ಗುಪ್ತ್ ಗುಪ್ತಾಗಿ ನಡೆಯುತ್ತೆ ಮಂಗಳಮುಖಿಯರ ಶವಸಂಸ್ಕಾರ!

ಮಂಗಳಮುಖಿಯರು ಸತ್ತರೆ ಅದು ಸುದ್ದಿಯಾಗುವುದಿಲ್ಲ. ಬದಲಾಗಿ ಗುಟ್ಟಾಗಿ ಒಂದು ಸಮುದಾಯದೊಳಗಿನವರಿಗೆ ಮಾತ್ರ ವಿಷಯ ತಿಳಿಯುತ್ತದೆ. ಯಾರೊಬ್ಬರೂ ಅಳುವುದಿಲ್ಲ, ಬದಲಿಗೆ ಶವಕ್ಕೆ ಚಪ್ಪಲಿಯೇಟು ಕೊಡುತ್ತಾರೆ. ಅರ್ಧರಾತ್ರಿಯಲ್ಲಿ ಯಾರಿಗೂ ತಿಳಿಯದಂತೆ ಶವವನ್ನು ಮಣ್ಣು ಮಾಡಿ ಬರುತ್ತಾರೆ. ಇದಕ್ಕೆಲ್ಲ ಕಾರಣವೇನು ಗೊತ್ತಾ?

Transgenders funeral is a secret ritual
Author
Bangalore, First Published Oct 19, 2019, 3:53 PM IST

ಬಹುತೇಕರಿಗೆ ಮಂಗಳಮುಖಿಯರೆಂದರೆ ಅಸಡ್ಡೆ, ಕೆಲವರಿಗೆ ಅಸಹ್ಯ, ಮತ್ತೆ ಕೆಲವರಿಗೆ ಭಯ, ಕುಟುಂಬದವರಿಗೆ ಅವಮಾನ. ಅವರು ಹತ್ತಿರ ಬಂದರೆ ಮೈಕೈ ಮುಟ್ಟುತ್ತಾರೆಂದು ಅಸಹ್ಯ ಪಟ್ಟುಕೊಳ್ಳುವವರು ಹಲವರಾದರೆ, ಬೇಡಲು ಬರುತ್ತಾರೆಂಬುದು ಮತ್ತೆ ಕೆಲವರ ಅಸಹನೆಗೆ ಕಾರಣ. ದಂಧೆ ನಡೆಸುತ್ತಾರೆಂದು ಮತ್ತೊಂದಷ್ಟು ಜನರ ಕೋಪ. ಜೊತೆಗೆ, ಎಲ್ಲರಂತಿಲ್ಲದ ಅವರ ಹಾವಭಾವ, ವೇಷಗಳು, ಆಚರಣೆಗಳು, ಕೆಲವೆಡೆ ಗುಂಪಿನಲ್ಲಿ ಬಂದು ಸುಲಿಗೆ ಮಾಡುವ ಅಭ್ಯಾಸದಿಂದಾಗಿ ಅವರನ್ನು ದೂರವಿಡುವವರೇ ಹೆಚ್ಚು. 

ಅರಿಶಿನಕ್ಕೇಕೆ ಹಿಂದು ಧರ್ಮದಲ್ಲಿ ಅಷ್ಟು ಮಹತ್ವ?

ಆದರೆ ಅವರಾದರೂ ಏನು ಮಾಡುತ್ತಾರೆ? ಅವರೇನು ಹೇಳಿ ಕೇಳಿ ಮಂಗಳಮುಖಿಯರಾಗಿರೋಲ್ಲ. ಎಲ್ಲರಂತೆಯೇ ಜನಿಸುತ್ತಾರೆ, ಬೆಳವಣಿಗೆಯ ಹಂತದಲ್ಲಿ ಗಂಡೂ ಅಲ್ಲ, ಹೆಣ್ಣೂ ಅಲ್ಲ ಎಂಬಂಥ ಗೊಂದಲದ ಸ್ಥಿತಿಯನ್ನು ಸ್ವತಃ ಅನುಭವಿಸಿ, ಕಡೆಗೊಂದು ದಿನ ತಾನು ಈ ಗಂಡು ಹೆಣ್ಣಿನ ಜಗತ್ತಿಗೆ ಸೇರಿದವನಲ್ಲ ಎಂದು ತನ್ನ ಸಮುದಾಯದವರನ್ನು ಹುಡುಕಿಕೊಂಡು ಹೋಗುತ್ತಾರೆ. ಕೆಲಸ ಮಾಡುವುದಕ್ಕೇನು ದಾಡಿ ಎನ್ನುತ್ತೇವೆ, ಕರೆದು ಕೆಲಸ ಕೊಡುವವರಿಲ್ಲ. ಶಿಕ್ಷಣವೂ ಇಲ್ಲ. ಈ ಹಂತದಲ್ಲಿ ಅವರೇ ಸ್ವಂತ ಬಿಸ್ನೆಸ್ ಮಾಡಿದರೆ ಅಲ್ಲಿ ಹೋಗಿ ಕೊಳ್ಳುವ, ಅದನ್ನು ಪ್ರೋತ್ಸಾಹಿಸುವ ನಾಗರಿಕರೂ ಇಲ್ಲ. ಕಡೆಗೆ ಭಿಕ್ಷಾಟನೆ ಹಾಗೂ ದಂಧೆಯ ಅನಿವಾರ್ಯಕ್ಕೆ ಸಿಲುಕುತ್ತಾರೆ. ಇನ್ನು ಗಂಡು ದೇಹದಲ್ಲಿ ಹೆಣ್ಣಾಗಿ, ಹೆಣ್ಣು ದೇಹದಲ್ಲಿ ಗಂಡಾಗಿ ಬದುಕುವ ಕ್ಷಣಕ್ಷಣದ ಹಿಂಸೆ ಅವರ ಬದುಕಿನುದ್ದಕ್ಕೂ ಕಾಡುತ್ತಲೇ ಇರುತ್ತದೆ. ಒಟ್ಟಿನಲ್ಲಿ ಶಾಪಗ್ರಸ್ಥರಂತೆ ಬದುಕುವ ಮಂಗಳಮುಖಿಯರೇ ಹೆಚ್ಚು. 

ಹಾಗಾಗಿಯೇ ಅವರ ಈ ಬದುಕಿನ ಬಗ್ಗೆ ಅವರಲ್ಲೂ ಬೇಸರವಿದೆ, ಸಿಟ್ಟಿದೆ, ನೋವಿದೆ. ಅದು ಅವರ ಅಂತ್ಯಸಂಸ್ಕಾರದ ವಿಧಿವಿಧಾನಗಳಲ್ಲೂ ಪ್ರತಿಫಲಿಸುತ್ತದೆ. ಮಂಗಳಮುಖಿಯರು ಸತ್ತಾಗ ಅವರ ಶವವನ್ನು ಯಾರಿಗೂ ತೋರಿಸುವುದಿಲ್ಲ, ಊರೆಲ್ಲ ಸುದ್ದಿ ಮಾಡುವುದಿಲ್ಲ, ಅಷ್ಟೇ ಏಕೆ ಯಾರಿಗೂ ತಿಳಿಯದಂತೆ ಮಧ್ಯರಾತ್ರಿ ಶವಸಂಸ್ಕಾರ ಮಾಡಲಾಗುತ್ತದೆ. ಯಾಕೆ ಗೊತ್ತಾ?

ದೇವಸ್ಥಾನದಲ್ಲಿ ಪ್ರದಕ್ಷಿಣೆ ಏಕೆ ಮಾಡುತ್ತಾರೆ?

ಎಲ್ಲ ಗುಪ್ತ್ ಗುಪ್ತ್

ಮಂಗಳಮುಖಿಯರಲ್ಲೂ ಹಲವು ಸಮುದಾಯಗಳಿವೆ. ಪ್ರತಿ ಸಮುದಾಯವೂ ಕೆಲ ಆಚಾರ ವಿಚಾರದಲ್ಲಿ ವಿಭಿನ್ನವೇ. ಹೀಗೆ ಒಂದು ಸಮುದಾಯಕ್ಕೆ ಸೇರಿದ ಮಂಗಳಮುಖಿ ಇಹಲೋಕ ತ್ಯಜಿಸಿದರೆ ಬೇರೆಯವರಿರಲಿ, ಬೇರೆ ಸಮುದಾಯದ ಮಂಗಳಮುಖಿಯರಿಗೆ ಕೂಡಾ ಅವರನ್ನು ತೋರಿಸುವುದಿಲ್ಲ. ಕೇವಲ ಅದೇ ಸಮುದಾಯಕ್ಕೆ ಸೇರಿದ ಕೆಲವು ಮಂಗಳಮುಖಿಯರು ಒಟ್ಟಾಗಿ ಅರ್ಧ ರಾತ್ರಿಯಲ್ಲಿ ಶವಸಂಸ್ಕಾರ ನಡೆಸುತ್ತಾರೆ. ಇದಕ್ಕೆ ಕಾರಣ ಮಂಗಳಮುಖಿಯ ಶವದ ಮುಖ ನೋಡಿದವರು ಮುಂದಿನ ಜನ್ಮದಲ್ಲೂ ಮಂಗಳಮುಖಿಯಾಗಿ ಹುಟ್ಟುತ್ತಾರೆಂಬ ನಂಬಿಕೆ. ಅಷ್ಟೇ ಅಲ್ಲ, ಅದುವರೆಗೂ ಗೆಳತಿಯರಾಗಿ ಬಾಳಿದ ಇತರೆ ಮಂಗಳಮುಖಿಯರು ಈ ಸಾವಿಗಾಗಿ ಕಣ್ಣೀರು ಹಾಕುವುದಿಲ್ಲ. ಎಷ್ಟೇ ನೋವಾದರೂ ತಡೆದುಕೊಂಡು ಕಣ್ಣೀರು ಜಾರದಂತೆ ನೋಡಿಕೊಳ್ಳುತ್ತಾರೆ. ಇದಕ್ಕೆ ಕಾರಣ, ಜೀವನಪೂರ್ತಿ ಅವಮಾನ, ನೋವು, ತಿರಸ್ಕಾರದಲ್ಲೇ ಬದುಕಿದ ಆ ಜೀವಕ್ಕೆ ಮುಕ್ತಿ ಸಿಕ್ಕಿತಲ್ಲ ಎಂಬ ಸಮಾಧಾನ, ಸಂತೋಷ. ಇನ್ನು ಈ ತಿರಸ್ಕಾರದ ಬಾಳು ಆಕೆಗಿರುವುದಿಲ್ಲ ಎಂದು ನಿಟ್ಟುಸಿರು ಬಿಡುತ್ತಾರೆ ಇವರು. 

ಶವಕ್ಕೆ ಚಪ್ಪಲಿಯೇಟು

ಮತ್ತೂ ಒಂದು ಆಚರಣೆಯಿದೆ. ಮಂಗಳಮುಖಿ ಹಿಂದೂವಾಗಿದ್ದರೆ ಆಕೆಯ ಶವಕ್ಕೆ ಉಳಿದ ಮಂಗಳಮುಖಿಯರೆಲ್ಲ ಚಪ್ಪಲಿಯಲ್ಲಿ ಹೊಡೆಯುತ್ತಾರೆ. ಅಯ್ಯೋ ಏನಪ್ಪಾ ಇದು, ಸತ್ತ ಮೇಲೆ ಶವವನ್ನು ದೈವದಂತೆ ಭಾವಿಸಿ ಅದಕ್ಕೆ ಮರ್ಯಾದೆ ಮಾಡುತ್ತದೆ ಹಿಂದೂ ಧರ್ಮದಲ್ಲಿ. ಆದರೆ ಇವರೇಕೆ ಚಪ್ಪಲಿಯಲ್ಲಿ ಹೊಡೆಯುತ್ತಾರೆ ಎಂದಿರಾ, ನೀನು ಈ ಜನ್ಮದಲ್ಲಿ ಮಾಡಿದ ಪಾಪಕ್ಕೆಲ್ಲ ಈ ಚಪ್ಪಲಿಯೇಟೇ ಕೊನೆಯಾಗಿಲಿ, ಮುಂದಿನ ಜನ್ಮದಲ್ಲಿ ಮತ್ತೆ ಮಂಗಳಮುಖಿಯಾಗಿ ಹುಟ್ಟದಿರು ಎಂದು ಹೇಳುತ್ತಾ ಅವರು ಚಪ್ಪಲಿಯೇಟು ಕೊಡುತ್ತಾರೆ. ಅಂದ ಹಾಗೆ, ಇವರು ಶವವನ್ನು ಹುಗಿದು ಸಮಾಧಿ ಮಾಡುತ್ತಾರೆಯೇ ಹೊರತು, ಯಾವುದೇ ಕಾರಣಕ್ಕೂ ಸುಡುವುದಿಲ್ಲ. 

ಗಾಯತ್ರಿ ಮಂತ್ರ ಪಠಿಸುವುದರಿಂದ ಲಾಭವಿದೆಯೇ?

ಈ ಎಲ್ಲ ಅಂತ್ಯಸಂಸ್ಕಾರ ಪದ್ಧತಿಯನ್ನು ನೋಡುತ್ತಿದ್ದರೆ, ತಮ್ಮ ಈ ಮಂಗಳಮುಖಿ ಜನ್ಮದ ಬಗ್ಗೆ ಅವರಲ್ಲಿ ಅದೆಷ್ಟು ನೋವು, ಬೇಸರ ತುಂಬಿದೆ ಎಂಬುದು ಅರ್ಥವಾಗುತ್ತದೆ. ಇನ್ಯಾವ ಜನ್ಮಕ್ಕೂ ತಾವಷ್ಟೇ ಅಲ್ಲ, ಸಮಾಜದ ಯಾರೊಬ್ಬರೂ ಮಂಗಳಮುಖಿಯಾಗಿ ಹುಟ್ಟದಿರಲಿ ಎಂಬ ಆಶಯ ಅವರ ಆಚರಣೆಗಳಲ್ಲಿ ಕಂಡುಬರುತ್ತದೆ. ತಮ್ಮನ್ನು ಕಡೆಗಣಿಸಿದ ಸಮಾಜದ ಬಗ್ಗೆ ಕೂಡಾ ಅವರು ಹೀಗೆ ಉತ್ತಮವಾಗಿ ಯೋಚಿಸುವುದು ಗಮನಾರ್ಹ ಅಲ್ಲವೇ? 

Follow Us:
Download App:
  • android
  • ios