ಜಿಲ್ಲಾಡಳಿತದ ಕಿವಿ ಮುಟ್ಟಿದ ಅನ್ನದಾತನ ಆರ್ತನಾದ| ಕನ್ನಡ ಪ್ರಭ ಸರಣಿ ಲೇಖನಕ್ಕೆ ಯಾದಗಿರಿ ಜಿಲ್ಲಾಡಳಿತ ಸ್ಪಂದನೆ| ಆತ್ಮಹತ್ಯೆ ಪ್ರಕರಣಗಳ ಮರುಪರಿಶೀಲನೆ ಡಿಸಿ ಆದೇಶ| ರೈತ ಕುಟುಂಬಗಳ ಪರ ನಿಂತ ಜನರಿಗೆ ದೊರೆತ ಜಯ|
ಯಾದಗಿರಿ(ಡಿ.03): ಯಾದಗಿರಿ ನಗರದ ಸಮಸ್ಯೆಗಳನನ್ನು ಸರಣಿ ವರದಿಗಳ ಮೂಲಕ ಪ್ರಕಟಿಸುತ್ತಾ ಬಂದಿದ್ದ ಕನ್ನಡ ಪ್ರಭ ಪತ್ರಿಕೆ, ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಸಂಶೋಧನಾತ್ಮಕ ವರದಿ ಪ್ರಕಟಿಸಿದೆ. ಈ ಬಾರಿ ಸರಣಿ ವರದಿಗೆ ಜಿಲ್ಲಾಡಳಿತ ಸ್ಪಂದಿಸಿದ್ದು, ಸರಣಿ ಲೇಖನಕ್ಕೆ ಮತ್ತೊಮ್ಮೆ ಜಯ ಸಿಕ್ಕಂತಾಗಿದೆ.
ಹೌದು, ಯಾದಗಿರಿ ಜಿಲ್ಲೆಯಲ್ಲಿ 2003 ರಿಂದ ಈವರೆಗೆ ಸುಮಾರು 250 ರೈತರು ಸಾಲಬಾಧೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪೈಕಿ 50 ಜನ ರೈತರ ಆತ್ಮಹತ್ಯೆ ಅರ್ಜಿಗಳು ತಿರಸ್ಕೃತಗೊಂಡಿದ್ದವು.
ಅರ್ಜಿದಾರರ ಹೆಸರಲ್ಲಿ ಸಾಲದ ದಾಖಲೆಗಳಿಲ್ಲ ಅನ್ನೋ ಕಾರಣ ನೀಡಿ, ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು. ತಿರಸ್ಕೃತಗೊಂಡ ಅರ್ಜಿಗಳ ಪಟ್ಟಿ ಪಡೆದು ಕನ್ನಡ ಪ್ರಭ ಆ ಎಲ್ಲ ಕುಟುಂಬಗಳ ಸದ್ಯದ ಪರಿಸ್ಥಿತಿಯ ಬಗ್ಗೆ ಅಧ್ಯಯನ ಮಾಡಿತ್ತು.
ಅಲ್ಲದೇ ಸ್ಥಳಕ್ಕೆ ಭೇಟಿ ನೀಡಿ ವರದಿಮಾಡಲಾಗಿತ್ತು. ನಿಯಮಾವಳಿಗಳಲ್ಲಿನ ಲೋಪದೋಷಗಳು ರೈತ ಕುಟುಂಬಗಳಿಗೆ ಅದ್ಹೇಗೆ ಮಾರಕವಾಗಿದೆ ಅನ್ನೋದನ್ನ ಸರಣಿ ಲೇಖನದಲ್ಲಿ ವಿವರಿಸಲಾಗಿತ್ತು.
ಸರಣಿ ಲೇಖನದ ಪ್ರತಿಗಳು ವಾಟ್ಸಾಪ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಜನಾಭಿಪ್ರಾಯ ರೂಪಿಸುವಲ್ಲಿ ಯಶಸ್ವಿಯಾಯ್ತು. ವರದಿಗಳನ್ನ ಸೂಕ್ಷ್ಮವಾಗಿ ಅವಲೋಕಿಸಿದ್ದ ಪರಿಷತ್ ಸದಸ್ಯ ಅರವಿಂದ ಅರಳಿ ವಿಷಯವನ್ನು ಪರಿಷತ್’ನಲ್ಲಿ ಪ್ರಸ್ತಾಪಿಸಿದ್ದರು.
ಆತ್ಮಹತ್ಯೆ ಪ್ರಕರಣಗಳ ಮರುಪರಿಶೀಲನೆ ಡಿಸಿ ಆದೇಶ:
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಸೇರಿದಂತೆ ಅನೇಕರ ಗಮನ ಸೆಳೆಯುವಲ್ಲಿ ಕನ್ನಡಪ್ರಭ ಶ್ರಮಿಸಿದೆ. ಕಾಂಗ್ರೆಸ್ ಮುಖಂಡ ಮಾಣಿಕರೆಡ್ಡಿ ಕುರಕುಂದ ಪ್ರಕರಣಗಳ ಫೈಲ್ ಹಿಡಿದುಕೊಂಡು ಕಚೇರಿ ಕಚೇರಿ ಅಲೆದಿದ್ದಾರೆ.
ಇದೆಲ್ಲದರ ಫಲವಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಮರುಪರಿಶೀಲನಾ ಸಮಿತಿ, ಪ್ರಕರಣಗಳನ್ನು ಮತ್ತೊಮ್ಮೆ ಅವಲೋಕಿಸಿ ಪರಿಹಾರ ಹಣ ನೀಡುವ ನಿರ್ಧಾರ ಮಾಡಿದೆ. ಆತ್ಮಹತ್ಯೆ ಪ್ರಕರಣಗಳನ್ನು ಅವಲೋಕಿಸಿ ಪರಿಹಾರ ನೀಡುವುದಾಗಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಪರಿಹಾರದ ರೂಪದಲ್ಲಿ ಸರ್ಕಾರ ನೀಡ್ತಿರೋದು ಅತ್ಯಲ್ಪ ಹಣ. ಆದ್ರೆ, ಹಣದೊಂದಿಗೆ ಆ ಕುಟುಂಬಕ್ಕೆ ಭದ್ರತೆ ಒದಗಿಸುವುದು ಕನ್ನಡ ಪ್ರಭದ ಆಶಯವಾಗಿತ್ತು. ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಉದ್ದೇಶವಾಗಿತ್ತು.. ಕೊನೆಗೂ ಕನ್ನಡ ಪ್ರಭಕ್ಕೆ ಸಿಕ್ಕಿರುವ ಜಯ, ಓದುಗರಿಗೆ ಸಿಕ್ಕ ಜಯವಾಗಿದೆ. ರೈತ ಕುಟುಂಬಗಳ ಪರ ನಿಂತ ಜನರ ಜಯವಾಗಿದೆ.