ಸುಮ್ಮನೆ ಕೈ ಕಟ್ಟಿ ಕೂರಕ್ಕಾಗಲ್ಲ..! ನೋಟ್ ಬ್ಯಾನ್ ವಿಚಾರವಾಗಿ ಕೇಂದ್ರದ ವಿರುದ್ಧ ಸುಪ್ರೀಂ ಕಿಡಿ
ಆರ್ಥಿಕ ನೀತಿ ನಿರ್ಧಾರಗಳಿಗೆ ನ್ಯಾಯಾಂಗ ಪರಿಶೀಲನೆ ಅನ್ವಯಿಸುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ವಕೀಲರು ತಿಳಿಸಿದ್ದಕ್ಕೆ ಸುಪ್ರೀಂಕೋರ್ಟ್ ಟೀಕೆ ಮಾಡಿದೆ.
ನೋಟ್ ಬ್ಯಾನ್ (Note Ban) ನಿರ್ಧಾರದ ಬಗ್ಗೆ ಸುಪ್ರೀಂಕೋರ್ಟ್ (Supreme Court) ತಾನು ಸುಮ್ಮನೆ ಕೈ ಕಟ್ಟಿ ಕೂರಲು ಆಗಲ್ಲ ಎಂದು ಮಂಗಳವಾರ ಕೇಂದ್ರ ಸರ್ಕಾರದ (Central Government) ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದೆ. ಈ ಮೂಲಕ, ನೋಟು ಅಮಾನ್ಯೀಕರಣದ (Demonetisation) ನಿರ್ಧಾರವನ್ನು ಯಾವ ರೀತಿಯಲ್ಲಿ ತೆಗೆದುಕೊಳ್ಳಲಾಗಿದೆ ಎಂಬುದನ್ನು ಪರಿಶೀಲಿಸುವ ಅಧಿಕಾರ ತನಗಿದೆ ಎಂದು ಹೇಳಿದೆ. ಹಾಗೂ, ಆರ್ಥಿಕ ನೀತಿ ನಿರ್ಧಾರ (Economic Policy Decision) ಎಂಬ ಕಾರಣಕ್ಕೆ ನ್ಯಾಯಾಂಗವು (Judiciary) ಕೈ ಕಟ್ಟಿಕೊಂಡು ಕುಳಿತುಕೊಳ್ಳುವುದಿಲ್ಲ ಎಂದೂ ತಿಳಿಸಿದೆ. ಆರ್ಥಿಕ ನೀತಿ ನಿರ್ಧಾರಗಳಿಗೆ ನ್ಯಾಯಾಂಗ ಪರಿಶೀಲನೆ ಅನ್ವಯಿಸುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) (ಆರ್‌ಬಿಐ) ವಕೀಲರು ತಿಳಿಸಿದ್ದಕ್ಕೆ ನ್ಯಾಯಾಲಯ ಈ ಟೀಕೆ ಮಾಡಿದೆ.
ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್, ಬಿ.ಆರ್. ಗವಾಯಿ, ಎ.ಎಸ್. ಬೋಪಣ್ಣ, ವಿ. ರಾಮಸುಬ್ರಮಣಿಯನ್ ಹಾಗೂ ಬಿ.ವಿ ನಾಗರತ್ನ ಅವರನ್ನೊಳಗೊಂಡ ಐವರು ನ್ಯಾಯಮೂರ್ತಿಗಳ ಪೀಠವು 2016 ರಲ್ಲಿ ₹ 500 ಮತ್ತು ₹ 1,000 ರ ನೋಟುಗಳನ್ನು ರದ್ದುಗೊಳಿಸಿದ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಈ ವಿಚಾರಣೆಯ ವೇಳೆ, ಆರ್‌ಬಿಐ ಪರವಾಗಿ ಹಾಜರಾದ ಹಿರಿಯ ವಕೀಲ ಜೈದೀಪ್ ಗುಪ್ತಾ ಅವರು ಕಪ್ಪುಹಣ ಹಾಗೂ ನಕಲಿ ಕರೆನ್ಸಿಗಳನ್ನು ತಡೆಗಟ್ಟುವ ನೋಟು ಅಮಾನ್ಯೀಕರಣ ನೀತಿಯ ಉದ್ದೇಶದ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿದರು.
ಇದನ್ನು ಓದಿ: Note Ban: 500, 1000 ರೂಪಾಯಿಯ ನೋಟು ಬಳಕೆ ಏರಿದ್ದಕ್ಕೆ ನಿಷೇಧ!
ಅಲ್ಲದೆ, 2016ರ ನೋಟು ಅಮಾನ್ಯೀಕರಣ ನೀತಿಯನ್ನು ಸಮರ್ಥಿಸಿಕೊಂಡ ವಕೀಲರು, ಹೇಳಲಾದ ಉದ್ದೇಶಗಳು ಮತ್ತು ನೋಟು ಅಮಾನ್ಯೀಕರಣದ ನಡುವೆ ಸಮಂಜಸವಾದ ಸಂಬಂಧವಿದೆಯೇ ಎಂದು ಪರೀಕ್ಷಿಸುವ ಮಟ್ಟಿಗೆ ಅನುಪಾತದ ತತ್ವವನ್ನು ಅನ್ವಯಿಸಬೇಕು ಎಂದರು. ಜತೆಗೆ, ನೋಟು ಅಮಾನ್ಯೀಕರಣ ಸಮರ್ಥಿಸಿಕೊಂಡ ಜೈದೀಪ್ ಗುಪ್ತಾ, ಆರ್ಥಿಕ ನೀತಿ ನಿರ್ಧಾರಗಳಿಗೆ ನ್ಯಾಯಾಂಗ ವಿಮರ್ಶೆಯನ್ನು ಅನ್ವಯಿಸಲಾಗುವುದಿಲ್ಲ ಎಂದೂ ತಿಳಿಸಿದರು.
ಬಳಿಕ, ಇದಕ್ಕೆ ಸ್ಪಷ್ಟನೆ ನೀಡಿದ ಕರ್ನಾಟಕ ಮೂಲದ ಸುಪ್ರೀಂಕೋರ್ಟ್ ಐವರು ಸದಸ್ಯರ ಪೀಠದ ನ್ಯಾಯಮೂರ್ತಿ ಬಿ.ವಿ ನಾಗರತ್ನ, ನ್ಯಾಯಾಲಯವು ನಿರ್ಧಾರದ ಶ್ರೇಷ್ಠತೆಯನ್ನು ಗಮನಿಸಲ್ಲ. ಆದರೆ ನಿರ್ಧಾರವನ್ನು ತೆಗೆದುಕೊಂಡ ರೀತಿಯನ್ನು ಪರಿಶೀಲಿಸಬಹುದು ಎಂದು ತಿಳಿಸಿದರು. ಹಾಗೂ, ಆರ್ಥಿಕ ನೀತಿ ನಿರ್ಧಾರ ಎಂಬ ಕಾರಣಕ್ಕೆ ನ್ಯಾಯಾಲಯ ಕೈ ಕಟ್ಟಿ ಕುಳಿತುಕೊಳ್ಳುವಂತಿಲ್ಲ ಎಂದೂ ಮಹಿಳಾ ನ್ಯಾಯಮೂರ್ತಿ ಹೇಳಿದರು.
ಇದನ್ನೂ ಓದಿ: ನೋಟು ಅಮಾನ್ಯೀಕರಣಕ್ಕೂ ಮುನ್ನ ಆರ್‌ಬಿಐ ಸಭೆಯಲ್ಲಿ ಆಗಿದ್ದೇನು? ಇದರ ಸಮಗ್ರ ವರದಿ ಸಲ್ಲಿಸಿ: ಸುಪ್ರೀಂ ಕೋರ್ಟ್!
ಸರ್ಕಾರಕ್ಕೆ ಬುದ್ಧಿವಂತಿಕೆ ಇದೆ ಮತ್ತು ಜನರಿಗೆ ಯಾವುದು ಒಳ್ಳೆಯದು ಎಂಬುದು ತಿಳಿದಿದೆ. ಆದರೂ, ನೋಟ್ ಬ್ಯಾನ್ ನಿರ್ಧಾರಗಳಿಗೆ ಸಂಬಂಧಿಸಿದ ಕಾರ್ಯವಿಧಾನಗಳು ಮತ್ತು ಅಂಶಗಳನ್ನು ಪರಿಶೀಲಿಸಬಹುದು ಎಂದು ಪೀಠ ಅಭಿಪ್ರಾಯಪಟ್ಟಿದೆ. ಸುಮಾರು ಐದು ಗಂಟೆಗಳ ಕಾಲ ನಡೆದ ಈ ವಿಚಾರಣೆಯಲ್ಲಿ, ₹ 500 ಮತ್ತು ₹ 1,000 ನೋಟುಗಳನ್ನು ಬ್ಯಾಂಕ್‌ಗೆ ನೀಡಲು ಶ್ರೀಮಂತರು ತಮ್ಮ ಕಾರ್ಮಿಕರು ಹಾಗೂ ಮನೆ ಕೆಲಸದವರನ್ನು ಬ್ಯಾಂಕ್‌ನಲ್ಲಿ ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಿಸಿದ ಪ್ರಕರಣಗಳನ್ನೂ ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತು.
ಆದರೆ, ಜನರು ತಮ್ಮ ನೋಟುಗಳನ್ನು ಬದಲಾಯಿಸಿಕೊಳ್ಳಲು ಸಾಕಷ್ಟು ಅವಕಾಶಗಳನ್ನು ನೀಡಲಾಯಿತು ಎಂದೂ ಆರ್‌ಬಿಐ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಅಲ್ಲದೆ, ಸುಪ್ರೀಂಕೋರ್ಟ್‌ನಲ್ಲಿ ಇಂದು ಸುದೀರ್ಘ ವಾದ ಮಂಡಿಸಿದ ಹಿರಿಯ ವಕೀಲ ಜೈದೀಪ್ ಗುಪ್ತಾ ಸುಪ್ರೀಂಕೋರ್ಟ್‌ಗೆ ಬಂದ ಅರ್ಜಿಗಳನ್ನು ವಿರೋಧಿಸಿದರು. ಹಾಗೂ, ಅರ್ಜಿದಾರರು ಯಾವುದೇ ಕಾನೂನು ಆಧಾರಗಳನ್ನು ಸ್ಥಾಪಿಸಿಲ್ಲ, ಸಂಬಂಧಿತ ಅಂಶಗಳನ್ನು ಪರಿಗಣಿಸಿಲ್ಲ ಮತ್ತು ಅಪ್ರಸ್ತುತ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ದೇಶದ ಉನ್ನತ ನ್ಯಾಯಾಲಯದಲ್ಲಿ ವಾದ ಮಾಡಿದ್ದಾರೆ.
ಇದನ್ನೂ ಓದಿ: Black & White ಅಮಾನ್ಯ ನೋಟುಗಳಿಗೆ ಹೊಸ ನೋಟು ನೀಡುವ ದಂಧೆ, ಬೆಂಗಳೂರಲ್ಲಿ ಇನ್ನೂ ಜೀವಂತ!