ಒಂದ್ಕಡೆ ಪಿಎಸ್‌ಐ ವರ್ಗಾವಣೆ ಮಾಡಿ ಅಂತೀರಾ, ಈ ಠಾಣೆಗೆ CPIನೂ ಇಲ್ಲ, PSIನೂ ಇಲ್ಲ!

By Web DeskFirst Published Oct 30, 2019, 12:57 PM IST
Highlights

ಸಿಪಿಐ, ಪಿಎಸೈ ಇಲ್ಲದ ಪೊಲೀಸ್‌ ಠಾಣೆ| ಗಡಿಭಾಗದ ಗುರುಮಠಕಲ್‌ಗಿಲ್ಲ ಪೊಲೀಸ್‌ ಭಾಗ್ಯ| ಮೂರು ತಿಂಗಳಿಗೊಮ್ಮೆ ಅಧಿಕಾರಿಗಳ ಎತ್ತಂಗಡಿ| ಸಿಪಿಐ, ಪಿಎಸೈ ಅನುಪಸ್ಥಿತಿ| ಅಕ್ರಮ ಚಟುವಟಿಕೆಗಳಿಗೆ ಮತ್ತಷ್ಟೂ ಆಹ್ವಾನ|

ಮೊಗುಲಪ್ಪ ಬಿ. ನಾಯಕಿನ್‌

ಗುರುಮಠಕಲ್‌[ಅ.30]: ಮತಕ್ಷೇತ್ರದ ಶಾಸಕರ ಪುತ್ರ ಯಾದಗಿರಿ ಪೊಲೀಸ್‌ ಠಾಣೆಯಲ್ಲಿರುವ ಪಿಎಸ್‌ಐ ಅವರನ್ನು ಅಮಾನತುಗೊಳಿಸಬೇಕು ಎಂದು ಪ್ರತಿಭಟನೆ ಮಾಡಲು ಮಗ್ನರಾಗಿದ್ದರೆ, ತಮ್ಮದೇ ಕ್ಷೇತ್ರದ ಗುರುಮಠಕಲ್‌ ಪೊಲೀಸ್‌ ಠಾಣೆಯಲ್ಲಿ ಸಿಪಿಐ ಮತ್ತು ಪಿಎಸ್‌ಐ ಹುದ್ದೆಗಳು ಖಾಲಿಯಾಗಿದ್ದು ಹುದ್ದೆಗಳನ್ನು ಭರ್ತಿ ಮಾಡಲು ಒಲವು ತೋರಬೇಕಾಗಿದೆ ಎಂಬುದು ಜನರ ಒತ್ತಾಯವಾಗಿದೆ.

ಕಳೆದ ಎರಡು ವರ್ಷಗಳಲ್ಲಿ ಯಾವೊಬ್ಬ ಪಿಎಸ್‌ಐ ಸರಿಯಾಗಿ ಠಿಕಾಣಿ ಇರದೆ, ಮೂರು ತಿಂಗಳೊಳಗೆ ವರ್ಗಾವಣೆಗೊಳ್ಳುತ್ತಿದ್ದಾರೆ. ಅರುಣಕುಮಾರ, ಬಸವರಾಜ ಮತ್ತು ತಿಮ್ಮಯ್ಯ ಅವರು ವರ್ಗಾವಣೆಗೊಂಡಿರುವ ಪಿಎಸ್‌ಐಗಳಾಗಿದ್ದಾರೆ.

ಸಿಪಿಐ ಶ್ರೀನಿವಾಸ್‌ ಅಲ್ಲಪೂರ ವರ್ಗಾವಣೆಗೊಂಡಿದ್ದು, ಅವರ ಸ್ಥಾನದಲ್ಲಿ ಯಾರೂ ಭರ್ತಿಯಾಗದೆ ಒಂದು ತಿಂಗಳು ಮೇಲಾಗಿದೆ. ಪದೇ ಪದೇ ಯಾವೋಬ್ಬ ಪಿಎಸ್‌ಐ ಸ್ಥಿರವಾಗದಿರುವುದರಿಂದ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ವಿಫಲವಾಗುತ್ತಿದೆ ಎನ್ನಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗುರುಮಠಕಲ್‌ ಪೊಲೀಸ್‌ ಠಾಣೆ ತೆಲಂಗಾಣ ಮತ್ತು ಕರ್ನಾಟಕದ ಗಡಿ ಸೂಕ್ಷ್ಮ ಪ್ರದೇಶವಾಗಿದೆ. ಸಿಪಿಐ ಮತ್ತು ಪಿಎಸ್‌ಐ ಹುದ್ದೆಗಳು ಖಾಲಿಯಾಗಿರುವುದರಿಂದ ಗುರುಮಠಕಲ್‌ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮಟ್ಕಾ, ಜೂಜು, ಅಕ್ರಮ ಸಾರಾಯಿ ಮಾರಾಟ, ಅಕ್ರಮ ಮರಳು ಸಾಗಣೆ ಇತ್ಯಾದಿ ಚಟುವಟಿಕೆಗಳಿಗೆ ಕಡಿವಾಣ ಹಾಕುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ.

ಏನಾದರೂ ವ್ಯಾಜ್ಯಗಳು, ತಂಟೆ ತಕರಾರು ಜರುಗಿದರೆ ಕ್ರಮ ಕೈಗೊಳ್ಳುವವರು ಯಾರು ಎಂಬುದು ನಾಗರಿಕರ ಪ್ರಶ್ನೆಯಾದರೆ, ಅಪರಾಧ ಕೃತ್ಯಗಳು ನಡೆದರೆ ಠಾಣಾ​ಧಿಕಾರಿಯಿಲ್ಲದೆ ತಕ್ಷಣ ಕ್ರಮ ಕೈಗೊಳ್ಳುವುದು ಕಷ್ಟವಾಗುತ್ತಿದೆ. ಸಿಪಿಐ ಮತ್ತು ಪಿಎಸ್‌ಐ ಹುದ್ದೆಯೂ ಖಾಲಿ ಇರುವುರಿಂದ ಕಳೆದ ಒಂದು ತಿಂಗಳಿಂದ ಠಾಣೆ ವ್ಯಾಪ್ತಿಯಲ್ಲಿ ಕಾನೂನು ಪಾಲನೆ ಮತ್ತು ಸುವ್ಯವಸ್ಥೆಯಲ್ಲಿ ತೊಡುಕಾಗುವ ಆತಂಕವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.

ಪಟ್ಟಣದ ಆರಕ್ಷಕ ಠಾಣೆಯಲ್ಲಿ ಕೆಲವು ತಿಂಗಳಿಂದ ಆರಕ್ಷಕ ಉಪ ನಿರೀಕ್ಷಕರು ಇಲ್ಲದೆ ಇರುವುದರಿಂದ ಇರುವ ಸಿಬ್ಬಂದಿ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸಬೇಕಿದೆ. ಪಟ್ಟಣ ತಾಲೂಕಾ ಕೇಂದ್ರವಾಗಿರುವುದರ ಜೆತೆಗೆ ತೆಲಂಗಾಣ ಗಡಿ ಭಾಗಕ್ಕೆ ಹೊಂದಿದ ಪ್ರದೇಶವಾಗಿದೆ. ಅಂತಾರಾಜ್ಯ ರಸ್ತೆಯು ಪಟ್ಟಣದ ಮೂಲಕ ಹಾದು ಹೋಗುತ್ತಿದ್ದು., ಯಾವುದೇ ಅಪಘಾತಗಳು ಸಂಭವಿಸಿದರೆ ತಕ್ಷಣ ಸ್ಪಂದಿಸಲು ಪೊಲೀಸ್‌ ಅ​ಧಿಕಾರಿಗಳು ಇಲ್ಲದಂತಾಗಿದೆ.

ಪಟ್ಟಣದಲ್ಲಿ ರಸ್ತೆ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ವಾಹನಗಳ ವೇಗಕ್ಕೆ ಕಡಿವಾಣ ಹಾಕ ಬೇಕಾಗಿದೆ. ಈ ನಿಟ್ಟನಲ್ಲಿ ಸಂಬಂ​ಧಿಸಿದ ಅ​ಧಿಕಾರಿಗಳು ಕೂಡಲೇ ಖಾಲಿ ಹುದ್ದೆಗಳನ್ನು ತುಂಬಿ ಜನತೆಯಲ್ಲಿ ಉಂಟಾದ ಭಯದ ವಾತಾವರಣವನ್ನು ನಿವಾರಿಸ ಬೇಕಿದೆ. ಮೇಲಧಿ​ಕಾರಿಗಳು ಈ ನಿಟ್ಟನತ್ತ ಕಾರ್ಯಕೈಗೊಳ್ಳುವುರೇ ಎಂಬುದು ಕಾದು ನೋಡಬೇಕಿದೆ.

ಈ ಕ್ಷೇತ್ರದ ಶಾಸಕರು ಮತ್ತು ಪುತ್ರ ಇವರಿಬ್ಬರು ತಮ್ಮ ಮನೆ ಬಿಟ್ಟು ಹೊರ ಮನೆ ವಿಚಾರ ಮಾಡುತ್ತಿದ್ದಾರೆ. ಜನರ ಬಗ್ಗೆ ನಿಜವಾಗಲೂ ಕಾಳಜಿ ಇದ್ದಲ್ಲಿ ತಮ್ಮ ಕ್ಷೇತ್ರದ ಪೊಲೀಸ್‌ ಠಾಣೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಕಾನೂನು ಸುವವ್ಯಸ್ಥೆ ಕಾಪಾಡಲು ಗಮನ ನೀಡಲಿ ಎಂದು ಗುರುಮಠಕಲ್‌ ನ ಬಿಜೆಪಿ ಬ್ಲಾಕ್‌ ಮಾಜಿ ಅಧ್ಯಕ್ಷ ಕೆ.ದೇವದಾಸ್‌ ಅವರು ಹೇಳಿದ್ದಾರೆ.

ಗಡಿನಾಡು ಪ್ರದೇಶ ಹೊಂದಿರುವದರಿಂದ ಸೂಕ್ಷ್ಮ ವಿಚಾರ ಪರಿಹಾರಕ್ಕೆ ಮತ್ತು ಸ್ಥಳೀಯ ಸಮಸ್ಯೆಗಳು ಬಹಳ ಇರುವುದರಿಂದ ಶಾಂತಿ ಕಾಪಾಡಲು ಸಿಪಿಐ ಮತ್ತು ಪಿಎಸ್‌ಐ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕಾಗಿದೆ ಎಂದು ಸ್ಥಳೀಯ ಶಬ್ಬೀರ್‌ ಅಹ್ಮದ್‌ ಅವರು ತಿಳಿಸಿದ್ದಾರೆ.

ನಾವು ಒಳ್ಳೆಯ, ದಕ್ಷ ಅ​ಧಿಕಾರಿಗಳನ್ನು ನಿಯೋಜಿಸಿದರೂ ಸರಕಾರ ಅಡ್ಡಗಾಲು ಹಾಕುತ್ತಿದೆ. ಶೀಘ್ರದಲ್ಲಿ ಖಾಲಿ ಹುದ್ದೆ ನೇಮಿಸಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪ್ರಯತ್ನಿಸುತ್ತೇನೆ ಎಂದು ಗುರುಮಠಕಲ್‌ ಕ್ಷೇತ್ರ ಶಾಸಕ ನಾಗನಗೌಡ ಕಂದಕೂರು ಅವರು ತಿಳಿಸಿದ್ದಾರೆ. 

click me!