ಶಹಾಪುರದಲ್ಲಿ ಬಲಿಗಾಗಿ ಕಾಯುತ್ತಿರುವ ಟ್ರಾನ್ಸ್‌ಫಾರ್ಮರ್‌ಗಳು!

By Web DeskFirst Published Nov 8, 2019, 11:45 AM IST
Highlights

ರಾಜ್ಯ ಹೆದ್ದಾರಿಯಲ್ಲಿ ಜೆಸ್ಕಾಂ ಯಮದೂತರು ತಂತಿಬೇಲಿ ಸುರಕ್ಷತಾ ವ್ಯವಸ್ಥೆಯಿಲ್ಲದ ಟ್ರಾನ್ಸ್‌ಫಾರ್ಮರ್‌ಗಳು | ಬೀದರ್-ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಬಲಿ ಪಡೆಯಲು ಕಾದಿವೆ ಟ್ರಾನ್ಸ್‌ಫಾರ್ಮರ್‌ಗಳು | ಅಮಾಯಕರ ಸಾವಿನ ನಂತರವೂ ಎಚ್ಚೆತ್ತುಕೊಳ್ಳದ ಜೆಸ್ಕಾಂ|

ಮಲ್ಲಯ್ಯ ಪೋಲಂಪಲ್ಲಿ 

ಶಹಾಪುರ[ನ.8]: ಅರೇ ಇದೇನಪ್ಪಾ! ರಾಜ್ಯ ಹೆದ್ದಾರಿ ಮೇಲೆ ಯಮದೂತರು ನಿಂತಿದ್ದಾರೆ ಎಂದು ಕೊಂಡಿದ್ದೀರಾ? ಶಹಾಪೂರ ನಗರದ ಬೀದರ್- ಬೆಂಗಳೂರು ರಾಜ್ಯ ಹೆದ್ದಾರಿ ಮೇಲೆ ವಿದ್ಯುತ್ ಟ್ರಾನ್ಸ್‌ ಪಾರ್ಮರ್‌ಗಳು ಮುಳ್ಳು ಬೇಲಿ ಇಲ್ಲದೆ ಹತ್ತಿರ ಹೋದವರನ್ನು ಬಲಿ ತೆಗೆದುಕೊಳ್ಳಲು ಸಜ್ಜಾಗಿ ನಿಂತಂತಿವೆ. ಈಗಾಗಲೇ ಮಹಿಳೆಯೊಬ್ಬಳು ಸೇರಿದಂತೆ ಜಾನುವಾರುಗಳು ಸಾವನ್ನಪ್ಪಿವೆ. ಆದರೂ ಜೆಸ್ಕಾಂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳಲೇ ಇಲ್ಲ. 

ಶಹಾಪುರ ಉಪ ವಿಭಾಗದ ಗ್ರಾಮೀಣ ಪ್ರದೇಶದಲ್ಲಿ 3683 ಟ್ರಾನ್ಸಫಾರ್ಮರ್‌ಗಳು ಮತ್ತು ನಗರದಲ್ಲಿ 250 ಇವೆ. ಎಲ್ಲೋ ಬೆರಳೆಣಿಕೆಯಷ್ಟು ಟ್ರಾನ್ಸಪಾರ್ಮರ್‌ಗಳಿಗೆ ಮಾತ್ರ ಮುಳ್ಳು ಬೇಲಿ ಹಾಕಲಾಗಿದೆ. ಜನರನ್ನು ಬಲಿ ತೆಗೆದುಕೊಳ್ಳಲು ಸಜ್ಜಾಗಿ ನಿಂತಿರುವ ಈ ವಿದ್ಯುತ್ ಟ್ರಾನ್ಸಪಾರ್ಮರ್ ಗಳು ಮಾತ್ರ ಹಾಗೇ ನಿಂತಿವೆ. ನಗರದ ಸರಕಾರಿ ಬಾಲಕರ ಪ್ರೌಢ ಶಾಲೆ ಮುಂದೆ ಇರುವ ಈ ವಿದ್ಯುತ್ ಟ್ರಾನ್ಸಫಾರ್ಮರ್ ಕಂಬಕ್ಕೆ ವ್ಯಾಪಾರಿಗಳು ಬಟ್ಟೆ ನೇತು ಹಾಕಿ ವ್ಯಾಪಾರ ಮಾಡುತ್ತಿದ್ದಾರೆ. ಇಲ್ಲಿ ಅಪಾಯವಾದರೆ ಯಾರು ಹೊಣೆ ಎಂಬುದು ಜೆಸ್ಕಾಂ ಅರಿತುಕೊಳ್ಳಬೇಕಾಗಿದೆ. ಈ ಅಪಾಯದ ಬಗ್ಗೆ ಅಧಿಕಾರಿಗಳಿಗೆ ಜನ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿರುವುದಿಲ್ಲ. ಅಪಾಯವಾದಾಗ ಮಾತ್ರ ಅಧಿಕಾರಿಗಳು ಇತ್ತ ಕಡೆ ತಿರುಗಿ ನೋಡಿ, ಬಲಿಯಾದ ಜೀವಕ್ಕೆ ಅಲ್ಪಸ್ವಲ್ಪ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಾರೆ. ಹಾಗಿದ್ದರೆ ಬಲಿಯಾದ ಜೀವಕ್ಕೆ ಬೆಲೆ ಇಲ್ಲವೇ ಎಂದು ಅಧಿಕಾರಿಗಳ ವಿರುದ್ಧ ರೈತ ಮುಖಂಡ ಸಿದ್ದ ಹಿರೇಮಠ್ ಅವರು ಕಿಡಿಕಾರಿದ್ದಾರೆ . ನಿಗಮದ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಸಾವನ್ನು ಸ್ವಾಗತಿಸಲು ಕಾದು ನಿಂತಿರುವ ಈ ವಿದ್ಯುತ್ ಟ್ರಾನ್ಸಪಾರ್ಮರ್‌ಗಳಿಗೆ ಮುಳ್ಳು ಬೇಲಿ ಹಾಕಿ ಜನ ಜಾನುವಾರುಗಳನ್ನು ಕಾಪಾಡಬೇಕಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಜ್ಯ ಹೆದ್ದಾರಿ ಮೇಲೆ ಇರುವ ಟ್ರಾನ್ಸ್‌ಫಾರ್ಮರ್ ಗಳಿಗೆ ಮುಳ್ಳು ಬೇಲಿ ಹಾಕಲು ಆ ಏರಿಯಾದ ಸೆಕ್ಷನ್ ಅಧಿಕಾರಿಗಳ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುತ್ತೇನೆ ಎಂದು ಶಹಾಪುರ ಜೆಸ್ಕಾಂ ಉಪ ವಿಭಾಗದ ಎಇಇ  ಶಾಂತಪ್ಪ ಪೂಜಾರಿ ಅವರು ಹೇಳಿದ್ದಾರೆ.

ಸಾವನ್ನು ಕೈಮಾಡಿ ಕರೆಯುತ್ತಿರುವ ಈ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳ ಸುತ್ತಲೂ ಮುಳ್ಳು ಬೇಲಿ ಹಾಕಲು ಶಹಾಪುರ ಜೆಸ್ಕಾಂ ಅಧಿಕಾರಿಗಳು ವಿಫಲರಾಗಿದ್ದಾರೆ. ಈಗಾಗಲೇ ಇವುಗಳಿಗೆ ಜನ ಜಾನುವಾರುಗಳು ಬಲಿಯಾಗಿದ್ದರೂ ಕೂಡಾ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸದಿರುವುದು ದುರದೃಷ್ಟಕರ ಎಂದು ರೈತ ಮುಖಂಡ ಸಿದ್ಧಯ್ಯ ಹಿರೇಮಠ ಅವರು ತಿಳಿಸಿದ್ದಾರೆ. 

ಶಹಾಪುರ ಜೆಸ್ಕಾಂ ಉಪ ವಿಭಾಗದ ಅಧಿಕಾರಿಗಳ ಜೊತೆ ಮಾತನಾಡಿ ಈ ಸಮಸ್ಯೆ ಕೂಡಲೇ ಬಗೆಹರಿಸುತ್ತೇನೆ ಎಂದು ಯಾದಗಿರಿ ಜೆಸ್ಕಾಂ ವಿಭಾಗದ ಎಕ್ಸಿಕ್ಯೂಟಿವ್ ಎಂಜಿನೀಯರ್ ರಾಘವೇಂದ್ರ ಡಿ ಅವರು ಹೇಳಿದ್ದಾರೆ.  

ಯಾವುದೇ ಅಪಾಯ ಆಗುವುದಕ್ಕಿಂತ ಮೊದಲು, ಅಪಾಯದ ಸೂಚನೆ ನೀಡುತ್ತಿರುವ ಈ ವಿದ್ಯುತ್ ಟ್ರಾಫಾರ್ಮರ್‌ಗಳ ಕಂಬಗಳಿಗೆ ಮುಳ್ಳು ಬೇಲಿ ಹಾಕಬೇಕು ಎಂದು  ಶಹಾಪುರ ನಗರ ನಿವಾಸಿ ಹನುಮಂತ ದೊರಿ ಅವರು ತಿಳಿಸಿದ್ದಾರೆ. 

ದಿನಾಲೂ ಇದೇ ರಸ್ತೆಯ ಮೇಲೆ ಓಡಾಡುತ್ತಿರುವ ಜೆಸ್ಕಾಂ ಅಧಿಕಾರಿಗಳ ಕಣ್ಣಿಗೆ ಈ ವಿದ್ಯುತ್ ಟಿಸಿಗಳು ಕಂಡು ಬಂದಿಲ್ಲವೇ. ಬಂದಿದ್ದರೂ ಅಧಿಕಾರಿಗಳು ಏಕೆ ನಿರ್ಲಕ್ಷ್ಯ ವಹಿಸಿದ್ದಾರೆಂದು ತಿಳಿಯದಾಗಿದೆ ಎಂದು ಶಹಾಪುರ ನಗರ ನಿವಾಸಿ ಬಸವರಾಜ್ ಡೆಂಗೆ ಹೇಳಿದ್ದಾರೆ.
 

click me!