ಸತ್ಯ ಮಿಥ್ಯಗಳ ನಡುವೆ ಜೇನುತುಪ್ಪ!

ಕೆಲವು ವರ್ಷಗಳ ಹಿಂದಿನ ಮಾತು.. ನನ್ನ ಕೃಷಿ ಕೆಲಸದ ಅಗತ್ಯಗಳಿಗೆ ತಕ್ಕಂತೆ ಬಾಡಿಗೆ ಹೊಡೆಯಲು ಲಗೇಜು ವ್ಯಾನಿನವನೊಬ್ಬ ಬರುತ್ತಿದ್ದ. ನಮ್ಮಲ್ಲಿರುವ ಜೇನು ಪೆಟ್ಟಿಗೆಗಳನ್ನು, ಜೇನು ಸಾಕಣಿಕೆಯನ್ನು ನೋಡಿ ಒಂದು ಕೆಜಿ ಜೇನುತುಪ್ಪವನ್ನು ಒಯ್ದಿದ್ದ. ಮಾರನೇ ದಿನ ಪೇಟೆಯಲ್ಲಿ ಸಿಕ್ಕವನು, ‘ಯಾಕೋ ನಿಮ್ಮ ಜೇನುತುಪ್ಪವನ್ನು ಹೆಂಡತಿ ಮತ್ತು ಮಕ್ಕಳು ಇಷ್ಟಪಡಲಿಲ್ಲ ಕಣ್ರಿ’ ಎಂದ. ‘ಯಾಕೋ ಏನಾಗಿದೆ ಜೇನುತುಪ್ಪಕ್ಕೆ’ ಎಂದೆ. 

Popular myths about facts about honey vcs

- ನಾಗೇಂದ್ರ ಸಾಗರ್‌

‘ಹಿಂದೆ ತರುತ್ತಿದ್ದ ಜೇನುತುಪ್ಪದ ಹಾಗೆ ಸಿಹಿಯಾಗಿಲ್ಲ ಕಣ್ರಿ’ ಅಂದ. ‘ಒರಿಜಿನಲ್‌ ಜೇನುತುಪ್ಪ ಬರೀ ಸಿಹಿ ಆಗಿರಲ್ಲ ಮಾರಾಯ. ನಿಸರ್ಗದಲ್ಲಿರುವ ಎಲ್ಲ ಬಗೆಯ ಹೂವುಗಳಿಂದ ಮಕರಂದ ಹೀರಿ ತರುವುದರಿಂದ, ಅದು ಸಿಹಿ, ಕಹಿ, ಹುಳಿ ವಗರುಗಳ ಸಮನ್ವಯ ಮಿಶ್ರಣ. ನೀನು ಮೊದಲು ತರುತ್ತಿದ್ದ ಜೇನುತುಪ್ಪದ ಹಾಗೆ ಸಿಹಿ ಸಿಹಿ ಇಲ್ಲದಿರಬಹುದು. ಆದರೆ ಔಷಧೀಯ ಗುಣಗಳು ಹೇರಳವಾಗಿರುತ್ತದೆ’ ಎಂದು ಪಾಠ ಮಾಡಿದೆ. ‘ಅದೆಲ್ಲ ಏನೂ ಗೊತ್ತಿಲ್ಲ ಸ್ವಾಮಿ. ನಾನೇನು ತೆಗೆದುಕೊಂಡು ಹೋಗುತ್ತೇನೋ ಮಕ್ಕಳು ಅದನ್ನು ಇಷ್ಟಪಟ್ಟು ತಿನ್ನಬೇಕು, ಅದಿಲ್ಲವೆಂದರೆ ಅದರಲ್ಲಿ ಏನಿದ್ದು ಏನು ಪ್ರಯೋಜನ’ ಎಂದು ಹೇಳಿ, ನನ್ನ ಜೇನು ಜ್ಞಾನವನ್ನು ನಡುಬೀದಿಯಲ್ಲಿ ನಿವಾಳಿಸಿ ಎಸೆದು ಬಿಟ್ಟ. ನಾನು ಪೆಚ್ಚಾಗಿ, ‘ಮಾರಾಯ ನಿನಗಿದೆಲ್ಲ ಗೊತ್ತಾಗಲ್ಲ, ಜೇನುತುಪ್ಪವನ್ನು ವಾಪಸ್‌ ತಂದಿಟ್ಟು ಅದರ ದುಡ್ಡನ್ನು ತೆಗೆದುಕೊಂಡು ಹೋಗು’ ಎಂದಿದ್ದೆ.

Popular myths about facts about honey vcs

ಇನ್ನೊಮ್ಮೆ ಒಂದು ಕೃಷಿ ಮೇಳ. ಆಯೋಜಕರು ಜೇನಿನದೊಂದು ಸ್ಟಾಲು ಇರಲೇಬೇಕು ಎಂದು ಆಗ್ರಹಿಸಿದ್ದರು. ಇಟ್ಟಿದ್ದೆವು. ಯಜಮಾನರೊಬ್ಬರು ಬಂದವರು ಜೇನುತುಪ್ಪದ ದರ ಕೇಳಿ ಹೌಹಾರಿದರು. ನಿಮ್ಮದೇನ್ರಿ ಇಷ್ಟುರೇಟು? ಪ್ರತಿಷ್ಠಿತ ಕಂಪನಿಯ ಹೆಸರು ಹೇಳಿ, ಹೆಚ್ಚೂ ಕಡಿಮೆ ನಿಮ್ಮ ಅರ್ಧ ರೇಟಿಗೆ ಅವರ ತುಪ್ಪ ಸಿಗುತ್ತೆ. ಸಾಲದ್ದಕ್ಕೆ ಒಂದು ತೆಗೆದುಕೊಂಡರೆ ಇನ್ನೊಂದು ಫ್ರೀ ಬೇರೆ ಅನ್ನುವ ಕಾಮೆಂಟು ಕೇಳಿದ ಮೇಲೆ ಅಸಲಿ ಕಂಪನಿಗಳ ನಕಲೀ ಜಾಲದ ಕುರಿತು ವಿವರಣೆ ಕೊಡಲು ಹೋದೆ. ಬಹುತೇಕ ಕಂಪನಿಗಳು ನಮ್ಮ ಭಾರತೀಯ ತುಡುವೆ ಜೇನು ತುಪ್ಪವನ್ನು ಮಾರುವುದೇ ಇಲ್ಲ. ಅವರೇನಿದ್ದರೂ ಉತ್ತರ ಭಾರತದ ರಾಜ್ಯಗಳಲ್ಲಿನ ಮೆಲ್ಲಿಫೆರಾ ವಿದೇಶಿ ತಳಿಯ ಜೇನುತುಪ್ಪವನ್ನು ಸಾಕುತ್ತಾರೆ. ಅದು ಶುದ್ಧ ಜೇನುತುಪ್ಪ ಅಲ್ಲ ಅಂತ ನಾನು ಹೇಳುವುದಿಲ್ಲ. ಆದರೆ ಸಾಸಿವೆ, ಲಿಚ್ಚೀ, ಸೋಯಾಬೀನ್‌, ಸೂರ್ಯಕಾಂತಿ, ಸೇಬು ಇವೇ ಮುಂತಾದ ಏಕಜಾತಿಯ ಬೆಳೆ ಬೆಳೆವ ಹೊಲಗಳಲ್ಲಿ ಇರಿಸಿ ತೆಗೆದ ಜೇನುತುಪ್ಪ ಆಗಿರುತ್ತದೆ. ಅವು ಸಿಂಗಲ್‌ ಫೆä್ಲೕರಾ ಜೇನುತುಪ್ಪ. ಆದರೆ ನಮ್ಮ ದಕ್ಷಿಣ ಭಾರತದ ಅದರಲ್ಲೂ ಪಶ್ಚಿಮಘಟ್ಟದ ತಪ್ಪಲಿನ ಜೇನುತುಪ್ಪ ಎಂದರೆ ವಿಶಿಷ್ಟಸ್ವಾದದ ವಿಶಿಷ್ಟಬ್ಲೆಂಡಿನ ಹೇರಳ ಔಷಧೀಯ ಗುಣಗಳು ಇರುವ ಮಲ್ಟೀ ಫೆä್ಲೕರಾ ಜೇನುತುಪ್ಪ ಎಂದು ಎಕ್ಸ್‌ಪ್ಲನೇಷನ್‌ ಕೊಟ್ಟೆ. ಎಲ್ಲರೂ ಅವರವರದೇ ದೊಡ್ಡದು ಎಂದು ಹೇಳಿಕೊಳ್ಳುತ್ತಾರೆ ಎಂದು ಗೊಣಗುತ್ತಾ ಹೋದರು.

ಜೇನು ತುಪ್ಪದ ಸವಿ ಗೊತ್ತು, ಜೇನು ನೊಣವೂ ಇಷ್ಟು ಉಪಕಾರಿಯೇ?

ತೀರಾ ಮೊನ್ನೆ ಮೊನ್ನೆಯ ತನಕ ನಾನು ಈ ಪ್ರತಿಷ್ಠಿತ ಕಂಪನಿಗಳು ಹೀಗೆ ಮಲ್ಲಿಫೆರಾ ಜೇನುತುಪ್ಪ ಮಾರುತ್ತವೆ ಎಂದು ಕೊಂಡಿದ್ದೆ. ಆದರೆ ಈಗ ನೋಡಿದರೆ ಅವರ ನಿಜ ರೂಪ ಬಯಲಾಗಿದೆ. ಬಹುತೇಕ ಕಂಪನಿಗಳ ಜೇನುತುಪ್ಪ ಕಲಬೆರಕೆಯದ್ದು ಎಂದು ಸಾಬೀತಾಗಿ ಜೇನುತುಪ್ಪದ ವಿಷಯದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಇದೇ ವಿಷಯ ಚರ್ಚೆಯಾಗುತ್ತದೆ.

Popular myths about facts about honey vcs

ನಾನೊಬ್ಬ ಜೇನುಕೃಷಿಕನಾಗಿ, ಹೊಸದಾಗಿ ಜೇನುಕೃಷಿ ಪ್ರಾರಂಭ ಮಾಡುವವರಿಗೆ ಜೇನುಪಾಠ ಮಾಡುವವನಾಗಿ ಮತ್ತು ಕಳೆದ ಇಪ್ಪತ್ತು ವರ್ಷಗಳ ಜೇನು ಅನುಭವಸ್ಥನಾಗಿ ಈ ಜೇನುತುಪ್ಪದ ಅಸಲಿಯತ್ತನ್ನು ಹತ್ತಿರದಿಂದ ನೋಡಿದ್ದೇನೆ. ಹಲವು ಸಿಹಿಕಹಿಯ ಅನುಭವವೂ ಆಗಿದೆ. ಮುಖ್ಯವಾಗಿ ಜೇನುತುಪ್ಪವನ್ನ ಎರಡು ಉದ್ದೇಶಕ್ಕೆ ಜನ ಬಳಸುತ್ತಾರೆ. ಮೊದಲನೆಯದಾಗಿ ಆರೋಗ್ಯ ಸಂಬಂಧೀ ವಿಷಯಗಳಿಗೆ, ಇನ್ನೊಂದು ಧಾರ್ಮಿಕ ಕಾರ್ಯಗಳಲ್ಲಿ. ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಜೇನುತುಪ್ಪಗಳು ನಕಲಿಯೇ ಆಗಿರುವುದರಿಂದ ಅದನ್ನು ಬಳಸುವ ಉದ್ದೇಶ ಸಾರ್ಥಕ ಆಗುವುದಿಲ್ಲ. ಕಡಿಮೆಯಾಗದ ಕೆಮ್ಮಿಗೆ ಜೇನುತುಪ್ಪ ಬಳಸಿದರೆ ವಾಸಿಯಾಗುತ್ತೆ ಎಂದು ಸಾಮಾನ್ಯದ ನಂಬಿಕೆ. ಕೆಲವರು ಪ್ರತಿಷ್ಠಿತ ಕಂಪನಿಯ ಜೇನುತುಪ್ಪ ಬಳಸಿದಾಗ ತಟ್ಟನೆ ಗುಣವಾಗುತ್ತೆ ಎನ್ನುತ್ತಿದ್ದರು. ಅದು ನಿಜವೂ ಆಗಿರುತ್ತಿತ್ತು. ಬಹಳ ಹಿಂದೊಮ್ಮೆ ಗುಣಮಟ್ಟಮಾಪಕ ಕಂಪನಿಯವರು ಈ ಬ್ರಾಂಡೆಡ್‌ ಕಂಪನಿಯ ಜೇನುತುಪ್ಪವನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಕೃತಕ ಆಂಟಿಬಯಾಟಿಕ್ಸನ್ನು ಬಳಸಿದ್ದು ಕಂಡು ಬಂದಿತ್ತು. ಜನ ತಮ್ಮದೇ ಕಂಪನಿಯ ಜೇನುತುಪ್ಪವನ್ನು ತೆಗೆದು ಕೊಳ್ಳಲಿ ಎನ್ನುವುದಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಅಂದುಕೊಂಡಿದ್ದೆ. ಆದರೆ ಇತ್ತೀಚಿನ ವರದಿ ಇವರುಗಳು ಎಂತಹ ನೈತಿಕ ಅಧಃಪತನಕ್ಕೆ ಇಳಿದಿದ್ದಾರೆ ಎಂದು ವಿದಿತಗೊಳಿಸಿದೆ.

ಇಮ್ಯನಿಟಿ ಹೆಚ್ಚಿಸೋಕೆ ಬಿದಿರಿನ ಬಿಸ್ಕತ್, ಜೇನು ಲಾಂಚ್ ಮಾಡಿದ ತ್ರಿಪುರಾ ಸಿಎಂ 

ಸ್ವತಃ ಜೇನು ಸಾಕಣಿಕೆದಾರನಾಗಿದ್ದೂ ಕೂಡ ದುಬಾರಿ ದರದಲ್ಲಿ ಜೇನು ಮಾರುತ್ತೀರಿ ಎಂದು ಮೊದಲ ಬಾರಿ ಕೊಳ್ಳುವ ಗ್ರಾಹಕರು ನನ್ನನ್ನು ದೂರುವುದು ಉಂಟು. ನಾನು ರೂ.500ರ ದರದಲ್ಲಿ ಜೇನುತುಪ್ಪವನ್ನು ಮಾರುವುದೂ ಹೌದು. ಆದರೆ ಇಂದಿನ ದಿನಗಳಲ್ಲಿ ವರ್ಷವಿಡೀ ನಿಯಮಿತ ವಾಗತ್ಯದ ನಡುವೆಯೂ ಒಂದು ಪೆಟ್ಟಿಗೆಯಿಂದ ಸರಾಸರಿ 5 ಕೆಜಿ ಜೇನುತುಪ್ಪ ತೆಗೆಯುವುದೂ ಕಷ್ಟವಾಗಿದೆ. ಇದಕ್ಕೆ ಹಲವು ಕಾರಣಗಳಿದೆ. ಬದಲಾದ ಹವಾಮಾನ, ಗಣನೀಯವಾಗಿ ಕಡಿಮೆಯಾದ ಕಾಡು, ಕಾಡಿನ ಬದಲು ಸರಕಾರೀ ಪ್ರಾಯೋಜಿತ ಏಕರೂಪದ ನೆಡುತೋಪು, ಕೃಷಿ ವಿಸ್ತರಣೆಯಾಗಿ ಜೇನಿಗೆ ವರ್ಷಪೂರ್ತಿ ಆಹಾರ ನೀಡುವ ಅರಣ್ಯವೇ ಇಲ್ಲವಾಗಿದೆ. ಅವೈಜ್ಞಾನಿಕ ಕೃಷಿ ಪದ್ಧತಿಯಿಂದಾಗಿ, ಹೇರಳ ಕೀಟನಾಶಕಗಳ ಬಳಕೆಯಿಂದಾಗಿ ಜೇನಿನ ಸಂತತಿಯೂ ಕಡಿಮೆಯಾಗಿದೆ. ಕೃತಕ ಆಹಾರ ನೀಡಿಯೂ ಮಳೆಗಾಲದಲ್ಲಿ ಜೇನಿಗೆ ಕಡಜೀರಿಗೆ/ಕಣಜಲು ಹುಳದ ಕಾಟ, ಜೇನು ನೊಣ ತಿನ್ನುವ ಹಕ್ಕಿಗಳ ಕಾಟದಿಂದಾಗಿ ಜೇನನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ.

ಇಂಥವೆಲ್ಲ ಕಸರತ್ತಿನ ನಡುವೆಯೂ ಸೀಮಿತ ಉತ್ಪಾದನೆಯ ಅಸಲೀ ಜೇನುತುಪ್ಪದ ತಲೆಯ ಮೇಲೆ ಹೊಡೆದಂತೆ ನಕಲಿ ಜೇನುತುಪ್ಪ ವಿಜೃಂಭಿಸುತ್ತಿರುವುದು ವಿಷಾದದ ಸಂಗತಿ.

Popular myths about facts about honey vcs

ನಿಮ್ಮದು ಬಹಳ ಶ್ರೇಷ್ಠ ಜೇನುತುಪ್ಪ ಎನ್ನುತ್ತೀರಿ ಅದನ್ನು ಸಾಬೀತು ಪಡಿಸುವ ಮಾನದಂಡಗಳೇನು ಎಂದು ಹಲವರು ನನ್ನಲ್ಲಿ ಕೇಳಿದ್ದುಂಟು. ಗುಣಮಟ್ಟಪರೀಕ್ಷೆಯ ಎಲ್ಲ ಮಾನದಂಡಗಳನ್ನು ಪಡೆದು, ಘನ ಸರಕಾರದ ವಿವಿಧ ಪ್ರಯೋಗಾಲಯಗಳ ಸರ್ಟೀಫಿಕೇಟು ಪಡೆದ ಜೇನುತುಪ್ಪಗಳೆಲ್ಲ ಫೇಕು ಎನ್ನುವುದು ಈಗ ಸಾಬೀತಾಗಿದೆ. ಸರಕಾರದ ಕಟ್ಟಳೆಗಳನ್ನೆಲ್ಲ ದಾಟಿ ರಂಗೋಲಿಯ ಅಡಿಯಲ್ಲಿ ನುಗ್ಗುವ ಪ್ರಭೃತಿಗಳು ಇರುವ ವಿಷಯ ಬಯಲಾಗಿದೆ.

ಈ ಜೇನುತುಪ್ಪವನ್ನು ಬಳಸುವ ಮುನ್ನ ಎಚ್ಚರ; ಸಂಶೋಧನೆ ಹೇಳ್ತಿದೆ ಭಯಂಕರ ವಿಚಾರ! 

ಕಲಬೆರಕೆ ಎಂದರೆ ಸಕ್ಕರೆಪಾಕಕ್ಕೆ ಕೆಮಿಕಲ್‌ ಎಸೆನ್ಸು, ಕೃತಕ ಬಣ್ಣ ಬೆರೆಸುವುದು ಎಂದುಕೊಳ್ಳಲಾಗಿತ್ತು. ಆದರೆ ಚೀನಾದಿಂದ ತರಿಸಿಕೊಂಡ ಬಣ್ಣದ ಉತ್ಪಾದನೆಯಲ್ಲಿ ಬಳಸುವ ಅಪಾಯಕಾರಿ ದ್ರವ ಹಾಗೂ ಮೆಕ್ಕೆ ಜೋಳದಿಂದ ಕೃತಕವಾಗಿ ಉತ್ಪಾದಿಸಿದ ಫ್ರುಕ್ಟೋಸನ್ನು ಬಳಸಲಾಗುತ್ತಿದೆ ಎಂದು ವರದಿ ಹೇಳುತ್ತಿದೆ.

ಹಾಗಿದ್ದರೆ ನಕಲಿ ಜೇನುತುಪ್ಪವನ್ನು ಜನಸಾಮಾನ್ಯರು ಗುರುತಿಸುವುದು ಹೇಗೆ? ಶುದ್ಧ ಜೇನುತುಪ್ಪ ನೀರಿನಲ್ಲಿ ಸುಲಭವಾಗಿ ಕರಗುವುದಿಲ್ಲ. ಒಂದು ಗಾಜಿನ ಲೋಟದ ತುಂಬ ನೀರು ತೆಗೆದುಕೊಂಡು ಒಂದೆರಡು ಹನಿ ಜೇನುತುಪ್ಪ ಸೇರಿಸಿದರೆ ಅದು ತಳ ಸೇರಿ ನಿಧಾನವಾಗಿ ನೀರಿನಲ್ಲಿ ಬೆರೆಯಬೇಕು. ಬ್ಲಾಟಿಂಗ್‌ ಪೇಪರ್ರಿನ ಮೇಲೆ ಹಾಕಿದಾಗ ಅದು ಓಡಬಾರದು. ಮತ್ತು ಅದನ್ನು ಪೇಪರ್ರು ಹೀರಿಕೊಳ್ಳಬಾರದು. ಜೇನುತುಪ್ಪವನ್ನು ಚಮಚದಿಂದ ಕೆಳಗೆ ಬಿಟ್ಟರೆ ಅದು ಹನಿ ಕಡಿಯದೇ ಧಾರೆಯಾಗಿ ಬರಬೇಕು ಎಂಬಿತ್ಯಾದಿ ಮಾತುಗಳಿವೆ.

ಕೆಲವರು ಲ್ಯಾಬೋರೇಟರಿ ಫಲಿತಾಂಶ ಮಾತ್ರ ನಿಖರ ಎಂತಲೂ ಹೇಳುತ್ತಾರೆ. ಆದರೆ ಅದೂ ಕೂಡ ಸರಿಯಿಲ್ಲ ಎಂದು ಈಗ ಸಾಬೀತಾಯಿತು. ನನ್ನ ಮಟ್ಟಿಗೆ ಹೇಳುವುದಾದರೆ ನಮ್ಮ ನಾಲಿಗೆಯೇ ಪರ್ಫೆಕ್ಟ್ ಲ್ಯಾಬು ಎನ್ನಬಹುದು. ಜೇನುತುಪ್ಪವನ್ನು ಬಾಯಲ್ಲಿ ಹಾಕಿಕೊಂಡಾಗ ಅದು ಕೇವಲ ಸಿಹಿಯಾಗಿರಕೂಡದು. ವಾಸ್ತವದಲ್ಲಿ ಜೇನು ಹುಳಿ, ಸಿಹಿ, ಕಹಿ ಒಗರು ಮುಂತಾದ ಷಡ್ರಸಗಳ ಹದವರಿತ ಮಿಶ್ರಣ. ಜೇನು ತಿಂದಾಗ ತೆರಗಂಟಲಾಗಿ ಕೆಮ್ಮು ಬಂದಂತಾಗಬೇಕು. ಸ್ವಲ್ಪ ಜಾಸ್ತಿ ತಿಂದರೆ ಸಂಕಟ, ಸಂಕಟ ಎನ್ನಿಸಬೇಕು. ಜೇನುತುಪ್ಪದ ಅತಿಯಾದ ಸೇವನೆ ಕೆಲವೊಮ್ಮೆ ವಿರುದ್ಧ ಪರಿಣಾಮ ಆಗುತ್ತದೆ. ಉಷ್ಣ ಪ್ರಕೃತಿಯವರಿಗೆ ಮಲ ವಿಸರ್ಜನೆಯ ವೇಳೆ ರಕ್ತವೂ ಹೋಗಬಹುದು. ಹಾಗಾಗಿ ಜೇನುತುಪ್ಪವನ್ನು ಹಿತಮಿತವಾಗಿ ಬಳಸಬೇಕು.

Popular myths about facts about honey vcs

ಒಂದು ಹನಿ ಜೇನುತುಪ್ಪ ತಯಾರಾಗಬೇಕು ಎಂದರೆ ಜೇನೊಂದು ಅಪಾರ ಶ್ರಮ ಹಾಕಿರುತ್ತದೆ. ನಿಸರ್ಗದಲ್ಲಿರುವ ನಾನಾಜಾತಿಯ ಹೂವುಗಳನ್ನು ಸಂದರ್ಶಿಸಿ ಅಲ್ಲಿಂದ ಪುಷ್ಪರಸವನ್ನು ತಂದು ಬಳಿಕ ಮೆಲಕು ಹಾಕಿ ಜೇನುತುಪ್ಪವಾಗಿ ಮಾಡಿರುತ್ತದೆ. ಈ ಸಂದರ್ಭದಲ್ಲಿ ನಾನಾ ರಾಸಾಯನಿಕ ಕ್ರಿಯೆಗಳು ನಡೆದು ಸುಕ್ರೋಸು ಫ್ರುಕ್ಟೋಸಾಗಿ ಬದಲಾಗುತ್ತದೆ. ಅನೇಕ ಔಷಧೀಯ ಗುಣಗಳು ಜೇನುತುಪ್ಪದಲ್ಲಿ ಅಡಕವಾಗುತ್ತದೆ.

ಈ ಜಗತ್ತಿನಲ್ಲಿ ಅಮೃತಕ್ಕೆ ಸಮಾನವಾದದ್ದು ಏನಾದರೂ ಇದ್ದರೆ ಅದು ಜೇನುತುಪ್ಪ ಆಗಿರುತ್ತದೆ. ನಾವು ಈ ಜೇನನ್ನು ಸಾಕಿ ಜನಕ್ಕೆ ಈ ಅಮೃತವನ್ನು ನೀಡುತ್ತಿದ್ದೇವೆ ಎಂಬ ಹೆಮ್ಮೆಯಿತ್ತು. ಈಗ ಈ ನಕಲಿಗಳ ಭರಾಟೆಯಲ್ಲಿ ಅಸಲಿಗಳನ್ನೂ ಅನುಮಾನದಿಂದ ನೋಡುವಂತೆ ಆಗಿದೆ. ಜನಕ್ಕೆ ಯಾರನ್ನು ನಂಬಬೇಕು ಯಾರನ್ನು ಬಿಡಬೇಕು ಎಂಬ ಗೊಂದಲವಿದೆ.

ಪತಂಜಲಿ, ಡಾಬರ್ ಸೇರಿ ಪ್ರಸಿದ್ಧ ಕಂಪನಿಗಳ ಜೇನುತುಪ್ಪ ಕಲಬೆರಕೆ! 

ನಿಜ ಹೇಳಬೇಕೆಂದರೆ ನಾನೇನು ಉತ್ಪಾದಿಸುತ್ತೇನೋ ಆ ಜೇನುತುಪ್ಪದ ಮಾರುಕಟ್ಟೆಗೆ ನಾನೆಂದೂ ಪರದಾಡಿಲ್ಲ. ಯಾವ ಆಕರ್ಷಕ ಪ್ಯಾಕೂ ಮಾಡದೇ, ಏಜನ್ಸಿಯನ್ನೂ ಕೊಡದೇ, ಆಫರ್ರುಗಳನ್ನೂ ನೀಡದೇ ಮನೆಬಾಗಿಲಿನಲ್ಲಿ ಮತ್ತು ಆನ್‌ಲೈನಿನಲ್ಲಿ ಮಾರುತ್ತಿದ್ದೇನೆ ಎಂಬ ಹೆಮ್ಮೆ ನನಗಿದೆ. ಸ್ವಲ್ಪವೇ ಶ್ರಮ ಹಾಕಿದರೆ ಮತ್ತು ಕೊಂಚ ತಲೆಯನ್ನೂ ಓಡಿಸಿದರೆ ಅಸಲಿ ಜೇನುತುಪ್ಪಕ್ಕೆ ಬೆಲೆ ಇದ್ದೇ ಇದೆ. ಬಲ್ಲವರು ಮಾತ್ರ ಇದನ್ನು ಬಲ್ಲರು ಎಂದಂತೂ ಹೇಳಬಹುದು.

ನೈಜ ಜೇನುತುಪ್ಪ ಜನರಿಗೆ ಸಿಗಬೇಕೆಂದರೆ ಹೆಚ್ಚಿನ ಸಂಖ್ಯೆಯ ಕೃಷಿಕರು ಜೇನು ಸಾಕಣಿಕೆಗೆ ಮುಂದೆ ಬರಬೇಕು. ಪ್ರತಿಯೊಬ್ಬ ರೈತರೂ ಕನಿಷ್ಟಎರಡು ಪೆಟ್ಟಿಗೆ ಜೇನನ್ನಾದರೂ ಸಾಕಬೇಕು. ಜೇನುತುಪ್ಪ ಮಾರಾಟದಿಂದ ಭಾರೀ ಲಾಭ ದೊರಕದೇ ಹೋದರೂ ಅವು ಮಾಡುವ ಪರಾಗಸ್ಪರ್ಶ ಕೆಲಸದಿಂದ ನಮಗೆ ಬಲು ದೊಡ್ಡ ಲಾಭವಿದೆ. ಇಳುವರಿ ಹೆಚ್ಚಾಗುವುದು ಮಾತ್ರವಲ್ಲ ಬೆಳೆಯ ಗುಣಮಟ್ಟಕೂಡ ಗಣನೀಯವಾಗಿ ಹೆಚ್ಚಾಗುತ್ತದೆ.

Latest Videos
Follow Us:
Download App:
  • android
  • ios