ಶಹಾಪುರದಲ್ಲಿ ಬಿತ್ತೋಕೆ ಬೀಜ, ರಸಗೊಬ್ಬರ ಸಿಗ್ತಿಲ್ಲ: ಆತಂಕದಲ್ಲಿ ರೈತಾಪಿ ವರ್ಗ

By Girish GoudarFirst Published Oct 16, 2019, 2:47 PM IST
Highlights

ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ| ಬಿತ್ತನೆ ಮಾಡಿದ್ದ ಬೆಳೆಗಳಿಗೆ ರೋಗಗಳು ತಗುಲಿರುವುದು ರೈತಾಪಿ ವರ್ಗಕ್ಕೆ ಆತಂಕ| ತಾಲೂಕಿನಲ್ಲಿ ಈಗಾಗಲೇ 1 ಲಕ್ಷ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, ತೊಗರಿ, ಭತ್ತ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳು ಬಿತ್ತನೆ| ಬಹಳಷ್ಟು ವಿವಿಧ ಬೆಳೆಗಳು ರೋಗಕ್ಕೆ ತುತ್ತಾಗಿ ನಿಂತು ರೈತನ ಬದುಕು ಅತಂತ್ರಗೊಳಿಸಿವೆ| ಸಾಲ ಮಾಡಿ ರೈತ ಬೀಜಗೊಬ್ಬರ ತಂದು ಬಿತ್ತನೆ ಮಾಡಿದ್ದಾನೆ| 

ಮಲ್ಲಯ್ಯ ಪೋಲಂಪಲ್ಲಿ

ಶಹಾಪುರ[ಅ.16]: ಬರ ಹಾಗೂ ನೆರೆ ಹಾವಳಿಯಿಂದ ತತ್ತರಿಸಿದ್ದ ರೈತರಿಗೆ ಈ ಬಾರಿ ಮಳೆ ಚೆನ್ನಾಗಿ ಸುರಿದು ಒಂದಷ್ಟು ಸಮಾಧಾನ ಮೂಡಿಸಬಹುದು ಅನ್ನೋ ಹೊತ್ತಿನಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಜೊತೆಗೆ, ಬಿತ್ತನೆ ಮಾಡಿದ್ದ ಬೆಳೆಗಳಿಗೆ ರೋಗಗಳು ತಗುಲಿರುವುದು ತಾಲೂಕಿನ ರೈತಾಪಿ ವರ್ಗಕ್ಕೆಆತಂಕ ಮೂಡಿಸಿದೆ.

ತಾಲೂಕಿನಲ್ಲಿ ಈಗಾಗಲೇ 1 ಲಕ್ಷ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, ತೊಗರಿ, ಭತ್ತ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳು ಬಿತ್ತನೆಯಾಗಿವೆ. ಬಹಳಷ್ಟು ವಿವಿಧ ಬೆಳೆಗಳು ರೋಗಕ್ಕೆ ತುತ್ತಾಗಿ ನಿಂತು ರೈತನ ಬದುಕು ಅತಂತ್ರಗೊಳಿಸಿವೆ. ಸಾಲ ಮಾಡಿ ರೈತ ಬೀಜಗೊಬ್ಬರ ತಂದು ಬಿತ್ತನೆ ಮಾಡಿದ್ದಾನೆ. ಒಂದಿಷ್ಟು ಭೂಮಿ ಶೇಂಗಾ ಬಿತ್ತನೆಗಾಗಿ ಬಿಟ್ಟಿದ್ದು ಮತ್ತು ರೋಗಪೀಡಿತ ಬೆಳೆಗಳನ್ನು ಕಿತ್ತು ಹಾಕಿ ಶೇಂಗಾ ಬಿತ್ತನೆ ಮಾಡಬೇಕು. ಅದಾದರೂ ನಮ್ಮ ಕೈಹಿಡಿಯಬಹುದೇ ಎಂಬ ಆಶಾಭಾವನೆಯಿಂದ ರೈತರು, ಕೃಷಿ ಇಲಾಖೆ ಕಡೆ ಮುಖ ಮಾಡಿದರೆ ಅಲ್ಲಿಯೂ ರೈತರಿಗೆ ನಿರಾಸೆಯಾಗಿದೆ ಕಾರಣ ಶೇಂಗಾ ಬೀಜದ ಕೊರತೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಧಿಕಾರಿಗಳನ್ನು ವಿಚಾರಿಸಿದರೆ, ನಾವು ಈಗಾಗಲೇ 10500 ಕ್ವಿಂಟಲ್ ಶೇಂಗಾ ಬೀಜಕ್ಕಾಗಿ ವರದಿ ಕಳುಹಿಸಿದ್ದೇವೆ. ಕಳೆದ ವರ್ಷದಲ್ಲಿ 18 ರಿಂದ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 5690 ಕ್ವಿಂಟಲ್‌ ಶೇಂಗಾ ಬೀಜ ಬಿತ್ತನೆಯಾಗಿತ್ತು. ಈ ಸಾಲಿನಲ್ಲಿ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡುವ ನಿರೀಕ್ಷೆಯಿದೆ, ಕಳೆದ ವಾರ ವಡಿಗೇರಿ ರೈತ ಸಂಪರ್ಕ ಕೇಂದ್ರಕ್ಕೆ 250 ಕ್ವಿಂಟಲ್ ಶೇಂಗಾಬೀಜ ಕಳುಹಿಸಿ ಕೊಡಲಾಗಿತ್ತು. ಇದು ಬಿಟ್ಟರೆ ಬೇರೆ ರೈತ ಸಂಪರ್ಕ ಕೇಂದ್ರದಲ್ಲಿ ಶೇಂಗಾ ಬೀಜದ ದಾಸ್ತಾನು ಇರುವುದಿಲ್ಲ.

ಈ ವಾರದಲ್ಲಿ ಶೇಂಗಾ ಬೀಜ ಬರುವ ನಿರೀಕ್ಷೆಯಿದೆ ಇದೆ ಎಂದು ತಿಳಿಸಿರುವ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಗೌತಮ, ನವೆಂಬರ್‌ಮತ್ತು ಡಿಸೆಂಬರ್ ತಿಂಗಳಲ್ಲಿ ಶೇಂಗಾ ಬಿತ್ತನೆಗೆ ಸಕಾಲವಾಗಿದೆ. ಆದರೆ, ರೈತರು ಈ ಸಲ ಶೇಂಗಾ ಬೀಜ ಬಿತ್ತನೆ ಬೇಗನೆ ಮಾಡುತ್ತಿದ್ದಾರೆ, ಕೊನೆ ಗಳಿಗೆಯಲ್ಲಿ ನೀರಿನ ಕೊರತೆ ಆಗಬಹುದು ಎಂಬ ಉದ್ದೇಶದಿಂದ ರೈತರು ಬೇಗನೆ ಬಿತ್ತನೆ ಕಾರ್ಯ ಶುರು ಹಚ್ಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಸರ್ಕಾರ ರೈತರ ಬಗ್ಗೆ ಒಣ ಅನುಕಂಪ ತೋರಿಸುವ ಬದಲು, ಸಕಾಲಕ್ಕೆ ರೈತರಿಗೆ ಬೀಜಗೊಬ್ಬರ ರಿಯಾಯಿತಿ ದರದಲ್ಲಿ ಕೊಟ್ಟರೆ ಸಾಕು ಎಂದು ರೈತರ ಅಭಿಪ್ರಾಯವಾಗಿದೆ. ಶೇಂಗಾ ಬೀಜ ಪ್ರತಿ ಕ್ವಿಂಟಲ್‌ಗೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ರೈತರಿಗೆ 8650 ರು. ನಿಗದಿ ಪಡಿಸಲಾಗಿದ್ದರೆ, ಇತರೆ ರೈತರಿಗೆ 9600 ರು. ನಿಗದಿ ಪಡಿಸಲಾಗಿದೆ. ಊರು ಕೊಳ್ಳೆ ಹೊಡೆದ ಮೇಲೆ ಅಗಸಿ ಬಾಗಿಲು ಹಾಕಿದರಂತೆ ಎನ್ನುವ ಹಾಗೆ ರೈತರು ಸತ್ತ ಮೇಲೆಸೌಲಭ್ಯ ಕೊಟ್ಟರೆ ಏತಕ್ಕೆ ಬಂತು, ರೈತರು ಸಂಕಷ್ಟಕ್ಕೆ ಸಿಲುಕುವ ಮುನ್ನವೇ ಸರ್ಕಾರ ಅವರಿಗೆಬೇಕಾದಂತಹ ವ್ಯವಸ್ಥೆ ಒದಗಿಸಬೇಕೆಂದು ರೈತಮುಖಂಡ ಸಿದ್ದಯ್ಯ ಸ್ವಾಮಿಯ ಅಭಿಪ್ರಾಯ.

ಹತ್ತಿ ಬೆಳೆ ರೋಗ ನಿರ್ವಹಣೆಗೆ ಸಲಹೆ 

ಜಿಲ್ಲೆಯಲ್ಲಿ 2019-20 ನೇಸಾಲಿನ ಮುಂಗಾರು ಹಂಗಾಮಿನಲ್ಲಿಸುಮಾರು 122973 ಹೆಕ್ಟೇರ್‌ಪ್ರದೇಶದಲ್ಲಿ ಹತ್ತಿ ಬೆಳೆಯಲಾಗುತ್ತಿದೆ. ಹತ್ತಿ ಬೆಳೆಯು ಹೂ ಬಿಡುವ ಹಾಗೂಕಾಯಿ ಮಾಗುವ ಹಂತದಲ್ಲಿದೆ. ಪ್ರಸಕ್ತವಾಗಿ ಸುರಿದ ಮಳೆಯಿಂದ ಮಣ್ಣಿನ ತೇವಾಂಶ ಹೆಚ್ಚಾದ ಕಾರಣ ಎಲೆಕೆಂಪಾಗುವಿಕೆ ರೋಗದ ಬಾಧೆ ಕಂಡುಬರುತ್ತಿದೆ. ಈ ಹಿನ್ನೆಲೆ ರೋಗದ ಲಕ್ಷಣ ಮತ್ತು ನಿರ್ವಹಣಾಕ್ರಮಗಳನ್ನು ಜಂಟಿ ಕೃಷಿ ನಿರ್ದೇಶಕ ಆರ್.ದೇವಿಕಾ ತಿಳಿಸಿದ್ದಾರೆ. 

ಹತ್ತಿ ಸಸಿಯ ತುದಿ ಭಾಗದಲ್ಲಿ ಅಗಲವಾಗಿಪ್ರತಿ ಬೆಳವಣೆಗೆ ಹೊಂದಿದ ಎಲೆಯಲ್ಲಿ ತಾಮ್ರದಬಣ್ಣ ಅಥವಾ ಕೆಂಪು ಬಣ್ಣ ಗೋಚರಿಸುವುದು. ಸಸಿಯ ಮೇಲ್ಭಾಗದಲ್ಲಿ ಒರಟಾದ, ಉಬ್ಬುತಗ್ಗುಗಳಿಂದ ಕೂಡಿದ ಎಲೆಗಳು ಅಂದರೆ ಎಲೆಗಳನರಗಳ ನಡುವಿನ ಭಾಗವು ಉಬ್ಬಿದಂತಿದ್ದು, ಎಲೆಗಳು ಬಿರುಸಾಗಿ, ಕಾಣುವವು. ಕಾಂಡವು ಕೆಂಪು ಬಣ್ಣಕ್ಕೆ ತಿರುಗುವುದು. ಬಾಧಿತ ಸಸಿಯಎಲೆ, ಕಾಂಡ ಭಾಗಗಳು ಕೆಂಪಾಗಿ ದಿಢೀರನೆಸೊರಗುವವು. ಇದರಿಂದ ಬೆಳವಣಿಗೆಕುಂಠಿತವಾಗುವುದು.

ನಿರ್ವಹಣಾ ಕ್ರಮಗಳು:

ಮಣ್ಣಿನ ಪರೀಕ್ಷೆಗನುಗುಣವಾಗಿ, ಲಘು ಪೋಷಕಾಂಶಗಳ ಕೊರತೆ ಇರುವ ಮಣ್ಣಿನಲ್ಲಿ ಬಿತ್ತನೆಗೆ ಮುಂಚೆ ಪ್ರತಿ ಹೆಕ್ಟೇರ್‌ಗೆ 25 ಕಿ.ಗ್ರಾಂ. ಮೆಗ್ನೇಶಿಯಂ ಸಲೇಟ್ ಜೊತೆಗೆ ತಲಾ 10 ಕಿ.ಗ್ರಾಂ.ಜಿಂಕ್ ಸಲೇಟ್ ಹಾಗೂ ಕಬ್ಬಿಣದ ಸಲೇಟ್‌ನ್ನು ಒದಗಿಸುವುದರಿಂದಈ ನ್ಯೂನತೆ ಕಡಿಮೆ ಮಾಡಬಹುದು. ಬಿತ್ತನೆಯಾದ 90 ಹಾಗೂ 110 ದಿನಗಳನಂತರ 10 ಗ್ರಾಂ. ಮೆಗ್ನೀಶಿಯಂ ಸಲೇಟನ್ನು 1 ಲೀಟರ್ ನೀರಿಗೆ ಮಿಶ್ರಣ ಮಾಡಿ ಎಲೆಗಳ ಮೇಲೆ ಸಿಂಪಡಿಸುವುದು. 

ಹತ್ತಿ ಬಿತ್ತನೆಯಾದ 60  ದಿನಗಳ ನಂತರ ಹಾಗೂ ಚಳಿಗಾಲ ಪ್ರಾರಂಭಕ್ಕೆ ಮುಂಚಿತವಾಗಿ ಪ್ರತಿ 15 ದಿನಗಳಿಗೊಮ್ಮೆಶೇ.2 ರ ಯೂರಿಯಾ ಅಥವಾ ಡಿಎಪಿ ಜೊತೆಗೆ ಶೇ.2ರ ಪೊಟ್ಯಾಶಿಯಂ ನೈಟ್ರೇಟ್ ಅಥವಾ ಶೇ. 1ರ ಮ್ಯುರೆಟ್ ಆಫ್ ಪೊಟ್ಯಾಶ್‌ಇವುಗಳನ್ನು 2 ರಿಂದ 3 ಸಾರಿ ಎಲೆಗಳ ಮೇಲೆ ಚೆನ್ನಾಗಿ ಸಿಂಪರಣೆ ಮಾಡಬೇಕು. ಈ ಸಿಂಪರಣೆಗೆ ಯಾವುದೇ ಕೀಟನಾಶಕದೊಂದಿಗೆ ಹೊಂದಾಣಿಕೆ ಮಿಶ್ರಣ ಮಾಡಬಹುದು. ಯಾವುದೇ ದುಷ್ಪರಿಣಾಮವಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ. 

ಈ ಬಗ್ಗೆ ಮಾತನಾಡಿದ ರೈತ ಮಲ್ಲಯ್ಯ ಬಬಲಾದಿ ಅವರು, ಒಕ್ಕಲುತನ ಮಾಡೋವ್ನ ಮಾರಿ ನೋಡಬಾರದರಿ. ಮಳೆ ಬೆಳೆ ಸರಿಯಾಗಿಲ್ಲ ಅಂದರೆ ನಮ್ಮ ಬದುಕು ಬಾಳ ಅತಂತ್ರ ಆಗ್ತದ. ಹೆಚ್ಚಿನ ಬಡ್ಡಿಗೆ ಬೀಜ ಗೊಬ್ಬರ ತಂದು ಬೆಳಿ ಬರ್ಲಿಲ್ಲ ಅಂದ್ರೆ ನಮಗ ಸಾವೇ ಗತಿ ಎಂದು ಹೇಳಿದ್ದಾರೆ. 

ಹೊಲದಾಗ ಬೆಳಿ ಸರಿಯಾಗಿಲ್ಲ, ಮನೆಗೆ ಬಂದ್ರೆ ಸಾಲ ಕೊಟ್ಟುವರು ಹಣ ಕೇಳುತ್ತಾರೆ. ನಾವು ಸತ್ತ ಮೇಲೆ ಸರ್ಕಾರ ಪರಿಹಾರ ಕೊಡುವ ಬದಲು,ಸಾಯುವ ಮುಂಚೆಯೇ ಸೌಲಭ್ಯ ಕೊಟ್ಟರೆ ನಮ್ಮ ಬದುಕು ಹಸನಾಗುತ್ತದೆ ಎಂದು ರೈತ ಸಾಬಣ್ಣ ಹುಡೇದ್ ಅವರು ತಿಳಿಸಿದ್ದಾರೆ.

ನಮ್ಮ ರೈತರ ಬದುಕುದಿನೇ ದಿನೆ ಸಾವಿನ ಕಡೆ ಹೆಜ್ಜೆ ಹಾಕುತ್ತಿವೆ. ರೈತರ ಹೆಸರಿನ ಮೇಲೆ ಅಧಿಕಾರ ನಡೆಸುವ ಸರ್ಕಾರಗಳು ರೈತರ ವಿಚಾರದಲ್ಲಿ ನಾಟಕವಾಡುತ್ತಿವೆ ಎಂದು ರೈತ ಶಿವಪ್ಪ ಅವರು ಹೇಳಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿದ ಸಹಾಯಕ ಕೃಷಿ ನಿರ್ದೇಶಕರಾದ ಗೌತಮ್ ಅವರು, ಈ ವಾರದಲ್ಲಿ ಶೇಂಗಾ ಬೀಜಬರುವ ನಿರೀಕ್ಷೆಯಿದೆ ಇದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಶೇಂಗಾ ಬಿತ್ತನೆಗೆ ಸಕಾಲವಾಗಿದೆ. ಆದರೆ,ರೈತರು ಈ ಸಲ ಶೇಂಗಾ ಬೀಜ ಬಿತ್ತನೆ ಬೇಗನೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. 

click me!