ಕಾಮಗಾರಿ ಪೂರ್ಣಗೊಳಿಸದೆ ಹಣ ಗುಳುಂ| ಸುರಪುರದಲ್ಲಿ ಕರ್ನಾಟಕ ಅಭಿವೃದ್ಧಿ ಕಾಯ್ರಕ್ರಮಗಳ ಪ್ರಗತಿ ಪರಿಶೀಲನಾ ಸಭೆ | ಸುರಪುರದಲ್ಲಿ ನಿರ್ಮಿತಿ ಕೇಂದ್ರದ ಅವ್ಯವಹಾರ ಕಿರಿಯ ಎಂಜಿನೀಯರಿಗೆ ಶಾಸಕ ರಾಜೂಗೌಡ ತೀವ್ರ ತರಾಟೆ | ಒಂದೊಂದು ಕಾಮಗಾರಿಯನ್ನು 4 ವರ್ಷಗಳ ಕಾಲ ಮಾಡುತ್ತಾರೆ|
ಸುರಪುರ[ನ.9]: ಕಾಮಗಾರಿ ಪೂರ್ಣಗೊಳಿಸದೆ ಲಕ್ಷಾಂತರ ರು. ಬಿಲ್ ಪಡೆಯಲಾಗಿದೆ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿ ವಿರುದ್ಧ ಶಾಸಕ ನರಸಿಂಹ ನಾಯಕ್ (ರಾಜೂಗೌಡ) ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆದಿದೆ.
ನಿರ್ಮಿತಿ ಕೇಂದ್ರಕ್ಕೆ ಒಪ್ಪಿಸಿದ ಕಾಮಗಾರಿಗಳು ಸಂಪೂರ್ಣವಾಗದೆ, ಬಿಲ್‌ಗಳನ್ನು ಎತ್ತಿ ಲೂಟಿ ಹೊಡೆಯಲಾಗಿದೆ. ಶೀಘ್ರವೇ ಬಂದೀಖಾನೆ ಸೇರುವೆ ಎಂದು ಶಾಸಕ ನರಸಿಂಹನಾಯಕ (ರಾಜೂಗೌಡ) ಅವರು ನಿರ್ಮಿತಿ ಕೇಂದ್ರ ಕಿರಿಯ ಅಭಿಯಂತರ (ಜೆಇ) ಅವರನ್ನು ತರಾಟೆಗೆ ತೆಗೆದುಕೊಂಡರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇಲ್ಲಿನ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನಿರ್ಮಿತಿ ಕೇಂದ್ರದವರು ಸರ್ಕಾರದ ಅನುದಾನವನ್ನು ಲೂಟಿ ಹೊಡೆಯುವುದೇ ಕಾಯಕವಾಗಿದೆ. ಒಂದೊಂದು ಕಾಮಗಾರಿಯನ್ನು 4 ವರ್ಷಗಳ ಕಾಲ ಮಾಡುತ್ತಾರೆ. ಆದರೆ, ಅರ್ಧ ಕಾಮಗಾರಿ ಮಾಡಿ ಹಲವು ಕಡೆ ಬೋಗಸ್ ಬಿಲ್‌ಗಳನ್ನು ಎತ್ತಿದ್ದೀರಾ, ಲೂಟಿ ಹೊಡಿಯೋದೇ ನಿಮ್ಮ ಕಾಯಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕು ಕ್ರೀಡಾಂಗಣ ಕಾಮಗಾರಿ ಆರಂಭದಲ್ಲಿ ಹೇಗಿತ್ತೋ, ಇವತ್ತಿಗೂ ಹಾಗೆಯೇ ಇದೆ. ಕ್ರೀಡಾಂಗಣದಲ್ಲಿ 35 ಲಕ್ಷ ರು.ಗಳ ಅನುದಾನ ಬಿಡುಗಡೆಯಾಗಿದೆ ಎಂದು ತೋರಿಸಿದ್ದೀರಿ, ಆದರೆ ನಿಜವಾಗಿಯೂ 85 ಲಕ್ಷ ರು.ಗಳ ಬಿಡುಗಡೆಯಾಗಿದೆ. ಅನುದಾನ ಎಲ್ಲಿ ಹೋಯಿತು. ಈ ಬಗ್ಗೆ ಶಾಸಕರು ನಿರ್ಮಿತಿ ಕೇಂದ್ರ ಸಹಾಯಕ ನಿರ್ದೇಶಕರನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಅಧಿಕಾರಿಗಳ ಬೇಜವಾಬ್ದಾರಿ ಕೆಲಸಕ್ಕೆ ಬೇಸರ ವ್ಯಕ್ತಪಡಿಸಿದರು.
ತಾಲೂಕಿನಲ್ಲಿರುವ ಸರ್ಕಾರಿ ನೌಕರರು ಪ್ರಾಮಾಣಿಕತೆ ಹಾಗೂ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು. ಇದು ಸಾಧ್ಯವಾಗದಿದ್ದರೆ ನಿಮ್ಮ ದಾರಿ ನೋಡಿಕೊಳ್ಳಬಹುದು. ಸಾರ್ವಜನಿಕರ ಕೆಲಸ ಸರಿಯಾಗಿ ಮಾಡಿದ ಅಧಿಕಾರಿಗಳು ನಾವು ಕ್ರಮ ಕೈಗೊಳ್ಳುವ ಮುನ್ನವೇ ಬೇರೆಡೆ ವರ್ಗಾವಣೆ ಮಾಡಿಕೊಂಡು ಹೋಗಬಹುದು ಎಂದು ಖಡಕ್ ಎಚ್ಚರಿಕೆ ಕೊಟ್ಟರು.
ಪಂಚಾಯತ್ ರಾಜ್ ಇಲಾಖೆಯಲ್ಲಿನ ಕಾಮಗಾರಿಗಳು ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ. ಡಿಸೆಂಬರ್ ಕೊನೆಯೊಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಿ ಜನರ ಸೇವೆಗೆ ಒದಗಿಸಬೇಕು ಎಂದು ತಾಕೀತು ಮಾಡಿದರು. ಭೂಸೇನಾದಲ್ಲಿ ಬಾಕಿ ಇರುವ ಎಲ್ಲ ಕಾಮಗಾರಿಗಳು ಆರಂಭವಾಗಬೇಕು. ರಸ್ತೆ, ಚರಂಡಿ, ಕಟ್ಟಡ ನಿರ್ಮಾಣ ಗುಣಮಟ್ಟದ್ದಾಗಿರಬೇಕು. ತಾಲೂಕಿನ ಸಮಗ್ರ ಅಭಿವೃದ್ಧಿಗೆ ನನ್ನ ಮೊದಲಾದ್ಯತೆಯಾಗಿದೆ. ಇದಕ್ಕೆ ಎಲ್ಲ ಅಧಿಕಾರಿಗಳು ಸಹಕಾರ ನಿಡಬೇಕು ಎಂದರು.
ತಾಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಬೇಸರ ತರಿಸಿದೆ. ಶಿಕ್ಷಕರು ೮ನೇ ತರಗತಿಯಿಂದಲೇ ವಿದ್ಯಾರ್ಥಿಗಳನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಜ್ಜುಗೊಳಿಸಬೇಕು. ಪ್ರಸಕ್ತ ಬಾರಿ ಫಲಿತಾಂಶ ಉತ್ತಮವಾಗಿರಬೇಕು. ತಾಲೂಕಿನ ಪ್ರತಿ ಸಿಆರ್‌ಸಿಯಲ್ಲಿ ಎಷ್ಟು ಶಿಕ್ಷಕರ ಕೊರತೆಯಿದೆ, ಕಟ್ಟಡಗಳು ಬೇಕು, ಎಸ್‌ಡಿಎಂಸಿ ರಚನೆ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳ ಅವಶ್ಯಕತೆಗಳ ಬಗ್ಗೆ ಪಟ್ಟಿ ಮಾಡಿಕೊಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನ ಓಲೇಕಾರ್ ಅವರಿಗೆ ಸೂಚಿಸಿದರು. ಪಿಡಬ್ಲ್ಯುಡಿ ಅಧಿಕಾರಿ, ಜಿಪಂ ಅಧಿಕಾರಿ, ಪಶು ಇಲಾಖೆಯ ಸಹಾಯಕ ನಿರ್ದೇಶಕ, ಕೆಲ ಇಲಾಖೆಗಳ ಕಿರಿಯ ಎಂಜಿನೀಯರ್‌ಗಳು ಸಭೆಗೆ ಗೈರಾಗಿದ್ದಕ್ಕೆ ಇದಕ್ಕೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಅಂಗನವಾಡಿ ಶಿಕ್ಷಕರ ಭರ್ತಿ, ಅಂಗನವಾಡಿ ಶೌಚಾಲಯ ನಿರ್ಮಿಸಬೇಕು. ಗುಣಮಟ್ಟದ ಶೌಚಾಲಯಗಳನ್ನು ನಿರ್ಮಿಸಬೇಕು. ಸಿದ್ಧ ಶೌಚಾಲಯಗಳನ್ನು ತಂದು ಇಡಬೇಡಿ. ಒಂದು ಶೌಚಾಲಯಕ್ಕೆ 45 ಸಾವಿರ ಅನುದಾನ ಇರುವುದರಿಂದ ಉತ್ತಮವಾಗಿ ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ಪಂಚಾಯತ್ ರಾಜ್ ಎಂಜಿನೀಯರ್ ಅವರಿಗೆ ಸೂಚಿಸಿದರು. ಹೊಸ ಅಂಗನವಾಡಿ ಕಟ್ಟಡಗಳ ಪ್ರಸ್ತಾವನೆ ಸಲ್ಲಿಸುವಂತೆ ಸಿಡಿಪಿಒ ಲಾಲಸಾಬ್ ಪೀರಾಪುರಗೆ ಶಾಸಕರು ತಿಳಿಸಿದರು.
ಆಹಾರ ಪೂರೈಕೆ ಮತ್ತು ಬಿಸಿಯೂಟದಲ್ಲಿ ವ್ಯತ್ಯಾಸವಾಗುತ್ತದೆ ಎಂಬ ಆರೋಪಗಳು ಕೇಳಿ ಬಂದಿವೆ. ಉತ್ತಮ ಆಹಾರ ವಿತರಿಸಬೇಕು ಎಂದು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಮೌನೇಶ ಕುಂಬಾರ್‌ಗೆ ಸೂಚಿಸಿದರು. ತಾಲೂಕಿನ ವೈದ್ಯರ ಕೊರತೆ ಸೇರಿದಂತೆ ಆರೋಗ್ಯ ಇಲಾಖೆಯಲ್ಲಿರುವ ಸಮಸ್ಯೆಗಳ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪ ನಾಯಕ ಅವರು ಸಭೆಗೆ ಮಾಹಿತಿ ನೀಡಿದರು.
ತೋಟಗಾರಿಕೆ, ರೇಷ್ಮೆ, ಕೈಗಾರಿಕೆ, ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಬಿಸಿಎಂ, ಕೃಷಿ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗಳ ಪ್ರಗತಿ ತಿಳಿಸಿದರು. ತಾಪಂ ಅಧ್ಯಕ್ಷೆ ಶಾರದಾ ಬೇವಿನಾಳ, ಉಪಾಧ್ಯಕ್ಷೆ ಮಂಜುಳಾ, ತಹಸೀಲ್ದಾರ್ ಲಿಂಗಣ್ಣ ಬಿರಾದಾರ್, ತಾಪಂ ಕಾರ್ಯನಿರ್ವಹಣಾಕಾರಿ ಅಮರೇಶ ಇತರರು ಇದ್ದರು.