Asianet Suvarna News Asianet Suvarna News

ಸಾವಿಗೂ ಜನನಕ್ಕೂ ನಿರ್ಲಿಪ್ತರಾಗಿರುವ ಕಾಲ: ಅನಂತ್ ನಾಗ್

ಸಂವೇದನೆ ಕಿತ್ತುಕೊಂಡಿರುವ ಕಾಲ, ಸ್ಕ್ರಿಪ್ಟ್ ಗಳಲ್ಲಿರುವ ಪಾಶ್ಚಾತ್ಯ ಪ್ರಭಾವ, ಹೊಸ ತಲೆಮಾರಿನ ಸಿನಿಮಾ ಬರಹಗಾರರ ದೃಷ್ಟಿಕೋನ, ಉಡುಗಿಹೋಗಿರುವ ಹುಮ್ಮಸ್ಸು, ನಟನಿಗಿರಬೇಕಾದ ತಲ್ಲೀನತೆ ಎಲ್ಲದರ ಕುರಿತು ಅನಂತ್ ನಾಗ್ ಮಾಡಿದ್ದಾರೆ. ಏಕಾಗ್ರತೆಯಿಂದ ಓದಿದರೆ ಅವರು ಇಲ್ಲಿ ಆಡಿರುವ ಮಾತುಗಳಲ್ಲಿ ಮೌನವೂ ಕೇಳಿಸುತ್ತದೆ.

Sandalwood actor Anant Nag talks about current covid 19 situation and film industry dpl
Author
Bangalore, First Published Jun 6, 2021, 1:25 PM IST

ಎನಿಮಿ ಆಫ್ ದಿ ಪೀಪಲ್

ಬಹಳ ಹಳೆಯ ನಾಟಕವೊಂದಿದೆ. ಅದರ ಹೆಸರು ಎನಿಮಿ ಆಫ್ ದಿ ಪೀಪಲ್ ಅಂತ. ಬರೆದಿದ್ದು ಹೆನ್ರಿಕ್ ಇಬ್ಸನ್. ನಾನು ಚಿಕ್ಕವನಿದ್ದಾಗ ನಮ್ಮ ಮೇಷ್ಟ್ರು ಅದನ್ನು ಓದಿಸಿದ್ದರು. ಆ ಕತೆಯನ್ನು ಇಬ್ಬರು ಸಹೋದರರು ಇರುತ್ತಾರೆ. ಒಬ್ಬ ವಿಲನ್. ಇನ್ನೊಬ್ಬ ಹೀರೋ. ವಿಲನ್ ಊರಿನಲ್ಲಿ ಎಲ್ಲೆಲ್ಲಿ ಕೆರೆಗಳಿವೆ ಅದರಲ್ಲಿ ವಿಷ ಹಾಕುತ್ತಿರುತ್ತಾನೆ. ಅದನ್ನು ವಿಷಪೂರಿತವನ್ನಾಗಿ ಮಾಡಿ ಜನರನ್ನು ಸಾಯಿಸುವ ಕೆಲಸ. ಇನ್ನೊಬ್ಬ ಜನರನ್ನು ಕಾಪಾಡುವುದಕ್ಕಾಗಿ ಕಷ್ಟ ಪಡುತ್ತಿರುತ್ತಾನೆ. ಹಿಸ್ಟ್ರಿ ರಿಪೀಟಾಗಿದೆ. ಚೀನಾ ಎನಿಮಿ ಆಫ್ ದಿ ಪೀಪಲ್ ಆಗಿದೆ. ಇನ್ನೊಂದು ಕಡೆ ಲಸಿಕೆ, ಚಿಕಿತ್ಸೆ ಅಂತ ಇಡೀ ಜಗತ್ತು ಹೋರಾಡುತ್ತಿದೆ.

ಯಾವಾಗ ಸರಿ ಹೋಗುತ್ತದೆ ಎಂದು ಕಾಯುತ್ತಿರುವೆ

ಬಾಲ್ಯದಲ್ಲಿ ಕಲಿತಿದ್ದೇ ಕೊನೆಗೂ ಉಳಿಯುವುದು ಅನ್ನಿಸುತ್ತದೆ. ಆಶ್ರಮ, ಮಠದಲ್ಲಿ ಏನು ಸಂಸ್ಕಾರ ಹಾಕಿ ಕೊಟ್ಟಿದ್ದರೋ ಅದೇ ಅದೇ ಶಾಶ್ವತ ಅಂತ ಅನ್ನಿಸುತ್ತದೆ. ಯಶಸ್ವಿ ಜೀವನ ನಡೆಸಿದ ಮೇಲೆ ಸಾವು ಅನ್ನುವುದು ಬಂದೇ ಬರುತ್ತದೆ. ಅದಕ್ಕೂ ತಯಾರಿ ಮಾಡಿಕೊಳ್ಳಬೇಕು. ಒಂದು ಹಂತ ಆದ ಮೇಲೆ ಹೆದರಬಾರದು. ಯೋಚಿಸಬೇಕು. ಹೋಗುವಾಗ ದೇವರನಾಮ ಹೇಳಿಕೊಂಡೋ ಮನಸ್ಸನ್ನು ದೇವರ ಮೇಲೆ ಇಟ್ಟುಕೊಂಡೋ ಹೋಗಬೇಕು. ಆದರೆ ಈಗ ದಬದಬನೆ ಹೆಣಗಳು ಬೀಳುತ್ತಿವೆ. ಟೈಮೇ ಇಲ್ಲ. ಲಸಿಕೆ ಇಲ್ಲ, ಆಕ್ಸಿಜನ್ ಇಲ್ಲ. ಯಾರಿಗೆ ಟೈಮಿಗೆ ದೇವರನ್ನು ನೆನೆಸಿಕೊಳ್ಳುವುದಕ್ಕೆ.

'ಚೀನಾ ವಿರುದ್ಧ ಇಡೀ ಜಗತ್ತು ಏನೂ ಮಾಡದೆ ಸುಮ್ಮನಿದೆ'...

ಪ್ರೀತಿ ಪಾತ್ರರನ್ನು ನೋಡುತ್ತಲೋ ಕಣ್ಣು ಮುಚ್ಚಿಕೊಂಡು ದೇವರ ನಾಮ ಹೇಳುತ್ತಲೋ ಹೋಗುವ ಕ್ರಮ ಅಥವಾ  ಐಡಿಯಲ್ ಸಾವು ಅಂತ ಹೇಳುತ್ತಿದ್ದರಲ್ಲ ಅದೆಲ್ಲಾ ಇಲ್ಲವೇ ಇಲ್ಲ. ಅಡ್ಮಿಟ್ ಮಾಡಿದ್ರಾ, ಅಲ್ಲೇ ಸಾವು. ಮನುಷ್ಯರು ದೀಪಕ್ಕೆ ಮುತ್ತಿಕೊಳ್ಳುವ ಕೀಟಗಳಂತೆ ತೀರಿಕೊಳ್ಳುತ್ತಿರುವ ಕ್ರೂರ ಸಮಯ. ವಿಪರ್ಯಾಸವೆಂದರೆ ಮೊದಲೆಲ್ಲಾ ಆಘಾತ ಆಗುತ್ತಿತ್ತು. ಕ್ರಮೇಣ ರೂಢಿಯಾಯಿತು. ನಿಧಾನಕ್ಕೆ ಅದರ ಬಗ್ಗೆ ಸಂವೇದನೆಯೇ ಕಳೆದುಕೊಂಡಿದ್ದೇವೆ. ಜನನಕ್ಕೂ ಸಾವಿಗೂ ಎಲ್ಲಕ್ಕೂ ನಿರ್ಲಿಪ್ತರಾಗಿಬಿಟ್ಟಿದ್ದೇವೆ. ಇದು ನಿಜವಾದ ಟ್ರ್ಯಾಜಿಡಿ. ಸೂರ್ಯೋದಯ ಆಗುತ್ತದೆ, ಸೂರ್ಯಾಸ್ತವೂ ಆಗುತ್ತದೆ. ಯಾವಾಗ ಎಲ್ಲಾ ಸರಿ ಹೋಗುತ್ತದೆ ಅಂತ ಕಾಯುತ್ತಿದ್ದೇನೆ.

ಕಡಿಮೆ ಬಜೆಟ್ ಸಿನಿಮಾಗಳೇ ಉಳಿಸೋದು 

ನನಗೆ ಮಠದ ಹಿನ್ನೆಲೆ ಇರುವುದರಿಂದ ದಿನದಾರಂಭದಲ್ಲಿ ಯೋಗ, ಮೆಡಿಟೇಷನ್, ಪ್ರಾರ್ಥನೆಗಳಿಂದ 2-3 ಗಂಟೆ ಕಳೆಯುತ್ತದೆ. ಆಮೇಲೆ ಬಂದಿರುವ ಸ್ಕ್ರಿಪ್ಟ್ ಗಳನ್ನು ಓದುತ್ತೇನೆ. ಕನ್ನಡ, ಹಿಂದಿ, ತೆಲುಗು ಅಂತ ಎಲ್ಲಾ ಕಡೆಗಳಿಂದ ತುಂಬಾ ಸ್ಕ್ರಿಪ್ಟ್ ಗಳು ಬಂದಿವೆ. ಅಮೆರಿಕಾದಿಂದ ಕೂಡ ಸ್ಕ್ರಿಪ್ಟ್ ಕಳುಹಿಸಿದ್ದಾರೆ. ಅಂದರೆ ಅಮೆರಿಕಾದಲ್ಲಿರುವ ಭಾರತೀಯರು. ಎಲ್ಲರ ಗಮನ ಓಟಿಟಿ ಕಡೆಗಿದೆ.

ಸ್ಟಾರ್ ಗಳ ಸಿನಿಮಾಗೆ ದೊಡ್ಡ ಬಜೆಟ್ ಬೇಕು. ಎರಡನೇ ಸಾಲಿನಲ್ಲಿರುವ ಹೀರೋಗಳ ಸಿನಿಮಾ ಕೂಡ ಸ್ವಲ್ಪ ದುಬಾರಿಯಾಗುತ್ತದೆ. ಈಗ ಬರುತ್ತಿರುವವರು ಮೂರನೇ ವರ್ಗ. ಅವರು ಹೊಸಬರನ್ನು ಹಾಕಿಕೊಂಡು ಹೊಸ ವಸ್ತುಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವ ಆಸಕ್ತಿ ತೋರಿಸುತ್ತಿದ್ದಾರೆ. ಕಡಿಮೆ ಬಜೆಟ್ ನಲ್ಲಿ ಸಿನಿಮಾ ಆದರೆ ಅದನ್ನು ಓಟಿಟಿಗೆ ಕೊಡಬಹುದು ಅನ್ನುವ ಲೆಕ್ಕಾಚಾರ. ಆ ನಿಟ್ಟಿನಲ್ಲಿ ನೋಡಿದರೆ ಹೊಸಬರಿಗೆ ಓಟಿಟಿ ಅವಕಾಶ ದೊರಕಿಸಿಕೊಳ್ಳಲು ಇದು ಒಳ್ಳೆಯ ಸಮಯ.

ನನ್ನ ಗುರು ನನ್ನ ಗೈಡ್‌ ನನ್ನ ಸತ್ಯು: ಅನಂತ್‌ನಾಗ್‌...

ನನ್ನ ಬಳಿಗೆ ಬರುವ ಅನೇಕರಿಗೆ ನಾನೇ ಹೇಳಿದ್ದೇನೆ, ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡಿ ಅಂತ. ನಾನು ಆರಂಭದಲ್ಲಿ ಆರ್ಟ್ ಫಿಲ್ಮ್ ಗಳಲ್ಲಿ ನಟಿಸಿದಾಗ ಯಾರೋ ನನಗೂ ಅವಕಾಶ ಕೊಟ್ಟರಲ್ಲ. ಹಾಗೆ ಅವಕಾಶ ಕೊಟ್ಟರೆ ಅಲ್ವಾ ಬೇರೆಯವರೂ ಮುಂದೆ ಬರೋದು. ಅಲ್ಲದೇ ಬಜೆಟ್ ಕೂಡ ಕಡಿಮೆಯಾಗುತ್ತದೆ. ಉದಾಹರಣೆಗೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು, ರಿಷಬ್-ರಕ್ಷಿತ್ ಮಾಡುವ ಕೆಲವು ಸಿನಿಮಾಗಳನ್ನು ನೋಡಿ. ಕಡಿಮೆ ಬಜೆಟ್ಟಲ್ಲಿ ಮಾಡಿದರು ಪ್ರಾಫಿಟ್ ಜಾಸ್ತಿ ಇತ್ತು. ದೊಡ್ಡ ಬಜೆಟ್ ಸಿನಿಮಾ ಮಾಡಿ ಪಿಚ್ಚರ್ ಕ್ಲಿಕ್ ಆಗದಿದ್ದರೆ ದುಡ್ಡು ಬರಲ್ಲ. ಅದೇ 2- 4 ಕೋಟಿಯಲ್ಲಿ ಸಿನಿಮಾ ಮುಗಿಸಿ 10 ಕೋಟಿ ಪ್ರಾಫಿಟ್ ಬಂದರೆ ಅದಕ್ಕಿಂತ ಇನ್ನೇನು ಬೇಕು. ಯೋಚನೆಗಳು ಬದಲಾಗಿವೆ. ಈ ಒಂದು ವರ್ಷ ತುಂಬಾ ಪಾಠ ಕಲಿಸಿದೆ.

ಹೊಸ ಯೋಚನೆಗಳಿವೆ, ಹಳೇ ಮೌಲ್ಯಗಳಿಲ್ಲ

ಹೊಸ ತಲೆಮಾರಿನ ತರುಣರ ಸ್ಕ್ರಿಪ್ಟ್ ಗಳನ್ನು ನಿಧಾನಕ್ಕೆ ಓದುತ್ತೇನೆ. ಯಾಕೆ ಹೀಗೆ ಬರೆದಿದ್ದಾರೆ ಅಂತ ಯೋಚಿಸುತ್ತೇನೆ. ಅವರ ಬರಹಗಳನ್ನು ಓದಿದ ಮೇಲೆ, ಇವರೆಲ್ಲಾ ಓಟಿಟಿಯಲ್ಲಿ ಬರುವ ಸೀರೀಸ್, ಸಿನಿಮಾಗಳನ್ನು ನೋಡಿ ಇನ್ ಫ್ಲುಯನ್ಸ್ ಆಗಿ ಬರೆಯುತ್ತಿದ್ದಾರೋ ಎಂಬ ಪ್ರಶ್ನೆ ಕಾಡುತ್ತದೆ. ನಾನು 73ರಲ್ಲಿ ಸಿನಿಮಾ ರಂಗಕ್ಕೆ ಬಂದೆ. ನನಗೆ ಆಗ 25 ವರ್ಷ. ಈಗ ನನಗೆ 72. ಆಗಿನ ಕಾಲದಲ್ಲಿ ನಮ್ಮ ಸುತ್ತಮುತ್ತ ಇದ್ದ ವಾತಾವರಣದಲ್ಲಿ ಕೆಲವು ಮೌಲ್ಯಗಳು, ನಂಬಿಕೆಗಳು ಇದ್ದವು. ಸಂಸ್ಕೃತಿ, ಸಂಸ್ಕಾರ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಈಗ ಸಿನಿಮಾ ಮಾಡಲು ಬರುವವರು ನನ್ನ ಅರ್ಧ ವಯಸ್ಸಿಗಿಂತಲೂ ಕಡಿಮೆ ವಯಸ್ಸಿನವರು. ಅವರ ಯೋಚನೆಗಳು ಹೊಸತಿವೆ. ಆದರೆ ಅವರಲ್ಲಿ ಈ ಯಾವ ಮೌಲ್ಯಗಳು, ನಂಬಿಕೆಗಳು ಇರುವುದಿಲ್ಲ. ಅದರಿಂದ ನಾನು ಸ್ವಲ್ಪ ಹಿಂಜರಿಯುತ್ತೇನೆ.

ವಾ ಇದ್ದದ್ದು ವೋವ್ ಆಗಿದೆ

ಸ್ಕ್ರಿಪ್ಟ್ ಗಳು ಕ್ರಿಸ್ಪ್ ಆಗಿವೆ. ಆದರೆ ಮೌಲ್ಯಗಳು ಬೇರೆ ರೀತಿ ಇವೆ. ಮೊದೆಲ್ಲಾ ಮಸಾಲೆ ಸಿನಿಮಾ ಮಾಡುವವರು ಹಿಂದಿ, ತಮಿಳು, ತೆಲುಗು ಮಸಾಲೆ ಸಿನಿಮಾಗಳಿಂದ ಪ್ರಭಾವಿತರಾಗುತ್ತಿದ್ದರು. ಈಗ ಇಂಗ್ಲಿಷ್, ಫ್ರೆಂಚ್ ಸಿನಿಮಾ ನೋಡುತ್ತಾರೆ. ಪದೇ ಪದೇ ನೋಡಿದಾಗ ಅವರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅದರ ಪ್ರಭಾವ ಆಗಿಯೇ ಆಗುತ್ತದೆ. ಹಾಗಾಗಿಯೇ ಪಾಶ್ಚಾತ್ಯ ಮೌಲ್ಯಗಳು ಅಥವಾ ಅಪಮೌಲ್ಯ.ಗಳು ಹೆಚ್ಚು ಕಾಣುತ್ತವೆ. 

ಮೊದಲೆಲ್ಲಾ ನಾವು ವಾ ಅನ್ನುವುದಿತ್ತು. ಅದು ಈಗ ವೋವ್ ಅಂತ ಆಗಿದೆ. ವಾರೆ ವಾ ಎಷ್ಟು ಚೆನ್ನಾಗಿದೆ ಅಂತ ಹೇಳುತ್ತಿದ್ದೆವು. ಈಗ ಹಿರಿ ಕಿರಿಯರೆನ್ನದೆ ಎಲ್ಲರೂ ವೋವ್ ಎನ್ನುತ್ತೇವೆ. ಅಮೆರಿಕಾ ಪ್ರಬಾವ ಅದು. ಅದಕ್ಕೆ ತದ್ವಿರುದ್ಧವಾಗಿ ಏನೂ ನಡೆಯುತ್ತಿಲ್ಲ. ಹಿಂದಿಯಲ್ಲೇ ಆಗಲಿ, ಪ್ರಾದೇಶಿಕ ಭಾಷೆಗಳಲ್ಲೇ ಆಗಲಿ ಯಾವುದೇ ಭಾಷೆಯಲ್ಲೇ ಇರಲಿ ಅದಕ್ಕೆ ವಿರುದ್ಧವಾದ ಅಲೆ ಬರಬೇಕಲ್ಲ, ಅದು ಬರುತ್ತಿಲ್ಲ. ಹಾಗಾಗಿಯೇ ಪಾಶ್ಚಾತ್ಯ ಸಂಸ್ಕೃತಿಯ ಸಾರ್ವಭೌಮತೆ ಕಾಣುತ್ತಿದೆ.

ಎಷ್ಟೋ ಪಾಶ್ಚಾತ್ಯ ಸೀರೀಸ್ ಗಳಲ್ಲಿ ಪೋರ್ನೋಗ್ರಫಿಯೇ ಇರುತ್ತದೆ. ಎಷ್ಟು ಜಾಸ್ತಿ ಎಂದರೆ ನಟನಾಗಿ ನಾನೇ ಕಣ್ಣು ತಗ್ಗಿಸುತ್ತೇನೆ. ಎಷ್ಟು ತೋರಿಸಬೇಕು, ಎಲ್ಲಿ ನಿಲ್ಲಿಸಬೇಕು ಅನ್ನುವುದು ಗೊತ್ತಿಲ್ಲ. ಇನ್ನು ಪುಟ್ಟ ಮಕ್ಕಳು ಅದನ್ನೆಲ್ಲಾ ನೋಡಿದರೆ ಹೇಗೆ ಎಂಬ ಯೋಚನೆ ಪದೇ ಪದೇ ಕಾಡುತ್ತದೆ. ವ್ಯಾಲ್ಯೂ ಅಥವಾ ದೃಷ್ಟಿ ಬದಲಾಗಿದೆ. ಚಿಂತನೆ ಬದಲಾಗಿವೆ. ಬದುಕಿನೆಡೆಗಿನ ತರುಣರ ಅಪ್ರೋಚ್ ಬೇರೆ ಥರ ಇದೆ. ಹ್ಯಾವ್ ಎ ಗುಡ್ ಟೈಮ್ ಎಂಬ ರೀತಿ ಸ್ಕ್ರಿಪ್ಟ್ ಗಳಿವೆ. ಅದನ್ನೆಲ್ಲಾ ನೋಡಿ, ಮಗನೇ ನೀನು ಮನೆಯಲ್ಲಿ ಕುಳಿತುಕೊಳ್ಳುವುದೇ ವಾಸಿ ಅಂತ ಅನ್ನಿಸುವುದಕ್ಕೆ ಶುರುವಾಗಿದೆ.

ನನಗೆ ವಯಸ್ಸಾಗಿದೆ

ಇತ್ತೀಚೆಗೆ ನನಗೆ ಒಂದು ಸ್ಕ್ರಿಪ್ಟ್ ಬಂತು. ಅದರಲ್ಲಿ ನಾನು ನೀವು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ. ವಯಸ್ಸಾಗಿದೆ. ನನ್ನ ಸ್ವಂತ ಇಚ್ಛೆಯಿಂದ ವೃದ್ಧಾಶ್ರಮದಲ್ಲಿ ಇರುತ್ತೇನೆ. ಹೆಂಡತಿ ಇಲ್ಲ. ಮಗ, ಮೊಮ್ಮಗನಿಂದ ದೂರ ಇದ್ದೇನೆ. ಅಲ್ಲದೇ ನಾನು ನಾಸ್ತಿಕನಾಗಿರುತ್ತೇನೆ. ಸ್ಕ್ರಿಪ್ಟ್ ಓದಿದ ಮೇಲೆ ಈ ಪಾತ್ರವನ್ನು ಬೇರೆ ಯಾರಾದರೂ ಮಾಡಲಿ, ನಾನು ಮಾಡಲ್ಲ ಅಂದೆ. ಅವರು ಬಿಡಲಿಲ್ಲ. ಯಾಕೆ ಎಂದು ನಿರ್ದೇಶಕರು ಕೇಳಿದರು. ನೀವು ಎಲ್ಲಿಯವರು ಎಂದು ಕೇಳಿದೆ. ನಾನು ದಕ್ಷಿಣದವನೇ. ತಮಿಳುನಾಡು, ಬೆಂಗಳೂರು ಮೂಲ. ಆದರೆ ಹುಟ್ಟಿ ಬೆಳೆದದ್ದೆಲ್ಲಾ ಬಾಂಬೆಯಲ್ಲಿ ಎಂದರು.

ಅದು ನಿಮ್ಮ ಬರವಣಿಗೆಯಲ್ಲಿ ಗೊತ್ತಾಗುತ್ತದೆ, ಯೋಚನೆ ಫ್ರೆಶ್ ಆಗಿದೆ. ಆದರೆ ನನಗೆ ಆಗಲ್ಲ ಎಂದು ನಿಷ್ಠುರವಾಗಿ ಹೇಳಿದೆ. ಯಾಕೆ ಆಗಲ್ಲ ಎಂದು ಕೇಳಿದ ಮೇಲೆ ಹೇಳಿದೆ.
ನಾನು ಹಂಸಗೀತೆ ಸಿನಿಮಾ ಮಾಡಿದ್ದೇನೆ. 25 ಹಾಡುಗಳಿವೆ ಅದರಲ್ಲಿ. ಬಾಲಮುರಳಿಕೃಷ್ಣ ವಾಯ್ಸ್ ಕೊಟ್ಟಿದ್ದಾರೆ. ಸ್ವಾತಿ ತಿರುನಾಳ್ ಅಂತ ಮಲಯಾಳಂನಲ್ಲಿ ಸಿನಿಮಾ ಮಾಡಿದೆ. ಅದರಲ್ಲೂ 26 ಹಾಡುಗಳಿವೆ. ಯೇಸುದಾಸ್ ಹಾಡಿದ್ದಾರೆ. ಅಂಥಾ ಸಂಗೀತ ಪ್ರಧಾನ ಸಿನಿಮಾಗಳಲ್ಲಿ ನಟಿಸಿದ್ದೇನೆ. ಅದನ್ನೆಲ್ಲಾ ತಿಳಿದುಕೊಂಡಿದ್ದರಿಂದ ಹೇಳುತ್ತಿದ್ದೇನೆ. ದಕ್ಷಿಣಾದಿಯಲ್ಲಿ ಕನಕದಾಸರು, ಪುರಂದರದಾಸರು, ಆಕಡೆ ತ್ಯಾಗರಾಜರು, ಶ್ಯಾಮಾ ಶಾಸ್ತ್ರಿಯವರು ಹೀಗೆ ಯಾರೆಲ್ಲಾ ಶ್ರೇಷ್ಠ ಗಾಯಕರಿದ್ದಾರೋ ಅವರ ಗೀತರಚನೆ, ಗಾಯನಗಳೆಲ್ಲಾ ಭಕ್ತಿ ಪ್ರಧಾನವೇ. ದೇವರಿದ್ದಾರೆ ಅಲ್ಲಿ. ರೊಮ್ಯಾನ್ಸ್ ಇದ್ದರೂ ಕೃಷ್ಣನೇ ಇದ್ದಾನೆ. ಭಕ್ತಿ, ಮೋಕ್ಷವೇ ಇದೆ. ಅಂಥಾ ಒಬ್ಬ ಸಂಗೀತಕಾರನನ್ನು ನಾಸ್ತಿಕ ಅಂತ ಮಾಡಿದರೆ ಹೇಗೆ ಸಾಧ್ಯ? ಈ ಥರದ ಕಾಂಟ್ರಡಿಕ್ಷನ್ ಇದೆ. ಆ ಥರದ ಸಿನಿಮಾ ಮಾಡಿ ಬಂದು ನಾನು ನಾಸ್ತಿಕ ಸಂಗೀತಕಾರ ಅಂದ್ರೆ ನನಗೇ ಒಪ್ಪಿತವಾಗಲ್ಲ, ಇನ್ನು ಗೊತ್ತಿದ್ದವರಿಗಂತೂ ಒಪ್ಪಿತವಾಗುವುದೇ ಇಲ್ಲ ಎಂದೆ. ಅವರು ಸ್ಕ್ರಿಪ್ಟ್ ಬದಲಿಸಿಕೊಳ್ಳುತ್ತೇವೆ ಎಂದರು. ನನಗೆ ವಯಸ್ಸಾಗಿದೆ, ಹೊಸಬರನ್ನು ಹಾಕಿಕೊಂಡು ಮಾಡಿ ಎಂದೆ. ಅಷ್ಟರಲ್ಲಿ ಕೊರೋನಾ ಜಾಸ್ತಿಯಾಯಿತು.
 
ಇಲ್ಲಿ ಎಲ್ಲರೂ ದೈವ ಕಳಿಸಿಕೊಟ್ಟ ನಟರು

ಒಮ್ಮೊಮ್ಮೆ ಆಸಕ್ತಿಕರವಾದ ಹಿಸ್ಟಾರಿಕಲ್ ಸಿನಿಮಾಗಳನ್ನು ನೋಡುತ್ತೇನೆ. ಈಸ್ಟ್ ಯುರೋಪಿಯನ್, ರಷ್ಯನ್ ಫಿಲ್ಮ್ ನೋಡುತ್ತೇನೆ. ಮೈಕಲ್ ಡಗ್ಲಾಸ್ ನಟಿಸಿರುವ ಕೊಮಿನ್ ಸ್ಕಿ ಮೆಥಡ್ ಅಂತ ಒಂದು ಸರಣಿ ಇದೆ. ಅದರಲ್ಲಿ ಒಂದೊಂದು ಎಪಿಸೋಡ್ ನಲ್ಲಿ ನಟನೆ ಕುರಿತು ವಿವರಣೆ ಕೊಡುತ್ತಾನೆ. ಅದನ್ನು ನೋಡಿ ಇಷ್ಟ ಪಟ್ಟಿದ್ದೇನೆ.
ನಟನೆ ಎಂದರೇನು. ನಟ ಹೊಸತೇನನ್ನೂ ಸೃಷ್ಟಿಸುವುದಿಲ್ಲ. ಬರಹಗಾರ ಪಾತ್ರ ಸೃಷ್ಟಿಸಿದ್ದಾನೆ. ನೀನು ಅದನ್ನು ನಟಿಸೋಕೆ ಹೋದರೆ ಓವರ್ ಕಾಣುತ್ತದೆ. ಆ ಪಾತ್ರದಂತೆ ವರ್ತಿಸಬೇಕು. ನೀನು ಇನ್ನೊಬ್ಬನನ್ನು ನೀನು ಅಂತ ತಿಳಿದುಕೊಂಡು, ಆ ನೀನು ಇನ್ನೊಬ್ಬ ಅಂತ ಕನ್ವಿನ್ಸ್ ಮಾಡೋಕೆ ಹೊರಟಿದ್ದೀಯ. 
ನಾನು ಗೋಧಿಬಣ್ಣ ಸಾಧಾರಣ ಮೈಕಟ್ಟು ಪಾತ್ರ ಮಾಡಿದಾಗ ನಾನು ಅವನು ಅಂತ ವರ್ತಿಸುವುದಕ್ಕೆ ಹೋಗಬೇಕು, ನನ್ನನ್ನು ದೂರ ಇಟ್ಟು. ಬರಹಗಾರ, ನಿರ್ದೇಶಕನಿಗಿಂತ ನಟನ ಕೆಲಸ ಅಷ್ಟು ಕಷ್ಟದ್ದಲ್ಲ. ಎಷ್ಟರ ಮಟ್ಟಿಗೆ ಪಾತ್ರದ ಮಟ್ಟಿಗೆ ತನ್ಮಯವಾಗುತ್ತೀರಿ, ಎಷ್ಟು ಅನನ್ಯ ಆಗುತ್ತೀರಿ ಅಷ್ಟರ ಮಟ್ಟಿಗೆ ಯಶಸ್ಸು ಕಾಣಿಸುತ್ತದೆ.  
ಸ್ಪಿರಿಚುವಲ್ ಪುಸ್ತಕಗಳಲ್ಲಿ, ಬದುಕಲ್ಲಿ ನೀನು ಹೇಗಿರಬೇಕು ಎಂದರೆ ಒಬ್ಬ ನಟನ ಥರ ಇರಬೇಕು ಎನ್ನುತ್ತಾರೆ. ಅರೆ, ಇದು ನಿನ್ನ ಜೀವನ, ಈ ಪ್ರಪಂಚ ಇದೆಲ್ಲಾ ಕ್ಷಣಭಂಗುರ ಕಣಯ್ಯಾ. ನಿನ್ನಿಂದ ಏನೂ ನಡೆಯಲ್ಲ ಇಲ್ಲಿ. ಎಲ್ಲಾ ದೇವರು, ಡೆಸ್ಟಿನಿ. ದೈವ ನಿನ್ನನ್ನು ಕಳಿಸಿದೆ. ದೈವ ಹೇಳಿದಂತೆ ನೀನು ಆಡಲೇಬೇಕು. ನೀನು ಯಾರೂ ಅಲ್ಲ ಇಲ್ಲಿ. ಗುರುಗಳು ಹೇಳಿದಂತೆ ನಾವೆಲ್ಲಾ ಇಲ್ಲಿ ನಟರು. ಕಡೆಗೆ ನೀವು ಯಾವುದನ್ನು ಯಾವ ದೃಷ್ಟಿಯಿಂದ ನೋಡುತ್ತೀರಿ ಅನ್ನುವುದರ ಮೇಲೆ ಎಲ್ಲವೂ ನಿಂತಿದೆ.

ಜಿಡಿಪಿ ಕಡಿಮೆಯಾಗಿದೆ. ಅದನ್ನು ಅಳೆಯೋಕೆ ಅಳತೆಗೋಲು ಪಟ್ಟಣಗಳು. ಮೇಲಿನಿಂದ ಬರುತ್ತಾರೆ. ಎಷ್ಟು ಕಾರುಗಳು ಮಾರಲಾಗಿಲ್ಲ, ಫ್ರಿಜ್ಜುಗಳು ಮಾರಲಾಗದೇ ಉಳಿದುಹೋಗಿವೆ ಅಂತ ಲೆಕ್ಕ ಹಾಕುತ್ತಾರೆ. ಕೆಳಗಿನಿಂದ ನೋಡಿದಾಗ ಎಷ್ಟು ಜನ ಉಪವಾಸ ಇದ್ದಾರೆ ಅನ್ನುವ ಲೆಕ್ಕ ಹಾಕುವುದಿಲ್ಲ.

ಈ ಟೈಮಲ್ಲಿ ಸಿನಿಮಾ ಒಪ್ಪಿಕೊಳ್ಳುವುದಕ್ಕೂ ಮನಸ್ಸಿಲ್ಲ. ಸಿನಿಮಾ ಮಾಡಿದರೆ ಥಿಯೇಟರ್ ಇಲ್ಲ. ಓಟಿಟಿ ಹೋದರೆ ತಗೋಬೇಕಲ್ಲ. ಸ್ವಲ್ಪ ನಿಧಾನಿಸಿ ಎನ್ನುತ್ತೇನೆ. 45 ವರ್ಷಗಳ ಚಿತ್ರರಂಗ ಅನುಭವದಲ್ಲಿ ಎಷ್ಟೋ ಮಂದಿ ಮನೆ ಕಳೆದುಕೊಂಡಿದ್ದು ನೋಡಿದ್ದೇನೆ. ಹಾಗಾಗಿ ನಿರ್ಮಾಪಕರ ಬಳಿ ದುಡ್ಡು ತಗೊಳೋಕೂ ಹಿಂಜರಿಕೆ ಆಗುತ್ತದೆ.

ಲಾಕ್‌ಡೌನ್ ಎದುರಿಸೋದು ಹೇಗೆ? ಅನಂತ್ ನಾಗ್ ಸ್ಪೂರ್ತಿ ನೀಡುವ ಸಲಹೆಗಳು!

ಹೊಸ ಸ್ಕ್ರಿಪ್ಟ್ ಗಳಲ್ಲಿ ಪ್ರೀತಿಗೋಸ್ಕರ ತ್ಯಾಗ, ತಂದೆ ತಾಯಿ ಸೇವೆಗೋಸ್ಕರ ತ್ಯಾಗ ಇತ್ಯಾದಿ ವಸ್ತುಗಳೇ ಇಲ್ಲ. ಎಲ್ಲಾ ಮೆಟೀರಿಯಲ್ ಆಗಿಬಿಟ್ಟಿದೆ. ಎಲ್ಲಾ ಕಂಡೆ ನಂಗೆಷ್ಟು, ನಂದೆಷ್ಟು, ನನ್ನ ಪಾಲೇನು ಅನ್ನುವುದೇ ಆಗಿದೆ. ಕೊರೋನಾ ಪಾಸಿಟಿವಿಟಿ ಕಡಿಮೆಯಾಗಬೇಕು. ಆದರೆ ನಮ್ಮ ಪಾಸಿಟಿವಿಟಿಯೂ ಸೊನ್ನೆಯಾಗಿಬಿಟ್ಟಿದೆ. ಯಾವ ಕಡೆ ನೋಡಿದರೂ ನೆಗೆಟಿವ್ ಕಾಣುತ್ತದೆ.

ಪ್ರಕೃತಿ ನೋಡುವುದಕ್ಕೆ ಸ್ವಿಟ್ಜರ್ ಲ್ಯಾಂಡ್ ಹೋಗುತ್ತೇವೆ. ಎಷ್ಟು ಚಂದ ಅನ್ನಿಸುತ್ತದೆ. ಅದನ್ನೇ ಸ್ಕ್ರೀನ್ ಮೇಲೆ ನೋಡಿದಾಗ ಇದೇ ಚೆಂದ ಇದೆಯಲ್ಲ ಅನ್ನಿಸುವುದಕ್ಕೆ ಶುರುವಾಗುತ್ತದೆ. ಕ್ಯಾಮೆರಾ ನೋಡೋದು ಒಂದು ಕಣ್ಣಿನಿಂದ. ನಾವು ನೋಡೋದು ಎರಡು ಕಣ್ಣಿನಿಂದ. ಬಹುಶಃ ಒಂದು ಕಣ್ಣಿನಿಂದ ನೋಡಿದರೆ ಚೆಂದವೇನೋ. 

Follow Us:
Download App:
  • android
  • ios