ದೇವಸ್ಥಾನದಲ್ಲಿ ಪ್ರದಕ್ಷಿಣೆ ಏಕೆ ಮಾಡುತ್ತಾರೆ?
ಹಿಂದಿನ ಕಾಲದ ಆಚರಣೆಗೆ ಹಲವು ವೈಜ್ಞಾನಿಕ ಕಾರಣಗಳಿವೆ. ಅಂಥ ಆಚಾರಕ್ಕೆ ಹೊಸ ವಿಚಾರ ಹುಡುಕುವ ಪ್ರಯತ್ನವಿದು. ಅಷ್ಟಕ್ಕೂ ದೇವಸ್ಥಾನಕ್ಕೆ ಪ್ರದಕ್ಷಿಣೆ ಬರುವ ಹಿಂದೆ ಏನಿದೆ ಕಾರಣ?
ದೇವಸ್ಥಾನದಲ್ಲಿ ಎಲ್ಲರೂ ಗರ್ಭಗುಡಿ ಸುತ್ತ ಪ್ರದಕ್ಷಿಣೆ ಮಾಡುತ್ತಾರೆ. ಮನೆಯಲ್ಲಿ ಹೋಮ-ಹವನ ಮಾಡಿಸಿದರೆ ಯಜ್ಞಕುಂಡದ ಸುತ್ತ, ಅಂದರೆ ಅಗ್ನಿಗೆ ಪ್ರದಕ್ಷಿಣೆ ಮಾಡುತ್ತಾರೆ. ತುಳಸಿ ಗಿಡಕ್ಕೆ ಹಾಗೂ ಅರಳಿ ವೃಕ್ಷಕ್ಕೂ ಪ್ರದಕ್ಷಿಣೆ ಮಾಡಲಾಗುತ್ತದೆ. ಪ್ರದಕ್ಷಿಣೆ ಅಂದರೆ ಒಂದು ಶಕ್ತಿಯ ಸುತ್ತ ಬಲದಿಂದ ಎಡಕ್ಕೆ ಸುತ್ತುಹಾಕುವುದು. ಇದು ದೇವರನ್ನು ಆರಾಧಿಸುವ ಒಂದು ಕ್ರಮ ಎಂಬುವುದು ನಂಬಿಕೆ.
ಪ್ರದಕ್ಷಿಣೆ ಮಾಡುವುದೆಂದರೆ ನಮ್ಮ ಯೋಚನೆಗಳು ಹಾಗೂ ಕ್ರಿಯೆಗಳನ್ನು ನಾವು ನಂಬುವ ಶಕ್ತಿಯಲ್ಲಿ ಕೇಂದ್ರೀಕರಿಸುವುದು. ಹೀಗೆ ಮಾಡಿದಾಗ ನಮ್ಮ ಯೋಚನೆ ಹಾಗೂ ಕ್ರಿಯೆಗಳು ದೇವರಲ್ಲೇ ನೆಟ್ಟಿವೆ ಎಂದು ನಾವು ಒಪ್ಪಿಕೊಂಡಂತಾಗುತ್ತದೆ. ಇದು ನಾವು ನಂಬುವ ಶಕ್ತಿಗೆ ಸಂಪೂರ್ಣ ಶರಣಾಗುವ ಪ್ರಕ್ರಿಯೆ. ದೇವರನ್ನು ಪೂಜಿಸಲು ಬೇಕಾಗುವ ಏಕಾಗ್ರತೆ ಹಾಗೂ ಶುದ್ಧ ಮನಸ್ಕತೆ ಪ್ರದಕ್ಷಿಣೆಯಿಂದ ಲಭಿಸುತ್ತದೆ. ‘ಪ್ರದಕ್ಷಿಣೆಯಲ್ಲಿ ಮೊದಲ ಹೆಜ್ಜೆಯಿಂದ ನಾವು ಮಾನಸಿಕವಾಗಿ ಮಾಡಿದ ಪಾಪಗಳು ನಾಶವಾಗುತ್ತವೆ. ಎರಡನೇ ಹೆಜ್ಜೆಯಿಂದ ಮಾತಿನಲ್ಲಿ ಮಾಡಿದ ಪಾಪಗಳು ನಾಶವಾಗುತ್ತವೆ. ಮೂರನೇ ಹೆಜ್ಜೆಯಿಂದ ದೈಹಿಕವಾಗಿ ಮಾಡಿದ ಪಾಪಗಳು ನಾಶವಾಗುತ್ತವೆ’ ಎಂದು ಸ್ಕಂದ ಪುರಾಣ ಹೇಳುತ್ತದೆ.
ನಂತರದ ಎಲ್ಲ ಹೆಜ್ಜೆಗಳೂ ಪುಣ್ಯ ಸಂಪಾದನೆಗೆ! ಇನ್ನು, ಅರಳಿಮರ ಅಥವಾ ತುಳಸಿಕಟ್ಟೆಗೆ ಮಾಡುವ ಪ್ರದಕ್ಷಿಣೆಯ ಹಿಂದೆ ಶುದ್ಧ ಗಾಳಿಯನ್ನು ಸೇವಿಸುವ, ಶರೀರವನ್ನು ಸ್ವಸ್ಥವಾಗಿಟ್ಟುಕೊಳ್ಳುವ ಉದ್ದೇಶವೂ ಇದೆಯಂತೆ.
ಅರಿಶಿನಕ್ಕೇಕೆ ಹಿಂದು ಧರ್ಮದಲ್ಲಿ ಅಷ್ಟು ಮಹತ್ವ?
ದೇವರಿಗೆ ಮಾಡುವ ಪ್ರದಕ್ಷಿಣೆ ರೀತಿಯಲ್ಲೇ ಆತ್ಮ ಪ್ರದಕ್ಷಿಣೆ ಎಂಬುದೊಂದಿದೆ. ಪೂಜೆ ಕೊನೆಯಲ್ಲಿ ನಾವು ನಿಂತಲ್ಲೇ ಮೂರು ಬಾರಿ ನಮ್ಮ ಸುತ್ತಲೂ ಸುತ್ತಿ ನಮಗೇ ಪ್ರದಕ್ಷಿಣೆ ಹಾಕಿ ಕೊಳ್ಳುತ್ತೇವೆ. ಇದು ನಮ್ಮೊಳಗಿರುವ ಆತ್ಮ ಎಂಬ ಅತ್ಯುಚ್ಛ ಶಕ್ತಿಯನ್ನು ಪೂಜಿಸುವ ಅಥವಾ ಅದಕ್ಕೆ ಶರಣಾಗುವ ಕ್ರಮ. ಒಟ್ಟಿನಲ್ಲಿ ಪ್ರದಕ್ಷಿಣೆಯಲ್ಲಿ ಸುತ್ತುವ ಕ್ರಿಯೆಗಿಂತ ನಮ್ಮ ಯೋಚನೆಗಳನ್ನು ಕೇಂದ್ರದಲ್ಲಿ ಏಕತ್ರಗೊಳಿಸುವ ಕ್ರಿಯೆ ಮಹತ್ವದ್ದು.