ಕಾರ್ಯಕ್ರಮ ಕೇಳಿದ್ರೆ ಕೈ ಕಾಲು ಕಡಿಯುತ್ತೇನೆ ಎಂದು ಬಡ ಕಲಾವಿದನಿಗೆ ಅವಾಜ್

By Web Desk  |  First Published Oct 11, 2019, 5:32 PM IST

ಕೈ ಕಾಲು ಕಡಿಯುತ್ತೇನೆ ಎಂದಿದ್ದ ಅಧಿಕಾರಿಗೆ ನೋಟೀಸ್‌| ಕಾರ್ಯಕ್ರಮ ಕೇಳಿದ್ದ ಕಲಾವಿದನಿಗೆ ಜೀವ ಬೆದರಿಕೆ|ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಕೃತಿ ಮೆರೆದ ‘ಸಂಸ್ಕೃತಿ’|ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪಗೆ ನೋಟಿಸ್‌| ‘ಕನ್ನಡಪ್ರಭ’ ವರದಿ ಉಲ್ಲೇಖಿಸಿ ಕಾರಣ ಕೇಳಿದ ಇಲಾಖೆ ನಿರ್ದೇಶಕರು| ಮೂರು ದಿನಗಳ ಕಾಲಮಿತಿಯಲ್ಲಿ ವಿವರಣೆಗೆ ಸೂಚನೆ.


ಯಾದಗಿರಿ, (ಅ.11): ಸಾಂಸ್ಕೃತಿಕ ಕಾರ್ಯಕ್ರಮ ನೀಡುವಂತೆ ಕೋರಿದ್ದ ಬಡ ಕಲಾವಿದರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಕೈ ಕಾಲು ಕಡಿಯುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆನ್ನಲಾದ ಆರೋಪದಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯಾದಗಿರಿ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ಅವರಿಗೆ ಇಲಾಖೆಯ ನಿರ್ದೇಶಕರು ಕಾರಣ ಕೇಳಿ ನೋಟೀಸ್‌ ಜಾರಿ ಮಾಡಿದ್ದಾರೆ.

ಅಧಿಕಾರಿಗಳು ತಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆನ್ನಲಾದ ಬಗ್ಗೆ ಧ್ವನಿಮುದ್ರಿಕೆಯ ಸೀಡಿಯನ್ನು ಹಗಲು ವೇಷಗಾರ ಕಲಾವಿದ ಶಂಕರಶಾಸ್ತ್ರಿ ಅವರು ಯಾದಗಿರಿಯಲ್ಲಿ ಶನಿವಾರ ನಡೆದಿದ್ದ ಸಿಎಂ ಜನತಾ ದರ್ಶನದಲ್ಲಿ ನೀಡಿದ್ದರು. ಜಿಲ್ಲೆಯ ಹಿರಿಯ ಕಲಾವಿದರೊಬ್ಬರಿಗೆ ಆದ ಅಪಮಾನದ ಆರೋಪ ಹಾಗೂ ಈ ಬಗ್ಗೆ ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿ ಕಲಾವಿದರು ನೀಡಿದ ದೂರಿನ ಬಗ್ಗೆ ‘ಕನ್ನಡಪ್ರಭ’ದಲ್ಲಿ ಬುಧವಾರ (ಅ.9) ವರದಿ ಪ್ರಕಟವಾಗಿತ್ತು.

Tap to resize

Latest Videos

ರಾಜ್ಯದ ವಿವಿಧೆಡೆಯ ಕಲಾವಿದರು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ‘ಕನ್ನಡಪ್ರಭ’ದ ಈ ವರದಿ ಭಾರಿ ಸಂಚಲನ ಮೂಡಿಸಿತ್ತು. ಶಂಕರ ಶಾಸ್ತ್ರಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆನ್ನಲಾದ ಧ್ವನಿಮುದ್ರಿಕೆ ವಾಟ್ಸಾಪ್‌ಗಳಲ್ಲಿ ವೈರಲ್‌ ಆಗಿ, ಅಧಿಕಾರಿಗಳ ವರ್ತನೆ ವಿರುದ್ಧ ವ್ಯಾಪಕ ಚರ್ಚೆಗಳೂ ನಡೆದಿದ್ದವು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಜಾನಕಿಯವರು ಹಾಗೂ ಜಿಲ್ಲಾಧಿಕಾರಿ ಕೂರ್ಮಾರಾವ್‌ ಸೇರಿದಂತೆ ರಾಜ್ಯಮಟ್ಟದ ಅಧಿಕಾರಿಗಳಿಗೆ ‘ಕನ್ನಡಪ್ರಭ’ದ ವರದಿ ತಲುಪಿ, ಸಂಜೆಯೊಳಗೆ ಇಲಾಖೆಯ ನಿರ್ದೇಶಕರ ಕಚೇರಿಯಿಂದ ಕಾರಣ ಕೇಳಿ ನೋಟೀಸ್‌ ನೀಡಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

‘ಕನ್ನಡಪ್ರಭ’ದ ಬುಧವಾರದ ವರದಿಯನ್ನೇ ಉಲ್ಲೇಖಿಸಿ, ಕಲಾವಿದ ಶಂಕರ್‌ ಶಾಸ್ತ್ರಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಾಗೂ ಕಾರ್ಯಕ್ರಮ ನೀಡಲು ಹಣ ಪಡೆಯುತ್ತಿರುವ ಬಗ್ಗೆ ವಿವರಣೆ ಕೇಳಲಾಗಿತ್ತು. ಸರ್ಕಾರಿ ನೌಕರರಿಗೆ ತಕ್ಕುದಲ್ಲದ ವರ್ತನೆ ಇದಾಗಿದ್ದು, ಒಂದು ಜಿಲ್ಲೆಯನ್ನು ಪ್ರತಿನಿಧಿಸುವ ನೀವು ಇಲಾಖೆಯ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಕಲಾವಿದರಿಗೆ/ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದನ್ನು ಬಿಟ್ಟು ಕಲಾವಿದರ ಜೊತೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ಕಾರ್ಯಕ್ರಮ ನೀಡಲು ಅವರಿಂದ ಹಣ ಪಡೆದುಕೊಳ್ಳುತ್ತಿರುವ ಗಂಭೀರವಾದ ಆರೋಪವಿದೆ.

ನಿಮ್ಮ ವರ್ತನೆಯಿಂದ ಇಲಾಖೆಯಿಂದ ಇಲಾಖೆಯ ವರ್ಚಸ್ಸಿಗೆ ಧಕ್ಕೆಯುಂಟಾಗಿದೆ. ಇದು ಕರ್ನಾಟಕ ನಾಗರಿಕ ಸೇವೆ (ನಡತೆ) ನಿಯಮಗಳು 1966ರ ನಿಯಮ 3 ಹಾಗೂ 13ಕ್ಕೆ ವಿರುದ್ಧವಾಗಿದೆ. ಆದ್ದರಿಂದ ನಿಮ್ಮ ಮೇಲೆ ಏಕೆ ಶಿಸ್ತುಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಮೂರು ದಿನಗಳ ಕಾಲಮಿತಿಯಲ್ಲಿ ವಿವರಣೆ ನೀಡಲು ಸೂಚಿಸಿದೆ. ತಪ್ಪಿದಲ್ಲಿ ನಿಮ್ಮ ವಿವರಣೆಗಳು ಏನೂ ಇಲ್ಲವೆಂದು ಪರಿಭಾವಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಕಾರಣ ಕೇಳಿ ನೋಟೀಸಿನಲ್ಲಿ ತಿಳಿಸಲಾಗಿದೆ.

‘ಕನ್ನಡಪ್ರಭ’ದಲ್ಲಿ ಈ ಬಗ್ಗೆ ವಿವರಣೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿ, ಆರೋಪಗಳು ಸಾಬೀತಾದರೆ ಸೂಕ್ತ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡುತ್ತೇನೆ. ಬಡ ಕಲಾವಿದರಿಗೆ ಅನ್ಯಾಯವಾಗಲು ಬಿಡುವುದಿಲ್ಲ - ಪ್ರಭು ಚವ್ಹಾಣ್‌, ಜಿಲ್ಲಾ ಉಸ್ತುವಾರಿ ಸಚಿವರು, ಯಾದಗಿರಿ.

ಕಲಾವಿದರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆನ್ನಲಾದ ಆರೋಪ ಹೊತ್ತ ಅಧಿಕಾರಿಗಳ ವಿವರಣೆ ಪಡೆದು, ಕ್ರಮ ಜರುಗಿಸುತ್ತೇನೆ- ಕೂರ್ಮಾರಾವ್‌, ಜಿಲ್ಲಾಧಿಕಾರಿ, ಯಾದಗಿರಿ.

ಸರ್ಕಾರಿ ನೌಕರರಿಗೆ ತಕ್ಕುದಲ್ಲದ ವರ್ತನೆ ಇದಾಗಿದೆ, ನಿಮ್ಮ ವರ್ತನೆಯಿಂದ ಇಲಾಖೆಯಿಂದ ಇಲಾಖೆಯ ವರ್ಚಸ್ಸಿಗೆ ಧಕ್ಕೆಯುಂಟಾಗಿದೆ- ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

click me!