿವರಣೆ ಚೀನಾದ ಸೈನ್ಯವು ತನ್ನ ವಾಯುರಕ್ಷಣೆಯನ್ನು ಬಹುತೇಕ ಹೇಗೆ ರೂಪಿಸುತ್ತದೆ ಎಂಬ ಅಂದಾಜು ಒದಗಿಸುತ್ತದೆ.
ಈ ಹೊಚ್ಚ ಹೊಸದಾದ ಎಚ್‌ಕ್ಯು – 22 ಎಸ್‌ಎಎಂ ಬ್ಯಾಟರಿಯನ್ನು ಚೀನಾ ತನ್ನ ಬಹು ಭಾರ ಸಾಗಿಸಬಲ್ಲ ವೈ – 20 ಕಾರ್ಗೋ ವಿಮಾನದ ಮೂಲಕ ಏಪ್ರಿಲ್ 10ರಂದು ಸರ್ಬಿಯಾಗೆ ತಲುಪಿಸಿತ್ತು. ಎಚ್‌ಕ್ಯು – 22 ಚೀನಾ ಬಲ್ಕಾನಸ್ ಪ್ರಾಂತದಲ್ಲಿ, ಸುತ್ತಲೂ ಭೂಮಿಯಿಂದ ಆವೃತವಾಗಿರುವ ತನ್ನ ಮಿತ್ರ ರಾಷ್ಟ್ರ ಸರ್ಬಿಯಾದೊಡನೆ ಹಂಚಿಕೊಂಡ ಅತ್ಯಾಧುನಿಕ ಆಯುಧವಾಗಿದೆ. ದಶಕಗಳ ಹಿಂದಿನಿಂದಲೂ ಚೀನಾ ಹಾಗೂ ಸರ್ಬಿಯಾಗಳ ಸೇನಾ ಕೈಗಾರಿಕಾ ವಲಯಗಳ ಮಧ್ಯೆ ಸಹಕಾರ ಇದ್ದರೂ, ಅದನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗಿರಲಿಲ್ಲ. ಈ ಮೊದಲು ಸರ್ಬಿಯಾದ ಸರ್ಕಾರಿ ಸ್ವಾಮ್ಯದ ಶಸ್ತ್ರಾಸ್ತ್ರ ತಯಾರಕರು ತಮ್ಮಲ್ಲಿದ್ದ ತಂತ್ರಜ್ಞಾನವನ್ನು ಚೀನಾಗೆ ನೀಡಿದ್ದು ಹಾಗೂ ಚೀನಾದ ತಂತ್ರಜ್ಞಾನವನ್ನು ತಾವು ಪಡೆದುಕೊಂಡದ್ದಕ್ಕೆ ಸಾಕಷ್ಟು ಪುರಾವೆಗಳಿವೆ. ಸರ್ಬಿಯಾದ ಸಾಧಾರಣ ಬಲದ ಭೂಸೇನೆಯ ಬಳಿ ಇರುವ ಕನಿಷ್ಠ ಮೂರು ಆಯುಧಗಳು ಚೀನಾದ ಆಯುಧಗಳನ್ನು ಬಹುತೇಕ ಹೋಲುತ್ತವೆ. ಅವೆಂದರೆ: ಟ್ರ್ಯಾಕ್ ಮಾಡಬಹುದಾದ ಯುದ್ಧ ವಾಹನ, 122ಎಂಎಂ ಹೊವಿಟ್ಜರ್ ಅಳವಡಿಸಲಾದ ಟ್ರಕ್ ಹಾಗೂ ಟ್ರಕ್‌ಗೆ ಅಳವಡಿಸಲಾದ ಮೀಡಿಯಂ ರೇಂಜ್ ರಾಕೆಟ್ ವ್ಯವಸ್ಥೆಗಳಾಗಿವೆ. 107 ಎಂಎಂನ ಕನಿಷ್ಠ ವ್ಯಾಪ್ತಿಯ ರಾಕೆಟ್‌ಗಳ ತಯಾರಿಕೆ 1990ರ ಬಳಿಕ ಯುಗೋಸ್ಲೊವಾಕಿಯಾದಿಂದ ಬೇರ್ಪಟ್ಟ ಗಣರಾಜ್ಯಗಳಲ್ಲಿ ವ್ಯಾಪಕವಾಗಿ ಹರಡಿದೆ.
ಇತ್ತೀಚೆಗೆ ಚೀನಾ ನಡೆಸುತ್ತಿರುವ ಶಸ್ತ್ರಾಸ್ತ್ರಗಳ ವ್ಯಾಪಾರ ಕಡಿಮೆ ಸೂಕ್ಷ್ಮತೆಯಿಂದ ಕೂಡಿದೆ. 2020ರಲ್ಲಿ ಸರ್ಬಿಯಾಗೆ ಸಣ್ಣ ಪ್ರಮಾಣದಲ್ಲಿ ಸಿಎಚ್ – 92 ಯುದ್ಧ ಡ್ರೋನ್‌ಗಳು ಹಾಗೂ ಲೇಸರ್ ನಿರ್ದೇಶಿತ ಶಸ್ತ್ರಗಳ ಪೂರೈಕೆಯಾಗಿತ್ತು. ಸರ್ಬಿಯಾಗೆ ಮುಂದಿನ ದಿನಗಳಲ್ಲಿ ದೊಡ್ಡದಾದ, ಮಧ್ಯಮ ಎತ್ತರದ ಕಾಂಬ್ಯಾಟ್ ಡ್ರೋನ್‌ಗಳು ಬರಲಿವೆ ಎಂಬ ಸುದ್ದಿಗಳು ಸತತವಾಗಿ ಹರಿದಾಡುತ್ತಿವೆ. ಈಗ ಸರ್ಬಿಯಾದ ಬಳಿ ಇರುವ ಕನಿಷ್ಠ ಒಂದು ಬ್ಯಾಟರಿ ಎಚ್‌ಕ್ಯೂ – 22 ಹಾಗೂ ಇನ್ನೂ ಲಭ್ಯವಾಗಲಿರುವ ಆಯುಧಗಳು ಸರ್ಬಿಯಾದ ಅದರ ವಾಯುಪಡೆಯನ್ನು, ಭೂಸೇನಾ ಪಡೆಯೊಂದಿಗೆ ಕೇವಲ ಗಡಿ ರಕ್ಷಣಾ ಹಂತವನ್ನು ಮೀರಿ ಬೆಳೆಯುವಂತೆ ಮಾಡಲು ಶಕ್ತವಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಚೀನಾ ತನ್ನ ಸರ್ಕಾರಿ ಸ್ವಾಮ್ಯದ ರಕ್ಷಣಾ ಕೈಗಾರಿಕೆಗಳ ಮೂಲಕ, ಹಣದ ಕೊರತೆ ಎದುರಿಸುತ್ತಿರುವ, ಆಧುನೀಕರಣಕ್ಕೆ ಹೆಣಗಾಡುತ್ತಿರುವ ಸೈನ್ಯಗಳನ್ನು ಅಭಿವೃದ್ಧಿಪಡಿಸಬಹುದು ಎಂಬುದನ್ನು ಯಾವುದೇ ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತುಪಡಿಸಿದೆ. ಚೀನಾ ಒದಗಿಸುವ ಆಧುನಿಕ ಕಾಂಬ್ಯಾಟ್ ಡ್ರೋನ್‌ಗಳು, ಶಸ್ತ್ರಸಜ್ಜಿತ ಯುದ್ಧ ವಾಹನಗಳು, ರೋಡ್ ಮೊಬೈಲ್ ಬ್ಯಾಲಿಸ್ಟಿಕ್ ಮಿಸೈಲ್‌ಗಳು ಹಾಗೂ ರಾಕೆಟ್‌ಗಳು, ಮೂರನೇ ತಲೆಮಾರಿನ ಯುದ್ಧ ವಿಮಾನಗಳಾದ ಎಲ್ – 15 ಹಾಗೂ ಜೆ – 10ಸಿಗಳು (ಜೆ – 10ಸಿಯನ್ನು ಚೀನಾ ಅಥವಾ ರಷ್ಯಾದ ಇಂಜಿನ್ ಬಳಸಿ ಚಲಾಯಿಸಬಹುದು) ಹೆಚ್ಚು ನಂಬಿಕಸ್ಥವಾದ ನ್ಯಾಟೋ ಬಳಗದ ಆಧುನಿಕ ಶಸ್ತ್ರಾಸ್ತ್ರಗಳ ಸಾಮರ್ಥ್ಯಕ್ಕೆ ಸವಾಲೊಡ್ಡಬಲ್ಲ, ಅಥವಾ ಅವುಗಳಿಂದ ಹೆಚ್ಚೇ ಸಾಮರ್ಥ್ಯ ಉಳ್ಳ ಆಯುಧಗಳಾಗಿವೆ.
ಅಧಿಕೃತವಾಗಿ ಸರ್ಬಿಯಾದ ಸರ್ಕಾರ ಇನ್ನೂ ನಿರ್ಧರಿಸಲಾಗದ ಸಮಯದಿಂದಲೂ ಯುರೋಪಿಯನ್ ಯೂನಿಯನ್ನಿನ ಸದಸ್ಯನಾಗುವ ಬಯಕೆಯನ್ನು ತೋರಿಸುತ್ತಾ ಬಂದಿದೆ. ತನ್ನ ನೆರೆ ರಾಷ್ಟ್ರವಾದ ಬೋಸ್ನಿಯಾ – ಹರ್ಸ್‌ಗೋವಿನಾದೊಡನೆ ಹದಗೆಡುತ್ತಿರುವ ಸರ್ಬಿಯಾದ ಸಂಬಂಧ ಹಾಗೂ ಕೊಸೊವೋದೊಂದಿಗೆ ಗಡಿ ತಕರಾರು ಈ ಪ್ರಕ್ರಿಯೆಗೆ ತೊಡಕಾಗಿ ಪರಿಣಮಿಸಿದೆ. 2016ರ ಬಳಿಕ ಬೆಲ್‌ಗ್ರಾಡ್ ಹಾಗೂ ಬೀಜಿಂಗ್ ಮಧ್ಯ ಔಪಚಾರಿಕವಾಗಿ “ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ” ರೂಪುಗೊಂಡಿದ್ದರೂ, ಅದು ಇಂದಿನ ತನಕ ಮುಂದುವರೆದು ಬಂದಿದೆ. ಚೀನಾ ಈಗಾಗಲೇ ಸರ್ಬಿಯಾದ ಸ್ಟೀಲ್ ಮಿಲ್‌ಗಳು, ವಾಹನ ತಯಾರಿಕಾ ಘಟಕಗಳಿಗೆ ಬಿಲಿಯನ್ ಗಟ್ಟಲೆ ಡಾಲರ್ ಹಣ ಸುರಿಯುತ್ತಾ, ಹೊಸ ರಸ್ತೆಗಳನ್ನು ನಿರ್ಮಾಣ ಮಾಡಿಕೊಡುತ್ತಾ ಸರ್ಬಿಯಾದ ಸದ್ಭಾವನೆ ಗಳಿಸಿಕೊಂಡಿದೆ. ಯೂರೋಪಿನ ಹಲವು ರಾಷ್ಟ್ರಗಳು ಚೀನಾದೊಂದಿಗಿನ ರಾಜತಾಂತ್ರಿಕತೆ ಹಾಗೂ ವ್ಯಾಪಾರದ ಮೂಲಕ ಲಾಭ ಗಳಿಸಿಕೊಂಡಿವೆ. ಆದರೆ ಬೆಲಾರಸ್ ಸೇರಿದಂತೆ ಕೇವಲ ಬೆರಳೆಣಿಕೆಯ ರಾಷ್ಟ್ರಗಳು ಮಾತ್ರವೇ ಚೀನಾದಿಂದ ಆಧುನಿಕ ಶಸ್ತ್ರಾಸ್ತ್ರಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಇದು ಕಳೆದ ಮೂವತ್ತು ವರ್ಷಗಳಿಂದ ಯುರೋಪಿನಲ್ಲಿ ಕಂಡು ಬರುತ್ತಿರುವ ಅತಿದೊಡ್ಡ ಬದಲಾವಣೆಯಾಗಿದೆ. ಮೂವತ್ತು ವರ್ಷಗಳ ಹಿಂದೆ ಚೀನಾ ಯೂರೋಪಿನ ಕಮ್ಯುನಿಸ್ಟ್ ರಾಷ್ಟ್ರವಾದ ಆಲ್ಬೇನಿಯಾಗೆ ಮಾತ್ರ ಅಗತ್ಯ ಸೈನ್ಯ ಸಹಾಯವನ್ನು ಒದಗಿಸುತ್ತಿತ್ತು. ಆದರೆ 1990ರ ದಶಕದ ಕೊನೆಯಲ್ಲಿ ನಡೆದ ಯುಗೋಸ್ಲಾವಿಯಾದ ಕುಸಿತ, ವಿಭಜನೆ, ಆ ಬಳಿಕ ನಡೆದ ನಾಲಕ್ಕು ಆಂತರಿಕ ಯುದ್ಧಗಳು ಬಾಲ್ಕನ್ಸ್ ಪ್ರಾಂತ್ಯದಲ್ಲಿ ಚೀನೀ ಆಯುಧಗಳ ಸುರಿಮಳೆಯನ್ನೇ ಸುರಿಸಲು ಕಾರಣವಾದವು. ಈಗ ಚೀನಾ ತಾನು ನಿರ್ಮಿಸಿರುವ ಆಯುಧಗಳನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಕಾನೂನು ಬದ್ಧ ಶಸ್ತ್ರಾಸ್ತ್ರ ವಿತರಕರ ಮೂಲಕ ಯೂರೋಪಿಗೆ ಕಳುಹಿಸುತ್ತಾ ಬಂದಿದ್ದು, ಇದಕ್ಕಾಗಿ ಒಂದು ವ್ಯವಸ್ಥಿತ ಜಾಲವನ್ನು ರೂಪಿಸಿಕೊಂಡಿದೆ. ಈಗ ಉಕ್ರೇನಿನಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಚೀನಾ ನಿರ್ಮಿಸುತ್ತಿರುವ ಕ್ವಾಡ್ ಕಾಪ್ಟರ್‌ಗಳು ಹಾಗೂ ಕೈಯಲ್ಲಿ ಹಿಡಿಯುವ ರೇಡಿಯೋ ಉಪಕರಣಗಳಿಗೆ ಅತಿ ಹೆಚ್ಚು ಬೇಡಿಕೆ ನಿರ್ಮಾಣವಾಗಿದೆ.
ಪೂರಕ ಮಾಹಿತಿ: ಸರ್ಬಿಯಾ ದಕ್ಷಿಣ ಯುರೋಪಿನಲ್ಲಿರುವ, ಸುತ್ತಲೂ ಭೂಮಿಯಿಂದ ಆವೃತವಾಗಿರುವ, ಪನೋನಿಯನ್ ಬಯಲು ಹಾಗೂ ಪಶ್ಚಿಮದ ಬಾಲ್ಕನ್ ಪರ್ಯಾಯ ದ್ವೀಪದಲ್ಲಿ ಹರಡಿರುವ ದೇಶವಾಗಿದೆ. ಸರ್ಬಿಯಾ ಉತ್ತರದಲ್ಲಿ ಹಂಗೆರಿ, ಪೂರ್ವದಲ್ಲಿ ರೊಮಾನಿಯಾ ಹಾಗೂ ಬಲ್ಗೇರಿಯಾದೊಡನೆ ತನ್ನ ಗಡಿ ಹಂಚಿಕೊಂಡಿದೆ.