ಅಧಿಕಾರಿಯ ಕಿರುಕುಳ: ನದಿಗೆ ಹಾರಿ ಕಲಾವಿದೆ ಆತ್ಮಹತ್ಯೆ

By Kannadaprabha News  |  First Published Nov 15, 2019, 9:08 AM IST

ಕಲಾವಿದೆಯೋರ್ವಳು ಅಧಿಕಾರಿ ಕಿರುಕುಳ ಸಹಿಸದೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. 


ಯಾದಗಿರಿ [ನ.15]:  ಯುವ ಕಲಾವಿದೆಯೊಬ್ಬಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಯೊಬ್ಬರ ಕಿರುಕುಳದ ಬಗ್ಗೆ ಆರೋಪಿಸಿ, ಉಕ್ಕಿ ಹರಿಯುತ್ತಿದ್ದ ಭೀಮಾ ನದಿಗೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಸಂಜೆ ಯಾದಗಿರಿ ನಗರದ ಹೊರವಲಯದಲ್ಲಿ ನಡೆದಿದೆ.

ಯಾದಗಿರಿಯ ಹಗಲು ವೇಷಗಾರ ಕಲಾವಿದ, ಬುಡ್ಗ ಜಂಗಮ ಕಾಲೋನಿಯ ನಿವಾಸಿ ಶಂಕರ ಶಾಸ್ತ್ರಿ ಎಂಬುವರ ಪುತ್ರಿ ಭವಾನಿ (20) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಾಕೆ. ತಮ್ಮ ಕುಟುಂಬದ ಮೇಲೆ ಇಲಾಖೆ ಅಧಿಕಾರಿಯ ದರ್ಪ ಹಾಗೂ ತಂದೆಗೆ ಜೀವ ಬೆದರಿಕೆ ಹಾಕಿದ್ದ ಕುರಿತು ವಾರದ ಹಿಂದಷ್ಟೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರೆದುರು ಈ ಕಲಾವಿದೆ ಕಣ್ಣೀರು ಹಾಕಿದ್ದಳು. ಅಲ್ಲದೆ, ಅ.5 ರಂದು ಯಾದಗಿರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಜನತಾ ದರ್ಶನದಲ್ಲೂ ಕುಟುಂಬಕ್ಕೆ ಜೀವ ಬೆದರಿಕೆ ಬಗ್ಗೆ ಅಳಲು ತೋಡಿಕೊಂಡಿದ್ದಳು.

Latest Videos

undefined

ಏತನ್ಮಧ್ಯೆ, ಬುಧವಾರ ಭೀಮಾ ನದಿಗೆ ಧುಮುಕಿದ ಭವಾನಿಯನ್ನು ಕಂಡು ಸತೀಶ ಎಂಬ ಯುವಕ ತಕ್ಷಣ ನದಿಗೆ ಹಾರಿ ರಕ್ಷಿಸಲೆತ್ನಿಸಿದರಾದರೂ, ಪ್ರವಾಹದ ರಭಸಕ್ಕೆ ಆಕೆ ಕೊಚ್ಚಿ ಹೋಗಿದ್ದಾಳೆ. ಕೊನೆಗೆ ಸತೀಶ್‌ ದಡಕ್ಕೆ ಬಂದಾಗ, ಅಲ್ಲಿರುವವರು ಆತನನ್ನು ರಕ್ಷಿಸಿದ್ದಾರೆ. ಭವಾನಿ ಹುಡುಕಾಟಕ್ಕಾಗಿ ಅಗ್ನಿಶಾಮಕ ದಳ ಹಾಗೂ ನುರಿತ ಈಜುಗಾರರ ತಂಡ ಬುಧವಾರ ಸಂಜೆ ಹಾಗೂ ಗುರುವಾರ ಬೆಳಿಗ್ಗೆಯಿಂದ ಸೂರ್ಯಾಸ್ತದವರೆಗೂ ಶೋಧಕಾರ್ಯ ನಡೆಸಿದರೂ, ಪತ್ತೆಯಾಗಲಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಗಳು ನದಿಗೆ ಧುಮಕಿ ನಾಪತ್ತೆಯಾದ ಸುದ್ದಿ ತಿಳಿದು, ತಾಯಿ ನಾಗಮ್ಮ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ತೀವ್ರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನಾಗಮ್ಮಳ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಪತ್ನಿಯ ಸ್ಥಿತಿ ಹಾಗೂ ಮಗಳ ನಿರ್ಧಾರದಿಂದ ಶಾಸ್ತ್ರಿ ಕುಟುಂಬ ಕಣ್ಣೀರಲ್ಲಿ ಮುಳುಗಿದೆ.

ಏನಿದು ಜೀವ ಬೆದರಿಕೆ ಪ್ರಕರಣ?:

ಕಾರ್ಯಕ್ರಮಗಳನ್ನು ನೀಡುವ ವಿಚಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ದತ್ತಪ್ಪ ಸಾಗನೂರು ಅವರು ತಮಗೆ ಹಾಗೂ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದು, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದ ಕಲಾವಿದ ಶಂಕರ ಶಾಸ್ತ್ರಿ ಅ.5 ರಂದು ನಗರಕ್ಕೆ ಆಗಮಿಸಿದ್ದ ಸಿಎಂ ಜನತಾ ದರ್ಶನದಲ್ಲಿ ಅಧಿಕಾರಿಗಳು ಬೈಯ್ದಿದ್ದಾರೆನ್ನಲಾದ ಧ್ವನಿಮುದ್ರಿಕೆ ಸಿಡಿ ಸಮೇತ ದೂರು ನೀಡಿದ್ದರು. ಆರೋಪಿ ದತ್ತಪ್ಪ ಅವರು ವಂಚನೆ ಮಾಡುತ್ತಿದ್ದರು, ತಮಗೆ ಬೇಕಾದವರಿಗೆ ಮಾತ್ರ ಕಾರ್ಯಕ್ರಮ ನೀಡಲು ಅವಕಾಶ ನೀಡುತ್ತಿದ್ದರು ಎಂದು ಶಂಕರ ಶಾಸ್ತ್ರಿ ಕುಟುಂಬ ಆರೋಪಿಸಿತ್ತು. ಈ ಕುರಿತು ಮುಖ್ಯಮಂತ್ರಿಗೆ ದೂರು ನೀಡಿದ್ದರಿಂದ ಶಾಸ್ತ್ರಿಗೆ ಬೆದರಿಕೆಗಳು ಹೆಚ್ಚಿದ್ದು, ವೃತ್ತಿ ಕಲಾವಿದರ ಸಂಘದಿಂದ ಅವರನ್ನು ಉಚ್ಚಾಟಿಸಲಾಗಿತ್ತು. ಇದರಿಂದ ಆತಂಕಗೊಂಡ ಕುಟುಂಬ, ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರಿಗೆ ದೂರು ನೀಡಿದ್ದರು.

click me!