Personal Finance: ಸುಲಭವಾಗಿ ಸಾಲ ಸಿಗುತ್ತೆ ಅಂತಾ ಕಂಡ ಕಂಡಲ್ಲಿ ಸಾಲ ತೆಗೆದ್ಕೊಳ್ಬೇಡಿ
Persofnal Finance Tips: ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಎನ್ನುವ ಮಾತಿದೆ. ಆದ್ರೆ ಅದೇ ಸಾಲದ ಶೂಲ ಪ್ರಾಣ ತೆಗೆಯುತ್ತದೆ. ಹಾಗಾಗಿ ಸಾಲ ಮಾಡುವ ಮೊದಲು ಕೆಲವೊಂದು ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಬೇಕು. ಕಡಿಮೆ ಬಡ್ಡಿಗೆ ಸಾಲ ಸಿಗ್ತಿದೆ ಅಂತಾ ಅನಾವಶ್ಯಕ ಸಾಲ ಮಾಡಿದ್ರೆ ಮುಂದೆ ಕಷ್ಟ ತಪ್ಪಿದ್ದಲ್ಲ.
ಡಿಜಿಟಲ್ (Digital) ಯುಗದಲ್ಲಿ ಸಾಲ (Loans )ತೆಗೆದುಕೊಳ್ಳುವುದು ತುಂಬಾ ಸುಲಭ. ನಮ್ಮ ವಿವಿಧ ಅಗತ್ಯಗಳಿಗೆ ಅನುಗುಣವಾಗಿ, ಬ್ಯಾಂಕಿಂಗ್ (Banking ) ಮತ್ತು ಹಣಕಾಸು ಸಂಸ್ಥೆ (Financial Institution)ಗಳು ನಮಗೆ ಕಡಿಮೆ ಅವಧಿಯಲ್ಲಿ ವೈಯಕ್ತಿಕ ಸಾಲವನ್ನು ನೀಡಲು ಸಿದ್ಧವಾಗ್ತವೆ. ಮನೆಯಲ್ಲಿಯೇ ಕುಳಿತು ನಾವು ಸಾಲಕ್ಕೆ ಅಪ್ಲಿಕೇಷನ್ ಹಾಕ್ಬಹುದು. ಸುಲಭವಾಗಿ ಸಾಲ ಸಿಗುತ್ತೆ ಎನ್ನುವ ಕಾರಣಕ್ಕೆ ಅನೇಕರು ಅಗತ್ಯವಿಲ್ಲದೆ ಹೋದ್ರೂ ಸಾಲ ಮಾಡ್ತಾರೆ. ಸಣ್ಣ ಸಣ್ಣ ಅಗತ್ಯತೆ ಪೂರೈಸಲು ಸಾಲ ಮಾಡುವವರಿದ್ದಾರೆ. ಆದ್ರೆ ಇದ್ರಿಂದ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ. ಸಾಲಕ್ಕಿಂತ ಬಡ್ಡಿ ಹೊರೆ ಹೆಚ್ಚಾಗುತ್ತದೆ. ಯಾವುದೇ ಆಲೋಚನೆ ಇಲ್ಲದೆ, ಮುಂದಿನ ಭವಿಷ್ಯದ ಬಗ್ಗೆ ಚಿಂತೆ ಮಾಡದೆ ಸಾಲ ತೆಗೆದುಕೊಳ್ಳುವ ಮೊದಲು ನೀವು ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಉತ್ತಮ. ಇದರಿಂದ ಸಾಲದ ಸುಳಿಯಲ್ಲಿ ಸಿಲುಕುವುದ್ರಿಂದ ತಪ್ಪಿಸಿಕೊಳ್ಳಬಹುದು. ಸಾಲ ತೆಗೆದುಕೊಳ್ಳುವ ಮೊದಲು ಯಾವೆಲ್ಲ ಪ್ರಶ್ನೆಗಳನ್ನು ಕೇಳ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಸಾಲ ಏಕೆ ಬೇಕು? : ಮೊದಲೇ ಹೇಳಿದಂತೆ ನಮಗೀಗ ಸುಲಭವಾಗಿ ಸಾಲ ಸಿಗುತ್ತದೆ. ವಿವಿಧ ವೈಯಕ್ತಿಕ ಅಗತ್ಯಗಳನ್ನು ಪೂರೈಸಲು ವೈಯಕ್ತಿಕ ಸಾಲಗಳನ್ನು ತೆಗೆದುಕೊಳ್ಳಬಹುದು. ಈ ವೈಯಕ್ತಿಕ ಸಾಲಗಳನ್ನು ಯಾವುದೇ ಮೇಲಾಧಾರವಿಲ್ಲದೆ ಸುಲಭವಾಗಿ ಲಭ್ಯವಿವೆ. ವೈಯಕ್ತಿಕ ಅಗತ್ಯಗಳ ಹೊರತಾಗಿ, ಸಂಬಳ ಪಡೆಯುವ ಉದ್ಯೋಗಿಗಳು ತಮ್ಮ ಕ್ರೆಡಿಟ್ ಸ್ಕೋರ್ ಬಲಪಡಿಸಲು ಇದನ್ನು ತೆಗೆದುಕೊಳ್ಳಬಹುದು. ಆದ್ರೆ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುವ ಮೊದಲು ನಾವು ಈ ಸಾಲವನ್ನು ಏಕೆ ತೆಗೆದುಕೊಳ್ಳುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳಬೇಕು. ಈ ಸಾಲದ ಅಗತ್ಯ ನಮಗಿದೆಯೇ ಅಥವಾ ಸಾಲ ಪಡೆಯದೇ ಕೆಲಸ ಮುಗಿಸಬಹುದೇ ಎಂಬುದನ್ನು ನಿಮ್ಮೊಳಗೆ ಚರ್ಚೆ ಮಾಡ್ಬೇಕು.
ಎಷ್ಟು ಸಾಲ ಬೇಕು? : ಸಾಲ ತೆಗೆದುಕೊಳ್ಳಬೇಕು ಎಂಬುದು ನಿರ್ಧಾರವಾದ್ಮೇಲೆ ಎಷ್ಟು ಸಾಲ ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ಸಾಲವನ್ನು ತೆಗೆದುಕೊಳ್ಳುವ ಮೊದಲು ನಮಗೆ ಅಗತ್ಯವಿರುವಷ್ಟು ಸಾಲವನ್ನು ನಾವು ತೆಗೆದುಕೊಳ್ಳುತ್ತಿದ್ದೇವೆಯೇ ಎಂದು ಖಚಿತಪಡಿಸಿಕೊಳ್ಳಿ. ಅನೇಕ ಬಾರಿ, ನಮಗೆ ಅಗತ್ಯಕ್ಕಿಂತ ಹೆಚ್ಚು ಸಾಲವನ್ನು ನಾವು ಸುಲಭವಾಗಿ ಪಡೆಯಬಹುದು. ಆದರೆ ನಾವು ಈ ವೈಯಕ್ತಿಕ ಸಾಲವನ್ನು ಬಡ್ಡಿಯೊಂದಿಗೆ ಮರುಪಾವತಿಸಬೇಕು ಮತ್ತು ನಾವು ಅದನ್ನು ಡೀಫಾಲ್ಟ್ ಮಾಡಿದರೆ, ಅದು ನಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಸಾಲವನ್ನು ತೆಗೆದುಕೊಳ್ಳುವ ಪ್ರಮುಖ ನಿಯಮವೆಂದರೆ ನಮ್ಮ ಎಲ್ಲಾ ಸಾಲಗಳ ಒಟ್ಟು ಇಎಂಐ (EMI) ನಮ್ಮ ಮಾಸಿಕ ಸಂಬಳದ ಶೇಕಡಾ 40ರಷ್ಟನ್ನು ಮೀರಬಾರದು.
ಇದನ್ನೂ ಓದಿ: RUPEE VALUE: ಡಾಲರ್ ಮುಂದೆ ಕೊಂಚ ಜಿಗಿದ ರೂಪಾಯಿ, ಇಂದಿನ ಮೌಲ್ಯವೆಷ್ಟು?
ಸಾಲವನ್ನು ಎಷ್ಟು ವರ್ಷಗಳವರೆಗೆ ತೆಗೆದುಕೊಳ್ಳಬೇಕು? : ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುವಾಗ ನಾವು ಯಾವ ಅವಧಿಗೆ ಸಾಲವನ್ನು ತೆಗೆದುಕೊಳ್ಳಲು ಬಯಸುತ್ತಿದ್ದೇವೆ ಎಂಬುದನ್ನು ಸಹ ನೆನಪಿನಲ್ಲಿಡಬೇಕು. ದೀರ್ಘಾವಧಿಯ ಸಾಲವನ್ನು ತೆಗೆದುಕೊಂಡರೆ ನಮ್ಮ ಇಎಂಐ ಮೊತ್ತವು ಕಡಿಮೆಯಾಗುತ್ತದೆ. ಆದರೆ ಇದಕ್ಕಾಗಿ ನಾವು ಅನೇಕ ವರ್ಷಗಳ ಕಾಲ ಸಾಲ ತೀರಿಸಬೇಕಾಗುತ್ತದೆ. ಹಾಗಾಗಿ ನಮ್ಮ ಆರ್ಥಿಕ ಪರಿಸ್ಥಿತಿ ನೋಡಿ ವೈಯಕ್ತಿಕ ಸಾಲದ ಅವಧಿಯನ್ನು ನಿರ್ಧರಿಸಬೇಕು..
ಬಡ್ಡಿ ದರ ಮತ್ತು ಇತರ ಶುಲ್ಕದ ಬಗ್ಗೆ ಮಾಹಿತಿ ಅಗತ್ಯ : ಸುಲಭವಾಗಿ ಸಾಲ ಸಿಗುತ್ತದೆ ಎಂಬ ಖುಷಿಯಲ್ಲಿ ನಾವು ಬೇರೆ ಶುಲ್ಕವನ್ನು ಹೆಚ್ಚು ಗಮನಿಸುವುದಿಲ್ಲ. ಅದರಲ್ಲಿ ಬಡ್ಡಿ ಕೂಡ ಸೇರಿದೆ. ಅನೇಕ ಸಂಸ್ಥೆಗಳು ಸುಲಭವಾಗಿ ಹಾಗೂ ತ್ವರಿತವಾಗಿ ಸಾಲ ನೀಡಲು ಅನೇಕ ಶುಲ್ಕಗಳನ್ನು ವಿಧಿಸುತ್ತವೆ. ಸಂಸ್ಕರಣಾ ಶುಲ್ಕ, ವಿಳಂಬ ಪಾವತಿ ಶುಲ್ಕಗಳು ಮತ್ತು ಪೂರ್ವಪಾವತಿ ಪೆನಾಲ್ಟಿಗಳಂತಹ ಇತರ ಶುಲ್ಕಗಳನ್ನು ನೀವು ಗಮನ ಹರಿಸಬೇಕು. ಸಾಲ ತೆಗೆದುಕೊಂಡ್ಮೇಲೆ ಅದರ ಬಗ್ಗೆ ಪರಿತಪಿಸುವ ಬದಲು ಸಾಲ ತೆಗೆದುಕೊಳ್ಳುವ ಮೊದಲೇ ಅದ್ರ ಬಗ್ಗೆ ಮಾಹಿತಿ ಪಡೆಯುವುದು ಅಗತ್ಯ.
ಇದನ್ನೂ ಓದಿ: Insurance Renewal:ನಿಮ್ಮಬ್ಯಾಂಕ್ ಖಾತೆಯಲ್ಲಿ 342ರೂ. ಕನಿಷ್ಠ ಬ್ಯಾಲೆನ್ಸ್ ಇದೆಯಾ? ಇಲ್ಲವಾದ್ರೆ ಕೈ ತಪ್ಪುತ್ತದೆ 4ಲಕ್ಷ ರೂ.
ಸಾಲ ಎಲ್ಲಿ ಪಡೆಯುವುದು ಉತ್ತಮ ? : ಬ್ಯಾಂಕ್ ಸೇರಿದಂತೆ ಅನೇಕ ಹಣಕಾಸು ಸಂಸ್ಥೆಗಳು ವೈಯಕ್ತಿಕ ಸಾಲವನ್ನು ನೀಡುತ್ತವೆ. ಆದ್ರೆ ಯಾವುದು ಸೂಕ್ತ ಎಂಬುದನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಯಾವುದರಲ್ಲಿ ಬಡ್ಡಿ ಸೇರಿದಂತೆ ಇತರ ಶುಲ್ಕಗಳು ಕಡಿಮೆ ಇವೆ ಎಂಬುದನ್ನು ನೀವು ತುಲನೆ ಮಾಡ್ಬೇಕು.