ನವದೆಹಲಿ(ಜೂ.17): ಪೂರ್ವ ಲಡಾಖ್‌ನ ಗಲ್ವಾನ್‌ ಕಣಿವೆ ಪ್ರದೇಶದಲ್ಲಿ ಭಾರತ- ಚೀನಾ ನಡುವೆ 5 ವಾರಗಳಿಂದ ಸೃಷ್ಟಿಯಾಗಿದ್ದ ಗಡಿ ಸಂಘರ್ಷ, ಸೋಮವಾರ ರಾತ್ರಿ50 ವರ್ಷಗಳಲ್ಲೇ ಭೀಕರ ಕಾಳಗಕ್ಕೆ ಕಾರಣವಾಗಿದೆ. ವಿವಾದಿತ ಪ್ರದೇಶದಿಂದ ಹಿಂದೆ ಸರಿಯುವಾಗ ಭಾರತೀಯ ಯೋಧರ ಮೇಲೆ ಚೀನಾ ಸೈನಿಕರು ಕಲ್ಲು, ದೊಣ್ಣೆಗಳಿಂದ ತೀವ್ರ ರೀತಿಯ ದಾಳಿ ನಡೆಸಿದ್ದಾರೆ. ಈ ವೇಳೆ ಭಾರತೀಯ ಯೋಧರೂ ತಿರುಗಿಬಿದ್ದಿದ್ದಾರೆ. ರಾತ್ರಿ ಹಲವು ತಾಸು ನಡೆದ ಈ ಹೊಡೆದಾಟದ ವೇಳೆ 20 ಭಾರತೀಯ ಯೋಧರು ಹತರಾಗಿದ್ದರೆ, ಚೀನಾದ 43 ಯೋಧರು ಸಾವಿಗೀಡಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.

"

ಬಿಕ್ಕಟ್ಟನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಉಭಯ ದೇಶಗಳು ನಿಶ್ಚಯಿಸಿದ್ದ ಸಂದರ್ಭದಲ್ಲೇ ಗಡಿಯಲ್ಲಿ ನಡೆದಿರುವ ಹತ್ಯಾಕಾಂಡ ಭಾರತ- ಚೀನಾ ನಡುವೆ ಮೊದಲೇ ಕೆಡುತ್ತಿದ್ದ ಸಂಬಂಧ ಹಳಸುವಂತೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್‌, ಸೇನಾ ಮಹಾದಂಡನಾಯಕ, ಮೂರೂ ಸೇನೆ ಮುಖ್ಯಸ್ಥರು ದಿನವಿಡೀ ಸರಣಿ ಸಭೆಗಳನ್ನು ನಡೆಸಿ, ಚೀನಾದ ದುರ್ವರ್ತನೆ ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ.

ಆರಂಭದಲ್ಲಿ ಭಾರತದ ಮೂವರು ಯೋಧರು ಮೃತಪಟ್ಟಿದ್ದಾರೆ ಎಂದು ವರದಿಗಳು ಬಂದಿದ್ದವು. ಆದರೆ ತಡರಾತ್ರಿ ವೇಳೆಗೆ ಈ ಸಂಖ್ಯೆ 20 ಎಂದು ಮೂಲಗಳು ತಿಳಿಸಿದವು. ಚೀನಾದ 43 ಯೋಧರೂ ಹತರಾಗಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ಅತ್ಯುನ್ನತ ಮೂಲಗಳನ್ನು ಉಲ್ಲೇಖಿಸಿ ವರದಿ ಪ್ರಕಟಿಸಿತು. ಮತ್ತೊಂದೆಡೆ, ಭಾರತೀಯ ಸೇನೆ ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ಮೂವರು ಯೋಧರು ಮೃತಪಟ್ಟಿದ್ದರು. 17 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಶೂನ್ಯಕ್ಕಿಂತ ಕಡಿಮೆ ತಾಪಮಾನದಿಂದಾಗಿ ಅವರೂ ಕೊನೆಯುಸಿರೆಳೆದರು. ಹೀಗಾಗಿ ಸಾವಿನ ಸಂಖ್ಯೆ 20ಕ್ಕೇರಿಕೆಯಾಗಿದೆ ಎಂದು ತಿಳಿಸಿತು.

ಗಡಿ ಸಂಘರ್ಷ: ಭಾರತ ಸೇನೆ ಕೊಟ್ಟ ಎದುರೇಟಿಗೆ 43 ಚೀನಾ ಸೈನಿಕರು ಮಟಾಶ್

ಭಾರತ- ಚೀನಾ ನಡುವೆ ಇಷ್ಟೊಂದು ಬೃಹತ್‌ ಪ್ರಮಾಣದ ಸಂಘರ್ಷ ನಡೆದಿರುವುದು 1967ರ ಬಳಿಕ ಇದೇ ಮೊದಲ ಬಾರಿ. ನಾಥು ಲಾದಲ್ಲಿ 53 ವರ್ಷಗಳ ಹಿಂದೆ ಎರಡೂ ದೇಶಗಳ ನಡುವೆ ಕಾದಾಟ ನಡೆದು, 80 ಭಾರತೀಯ ಹಾಗೂ 300 ಚೀನಾ ಯೋಧರು ಸಾವಿಗೀಡಾಗಿದ್ದರು. ಅದಾದ ನಂತರ 1975ಲ್ಲಿ ಅರುಣಾಚಲ ಪ್ರದೇಶದ ಗಡಿಯಲ್ಲಿರುವ ತುಲುಂಗ್‌ ಲಾದಲ್ಲಿ ಉಭಯ ಸೇನೆಯ ನಡುವೆ ಸಂಘರ್ಷ ನಡೆದಿತ್ತು. ಆಗ ನಾಲ್ವರು ಭಾರತೀಯ ಯೋಧರು ಸಾವನ್ನಪ್ಪಿದ್ದರು. ಅದರ ನಂತರ ಪರಸ್ಪರರನ್ನು ಕೊಲ್ಲುವಂತಹ ಸಂಘರ್ಷ ನಡೆದಿದ್ದು ಇದೇ ಮೊದಲು. ಗುಂಡಿನ ಚಕಮಕಿಯೂ ಈವರೆಗೆ ನಡೆದಿಲ್ಲ.

"

ಕಲ್ಲು ಹೊಡೆದು ಭಾರತೀಯರ ಹತ್ಯೆ:

ಸೋಮವಾರ ರಾತ್ರಿ ಗಲ್ವಾನ್‌ ಕಣಿವೆಯಿಂದ ಎರಡೂ ದೇಶಗಳ ಸೈನಿಕರನ್ನು ವಾಪಸ್‌ ಕರೆಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿತ್ತು. ಆಗ ಪರಸ್ಪರರ ನಡುವೆ ದಿಢೀರ್‌ ಸಂಘರ್ಷ ಶುರುವಾಯಿತು. ಚೀನಾ ಯೋಧರು ಗುಂಡಿನ ದಾಳಿ ನಡೆಸಲಿಲ್ಲ. ಬದಲಿಗೆ ಭಾರಿ ಪ್ರಮಾಣದಲ್ಲಿ ಕಲ್ಲು ತೂರಾಟ ಹಾಗೂ ದೊಣ್ಣೆಗಳಿಂದ ನಡೆಸಿದರು. ಈ ವೇಳೆ ಭಾರತೀಯ ಯೋಧರು ತಿರುಗಿಬಿದ್ದರು. ಹಲವು ತಾಸುಗಳ ಕಾಲ ಉಭಯ ದೇಶಗಳ ಯೋಧರ ನಡುವೆ, ಕಲ್ಲು ಹಾಗೂ ಬಡಿಗೆಗಳಿಂದ ಹೊಡೆದಾಟ ನಡೆಯಿತು ಎಂದು ವರದಿಗಳು ತಿಳಿಸಿವೆ.

ಆದರೆ, ಭಾರತೀಯ ಯೋಧರೇ ತನ್ನ ಗಡಿಯೊಳಕ್ಕೆ ಪ್ರವೇಶಿಸಿ ಹಿಂಸಾಚಾರ ನಡೆಸಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ದೂರಿದೆ.

ಭಾರತದಿಂದಲೇ ದಾಳಿ - ಚೀನಾ:

ಕಳೆದ ಐದು ವಾರಗಳಿಂದ ಪೂರ್ವ ಲಡಾಖ್‌ನ ಗಲ್ವಾನ್‌ ಕಣಿವೆ, ಪ್ಯಾಂಗಾಂಗ್‌ ತ್ಸೋ, ಡೆಮ್ಚೋಕ್‌ ಹಾಗೂ ದೌಲತ್‌ ಬೇಗ್‌ ಓಲ್ಡಿಯಲ್ಲಿ ಭಾರತ ಹಾಗೂ ಚೀನಾ ಯೋಧರು ಭಾರಿ ಪ್ರಮಾಣದಲ್ಲಿ ಜಮಾವಣೆಯಾಗಿದ್ದಾರೆ. ಮಾತುಕತೆಯ ಬಳಿಕ ಎರಡೂ ದೇಶಗಳು ತಮ್ಮ ಸೈನಿಕರನ್ನು ವಾಪಸ್‌ ಕರೆಸಿಕೊಳ್ಳಲು ಒಪ್ಪಿದ್ದವು. ಆದರೆ, ಈಗ ಸೈನಿಕರನ್ನು ವಾಪಸ್‌ ಕರೆಸಿಕೊಳ್ಳುವ ವೇಳೆಯಲ್ಲೇ ಚೀನಾ ದಾಳಿ ನಡೆಸಿದೆ. ಚೀನಾದ ಸರ್ಕಾರಿ ದಿನಪತ್ರಿಕೆ ಗ್ಲೋಬಲ್‌ ಟೈಮ್ಸ್‌, ‘ಭಾರತದ ಸೈನಿಕರು ಮೊದಲಿಗೆ ಚೀನಾದ ಗಡಿ ದಾಟಿ ಒಳಗೆ ನುಗ್ಗಿ ಚೀನಾ ಯೋಧರ ಮೇಲೆ ದಾಳಿ ನಡೆಸಿದ ಪರಿಣಾಮ ಸಾವುನೋವು ಸಂಭವಿಸಿದೆ’ ಎಂದು ವರದಿ ಮಾಡಿದೆ.

ಅತೀ ದೊಡ್ಡ ತಪ್ಪು ಮಾಡಿದ ಚೀನಾ, ಒಗ್ಗಟ್ಟಾಗಿ ಹೋರಾಡಲು ಸಂಸದ ರಾಜೀವ್ ಚಂದ್ರಶೇಖರ್ ಕರೆ!

ರಾಜನಾಥ ಸಿಂಗ್‌ ತುರ್ತು ಸಭೆ:

ಭಾರತೀಯ ಯೋಧರ ಹತ್ಯೆಯ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಚೀಫ್‌ ಆಫ್‌ ಡಿಫೆನ್ಸ್‌ ಸ್ಟಾಫ್‌ ಜ.ಬಿಪಿನ್‌ ರಾವತ್‌, ಮೂರು ಸೇನಾಪಡೆಗಳ ಮುಖ್ಯಸ್ಥರು, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಜೊತೆ ತುರ್ತು ಸಭೆ ನಡೆಸಿ ಲಡಾಖ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಸೇನಾಪಡೆ ಮುಖ್ಯಸ್ಥ ಜ.ಎಂ.ಎಂ.ನರವಣೆ ಅವರ ದೆಹಲಿ ಹೊರವಲಯದ ಸೇನಾನೆಲೆಯ ಭೇಟಿ ರದ್ದುಗೊಳಿಸಲಾಗಿದೆ.

ಒಂದೂವರೆ ತಿಂಗಳಿನಿಂದ ಲಡಾಖ್‌ನ ಗಡಿಯಲ್ಲಿರುವ ಪ್ಯಾಂಗಾಂಗ್‌ ತ್ಸೋ, ಗಲ್ವಾನ್‌ ಕಣಿವೆ ಸೇರಿದಂತೆ ನಾಲ್ಕು ಪ್ರದೇಶಗಳಿಗೆ ಚೀನಾ ಯೋಧರು ನುಸುಳುತ್ತಿದ್ದಾರೆ. ಈ ಪ್ರದೇಶಗಳು ತಮ್ಮವು ಎಂದು ಚೀನಾ ಪ್ರತಿಪಾದಿಸುತ್ತಿದ್ದು, ಭಾರತ ಅದನ್ನು ತೀವ್ರವಾಗಿ ವಿರೋಧಿಸುತ್ತಿದೆ. ಕಳೆದ ತಿಂಗಳು ಪ್ಯಾಂಗಾಂಗ್‌ ತ್ಸೋ ಪ್ರದೇಶದಲ್ಲಿ ಭಾರತ ಹಾಗೂ ಚೀನಾದ ತಲಾ 250 ಯೋಧರು ಪರಸ್ಪರ ಕೈಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದರು. ನಂತರ ಎರಡೂ ದೇಶಗಳ ನಡುವೆ ಗಲ್ವಾನ್‌ ಕಣಿವೆಯಲ್ಲಿ ಸೇನಾಪಡೆ ಮಟ್ಟದ ಮಾತುಕತೆ ಆರಂಭವಾಗಿದ್ದು, ಅದಿನ್ನೂ ನಡೆಯುತ್ತಿದೆ.

ಪ್ಯಾಂಗಾಂಗ್‌ ತ್ಸೋ ಪ್ರದೇಶದಲ್ಲಿ ಭಾರತ ಹೊಸತಾಗಿ ರಸ್ತೆ ನಿರ್ಮಿಸಿದ್ದನ್ನು ವಿರೋಧಿಸಿ ಚೀನಾ ಘರ್ಷಣೆ ಆರಂಭಿಸಿದೆ.

ಐದಾರು ಸರಣಿ ಸಭೆ ನಡೆಸಿದ ಮೋದಿ

ಚೀನಾ ಜತೆಗಿನ ಸಂಘರ್ಷ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಸಭೆಗಳನ್ನು ನಡೆಸಿದ್ದಾರೆ. ಈ ಪೈಕಿ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರ ಜತೆಗೇ ಮೂರಕ್ಕೂ ಅಧಿಕ ಬಾರಿ ಮಾತುಕತೆ ನಡೆಸಿದ್ದಾರೆ. ಇದಲ್ಲದೆ ತಡರಾತ್ರಿ ಗೃಹ ಸಚಿವ ಅಮಿತ್‌ ಶಾ, ವಿದೇಶಾಂಗ ಸಚಿವ ಜೈಶಂಕರ್‌, ರಾಜನಾಥ್‌ ಜತೆಗೂಡಿ ಸುದೀರ್ಘ ಮಾತುಕತೆ ಮಾಡಿದ್ದಾರೆ. ಸೇನಾ ಮುಖ್ಯಸ್ಥರಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ.

1967ರಲ್ಲಿ 300 ಚೀನಾ ಯೋಧರ ಕೊಂದಿತ್ತು ಭಾರತ

1967ರಲ್ಲಿ ನಾಥು ಲಾದಲ್ಲಿ ಭಾರತ- ಚೀನಾ ನಡುವೆ ಸಂಘರ್ಷ ಏರ್ಪಟ್ಟಿತ್ತು. ಆಗಿನ ಕಾದಾಟದಲ್ಲಿ ಭಾರತದ 80 ಯೋಧರು ಮೃತಪಟ್ಟಿದ್ದರೆ, ಚೀನಾದ 300 ಯೋಧರು ಸಾವಿಗೀಡಾಗಿದ್ದರು. ಅದಾದ ನಂತರ ನಡೆದಿರುವ ಬೃಹತ್‌ ಕಾಳಗ ಇದಾಗಿದೆ. ಈಗಲೂ ಚೀನಾ ಯೋಧರೇ ಹೆಚ್ಚಿನ ಸಂಖ್ಯೆಯಲ್ಲಿ ಹತರಾಗಿದ್ದಾರೆ. ಆದರೆ ಸಾವಿನ ಸಂಖ್ಯೆ ಬಗ್ಗೆ ಚೀನಾ ಬಾಯಿಬಿಡುತ್ತಿಲ್ಲ.

ಗಡಿಯಲ್ಲಿ ಚೀನಾ ಕಾಪ್ಟರ್‌ಗಳ ಹಾರಾಟ

ಗಲ್ವಾನ್‌ನಲ್ಲಿ ಉಭಯ ದೇಶಗಳ ಯೋಧರ ಹೊಡೆದಾಟ ಬಳಿಕ ಆ ಕಣಿವೆ ಪ್ರದೇಶದಲ್ಲಿ ಚೀನಾ ಹೆಲಿಕಾಪ್ಟರ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಹಾರಾಟ ನಡೆಸಿರುವುದು ಕಂಡುಬಂದಿದೆ. ಭಾರತೀಯ ಯೋಧರ ಜತೆಗಿನ ಸಂಘರ್ಷದ ವೇಳೆ ಮೃತರಾದ ಹಾಗೂ ಗಾಯಗೊಂಡ ತನ್ನ ಯೋಧರನ್ನು ಸಾಗಿಸಲು ಚೀನಾ ಹೆಲಿಕಾಪ್ಟರ್‌ ಬಳಸಿದೆ ಎಂದು ಮೂಲಗಳು ತಿಳಿಸಿವೆ.

ಗಡಿಯಲ್ಲಿ ಗುಂಡಿನ ಚಕಮಕಿ ನಡುವೆ ಕಾಮಗಾರಿ ಆರಂಭ; 1600 ಕಾರ್ಮಿಕರು ಲಡಾಕ್‌ಗೆ!

ಹೊಡೆದಾಟ ಬಳಿಕ ಜಾಗ ಖಾಲಿ ಮಾಡಿದ ಚೀನಾ

ಪರಸ್ಪರ ಹೊಡೆದಾಟ ನಡೆದ ಬಳಿಕ ಗಡಿಯ ವಿವಾದಿತ ಪ್ರದೇಶದಿಂದ ಚೀನಾ ಕಾಲ್ಕಿತ್ತಿದೆ. ಬಳಿಕ ಭಾರತೀಯ ಯೋಧರು ಅಲ್ಲಿಂದ ವಾಪಸ್‌ ಬಂದಿದ್ದಾರೆ ಎಂದು ಮೂಲಗಳು ಹೇಳಿವೆ.