ನನ್ನ ಗುರು ನನ್ನ ಗೈಡ್ ನನ್ನ ಸತ್ಯು: ಅನಂತ್‌ನಾಗ್
ನಮ್ಮೊಡನಿದ್ದೂ ನಮ್ಮಂತಾಗದ ಧೀಮಂತ ನಿರ್ದೇಶಕ ಎಂ ಎಸ್ ಸತ್ಯು ಅವರಿಗೆ 90 ತುಂಬಿದ ಸಂದರ್ಭದಲ್ಲಿ ಅವರ ಜೊತೆ ಕಳೆದ ದಿನಗಳ ನೆನಪುಗಳನ್ನು ಅನಂತನಾಗ್ ಹಂಚಿಕೊಂಡಿದ್ದಾರೆ.
ರಾಜೇಶ್ ಶೆಟ್ಟಿ
ಮೊದಲ ಭೇಟಿ
ಆಗ ನಾನು ಮುಂಬೈಯಲ್ಲಿದ್ದೆ. ರಂಗಭೂಮಿ, ಶ್ಯಾಮ್ ಬೆನಗಲ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದೆ. ಆಗ ಸತ್ಯು ಅವರ ‘ಗರಂ ಹವಾ’ ಸಿನಿಮಾ ಬಿಡುಗಡೆ ಆಗಿತ್ತು. ಭಾರತ ಪಾಕಿಸ್ತಾನ ವಿಭಜನೆಯ ನಂತರ ಇಲ್ಲಿನ ಮುಸ್ಲಿಮರ ಜೀವನ ಹೇಗಿತ್ತು ಎಂಬ ಕತೆಯುಳ್ಳ ಸಿನಿಮಾ ಅದು. ಅದನ್ನು ಬಹಳ ಜನ ಮೆಚ್ಚಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರಿಂದ ಒಂದು ನೋಟ್ ಬಂತು. ನನ್ನನ್ನು ಬಂದು ಒಮ್ಮೆ ನೋಡಬಹುದೇ ಅಂತ. ಜಹಾಂಗೀರ್ ಆರ್ಟ್ ಗ್ಯಾಲರಿ ಬಳಿ ಇದ್ದ ಸಮೋವಾರ್ ಕೆಫೆಯಲ್ಲಿ ಭೇಟಿ ಅಂತ ನಿರ್ಧಾರವಾಯಿತು. ಬುದ್ಧಿಜೀವಿಗಳು ಸೇರುತ್ತಿದ್ದ ಜಾಗ ಅದು. ಅವರ ಬಗ್ಗೆ ಸ್ವಲ್ಪ ತಿಳಿದುಕೊಂಡೆ. ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್‌ನ ಫೌಂಡರ್ ಸದಸ್ಯ ಆಗಿದ್ದರು. ಶಬಾನ ಆಜ್ಮಿ ತಂದೆ ಕೈಫಿ ಆಜ್ಮಿ, ಸೈಯದ್ ಸಿದ್ದೀಕಿ ಮುಂತಾದವರ ಜತೆ ಸೇರಿ ನಾಟಕದ ತಂಡ ಮಾಡಿದ್ದರು. ಅವರೆಲ್ಲಾ ಆಲ್ಬರ್ಟ್ ಕಾಮು ಮುಂತಾದವರಿಂದ ಪ್ರಭಾವಿತರಾಗಿ ಕಮ್ಯುನಿಸ್ಟ್ ತತ್ವಾದರ್ಶಗಳನ್ನು ರೂಢಿಸಿಕೊಂಡಿದ್ದವರು. ಅವರ ಕೆಲಸ, ಹಿನ್ನೆಲೆ ನೋಡಿ ಭೇಟಿಗೆ ಹೋದಾಗ ಸ್ವಲ್ಪ ನರ್ವಸ್ ಆಗಿದ್ದೆ. ಆದರೆ ಅವರು ತುಂಬಾ ಮೃದುವಾಗಿ, ಆರಾಮಾಗಿ ಮಾತನಾಡಿ ನನ್ನ ಹಿಂಜರಿಕೆ ದೂರ ಮಾಡಿದರು. ಕನ್ನೇಶ್ವರ ರಾಮ ಸಿನಿಮಾ ಮಾಡುತ್ತಿದ್ದೇನೆ, ನೀವು ಕನ್ನೇಶ್ವರರಾಮನಾಗಿ ನಟಿಸಬೇಕು ಎಂದರು.
ಶಿವಮೊಗ್ಗ ಜೈಲಲ್ಲಿ ಜೆಎಚ್ ಪಟೇಲ್ ಭೇಟಿ
ಕನ್ನೇಶ್ವರ ರಾಮ ಡಕಾಯಿತ. ರಾಬಿನ್ ಹುಡ್ ಥರದ ವ್ಯಕ್ತಿ. ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ. ಕಡೆಗೆ ಅವನಿಗೆ ಮರಣ ದಂಡನೆ ನೀಡುತ್ತಾರೆ. ಆ ಮರಣ ದಂಡನೆ ದೃಶ್ಯ ಚಿತ್ರೀಕರಣಕ್ಕೆ ಶಿವಮೊಗ್ಗ ಜೈಲಿಗೆ ಕರೆದುಕೊಂಡು ಹೋದರು. ಅದು 74-76ರ ಸಮಯ. ಅಲ್ಲಿ ಜೆಎಚ್ ಪಟೇಲರನ್ನು ತುರ್ತು ಪರಿಸ್ಥಿತಿ ಕಾರಣಕ್ಕೆ ಜೈಲಿಗೆ ಹಾಕಿದ್ದರು. ಅಲ್ಲಿ ನಾನು ಮೊದಲ ಬಾರಿ ಪಟೇಲರನ್ನು ಭೇಟಿ ಮಾಡಿದೆ. ಅವರು ನಮ್ಮನ್ನೆಲ್ಲಾ ಜೈಲಿಗೆ ಹಾಕಿದ್ದಾರೆ, ನಿನ್ನನ್ನು ನೇಣಿಗೆ ಹಾಕೋಕೆ ಕರೆದುಕೊಂಡು ಬಂದರಲ್ಲಪ್ಪಾ ಎಂದು ತಮಾಷೆ ಮಾಡಿದ್ದರು. ಅವರಿಂದ ಲಂಕೇಶ್, ಖಾದ್ರಿ ಶಾಮಣ್ಣ ಪರಿಚಯ ಆಯಿತು.
ಕವಿ ಸುಬ್ರಾಯ ಚೊಕ್ಕಾಡಿ 80 : ಹಕ್ಕಿಯ ಜತೆ ಸುವರ್ಣ ಚಿಲಿಪಿಲಿ!
ಸತ್ಯು ನನ್ನ ರಾಜಕೀಯ ಗುರು
ನಾನು ಜನತಾ ಪಕ್ಷದ ಮೂಲಕ ರಾಜಕೀಯಕ್ಕೆ ಬಂದೆ. ಆಗ ನನಗೆ ರಾಜಕೀಯ ಮಾರ್ಗದರ್ಶನ ನೀಡಿದ್ದೇ ಸತ್ಯು. ಪಾಲಿಟಿಕ್ಸ್ ಅಂದ್ರೆ ಎಕಾನಾಮಿಕ್ಸ್. ಅದನ್ನು ಜನ ತಿಳಿದುಕೊಳ್ಳುವುದಿಲ್ಲ, ಅಧಿಕಾರ ಅಂದುಕೊಳ್ಳುತ್ತಾರೆ. ಎಕಾನಾಮಿಕ್ಸ್ ಫಾರ್ ದ ಪೂರ್, ಪಾಲಿಟಿಕ್ಸ್ ಫಾರ್ ದ ಪೂರ್ ಅಂತ ವ್ಯಾಖ್ಯಾನ ಮಾಡಿದ್ದರು. ನಾನು ಶಾಮ್ ಬೆನಗಲ್ ಜತೆ ಆರು ಸಿನಿಮಾ ಮಾಡಿದ್ದೆ. ಅವರೇ ನಿನಗೆ ಯಾಕೆ ರಾಜಕೀಯ ಬೇಕಿತ್ತು ಎಂದರು. ಬೆಂಗಳೂರಿಗೆ ಬಂದಾಗ ಅವನು ಎಂಥಾ ನಟ, ರಾಜಕೀಯ ಸೇರಿದ್ದಾನೆ, ಅವನಿಗೆ ಯಾರು ಬುದ್ಧಿ ಹೇಳೋದು ಎಂದಿದ್ದರು. ಆದರೆ ಸತ್ಯು ಮಾತ್ರ ಪ್ರೋತ್ಸಾಹ ಮಾಡಿದ್ದರು.
ಮೊದಲ ಪೊಲಿಟಿಕಲ್ ಸಿನಿಮಾ ಬರ
ಅವರು ಬೇರೆ ಬೇರೆ ರೀತಿಯ ಸಿನಿಮಾಗಳನ್ನು ಮಾಡಿದರು. ಅನಂತಮೂರ್ತಿಯವರ ಬರ ಕಥೆ ಆಧರಿಸಿ ಸಿನಿಮಾ ಮಾಡುವ ನಿರ್ಧಾರ ಮಾಡಿದ್ದರು. ಅದು ಮೊದಲ ಪೊಲಿಟಿಕಲ್ ಸಿನಿಮಾ. ಆಗ ರಾಜಕೀಯದಲ್ಲಿ ಸಿನಿಮಾದಲ್ಲಿ ಬರುವುದು ಎಷ್ಟರ ಮಟ್ಟಿಗೆ ಸರಿ ಅಂತ ದೊಡ್ಡ ಚರ್ಚೆ ಆಗಿತ್ತು. ಕಡೆಗೆ ಎನ್‌ಎಫ್‌ಡಿಸಿಯಲ್ಲಿ(ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ) ಸಾಲ ತಗೊಂಡು ಅವರೇ ಸಿನಿಮಾ ನಿರ್ಮಾಣ ಮಾಡಿದರು. ಅವರ ಶ್ರೀಮತಿ ಶಮಾ ಝೈದಿ ಆ ಸಿನಿಮಾದ ಸ್ಕಿ್ರಪ್ಟ್ ಬರೆದಿದ್ದರು. ಆದರೆ ಸಿನಿಮಾ ಸಿದ್ಧವಾದ ಮೇಲೆ ಬಿಡುಗಡೆಗೆ ಕಷ್ಟವಾಯಿತು. ನಾನು ಕೆಎಫ್‌ಡಿಸಿಗೆ ಹೋಗಿ ಬಿಡುಗಡೆ ಮಾಡಲು ನೆರವು ಕೇಳಿದೆ. ಅವರೂ ಸಹಾಯ ಮಾಡಲಿಲ್ಲ. ಕೊನೆಗೆ ನಾನೇ ಬಿಡುಗಡೆ ಮಾಡಿದೆ. ಆ ಸಿನಿಮಾ ನೂರು ದಿನ ಓಡಿತು.
ಶಿಕ್ಷಣತಜ್ಞ ಎಚ್. ನರಸಿಂಹಯ್ಯ ಶತಮಾನ ಸಂಭ್ರಮ: ಇಲ್ಲಿದೆ ಎಚ್‌ಎನ್ ಬದುಕಿನ ಪಯಣ!ಚಿಕವೀರ ರಾಜೇಂದ್ರ ಸೆಟ್‌ನಲ್ಲಿ ಅಚ್ಚರಿ
ಅನಂತರ ಸುಮಾರು 25ವರ್ಷಗಳ ನಂತರ ಮತ್ತೆ ಅವರ ಜತೆ ಕೆಲಸ ಮಾಡುವ ಅವಕಾಶ ಬಂತು. ದೂರದರ್ಶನ ಬಂದಿತ್ತು. ಸತ್ಯು ಅವರು ಮಾಸ್ತಿಯವರ ‘ಚಿಕವೀರ ರಾಜೇಂದ್ರ’ ಕಾದಂಬರಿ ಆಧರಿಸಿ ಧಾರಾವಾಹಿ ಮಾಡುತ್ತಿದ್ದರು. ಚಿಕವೀರ ರಾಜೇಂದ್ರ ಪಾತ್ರ ನನ್ನದು. ಹಿಂದಿಯಲ್ಲಿ ಅಂತಿಮ್ ರಾಜ ಎಂಬ ಹೆಸರಿಡಲಾಯಿತು. ಮುಂಬೈ, ದೆಹಲಿಯಿಂದ ಕಲಾವಿದರನ್ನು ಕರೆಸಿದ್ದರು. ಚಿಕವೀರ ರಾಜೇಂದ್ರ ಕೊಡಗಿನ ರಾಜ. ಬ್ರಿಟಿಷರ ವಿರುದ್ಧ ಹೋರಾಡಿದ್ದ ವೀರ. ಆ ಚಿತ್ರೀಕರಣ ಸಂದರ್ಭದಲ್ಲಿ ಸತ್ಯು ಅವರ ಅಪಾರ ಜ್ಞಾನ ನೋಡಿ ಅಚ್ಚರಿಗೊಂಡೆ. ಅವರಿಗೆ ಸೂಕ್ಷ್ಮವಾದ ಸೆಟ್ಟಿಂಗ್ಸ್, ಏಸ್ತೆಟಿಕ್ಸ್ ಸೆನ್ಸ್, ಅದ್ಭುತ ಕಾಸ್ಟ್ಯೂಮ್ ಜ್ಞಾನ ಇತ್ತು. ತುಂಬಾ ಸಿಂಪಲ್ ಆಗಿ ತೋರಿಸಿದರೂ ಸ್ಕ್ರೀನ್‌ನಲ್ಲಿ ಬಹಳ ಅದ್ಭುತವಾಗಿ ಕಾಣಿಸುತ್ತಿತ್ತು. ನನಗೆ ತೀರಾ ಸರಳ ಕಾಸ್ಟೂ್ಯಮ್ ಕೊಟ್ಟಿದ್ದರು. ಸರಳವಾಗಿದೆಯಲ್ಲ ಎಂದು ಕೇಳಿದೆ. ಟಿವಿಯಲ್ಲಿ ನೋಡು ಎಂದರು. ಅದು ನಿಜಕ್ಕೂ ಟಿವಿಯಲ್ಲಿ ಅದ್ಭುತವಾಗಿ ಕಾಣಿಸುತ್ತಿತ್ತು.
ನಟನೆಯ ಗೊಂದಲ ನಿವಾರಣೆ
ಮಡಿಕೇರಿ ಕೋಟೆಯಲ್ಲಿ ಹೊರಾಂಗಣ ಚಿತ್ರೀಕರಣ. ಮೈಸೂರು ಮಹಾರಾಜ ಶ್ರೀಕಂಠ ದತ್ತರ ಅನುಮತಿ ಪಡೆದು ಮೈಸೂರು ಅರಮನೆಯಲ್ಲಿ ಒಳಾಂಗಣ ಚಿತ್ರೀಕರಣ. ಆಗ ನಾನು ಬೆಕೆಟ್ ಸಿನಿಮಾ ಬಹಳ ಇಷ್ಟಪಟ್ಟಿದ್ದೆ. ಕೆಳಜಾತಿ, ಮೇಲು ಜಾತಿ, ಧರ್ಮ ಇತ್ಯಾದಿ ಕತೆ ಹೊಂದಿದ್ದ ಸಿನಿಮಾ ಅದು. ಅಲ್ಲೂ ಆತ ರಾಜ. ಇಲ್ಲಿ ಚಿಕವೀರ ರಾಜೇಂದ್ರ ಪಾತ್ರ ಮಾಡುವಾಗ ಅದೇ ಸಿನಿಮಾ ನನ್ನ ತಲೆಯಲ್ಲಿ ಇತ್ತು. ಹಾಗಾಗಿ ಪಾತ್ರ ಮಾಡುವಾಗ ಏನೋ ಒಂಥರ ಹಿಂಜರಿಕೆ. ಪ್ರತೀ ಶಾಟ್ ಆದ ಮೇಲೂ ಹೋಗಿ ಸರಿ ಇದ್ಯಾ ಸತ್ಯು ಅಂತ ಕೇಳುತ್ತಿದ್ದೆ. ಮೊದಲು ಹಾಗೆ ಮಾಡಿದ್ದೇ ಇರಲಿಲ್ಲ ನಾನು. ಸಂಜೆ ಸತ್ಯು ವಾಟ್ಸ್ ಯುವರ್ ಪ್ರಾಬ್ಲಮ್ ಎಂದು ಕೇಳಿದರು. ಬೆಕೆಟ್ ತಲೆಯಲ್ಲಿದೆ, ಸುಮಾರು ಸಲ ಆ ಸಿನಿಮಾ ನೋಡಿದ್ದೇನೆ, ಆ ಪಾತ್ರ ಈ ಪಾತ್ರ ಹಿಡೀತಾ ಇದೆ ಎಂದೆ. ಅವರು ನಿಧಾನವಾಗಿ, ಮೃದುವಾಗಿ ಮಾತನಾಡಿ ಅದನ್ನು ತೆಗೆದು ಹಾಕಿಬಿಡು. ಅದೇ ಬೇರೆ ಇದೇ ಬೇರೆ. ಬೇರೆಲ್ಲರೂ ಶರಣಾಗತರಾದಾಗ ತಾನು ಸೋಲ್ತೀನಿ ಅಂತ ಗೊತ್ತಿದ್ದರೂ ಬ್ರಿಟಿಷರನ್ನು ಎದುರು ಹಾಕಿಕೊಂಡ ರಾಜ ಚಿಕವೀರ ರಾಜೇಂದ್ರ. ಅದು ಕರ್ನಾಟಕದ ಹಿನ್ನೆಲೆ ಎಂದು ಅರ್ಥ ಮಾಡಿಸಿದರು.
ಎಚ್ ನರಸಿಂಹಯ್ಯ ಶತಮಾನ ಸಂಭ್ರಮ: ಅವರ ಒಡನಾಡಿ ಕಂಡಂತೆ ಎಚ್ಚೆನ್
ನನ್ನ ಬೆಸ್ಟ್ ಪರ್ಫಾರ್ಮೆನ್ಸ್ ಚಿಕವೀರ ರಾಜೇಂದ್ರ
15 ಗಂಟೆಗಳ ಕಾಲ ಶೂಟಿಂಗ್ ಮಾಡಿದ್ದೆವು. ಕೊನೆಗೆ ವಿವಾದ ಶುರುವಾಯಿತು. ಹಾಗಾಗಿ ಆ ಧಾರಾವಾಹಿಯನ್ನು ದೂರದರ್ಶನ ಪ್ರಸಾರ ಮಾಡಲಿಲ್ಲ. ಅದು ನನ್ನ ದ ಬೆಸ್ಟ್ ಪರ್ಫಾರ್ಮೆನ್ಸ್. ಒಂದು ವೇಳೆ ಆ ಧಾರಾವಾಹಿ ಬಿಡುಗಡೆ ಆಗಿ ಜನ ನೋಡಿದ್ದರೆ ಇವತ್ತು ಸತ್ಯು ದೇಶದ ಜನರ ದೃಷ್ಟಿಕೋನದಲ್ಲಿ ಬಹಳ ಉನ್ನತ ಮಟ್ಟದಲ್ಲಿ ಇರುತ್ತಿದ್ದರು. ಆ ಧಾರಾವಾಹಿ ಬಿಡುಗಡೆ ಆಗಲಿಲ್ಲ. ಆದರೆ ಆ ಧಾರಾವಾಹಿಯಲ್ಲಿ ನಟಿಸಿದ ಸಮಾಧಾನ ಇದೆ.
ಇಲ್ಲ ಎಂದ ಪಾಪಪ್ರಜ್ಞೆ
2009-10ರಲ್ಲಿ ಇಜ್ಜೋಡು ಸಿನಿಮಾ ಆಯ್ಕೆ ಮಾಡಿದ್ದರು. ಅದು ದೇವದಾಸಿ ಕತೆ ಆಧರಿಸಿದ ಸಿನಿಮಾ. ಆಗ ಅವರು ಸ್ಕಿ್ರಪ್ಟ್, ಚೆಕ್ ಜತೆ ಒಂದು ನೋಟ್ ಕಳುಹಿಸಿದರು. ಸಿನಿಮಾದಲ್ಲಿ ಪಾತ್ರ ಮಾಡಬೇಕು ಅಂತ. ದೇವದಾಸಿಯ ತಂದೆ ಪಾತ್ರ ಅದು. ಆತನದು ಶ್ರೀಮಂತ ಮನೆತನ. ಊರಿಗೆ ದೊಡ್ಡವನು. ಹೀಗಾಗಿ ಅವನು ಮಗಳು ದೇವದಾಸಿ ಆಗಲು ಹೇಗೆ ಒಪ್ಕೋತಾನೆ ಅಂತ ಯೋಚಿಸಿದೆ. ಮನಸ್ಸಲ್ಲಿ ಸಂಘರ್ಷ ನಡೆದು ಪಾತ್ರ ಮಾಡಲು ಒಪ್ಪಲೇ ಇಲ್ಲ. ಸತ್ಯು ಇಲ್ಲ ಅಂತ ಹೇಳಲು ಕಷ್ಟವಾಗುತ್ತಿತ್ತು. ಆದರೂ ಸಾಧ್ಯವಾಗಲ್ಲ ಅಂತ ಚೆಕ್, ಸ್ಕಿ್ರಪ್ಟ್ ವಾಪಸ್ ಕಳುಹಿಸಿದೆ. ಅವರು ನೀನು ಮಾಡಿದ್ದರೆ ಬೇರೆಯದೇ ರೀತಿ ಇರುತ್ತಿತ್ತು ಎಂದು ವಾಪಸ್ ಬರೆದರು. ಅವರು ಔದಾರ್ಯ ತೋರಿದರು. ಆದರೆ ಅವರಿಗೆ ಇಲ್ಲ ಹೇಳಿದ ಪಾಪಪ್ರಜ್ಞೆ ಇವತ್ತೂ ಇದೆ.
ಸತ್ಯು ಮುಖದಲ್ಲಿ ಯೋಗಿಯ ಕಳೆ ಇದೆ
ಯೋಗಿಯ ಛಾಯೆ ಅವರ ಮುಖದಲ್ಲಿದೆ. ಅವರು ಯಾವತ್ತೂ ಸಿಟ್ಟಿಗೇಳುವುದಿಲ್ಲ. ಪ್ರೀತಿಯಿಂದ, ಸಮಾಧಾನದಿಂದ ಮೃದುವಾಗಿ ಮಾತನಾಡುತ್ತಾರೆ. ಎಷ್ಟೋ ಆರ್ಥಿಕ ಮುಗ್ಗಟ್ಟುಗಳನ್ನು ಅವರು ದಾಟಿ ಬಂದಿರಬಹುದು. ಆದರೆ ಯಾರಿಗೂ ಹೇಳಿದವರಲ್ಲ ಕೇಳಿದವರಲ್ಲ. ಒಬ್ಬ ಋುಷಿ, ಸಂಯಮಿಯ ಛಾಯೆ ಅವರಲ್ಲಿದೆ.
ಅವರು ಆ್ಯಕ್ಟರ್ಸ್ ಡಿಲೈಟ್
ಅವರಿಗೆ ಅವರ ಪ್ರತಿಯೊಂದು ಪಾತ್ರದ ಬಗ್ಗೆ ಒಂದು ರೂಪುರೇಷೆ ಇರುತ್ತದೆ. ಅವರ ಜತೆ ಚರ್ಚಿಸಿದಾಗ ಗೊತ್ತಾಗುತ್ತದೆ. ಆದರೆ ಅವರು ನಟರಿಗೆ ಎಷ್ಟುಸ್ವಾತಂತ್ರ್ಯ ಕೊಡುತ್ತಾರೆ ಎಂದರೆ ನಾವು ಏನಾದರೂ ಬದಲಿಸಿದರೂ ಏನೂ ಹೇಳುವುದಿಲ್ಲ. ಮತ್ತೊಂದು ಟೇಕ್ ಬೇಕಾ ಎಂದು ಕೇಳುತ್ತಾರೆ. ನಿಮಗೆ ಓಕೆ ಅನ್ನಿಸಿದರೆ ಬೇಡ ಎನ್ನುತ್ತಾರೆ. ಈ ಥರದ ನಿರ್ದೇಶಕ. ಕಟ್ ಕಟ್ ಅಂತ ಹೇಳಿ ನನಗೆ ಇದೇ ರೀತಿ ಬೇಕು ಎಂದು ಯಾವತ್ತೂ ಮಾಡಿದವರಲ್ಲ. ನನ್ನ ಮಟ್ಟಿಗೆ ಅವರು ಐಡಿಯಲ್ ಡೈರೆಕ್ಟರ್.