ಯಾದಗಿರಿ ಪಿಎಸೈ ವರ್ಗಾವಣೆ ಮಾಡುವಂತೆ ಸಿಎಂಗೆ ಪತ್ರ ಬರೆದ ದೇವೇಗೌಡ್ರು

By Web DeskFirst Published Oct 29, 2019, 2:41 PM IST
Highlights

ಜೆಡಿಎಸ್‌ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಘಟನೆ ಬಗ್ಗೆ ಪ್ರಸ್ತಾಪ| ಪಿಸ್ತೂಲನ್ನು ಬಾಯಲ್ಲಿಟ್ಟು ನಡೆಸಿರುವ ಈ ಕ್ರೌರ್ಯ ಇದೇ ಮೊದಲು| ಯಾದಗಿರಿ ನಗರ ಠಾಣೆ ಪಿಎಸೈ ಬಾಪೂಗೌಡ ವರ್ಗಾವಣೆಗೆ ಆಗ್ರಹಿಸಿ ಪತ್ರ| ಯಾದಗಿರಿಗೆ ಬಂದು ಬಿರುಬಿಸಿಲಲ್ಲಿ ತಾಸು ಧರಣಿ ಕುಳಿತಿದ್ದ ಗೌಡರು|

ಯಾದಗಿರಿ(ಅ.29): ಜೆಡಿಎಸ್‌ ಕಾರ್ಯಕರ್ತನ ಮೇಲೆ ದೌರ್ಜನ್ಯವೆಸಗಿದ್ದಾರೆಂಬ ಆರೋಪಕ್ಕೆ ಗುರಿಯಾಗಿರುವ ಯಾದಗಿರಿ ನಗರ ಠಾಣೆಯ ಪಿಎಸೈ ಬಾಪೂಗೌಡ ಅಮಾನತಿಗೆ ಆಗ್ರಹಿಸಿ, ಇಲ್ಲಿನ ಠಾಣೆಯೆದುರು ಧರಣಿ ನಡೆಸಿದ್ದ ಮಾಜಿ ಪ್ರಧಾನಿ ದೇವೇಗೌಡರು, ಇದೀಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಐದು ಪುಟಗಳ ಸವಿಸ್ತಾರ ಪತ್ರ ಬರೆದು, ಪಿಎಸೈ ಅಮಾನತಿಗೆ ಆಗ್ರಹಿಸಿದ್ದಾರೆ.

‘ತುಂಬಾ ನೋವಿನಿಂದಲೇ ಈ ಪತ್ರವನ್ನು ಬರೆಯುತ್ತಿದ್ದೇನೆ..’ ಎಂದೇ ಆರಂಭಿಸಿದ ದೇವೇಗೌಡರು, ಪಕ್ಷದ ಕಾರ್ಯಕರ್ತರನ್ನು ಉಳಿಸಿ, ಬೆಳೆಸಿಕೊಂಡು ಪಕ್ಷವನ್ನು ಕಟ್ಟುವದರಲ್ಲಿ ಅನುಭವವಿರುವ ತಾವು (ಸಿಎಂ) ನನ್ನ ನೋವನ್ನು ಅರ್ಥ ಮಾಡಿಕೊಳ್ಳಬಲ್ಲಿರಿ ಎಂದು ಭಾವಿಸಿರುವುದಾಗಿ ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪೊಲೀಸ್‌ ಇಲಾಖೆ ಕಾನೂನನ್ನು ಕೈಗೆತ್ತಿಕೊಂಡು, ದುರುದ್ದೇಶಪೂರ್ವಕವಾಗಿ ವಿನಾಕಾರಣ ನಿರಪರಾಧಿಯೊಬ್ಬನಿಗೆ ದೈಹಿಕ ಹಿಂಸೆ ಹಾಗೂ ಮಾನಸಿಕ ಕ್ರೌರ್ಯ ನಡೆಸಿರುವುದನ್ನು ನಾಗರಿಕ ಸಮಾಜ ಖಂಡಿತ ಒಪ್ಪುವುದಿಲ್ಲ. ಯಾದಗಿರಿಗೆ ಬಂದಿದ್ದಾಗ, ತಮ್ಮ (ಸಿಎಂ) ಕಾರನ್ನು ಯುವಕರು ಅಡ್ಡಗಟ್ಟಿದ ಪ್ರಕರಣ ಸಾಮಾನ್ಯವಾಗಿ ಸಾರ್ವಜನಿಕ ಬದುಕಿನಲ್ಲಿರುವವರಿಗೆ ಇದು ಸಹಜ, ತಮಗೂ ಅನುಭವ ಆಗಿದೆ.

ಆದರೆ, ಈ ಒಂದು ಪ್ರಕರಣವನ್ನು ರಾಜಕೀಯ ಕಾರಣದಿಂದಾಗಿ ದುರ್ಬಳಕೆ ಮಾಡಿಕೊಂಡು ನಿರಪರಾಧಿಗಳು ಮತ್ತು ಅಮಾಯಕರನ್ನು ಹಿಂಸೆ ಮತ್ತು ದೌರ್ಜನ್ಯಕ್ಕೆ ಗುರಿಪಡಿಸುವುದು ಎಷ್ಟುಸರಿ ಎಂದು ಪ್ರಶ್ನಿಸಿರುವ ದೇವೇಗೌಡರು, ದೌರ್ಜನ್ಯಕ್ಕೊಳಗಿದ್ದೇನೆಂದು ಆರೋಪಿಸಿರುವ, ಜೆಡಿಎಸ್‌ ಕಾರ್ಯಕರ್ತ ಯರಗೋಳ ಗ್ರಾಮದ ಮಾರ್ಕಂಡಪ್ಪ ಮಾನೇಗಾರ ಅಳಲನ್ನು ಪ್ರಸ್ತಾಪಿಸಿ, ದೂರಿನ ಪ್ರತಿ ಲಗತ್ತಿಸಿದ್ದಾರೆ.

ಗುರುಮಠಕಲ್‌ ಶಾಸಕರ ಪುತ್ರ ಮತ್ತು ನಮ್ಮ ಪಕ್ಷದ (ಜೆಡಿಎಸ್‌) ಯುವ ಘಟಕದ ಮುಖಂಡ ಶರಣಗೌಡ ಕಂದಕೂರು ಅವರನ್ನು ಪ್ರಕರಣದಲ್ಲಿ ಸಿಲುಕಿಸುವ ಇರಾದೆಯಿಂದ ಸಬ್‌ ಇನ್ಸಪೆಕ್ಟರ್‌ ಅವರು ಕಾರ್ಯಕರ್ತರ ಮೇಲೆ ದೌರ್ಜನ್ಯವೆಸಗಿದ್ದಾರೆಂದು ಆರೋಪಿಸಿರುವ ಗೌಡರು, ತಮ್ಮ 50 ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ಕಳೆದಿದ್ದೇನೆ. ದೇಶದ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದೇನೆ ಆದರೆ, ಎಂದೂ ಈ ದಬ್ಬಾಳಿಕೆಯನ್ನು ನೋಡಿಲ್ಲ. ಪಿಸ್ತೂಲನ್ನು ಬಾಯಲ್ಲಿ ಇಟ್ಟು, ಸಬ್‌ ಇನ್ಸಪೆಕ್ಟರ್‌ ನಡೆಸಿರುವ ಈ ಕ್ರೌರ್ಯ ಇದೇ ಮೊದಲು, ಮೈಮೇಲೆ ಬಾಸುಂಡೆ ಬರುವಂತೆ ಹೊಡೆಯಲಾಗಿದೆ, ಹನಿ ನೀರನ್ನೂ ಕುಡಿಯಲು ಬಿಟ್ಟಿಲ್ಲ, ಎನ್‌ಕೌಂಟರ್‌ ಮಾಡಲಾಗುತ್ತದೆ ಎಂದು ಹೇಳಿ ಮಾನಸಿಕ ಭಯ ಹುಟ್ಟಿಸಲಾಗಿದೆ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣವನ್ನು ಖಂಡಿಸಿ, ತಾವು (ಗೌಡರು) ಯಾದಗಿರಿಗೆ ಹೊರಟು ಬರುವಾಗ ಪ್ರತಿಭಟನಾ ಸ್ಥಳದಲ್ಲಿ 144 ಸೆಕ್ಷನ್‌ ನಿಷೇಧಾಜ್ಞೆ ಹಾಕಿ, ಪ್ರತಿಭಟನೆ ಹತ್ತಿಕ್ಕುವ ಹುನ್ನಾರ ನಡೆದಿತ್ತು. ಕಾನೂನಿನಂತೆಯೇ, ತಾವೂ ಸೇರಿದಂತೆ ನಾಲ್ವರು ಪ್ರತಿಭಟನೆಯಲ್ಲಿ ಕುಳಿತೆವು. ಪೊಲೀಸ್‌ ಮಹಾನಿರ್ದೇಶಕರ ಗಮನಕ್ಕೂ ತಂದೆ, ಅವರ ಮೇಲೂ ಸಹ ಯಾವುದೋ ಒತ್ತಡ ಕೆಲಸ ಮಾಡುತ್ತಿದೆ ಎಂದು ಗೋಚರಿಸಿತು. ಅದಕ್ಕೆ ಯಾದಗಿರಿಯಿಂದ ನೇರವಾಗಿ ಬಂದ ತಾವು ಈ ಪತ್ರವನ್ನು ಬರೆಯುತ್ತಿರುವುದಾಗಿ ತಿಳಿಸಿದ್ದಾರೆ.

ನೀವೂ (ಬಿಎಸ್ವೈ) ಒಂದು ಪಕ್ಷದ ವರಿಷ್ಠರಾಗಿದ್ದೀರಿ, ಇಂದು ಅಧಿಕಾರದಲ್ಲಿದ್ದೀರಿ. ನಾನೂ ಒಂದು ಪಕ್ಷದ ವರಿಷ್ಠನಾಗಿದ್ದೇನೆ, ನಾನೂ ಅಧಿಕಾರದಲ್ಲಿ ಇದ್ದವನೇ ಆಗಿದ್ದೇನೆ. ಅಧಿಕಾರಿ ಇರಬಹುದು, ಇಲ್ಲದಿರಬಹುದು. ಆದರೆ, ರಾಜಕೀಯ ದುರುದ್ದೇಶಗಳಿಗಾಗಿ ಯಾವುದೇ ಪಕ್ಷದ ಕಾರ್ಯಕರ್ತರನ್ನು ಪೊಲೀಸರ ಮೂಲಕ ಹಿಂಸಿಸುವುದು ಖಂಡಿತ ಅಮಾನುಷ ಹಾಗೂ ಅಮಾನವೀಯ. ನಾಳೆ ಮತ್ತೊಂದು ಪಕ್ಷ ಅಧಿಕಾರಕ್ಕೆ ಬಂದಾಗ, ಮತ್ತೊಬ್ಬ ಕಾರ್ಯಕರ್ತರಿಗೆ ಇಂತಹ ಪ್ರಸಂಗ ಎದುರಾಗಬಾರದೆಂದು ಸೂಕ್ಷ್ಮವಾಗಿಯೇ ಸಿಎಂ ಅವರಿಗೆ ಎಚ್ಚರಿಸಿದಂತಿರುವ ಗೌಡರು, ತಕ್ಷಣವೇ ಕಾನೂನಿಗೆ ಗೌರವ ನೀಡುವ ನಿಟ್ಟಿನಲ್ಲಿ ಪಿಎಸೈ ಅಮಾನತು ಮಾಡುವಂತೆ ಪತ್ರದಲ್ಲಿ ತಿಳಿಸಿದ್ದಾರೆ.

ಹಿನ್ನೆಲೆ:

ನೆರೆಪೀಡಿತ ಪ್ರದೇಶಗಳ ಪರಿಹಾರ ಕಾರ್ಯಗಳ ವೀಕ್ಷಣೆಗೆಂದು ಅ.5 ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾದಗಿರಿಗೆ ಆಗಮಿಸಿದ್ದ ಸಂದರ್ಭದಲ್ಲಿ, ಗುರುಮಠಕಲ್‌ ಕ್ಷೇತ್ರಕ್ಕೆ ಎಚ್ಡಿಕೆ ಅವಧಿಯಲ್ಲಿ ನೀಡಿದ್ದ ಅನುದಾನ ವಾಪಸ್‌ ಪಡೆದಿರುವುದನ್ನು ಖಂಡಿಸಿ ಜೆಡಿಎಸ್‌ ಕಾರ್ಯಕರ್ತರು ಕಾರನ್ನು ಅಡ್ಡಗಟ್ಟಿ, ಕಪ್ಪು ಬಾವುಟ ಪ್ರದರ್ಶಿಸಿದ್ದರು. ಇದು ಪೊಲೀಸ್‌ ಬಂದೋಬಸ್ತ್ ವೈಫಲ್ಯಕ್ಕೆ ಸಾಕ್ಷಿಯಾಗಿ, ಸಿಎಂ ಮಜುಗರ ಅನುಭವಿಸಿದ್ದರು. ಸಂಬಂಧಿಸಿದಂತೆ, ಶರಣಗೌಡ ಕಂದಕೂರು ಸೇರಿದಂತೆ 20 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಜಿಡಿಎಸ್‌  ಕಾರ್ಯಕರ್ತರನ್ನು ಹಿಂಸಿಸಲಾಗುತ್ತಿದೆ ಎಂದು ದೂರಿ ಶರಣಗೌಡ ಸೋಮವಾರ ಪೊಲೀಸ್‌ ಠಾಣೆಯದುರು ಮೂರು ದಿನಗಳ ಕಾಲ ಪ್ರತಿಭಟನೆ ಹಮ್ಮಿಕೊಂಡಿದ್ದರು. ಇದರಲ್ಲಿ ಪಾಲ್ಗೊಳ್ಳಲು ಗೌಡರು, ಅ.23 ರಂದು ಇಲ್ಲಿಗೆ ಆಗಮಿಸಿದ್ದರು. ಇದು ಭಾರಿ ವ್ಯಾಪಕ ಚರ್ಚೆಗೊಳಗಾಗಿ, ರಾಜಕೀಯ ಲೇಪನ ಪಡೆದಿತ್ತು.
 

click me!