ನವದೆಹಲಿ(ಫೆ.01): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2020ನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. 2020ರ ಹೊಸ್ತಿಲಲ್ಲಿರುವ ನವ ಭಾರತಕ್ಕೆ ಈ ಬಜೆಟ್ ಅತ್ಯಂತ ಮಹತ್ವದ್ದಾಗಿದ್ದು, ಆರ್ಥಿಕ ಪುನಶ್ಚೇತನಕ್ಕೆ ಪೂರಕವಾಗಿ ಈ ಬಜೆಟ್ ಮಂಡನೆಯಾಗಿದೆ.

"

ಆದರೆ ಕೇಂದ್ರ ಬಜೆಟ್‌ ಕುರಿತು ಮಿಶ್ರ ಪ್ರತಿಕ್ರಿಯ ವ್ಯಕ್ತವಾಗಿದ್ದು, ಇದು ಜನಪ್ರಿಯವಲ್ಲದ ಜನಪರ ಬಜೆಟ್ ಎಂಬ ವಿಶ್ಲೇಷಣೆಗಳಿಗೆ ಕೊರತೆಯಿಲ್ಲ. ಪ್ರಮುಖವಾಗಿ ತೆರಿಗೆ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ ಕಾಣದಿರುವುದು ಈ ಬಜೆಟ್‌ನ ವಿಶೇಷತೆ.

ತೆರಿಗೆದಾರರಿಗೆ ಟ್ಯಾಕ್ಸ್ ರಿಲೀಫ್ ಘೋಷಿಸಿರುವ ಸರ್ಕಾರ, ಟ್ಯಾಕ್ಸ್ ಸ್ಲ್ಯಾಬ್‌ಗಳಲ್ಲಿ ಕೊಂಚ ಬದಲಾವಣೆ ಮಾಡಿ ತೆರಿಗೆದಾರರಲ್ಲಿ ನಿರಾಳ ಭಾವ ಮೂಡಿಸಿದೆ. ಹೊಸ ಟ್ಯಾಕ್ಸ್ ಸ್ಲ್ಯಾಬ್ ಇಂತಿದೆ...

ವೈಯಕ್ತಿಕ ತೆರಿಗೆ ಡೀಟೇಲ್ಸ್:

ತೆರಿಗೆದಾರರಿಗೆ ಬಿಗ್ ರಿಲೀಫ್ : ಇಲ್ಲಿದೆ ಟ್ಯಾಕ್ಸ್ ಕಡಿತದ ಫುಲ್ ಡಿಟೇಲ್ಸ್!

2.5 ಲಕ್ಷದಿಂದ 5 ಲಕ್ಷದವರೆಗೆ- ಶೂನ್ಯ ತೆರಿಗೆ
5 ಲಕ್ಷದಿಂದ 7.5 ಲಕ್ಷದವರೆಗೆ - 10% ತೆರಿಗೆ
7.5ಲಕ್ಷದಿಂದ 10 ಲಕ್ಷದವರೆಗೆ - 15% ತೆರಿಗೆ
10 ಲಕ್ಷದಿಂದ 12.5 ಲಕ್ಷ ಆದಾಯಕ್ಕೆ ಶೇ.20ರಷ್ಟು ತೆರಿಗೆ
12.5 ಲಕ್ಷದಿಂದ 15 ಲಕ್ಷ ಆದಾಯಕ್ಕೆ ಶೇ.25ರಷ್ಟು ತೆರಿಗೆ 
15 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇಕಡ 30ರಷ್ಟು ತೆರಿಗೆ

ಹೀಗೆ ಟ್ಯಾಕ್ಸ್ ವಿನಾಯ್ತಿ ಜನಸಾಮಾನ್ಯರಿಗೆ ಸಂತಸ ತಂದಿದೆಯಾದರೂ, ಪ್ರಮುಖ ವಲಯಗಳ ಮೇಲೆ ಸರ್ಕಾರದ ನಿರ್ಲಕ್ಷ್ಯ ತುಸು ಚಿಂತೆಗೀಡು ಮಾಡಿದೆ. ಕೈಗಾರಿಕೆ ವಲಯವೂ ಸೇರಿದಂತೆ ನೆಲ ಕಚ್ಚಿರುವ ಹಲವು ವಲಯಗಳ ಉತ್ತೇಜನಕ್ಕೆ ಈ ಬಜೆಟ್ ಅಷ್ಟೊಂದು ಮಹತ್ವ ನೀಡದಿರುವುದು ಅಂಕಿ ಅಂಶಗಳಿಂದ ಬಹಿರಂಗವಾಗುತ್ತದೆ.

ಪ್ರಮುಖವಾಗಿ ಆಟೋಮೊಬೈಲ್ ಕ್ಷೇತ್ರ, ಸೇವಾ ಕ್ಷೇತ್ರ ಹಾಗೂ ಮೂಲ ಸೌಕರ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ಬಜೆಟ್‌ನಲ್ಲಿ ಹೇಳಿಕೊಳ್ಳುವಂತಹ ಉತ್ತೇಜನಕಾರಿ ಘೋಷಣೆಗಳಿಲ್ಲ ಎಂಬುದು ಪರಿಣಿತರ ಅಭಿಮತವಾಗಿದೆ.

ಆದರೆ ರಿಯಲ್ ಎಸ್ಟೇಟ್ ಹಾಗೂ ಸ್ಟಾರ್ಟ್‌ಅಪ್‌ಗಳ ಕ್ಷೇತ್ರಗಳಲ್ಲಿ ತೆರಿಗೆ ವಿನಾಯ್ತಿ ಘೋಷಿಸಿರುವುದು ಕೈಗಾರಿಕಾ ವಲಯದ ಉತ್ತೇಜನಕ್ಕೆ ಸರ್ಕಾರ ಬದ್ಧ ಎಂಬುದನ್ನು ಸಾರಿ ಹೇಳುತ್ತದೆ. ಅದಾಗ್ಯೂ ಉದ್ಯೋಗ ಸೃಷ್ಟಿಯ ಕುರಿತು ಮೋದಿ ಸರ್ಕಾರ ಬಜೆಟ್ ಮೂಲಕ ಯಾವುದೇ ಪರಿಹಾರ ನೀಡದಿರುವುದು ಯುವ ಸಮುದಾಯದಲ್ಲಿ ಕೊಂಚ ನಿರಾಸೆ ಮೂಡಿಸಿರುವುದು ದಿಟ.

ಇನ್ನು ಶಿಕ್ಷಣ ಆರೋಗ್ಯ ಹಾಗೂ ಕೃಷಿ ಕ್ಷೇತ್ರಕ್ಕೆ ಈ ಬಾರಿಯ ಬಜೆಟ್ ಹಲವು ಆಕರ್ಷಕ ಕೊಡುಗೆಗಳನ್ನು ನೀಡಿರುವುದು ಸ್ಪಷ್ಟ. ಪ್ರಮುಖವಾಗಿ ಕೃಷಿ ಕ್ಷೇತ್ರಕ್ಕೆ 16  ಸೂತ್ರಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಈ 16 ಸೂತ್ರಗಳು ಇಂತಿವೆ...

ಅನ್ನದಾತನೊಂದಿಗೆ ಆರಂಭವಾದ ನಿರ್ಮಲಾ ಬಜೆಟ್: ರೈತನಿಗಾಗಿ 16 ಸೂತ್ರ!

1. ರೈತ ಮಹಿಳೆಯರಿಗಾಗಿ ಧಾನ್ಯ ಲಕ್ಷ್ಮಿ ಯೋಜನೆ ಜಾರಿ
2. ರೈತರಿಗಾಗಿ ಕೃಷಿ ರೈಲ್​​, ಕೃಷಿ ಉಡಾನ್​ ಯೋಜನೆ ಜಾರಿ
3. 100 ಬರ ಪೀಡಿತ ಜಿಲ್ಲೆಗಳಿಗೆ ವಿಶೇಷ ಒತ್ತು ನೀಡಲಾಗುವುದು
4. 20 ಲಕ್ಷ ರೈತರಿಗೆ ಸೋಲಾರ್ ಪಂಪ್ ವಿತರಣೆ
5. ಬರಡು ಭೂಮಿಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಗುರಿ
6. ನೀರಿನ ಕೊರತೆ ನೀಗಿಸಲು 100 ಜಿಲ್ಲೆಗಳಿಗೆ ವಿಶೇಷ ಯೋಜನೆ
7. 6.11 ಕೋಟಿ ರೈತರಿಗೆ ವಿಮಾ ಯೋಜನೆ ಜಾರಿಯಾಗಿದೆ
8. ನಬಾರ್ಡ್ ಗೆ 15 ಲಕ್ಷ ಕೋಟಿ ರೂಪಾಯಿ ಘೋಷಣೆ
9. ಶೂನ್ಯ ಬಂಡವಾಳ ಕೃಷಿ ಪದ್ಧತಿಗೆ ಜೈವಿಕ್ ಖೇತಿ ಯೋಜನೆ'
10.ಸಾಗರ ಮಿತ್ರ ಯೋಜನೆಡಿ 500 ಸಹಕಾರ ಸಂಘಗಳ ಸ್ಥಾಪನೆ
11. ಹೈನುಗಾರಿಕೆಗೂ ನರೇಗಾ ಯೋಜನೆ ವಿಸ್ತರಣೆ
12. 6.11 ಕೋಟಿ ರೈತರಿಗೆ ವಿಮಾ ಯೋಜನೆ
13. ಬ್ಯಾಂಕೇತರ ಸಂಸ್ಥೆಗಳಮೂಲಕ ರೈತರಿಗೆ 15 ಲಕ್ಷ ಕೋಟಿ ರೂ. ಸಾಲ
14. ರಸಗೊಬ್ಬರ ಬಳಕೆ ಹಾಗೂ ನಿರ್ವಹಣೆಗೆ ಹೊಸ ಸೂತ್ರ ಜಾರಿ
15. ಶೂನ್ಯ ಕೃಷಿ ಯೋಜನೆಗೆ 2020 ಬಜೆಟ್ ನಲ್ಲಿ ಪ್ರಾಧಾನ್ಯತೆ
16. ದೀನ್ ದಯಾಳ್ ಅಂತ್ಯೋದಯ ಯೋಜನೆ ವಿಸ್ತರಣೆ

ಅದರಂತೆ ಆರೋಗ್ಯ ಕ್ಷೇತ್ರಕ್ಕೆ ಒಟ್ಟು 69 ಸಾವಿರ ಕೋಟಿ ರೂ. ಅನುದಾನ ಘೋಷಿಸಿರುವ ನಿರ್ಮಲಾ ಸೀತಾರಾಮನ್, ಪ್ರಮುಖವಾಗಿ ಕ್ಷಯ ರೋಗ ನಿರ್ಮೂಲನೆಗೆ ಒತ್ತು ನೀಡಿದ್ದಾರೆ. ಸಾರಿಗೆ ಕ್ಷೇತ್ರಕ್ಕೆ ಒಟ್ಟು 1.7 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟುರುವುದು ಈ ಬಜೆಟ್‌ನ ವಿಶೇಷತೆ.

ಇನ್ಮುಂದೆ ಆನ್‌ಲೈನ್ ಡಿಗ್ರಿ ವ್ಯವಸ್ಥೆ: ವಿದ್ಯಾರ್ಥಿ ಸಮುದಾಯಕ್ಕೆ ಬಂಪರ್!

ಇನ್ನು ಡಿಗ್ರಿ ಹಂತದವಿದ್ಯಾರ್ಥಿಗಳಿಗೆ ಆನ್‌ಲೈನ್ ಪರೀಕ್ಷೆ, ಹೊಸ ವಿವಿಗಳ ಸ್ಥಾಪನೆಗೆ ಈ ಬಾರಿಯ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಹೊಸ ಯೋಜನೆಗಳ ಜಾರಿ ಕೂಡ ಆಕರ್ಷಕ ಎನಿಸಿವೆ.

LIC ಖಾಸಗೀಕರಣಕ್ಕೆ ಗ್ರೀನ್ ಸಿಗ್ನಲ್: ಏನಾಗಲಿದೆ ನಿಮ್ಮ ಇನ್ಸೂರೆನ್ಸ್ ಪಾಲಿಸಿ?

ಆದರೆ ಎಲ್‌ಐಸಿಯಲ್ಲಿ ಖಾಸಗಿ ಪಾಲುದಾರಿಕೆಗೆ ಅವಕಾಶ ಜನತೆಯ ನಿರಾಶೆಗೆ ಕಾರಣವಾದಂತಿದೆ. ಸರ್ಕಾರಿ ಸ್ವಾಮ್ಯದ ವಿಮೆ ಸಂಸ್ಥೆಯಲ್ಲಿ ಖಾಸಗಿ ಪಾಲುದಾರಿಕೆ ಭವಿಸ್ಯದಲ್ಲಿ ತೊಂದರೆಗಳನ್ನು ಹುಟ್ಟು ಹಾಕಬಹುದು ಎಂಬ ಆತಂಕ ಮನೆ ಮಾಡಿದೆ.

ಇದೇ ವೇಳೆ ಬ್ಯಾಂಕ್ ಠೇವಣಿಗಳ ವಿಮೆಯನ್ನು 1 ಲಕ್ಷದಿಂದ5 ಲಕ್ಷಕ್ಕೆ ಏರಿಸಿರುವುದು ಈ ಬಜೆಟ್‌ನ ಉತ್ತಮ ಅಂಶಗಳಲ್ಲಿ ಒಂದು. ಆಧಾರ್ ಕಾರ್ಡ್ ಮೂಲಕ ಶೀಘ್ರ ಪ್ಯಾನ್ ಪಡೆಯುವ ವಿನೂತನ ವ್ಯವಸ್ಥೆ ಕೂಡ ಗಮನ ಸೆಳೆದಿದೆ.

ಚೆನ್ನೈ-ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಶುರು: ಪ್ರಯಾಣ ಇನ್ನು ಸುಲಭ ಗುರು!

ಅದರಂತೆ ಬೆಂಗಳೂರು-ಚೆನ್ನೈ ಎಕ್ಸಪ್ರೆಸ್ ಹೈವೇ ಗೆ ಚಾಲನೆ ನೀಡಿರುವುದು ಕರ್ನಾಟಕದ ಪಾಲಿಗೆ ಸಿಹಿ ಸುದ್ದಿ. ಆದರೆ ಪೆಟ್ರೋಲ್, ಡೀಸೆಲ್ ಬೆಲೆ ಹಾಗೂ ಚಿನ್ನದ ಬೆಲೆಗಳ ನಿಯಂತ್ರಣ ಸಾಧ್ಯವಾಗದಿರುವುದು ನಿರಾಸೆ ಮೂಡಿಸಿರುವುದು ಸತ್ಯ.

ವಿಶೇಷವೆಂದರೆ ಮುಂದಿನ ವರ್ಷದ ಜಿಡಿಪಿ ಬೆಳವಣಿಗೆಯನ್ನು ಶೇ.10 ಎಂದು ನಿರ್ಮಲಾ ಸೀತಾರಾಮನ್ ಅಂದಾಜಿಸಿದ್ದು, ಬೆಳವಣಿಗೆಯನ್ನು ಹೇಗೆ ಸಾಧಿಸಲಾಗುವುದು ಎಂಬುದನ್ನು ತಿಳಿಸಿಲ್ಲ. ಶೇ.10 ರಷ್ಟು ಜಿಡಿಪಿ ಬೆಳವಣಿಗೆ ಅಸಾಧ್ಯದ ಮಾತು ಎಂದೇ ಪರಿಣಿತರು ವಿಶ್ಲೇಷಿಸಿದ್ದಾರೆ.

ಇನ್ನು ವಿವಿಧ ವಲಯಗಳಿಗೆ ಬಜೆಟ್ ಅನುದಾನದತ್ತ ಗಮನ ಹರಿಸುವುದಾದರೆ....

ರಕ್ಷಣಾ ಇಲಾಖೆ - 3,23,053  ಕೋಟಿ ರೂ.
ಕೃಷಿ ಇಲಾಖೆ - 1,54,775 ಕೋಟಿ ರೂ.
ಗೃಹ ಇಲಾಖೆ - 1,14,387 ಕೋಟಿ ರೂ.
ಶಿಕ್ಷಣ ಇಲಾಖೆ - 99,312 ಕೋಟಿ ರೂ.
ಇಂಧನ ಇಲಾಖೆ - 42,725 ಕೋಟಿ ರೂ 
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ - 27,227 ಕೋಟಿ ರೂ
G-20 ಶೃಂಗ ಸಮ್ಮೇಳನಕ್ಕೆ 100 ಕೋಟಿ ರೂ
ಲಡಾಕ್ ಅಭಿವೃದ್ಧಿಗೆ 5,958 ಕೋಟಿ ರೂ. 
ಜಮ್ಮು-ಕಾಶ್ಮೀರ ಅಭಿವೃದ್ಧಿಗೆ 30,757 ಕೋಟಿ ರೂ.
ಪ್ರವಾಸೋದ್ಯಮ ಕ್ಷೇತ್ರಕ್ಕೆ 2,500 ಕೋಟಿ ರೂ.
ಪರಿಶಿಷ್ಟ ಜಾತಿ ಅಭಿವೃದ್ಧಿಗೆ 85,000 ಕೋಟಿ ರೂಪಾಯಿ
ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ 53,700 ಕೋಟಿ ರೂಪಾಯಿ
ದಿವ್ಯಾಂಗರ ಅಭಿವೃದ್ಧಿಗಾಗಿ 59 ಸಾವಿರ ಕೋಟಿ ರೂಪಾಯಿ
ಸ್ವಚ್ಛಭಾರತ್ ಯೋಜನೆಗೆ 12,300 ಕೋಟಿ ರೂ.
ಜಲ ಜೀವನ್ ಮಿಷನ್ ಗಾಗಿ 3.6 ಲಕ್ಷ ಕೋಟಿ ರೂ.
ಜವಳಿ ಉದ್ಯಮಕ್ಕೆ 1,480 ಕೋಟಿ ರೂ.
ಕೈಗಾರಿಕಾಭಿವೃದ್ಧಿಗೆ 27,300 ಕೋಟಿ ರೂ.
ಮೂಲಸೌಕರ್ಯಕ್ಕೆ 100 ಲಕ್ಷ ಕೋಟಿ ರೂ.
ವಿದ್ಯುತ್ ಇಲಾಖೆಗೆ 22,000 ಕೋಟಿ ರೂ.

ಕೇಂದ್ರ ಬಜೆಟ್, ಭಾರತದ ಖರ್ಚು, ವೆಚ್ಛ, ಆದಾಯ ಹಾಗೂ ಸಾಲದ ಒಟ್ಟಾರೆ ಚಿತ್ರಣವನ್ನು ಸರಳೀಕರಣಗೊಳಿಸಿದರೆ...

ಭಾರತದ ಒಟ್ಟು ರಾಜಸ್ವ ಸಾಲ 85 ಲಕ್ಷ ಕೋಟಿ ರೂ. ಇದ್ದು, ದೇಶದ ಜನಸಂಖ್ಯೆ 135 ಕೋಟಿ ಗೂ ಅಧಿಕ. ಅಂದರೆ ಪ್ರತಿ ಭಾರತೀಯನ ಮೇಲೆ ಬರೋಬ್ಬರಿ 62,923 ರೂ. ಸಾಲ ಇದೆ. 

ಫಟಾಫಟ್ ಪ್ಯಾನ್ ಮತ್ತು ಆಧಾರ್: ಮೋದಿ ಸರ್ಕಾರದ ಕೊಡುಗೆ ಬಂಪರ್!

ಒಟ್ಟಿನಲ್ಲಿ ಹೇಳುವುದಾದರೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್, ಜನಪ್ರಿಯತೆಗೆ ಒತ್ತು ನೀಡದೇ ಜನಪರ ಯೋಜನೆಗಳ ಮೊರೆ ಹೋಗಿದ್ದು, ಸಮತೋಲನದ ಬಜೆಟ್ ಮಂಡಿಸುವಲ್ಲಿ ಮೋದಿ ಸರ್ಕಾರ ಯಶಸ್ವಿಯಾಗಿದೆ ಎಂದು ಹೇಳಬಹುದು.